ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಿಂದ ಮಧುಮೇಹ ದಿನಾಚರಣೆ – ಸೈಕಲ್ ಜಾಥಾ

ಮಣಿಪಾಲ : ಪ್ರತೀ ವರ್ಷ ನ.14 ಮಧುಮೇಹ ದಿನವನ್ನಾಗಿ ವಿಶ್ವಾದ್ಯಂತ ಆಚರಿಸಲಾಗುತ್ತದೆ. ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಅಂತಃಸ್ರಾವಶಾಸ್ತ್ರ (ಎಂಡೋ ಕ್ರೈ ನೊಲೊಜಿ) ವಿಭಾಗವು ಇದರ ಅಂಗವಾಗಿ ಸೈಕಲ್ ಜಾಥ ಕಾರ್ಯಕ್ರಮವನ್ನು ಆಯೋಜಿಸಿತ್ತು. ಮಧುಮೇಹ ಆರೈಕೆಯ  ಸಾರ್ವತ್ರಿಕ ಲಭ್ಯತೆ , ಈಗ ಇಲ್ಲದಿದ್ದರೆ, ಯಾವಾಗ  ? ಎಂಬುದು ಈ ವರ್ಷದ ಧ್ಯೇಯ ವಾಕ್ಯವಾಗಿದೆ.

ಮಾಹೆ ಮಣಿಪಾಲದ ಸಹ ಕುಲಾಧಿಪತಿಗಳಾದ ಡಾ. ಎಚ್.ಎಸ್.ಬಲ್ಲಾಲ್  ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ಹೊರರೋಗಿ ವಿಭಾಗದ ಮುಂದೆ  ಸೈಕಲ್ ಜಾಥಕ್ಕೆ ಚಾಲನೆ ನೀಡಿದರು.  ಮಣಿಪಾಲದಿಂದ ಆರಂಭವಾದ ಜಾಥವು ಸಿಂಡಿಕೇಟ್ ಸರ್ಕಲ್, ಸಿಟಿ ಬಸ್ ನಿಲ್ದಾಣ, ಬನ್ನಂಜೆ, ಕರಾವಳಿ ಸರ್ಕಲ್, ಅಂಬಲಪಾಡಿ, ಬ್ರಹ್ಮಗಿರಿ ಮೂಲಕ ಅಜ್ಜರಕಾಡು ಕ್ರೀಡಾಂಗಣದಲ್ಲಿ  ಸಮಾಪನಗೊಂಡಿತು.  ಭಾಗವಹಿಸಿದವರಿಗೆ  ಕ್ರೀಡಾಂಗಣದಲ್ಲಿ ಜುಂಬಾ ಸೆಷನ್ಗಳನ್ನು  ಆಯೋಜಿಸಲಾಗಿತ್ತು. 500 ಕ್ಕೂ ಹೆಚ್ಚು ಜನರು ಸೈಕಲ್ ನೊಂದಿಗೆ ಭಾಗವಹಿಸಿದ್ದರು

ತದನಂತರ  ಅಜ್ಜರಕಾಡು ಕ್ರೀಡಾಂಗಣದಲ್ಲಿ ನಡೆದ  ಸಮಾರೋಪ ಸಮಾರಂಭದಲ್ಲಿ ಡಾ. ಎಚ್ ಎಸ್ ಬಲ್ಲಾಳ್, ಸಹ ಕುಲಾಧಿಪತಿಗಳು  ಮಾಹೆ ಮಣಿಪಾಲ, ಡಾ. ಪಿ ಎಲ್ ಎನ್ ಜಿ ರಾವ್ , ಸಹ ಕುಲಪತಿ, ಆರೋಗ್ಯವಿಜ್ಞಾನ ,  ಮಣಿಪಾಲ ಕಾಲೇಜ್ ಆಫ್ ಹೆಲ್ತ್ ಪ್ರೊಫೆಶನ್ ನ ಡೀನ್ ಡಾ. ಅರುಣ್ ಮಯ್ಯ , ಕೆ ಎಂ ಸಿ ಡೀನ್ , ಡಾ. ಶರತ್ ಕೆ ರಾವ್ , ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ  ಸಹ ನಿರ್ದೇಶಕರಾದ ಡಾ. ರೋಶನ್  ಶೆಟ್ಟಿ , ಮುಖ್ಯ ನಿರ್ವಹಣಾಧಿಕಾರಿಗಳಾದ ಶ್ರೀ ಸಿ ಜಿ ಮುತ್ತಣ್ಣ , ವೈದ್ಯಕೀಯ ಅಧೀಕ್ಷಕರಾದ  ಡಾ.ಅವಿನಾಶ್ ಶೆಟ್ಟಿ  ಮತ್ತು ಅಂತಃಸ್ರಾವಶಾಸ್ತ್ರ (ಎಂಡೋ ಕ್ರೈ ನೊಲೊಜಿ)  ವಿಭಾಗದ ಮುಖ್ಯಸ್ಥೆ ಡಾ.ಸಹಾನಾ ಶೆಟ್ಟಿ ಉಪಸ್ಥಿತರಿದ್ದರು.

ಸಮಾರೂಪ  ಸಮಾರಂಭದಲ್ಲಿ   ಮಾತನಾಡಿದ ಡಾ ಬಲ್ಲಾಳ್ ಅವರು, “ಮಧುಮೇಹ ಮತ್ತು ಅಧಿಕ ರಕ್ತದೊತ್ತಡವು ಜೀವನದ ಮೌನ ಕೊಲೆಗಾರರಾಗಿದ್ದು, ಸಾಮಾನ್ಯ ಜನರಿಗೆ ರೋಗದ ತೀವ್ರತೆ ಅರ್ಥವಾಗುವುದಿಲ್ಲ . 

ಬಹಳ ಮುಖ್ಯವಾಗಿ  ಶೇಕಡಾ 50ರಷ್ಟು  ಮಧುಮೇಹ ರೋಗಿಗಳಿಗೆ  ಆರಂಭಿಕ ಹಂತದಲ್ಲಿ  ಪತ್ತೆ ಆಗಿರುವುದಿಲ್ಲ.  ಮಧುಮೇಹವು  ದೇಹದ ಎಲ್ಲಾ ಭಾಗಗಳ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಆರಂಭಿಕ ಹಂತದಲ್ಲಿ ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಇದರ ಅರಿವು ಮತ್ತು ರೋಗ ಪತ್ತೆ  ನಡೆಯುವುದು  ಮುಖ್ಯವಾಗಿದೆ” ಎಂದರು

ಡಾ. ಪಿ ಎಲ್ ಎನ್ ಜಿ ರಾವ್ ಮಾತನಾಡುತ್ತಾ , ಈ ಕಾರ್ಯಕ್ರಮದ ಮುಖ್ಯ ಉದ್ದೇಶ ಜನರಲ್ಲಿ ಜಾಗೃತಿ ಮೂಡಿಸುವುದು, ಜೀವನಶೈಲಿ ರೋಗದಿಂದ ತಡೆಗಟ್ಟಲು ಇದು ಮುಖ್ಯವಾಗಿದೆ, ಈ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಿದ್ದಕ್ಕಾಗಿ ನಾನು ತಂಡವನ್ನು ಅಭಿನಂದಿಸುತ್ತೇನೆ” ಎಂದರು.

ಡಾ. ಅರುಣ್ ಮಯ್ಯ , “ಮಧುಮೇಹ ರೋಗಿಗಳಿಗೆ ಪಾದದ ತಪಾಸಣೆ ಕೂಡ ಬಹಳ ಮುಖ್ಯ. ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ, ಮಧುಮೇಹ ಪಾದದ ಆರಂಭಿಕ ತಪಾಸಣೆ, ಮೌಲ್ಯಮಾಪನ ಮತ್ತು ನಿರ್ವಹಣೆಗೆ ವಿಶೇಷ ಘಟಕವಿದೆ. ಮಣಿಪಾಲದ ಮಧುಮೇಹ ಪಾದದ ಆರೈಕೆ ಮತ್ತು ಸಂಶೋಧನಾ ವಿಭಾಗದಲ್ಲಿ ವಿಶ್ವ ಮಧುಮೇಹ ದಿನಾಚರಣೆಯ ಆಂಗವಾಗಿ ನವೆಂಬರ್ 15 ರಿಂದ 19ರ ವರೆಗೆ ಮಧುಮೇಹಿಗಳಿಗಾಗಿ ಉಚಿತ ಪಾದದ ತಪಾಸಣೆಯನ್ನು ಹಮ್ಮಿಕೊಳ್ಳಲಾಗಿದೆ” ಎಂದರು.

ಡಾ ರೋಶನ್ ಶೆಟ್ಟಿ ಅವರು  “ಈ ಕ್ರೀಡಾಂಗಣಕ್ಕೆ ಬಹಳಷ್ಟು ಜನರು ಬೇರೆ ಬೇರೆ ದೈಹಿಕ ಚಟುವಟಿಕೆಗಳನ್ನು ಆಡಲು ಬರುತ್ತಾರೆ. ಇದರಲ್ಲಿ ಹೆಚ್ಚಿನವರು 40 ವರ್ಷ ದಾಟಿದವರು. ಆದರೆ ಮಧುಮೇಹ ಮತ್ತು ಹೃದಯ ಸಂಬಂಧಿ ಕಾಯಿಲೆಗಳು  ಈಗ ತುಂಬಾ ಸಣ್ಣ ವಯಸ್ಕರಲ್ಲಿ ಕಂಡು ಬರುತ್ತಿವೆ. ಇದಕ್ಕೆ ಕಾರಣ  ಮಕ್ಕಳಿಗೆ ಮತ್ತು ಯುವಕರಿಗೆ  ದೈಹಿಕ ಚಟುವಟಿಕೆಗಳು ಸಿಗದೇ ಇರುವದು. ಆದ್ದರಿಂದ ಸಮಯ ಸಿಕ್ಕಾಗಲೆಲ್ಲಾ ಮಕ್ಕಳು ಮತ್ತು ಯುವಕರು ದೈಹಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು”, ಎಂದರು.

ಡಾ.ಸಹಾನಾ ಶೆಟ್ಟಿ ಕಾರ್ಯಕ್ರಮದ ಬಗ್ಗೆ ಅವಲೋಕನ ನೀಡಿದರು. ಡಾ. ಅವಿನಾಶ್ ಶೆಟ್ಟಿ ವಂದಿಸಿದರು.

 
 
 
 
 
 
 
 
 

Leave a Reply