Janardhan Kodavoor/ Team KaravaliXpress
21.6 C
Udupi
Thursday, December 8, 2022
Sathyanatha Stores Brahmavara

ಡೆಂಗ್ಯೂ ಎನ್ನುವ ಮಾರಕ ರೋಗ

ನಾವೆಲ್ಲಾ ಕೋವಿಡ್ ವಿರುದ್ಧ ಸೆಣೆಸಾಡುತ್ತಿರುವ ಈ ಕಾಲಕ್ಕೆ ಮತ್ತೊಂದು ವೈರಸ್ , ಪ್ರತಿವರ್ಷ ಇದೇ ಸಮಯಕ್ಕೆ ಬರುವವನು ಎನ್ನುತ್ತಾ ‌ಕಾಣಿಸಿಕೊಂಡರೇ..?  ನಿಮಗೆಲ್ಲ ತಿಳಿದಿರುವಂತೆ ಮಳೆಗಾಲ ಆರಂಭವಾಯಿತೆಂದರೆ ಮಲೇರಿಯಾ, ಡೆಂಗ್ಯೂ ವಿನಂತಹ ಸಾಂಕ್ರಾಮಿಕ ರೋಗಗಳೂ ಆರಂಭಗೊಂಡವು ಎಂದೇ ಅರ್ಥ. ಅದರಲ್ಲೂ ಡೆಂಗ್ಯೂ ಎನ್ನುವ ಮಾರಕ ರೋಗ ಪ್ರತಿವರ್ಷ ಸದ್ದಿಲ್ಲದೇ ಹಲವರ ಬಲಿ ತೆಗೆದುಕೊಳ್ಳುತ್ತದೆ. ಒಂದು ಸರ್ವೇ ಪ್ರಕಾರ ಪ್ರತಿವರ್ಷ ಒಂದರಿಂದ ಎರಡು ಲಕ್ಷ ಜನ ಡೆಂಗ್ಯೂವಿಗೆ ತುತ್ತಾಗುತ್ತಾರೆ. NVBDCP  ( ರಾಷ್ಟ್ರೀಯ ಸಾಂಕ್ರಾಮಿಕ ರೋಗ ತಡೆ ಕಾರ್ಯಕ್ರಮ )ದ ಅಂಕಿಅಂಶದಂತೆ ಕಳೆದವರ್ಷ 2019 ರಲ್ಲಿ 1,36,422 ಡೆಂಗ್ಯೂ ಕೇಸ್ ಗಳು ಭಾರತದಲ್ಲಿ ಕಂಡುಬಂದಿತ್ತು. ಸಧ್ಯ ಕೋವಿಡ್ ನಿಯಂತ್ರಣ ದಲ್ಲಿ ಹೈರಾಣಾಗಿರುವ ಆರೋಗ್ಯ ಇಲಾಖೆಗೆ ಡೆಂಗ್ಯೂವಿನಂತಹ ಸಾಂಕ್ರಾಮಿಕ ರೋಗವೂ ಸಮುದಾಯಕ್ಕೆ ವಕ್ಕರಿಸಿಕೊಂಡರೆ ಪರಿಸ್ಥಿತಿ ಚಿಂತಾಜನಕ. ಬನ್ನಿ ಆ ಡೆಂಗ್ಯೂವಿನ ಕುರಿತಂತೆ ಒಂದಷ್ಟು ಕುತೂಹಲಕಾರಿ ಮಾಹಿತಿಯನ್ನು ತಿಳಿದುಕೊಳ್ಳೋಣ.

ಡೆಂಗ್ಯೂ ಅಥವಾ ಡೆಂಘೀ ಜ್ವರವು ‘ಈಡೀಸ್ ಈಜಿಪ್ಟೆ”ಎಂಬ ಹೆಣ್ಣು ಸೊಳ್ಳೆಯ ಕಚ್ಚುವಿಕೆಯಿಂದ ಬರುತ್ತದೆ. ಗಾತ್ರದಲ್ಲಿ ಇತರ ಸೊಳ್ಳೆಗಳಿಗಿಂತ ದೊಡ್ಡ ದಾಗಿ ಮೈಮೇಲೆ ಪಟ್ಟೆಯನ್ನು ಹೊಂದಿರುವ ಕಾರಣ ಇದನ್ನು “ಟೈಗರ್ ಮೊಸ್ಕಿಟೋ”ಎಂದೂ ಕರೆಯ ಲಾಗುತ್ತದೆ. ತನ್ನ ಆಹಾರಕ್ಕಾಗಿ ಕಚ್ಚಿ ರಕ್ತಹೀರುವಾಗ ಒಬ್ಬರಿಂದ ಒಬ್ಬರಿಗೆ ಈ ಸೊಳ್ಳೆಗಳು ರೋಗವನ್ನು ಹರಡುತ್ತವೆ.
ಸಾಮಾನ್ಯವಾಗಿ ನಿಂತಿರುವ, ಕಲುಷಿತವಲ್ಲದ, ಸ್ವಚ್ಛ ನೀರಿನಲ್ಲಿ ಈ ಸೊಳ್ಳೆಗಳು ಮೊಟ್ಟೆ ಇಟ್ಟು ಅನಂತರ 7 ರಿಂದ 10 ದಿನಗಳಲ್ಲಿ ಮರಿ ಸೊಳ್ಳೆಗಳು ಹೊರಬರುತ್ತವೆ. ಕೆಲವು ಸಲ ನೀರಿನ ಸಂಪರ್ಕ ಇಲ್ಲದಿದ್ದರೂ ವರ್ಷಕ್ಕೂ ಹೆಚ್ಚು ಕಾಲ ಈ ಮೊಟ್ಟೆಗಳು ಹಾಗೇ ಉಳಿದುಕೊಂಡು ನಂತರ ಮಳೆ ಬಂದು ನೀರಿನ ಆಶ್ರಯ ದೊರೆತಾಗ ಮೊಟ್ಟೆಗಳು ಬಲಿತ ಸೊಳ್ಳೆಗಳಾಗಿ ಹೊರ ಬರಬಹುದು. ಸೊಳ್ಳೆಗಳು ಡೆಂಗ್ಯೂ ಜ್ವರ ಇರುವ ರೋಗಿಗೆ ಕಚ್ಚಿದಾಗ ಅವು ಸೋಂಕಿಗೊಳಪಟ್ಟು, ನಂತರ ಆ ಸೊಳ್ಳೆಗಳು 4 ರಿಂದ 10 ದಿನಗಳಲ್ಲಿ ಮತ್ತೊಬ್ಬ ಆರೋಗ್ಯವಂತ ವ್ಯಕ್ತಿಗೆ ರೋಗ ಹರಡಲು ಸಮರ್ಥವಾಗುತ್ತವೆ. ಸಾಮಾನ್ಯವಾಗಿ ಈಡೀಸ್‌ ಸೊಳ್ಳೆಗಳು ವಾತಾವರಣವನ್ನು ಅವಲಂಬಿಸಿ 30 ದಿನಗಳ ಕಾಲ ಬದುಕಬಲ್ಲವು.  ಹಾಗಾಗಿ ಹುಟ್ಟಿದ ಮೊದಲನೇ ದಿನಕ್ಕೆ ಅದು ಸೋಂಕಿ ಗೊಳಪಟ್ಟರೆ ಅದರ ಜೀವಿತಾವಧಿಯಲ್ಲಿ ಸುಮಾರು 20ರಿಂದ  25 ದಿನ ಸಮುದಾಯದಲ್ಲಿ ಸೋಂಕು ಹರಡಬಲ್ಲವು. ಸೋಂಕಿ ಗೊಳಗಾಗಿರುವ ಸೊಳ್ಳೆಗಳ ಮೊಟ್ಟೆಗಳಿಂದ ಹುಟ್ಟುವ ಮರಿಸೊಳ್ಳೆಗಳು ಸೋಂಕಿನಿಂದಲೇ ಕೂಡಿ ಹುಟ್ಟಿನಿಂದಲೇ ರೋಗ ಹರಡಬಲ್ಲವಾಗಿರುತ್ತವೆ.

ಈಡಿಸ್ ಈಜಿಪ್ಟೆ ಸೊಳ್ಳೆಗಳು ನಿಂತ ನೀರಲ್ಲಿ ಸಂತಾನೋತ್ಪತ್ತಿ ಮಾಡುವುದರಿಂದ ಮಳೆ ಧಾರಕಾರವಾಗಿ ಬರುತ್ತಿರುವಾಗ,
ಮಳೆಯ ನೀರು ಬಿರುಸಾಗಿ ಹರಿಯುವಾಗ ಸೊಳ್ಳೆಗಳ ಸಂತಾನೋತ್ಪತ್ತಿ ಸಾಧ್ಯವಿಲ್ಲ. ಈ ಸೊಳ್ಳೆಗಳು 20ರಿಂದ 30 ಡಿಗ್ರಿ ವಾತಾವರಣದ ಉಷ್ಣತೆಯಲ್ಲಿ ಹಾಗೂ 60ರಿಂದ  ಶೇ.80 ಹವೆಯ ಆರ್ದತೆಯಲ್ಲಿ ಉತ್ಪತ್ತಿಗೊಳ್ಳುತ್ತವೆ.ವಿಶೇಷ ವೆಂದರೇ ಈ ಸೊಳ್ಳೆಗಳು ಹೆಚ್ಚು ದೂರ ಹಾರಿಕೊಂಡು ಹೋಗುವುದಿಲ್ಲ, ಕೇವಲ 400 ರಿಂದ 500 ಮೀಟರ್ ನಷ್ಟು ಮಾತ್ರ ಹಾರಬಲ್ಲವು, ಆದಕಾರಣ ಒಂದೇ ಸ್ಥಳದಲ್ಲಿ ಹೆಚ್ಚು ಕಾಲ ಇರುವ ಕಾರಣ ಆ ಭಾಗದ ಹೆಚ್ಚು ಜನರಿಗೆ ಸೋಂಕು ತಗುಲಿಸಬಲ್ಲುದು. ಸಂಶೋಧ ನೆಗಳಿಂದ ತಿಳಿದು ಬಂದ ಮತ್ತೊಂದು ಕುತೂಹಲ ಕಾರಿ ಅಂಶವೆಂದರೆ ಈ ಸೊಳ್ಳೆಗಳು ಹಗಲು ವೇಳೆಯಲ್ಲಿ ಅಂದರೆ ಸೂರ್ಯೋದ ಯದ ಎರಡು ಘಂಟೆ ಮತ್ತು ಸೂರ್ಯಸ್ಥ ಮಾನದ ಎರಡು ಘಂಟೆಯಲ್ಲಿ ಹೆಚ್ಚು ಕ್ರೀಯಾಶೀಲವಾಗಿರುತ್ತವೆ.

ಸೋಂಕಿರುವ ಸೊಳ್ಳೆಗಳು ಕಚ್ಚಿದ 5 ರಿಂದ 7 ದಿನಗಳ ನಂತರ ರೋಗಲಕ್ಷಣಗಳು ಕಂಡುಬರುತ್ತವೆ.ರೋಗ ಲಕ್ಷಣಗಳು:
1. ತೀವ್ರ ಜ್ವರ ಇದ್ದಕ್ಕಿದ್ದಂತೆ ಕಾಣಿಸಿಕೊಳ್ಳುವುದು.  2. ತೀವ್ರ ತೆರನಾದ ತಲೆನೋವು -ಹೆಚ್ಚಾಗಿ ಹಣೆಯ ಮುಂಭಾಗದಲ್ಲಿ ಕಾಣಿಸುವುದು. 3. ಕಣ್ಣಿನ ಹಿಂಭಾಗದಲ್ಲಿ ನೋವು ಕಾಣಿಸಿಕೊಂಡು -ಕಣ್ಣಿನ ಚಲನೆಯಲ್ಲಿ ನೋವು ಹೆಚ್ಚಾಗುವುದು. 4. ಮೈಕೈ ನೋವು ಮತ್ತು ಸಂಧಿನೋವು, ವಾಕರಿಕೆ ಅಥವಾ ವಾಂತಿ. 5. ಮೈಮೇಲೆ ಕೆಂಪು ಬಣ್ಣದ ದಡಿಕೆ ಕಾಣಿಸಿಕೊಳ್ಳುವುದು.

ಈ ಮೇಲಿನ ಸಾಮಾನ್ಯ ಲಕ್ಷಣಗಳ ಜತೆಗೆ, ಕೆಲವರಿಗೆ ಕೆಳಗಿನ ಯಾವುದಾದರೂ ತೀವ್ರವಾದ ಲಕ್ಷಣಗಳೂ ಕಂಡುಬರಬಹುದು.
1. ತೀವ್ರತೆರನಾದ ಹೊಟ್ಟೆ ನೋವು. 2. ಬಾಯಿ, ಮೂಗು ಮತ್ತು ವಸಡುಗಳಿಂದ ರಕ್ತಸ್ರಾವ ಹಾಗೂ ಚರ್ಮದ ಮೇಲೆ ಅಲ್ಲಲ್ಲಿ ರಕ್ತಸ್ರಾವದ ಗುರುತುಗಳು. 3. ರಕ್ತ ಸಹಿತ ಅಥವಾ ರಕ್ತರಹಿತವಾದ ವಾಂತಿ. 4. ಕಪ್ಪುಬಣ್ಣದ ಮಲ ವಿಸರ್ಜನೆ. 5.ವಿಪರೀತ  ಬಾಯಾರಿಕೆ (ಬಾಯಿ ಒಣಗುವುದು) 6. ಬಿಳುಚಿಕೊಂಡ ಚರ್ಮ. 7. ಚಡಪಡಿಸುವಿಕೆ ಅಥವಾ ಪ್ರಜ್ಞೆ ತಪ್ಪುವುದು.

ನಾಲ್ಕು ವಿಧದ ಡೆಂಗ್ಯೂವೈರಸ್ ಗಳಿಂದ ಡೆಂಗ್ಯೂ ಜ್ವರ ಬರಬಹುದು. ಡೆಂಗ್ಯೂ ಜ್ವರ DENV1 ವೈರಾಣುವಿನಿಂದ ಬಂದಿದ್ದರೆ ಬೇಗ ಗುಣವಾಗಬಹುದು. ಒಮ್ಮೆ ಡೆಂಗ್ಯೂ ಬಂದವರಿಗೆ ಮತ್ತೂಮ್ಮೆ DENV2 ವೈರಾಣು ಮತ್ತು DENV3 ವೈರಾಣು ಅಥವಾ DENV 4 ವೈರಾಣುವಿನಿಂದ ಸೋಂಕು ಬಂದರೆ ರೋಗದ ಲಕ್ಷಣಗಳು ತೀವ್ರವಾಗಬಹುದು.

ಪರೀಕ್ಷಾ ವಿಧಾನಗಳು:
ಕೋವಿಡ್19 ನಂತೆ ಇದರ ಪರೀಕ್ಷೆಗೆ ಹೆಚ್ಚು ತಿಣುಕಾಡಬೇಕಿಲ್ಲ. ಐದು ದಿನದ ಒಳಗಾದರೆ “NS1 antigen” ಪರೀಕ್ಷೆ (nonstructural protein 1) .ಈ ಪರೀಕ್ಷೆಯ ಮುಖೇನಾ ಮೊದಲದಿನವೇ ಡೆಂಗ್ಯೂವಿಗೆ ಸಂಬಂಧಪಟ್ಟ ವೈರಸನ್ನು ಪತ್ತೆಹಚ್ಚಬಹುದು. ಐದು ದಿನದ ನಂತರವಾದರೆ IgM, IgG, ELISA, RT- PCR ಪರೀಕ್ಷೆಗಳಿಂದ ನಿಖರವಾಗಿ ಈ ರೋಗವನ್ನು ಪತ್ತೆಹಚ್ಚಬಹುದು.

ತೆಗೆದುಕೊಳ್ಳಬೇಕಾದ ಅಗತ್ಯ ಮುನ್ನೆಚ್ಚರಿಕೆಯ ಕ್ರಮಗಳು:
1.ಪೂರ್ತಿ ತೋಳಿರುವ ಉಡುಪು ಧರಿಸುವುದು. 2.ಮನೆಯ ಸುತ್ತ ಮುತ್ತ ಹೂವಿನಕುಂಡ,ಒಡೆದ ಬಾಟಲಿ, ಒಡೆದ ತೆಂಗಿನ ಚಿಪ್ಪು, ಟಯರ್ ಮುಂತಾದ ವಸ್ತುಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳುವುದು.‌ 3.ಸೊಳ್ಳೆ ಪರದೆ, ಕಿಟಕಿಗಳಿಗೆ ಪರದೆ, ಸೊಳ್ಳೆ ಬತ್ತಿ ಇವುಗಳನ್ನು ಉಪಯೋಗಿಸುವುದು. 4.ಯಾವುದೇ ಜ್ವರ ಮೂರುದಿನಕ್ಕಿಂತ ಮೀರಿ ಇದ್ದರೆ ಅಗತ್ಯವಾಗಿ ರಕ್ತ ಪರೀಕ್ಷೆ ಮಾಡಿಸಿ ಕೊಳ್ಳುವುದು. 5.ಹೆಚ್ಚಾಗಿ ಹಗಲು ಹೊತ್ತಿನಲ್ಲಿ ಕಚ್ಚುವ ಸೊಳ್ಳೆ. ಅದರಲ್ಲೂ ಸೂರ್ಯೋದಯ, ಸೂರ್ಯಾಸ್ತಮಾನ ಈ ಸಮಯದಲ್ಲಿ ಹೆಚ್ಚು ಎಚ್ಚರ ವಹಿಸುವುದು. 6.ಜ್ವರ ಯಾವುದೇ ಇರಬಹುದು.ನಿರ್ಲಕ್ಷ್ಯ ಸಲ್ಲದು.

ಭೀತರಾಗುವುದಲ್ಲ.. ಜಾಗ್ರತರಾಗೋಣ….

 

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!