ಕೋವಿಡ್ ಲಸಿಕೆಗಳ ಬಗ್ಗೆ ಒಂದಿಷ್ಟು ಮಾಹಿತಿ ಹಂಚಿ ಕೊಂಡಿದ್ದಾರೆ ಡಾ। ರಾಜಲಕ್ಷ್ಮೀ,ಸಂತೆಕಟ್ಟೆ  

ನಿಮಗೆಲ್ಲಾ ತಿಳಿದಿರುವಂತೆ ಕೋವಿಡ್19ರ ಎರಡನೇ ಅಲೆ ದಿನದಿಂದ ದಿನಕ್ಕೆ ಹೆಚ್ಚು ವಿನಾಶಕಾರಿಯಾಗುತ್ತಾ ಮುನ್ನುಗ್ಗುತ್ತಿದೆ.  ಕೋವಿಡ್ ನಿಂದ ನಮ್ಮನ್ನು ರಕ್ಷಿಸಿಕೊಳ್ಳಲು, ನಮ್ಮಲ್ಲಿ ಸದ್ಯಕ್ಕೆ ಲಭ್ಯವಿರುವ ಆಯುಧವೇ  ಕೋವಿಡ್ ಲಸಿಕೆ. ಎರಡು ಲಸಿಕೆಗಳು ದೊರಕುತ್ತಿವೆ ಕೋವಿಷೀಲ್ಡ್ , ಕೋವ್ಯಾಕ್ಸೀನ್.

ಕೋವಿಡ್ ಲಸಿಕೆಯನ್ನು ಎರಡು ಹಂತದಲ್ಲಿ ನೀಡಲಾಗುತ್ತದೆ. ಕೋವಿಷೀಲ್ಡ್ ಲಸಿಕೆಯ ಎರಡನೇ ಡೋಸನ್ನು ಮೊದಲ ಲಸಿಕೆಯ 6-8 ವಾರಗಳ ನಂತರ ನೀಡಿದರೆ ಕೋವ್ಯಾಕ್ಸೀನ್ ಲಸಿಕೆಯ ಎರಡನೇ ಡೋಸನ್ನು 4-6 ವಾರಗಳ ನಂತರ ನೀಡಲಾಗುತ್ತದೆ. ಮೊದಲ ಹಂತದಲ್ಲಿ ಪಡೆದ ಲಸಿಕೆಯನ್ನೇ ಎರಡನೇ ಹಂತದಲ್ಲೂ ಪಡೆಯಬೇಕು.

 ಕೆಲವು ಸಂದೇಹಗಳು: 
1. ರಕ್ತದೊತ್ತಡ, ಮಧುಮೇಹ, ಹೃದಯ ಸಂಬಂಧಿ ಕಾಯಿಲೆಗಳಿರುವವರು ಲಸಿಕೆ ಪಡೆಯಬಹುದೇ?
ಹೌದು, ನಿಮ್ಮ ವೈದ್ಯರ ಸಲಹೆ ಪಡೆದು ಲಸಿಕೆ ಹಾಕಿಸಿಕೊಳ್ಳಬಹುದು

2 . ಮುಟ್ಟು/ ಋತುಸ್ರಾವದ /Periods ದಿನಗಳಲ್ಲಿ ಲಸಿಕೆ ತೆಗದುಕೊಳ್ಳಬಹುದೇ?

ಖಂಡಿತವಾಗಿ ಹೌದು ಕೊರೋನ ಸಮಯದಲ್ಲಿನ ಆತಂಕ, ಮಾನಸಿಕ ಉದ್ವೇಗಗಳಿಂದ ಮಾಸಿಕ ಋತುಸ್ರಾವದಲ್ಲಿ ತುಸು ಏರಿಳಿತಗಳಾಗಿರಬಹುದು ಆದರೇ ಕೋವಿಡ್ ಲಸಿಕೆಯನ್ನು ಋತು ಸ್ರಾವದ ಸಮಯದಲ್ಲಿ ಹಾಕಿಸಿಕೊಂಡರೆ ಯಾವುದೇ ಅಡ್ಡ ಪರಿಣಾಮಗಳಿಲ್ಲ

3. ಗರ್ಭಿಣಿ ಹಾಗೂ ಬಾಣಂತಿಯರು ಲಸಿಕೆ ಹಾಕಿಸಿಕೊಳ್ಳಬಹುದೇ?

ಹೆರಿಗೆ ಹಾಗು ಸ್ತ್ರೀ ರೋಗ ತಜ್ಞರ ಸಂಘದ ಅಭಿಪ್ರಾಯದಂತೆ, ಇತರೆ ಜನರಲ್ಲಿ ಕಂಡು ಬರಬಹುದಾದ ಲಸಿಕೆಯ ಅಡ್ಡ ಪರಿಣಾಮಗಳೇ ಗರ್ಭಿಣಿ ಹಾಗೂ ಬಾಣಂತಿಯರಲ್ಲಿಯೂ ಕಾಣಿಸಿಕೊಳ್ಳಬಹುದು. ಲಸಿಕೆಯಿಂದ ಗರ್ಭಿಣಿ ಮಹಿಳೆ ಕೋವಿಡ್ ನಿಂದ ತನ್ನನ್ನು ರಕ್ಷಿಸಿಕೊಳ್ಳಲು ಸಾಧ್ಯವಿದೆ ಆದ್ದರಿಂದ ಗರ್ಭಿಣಿ ಹಾಗು ಬಾಣಂತಿಯರಿಗೆ ಲಸಿಕೆ ದೊರಕುವಂತಾಗಬೇಕು ಎಂದು ಸಂಘ ಸರಕಾರಕ್ಕೆ ಮನವಿ ಮಾಡಿದೆ

4. ಲಸಿಕೆ ಪಡೆದ ನಂತರವೂ ಕೋವಿಡ್ ಬರಬಹುದೇ?
ಹೌದು ಎರಡು ಡೋಸ್ ಲಸಿಕೆ ಹಾಕಿಸಿಕೊಂಡ ನಂತರವೂ ಕೋವಿಡ್ ಸೋಂಕು ತಗಲಬಹುದು ಆದರೆ ರೋಗದ ತೀವ್ರತೆ ಕಡಿಮೆಯಿದ್ದು, ಆಸ್ಪತ್ರೆಗೆ ದಾಖಲಾಗುವ ಹಾಗು ಜೀವಕ್ಕೆ ಅಪಾಯ ತರುವ ಸಮಸ್ಯೆಗಳ ಸಂಭವನೀಯತೆ ಕಡಿಮೆ ಕೋವಿಷೀಲ್ಡ್ ಒಂದನೇ ಡೋಸ್ ನ ನಂತರ ಸೋಂಕಿನ ಸಾಧ್ಯತೆ 0.02%   ಎರಡನೇ ಡೋಸಿನ ನಂತರ 0.03% ಕೋವ್ಯಾಕ್ಸೀನ್ ಒಂದನೇ ಡೋಸಿನ ನಂತರ 0.04% ಎರಡನೇ ಡೋಸಿನ ನಂತರ  0.04% ( as on 21/04/2021 )

5. ಕೋವಿಡ್ ಲಸಿಕೆ ಒಂದನೇ ಡೋಸ್ ಹಾಕಿಸಿಕೊಂಡ ನಂತರ ಕೋವಿಡ್ ಸೋಂಕಿಗೊಳಗಾದರೆ ಪುನ ಲಸಿಕೆ ಅಗತ್ಯವೇ?  ಹೌದು ಎರಡನೇ ಡೋಸನ್ನು ಕೋವಿಡ್ ವಾಸಿಯಾದ 4 ವಾರಗಳ ಬಳಿಕ ಹಾಕಿಸಿಕೊಳ್ಳಬೇಕು.

6. ಕೋವಿಡ್ ಲಸಿಕೆ ಹಾಕಿಸಿಕೊಂಡವರಿಂದ ಕೋವಿಡ್ ರೋಗ ಹರಡುತ್ತದೆಯೇ?
ಇಲ್ಲ, ಲಸಿಕೆ ಪಡೆದ ನಂತರ ದೇಹವು ಕೋವಿಡ್ ವಿರುದ್ಧ ಪ್ರತಿಕಾಯಗಳನ್ನು ತಯಾರಿಸುತ್ತದೆ.

7. ಕೋವಿಡ್ ಲಸಿಕೆ ಪಡೆದರೆ ಬಂಜೆತನ , ನಪುಂಸಕತ್ವ ಬರುವುದೇ?
ಖಂಡಿತವಾಗಿಯೂ ಇಲ್ಲ

8. ಕೋವಿಡ್ ಲಸಿಕೆ ನಮ್ಮ ದೇಹದ DNA /  ಜೀನ್ ಗಳನ್ನು ಬದಲಾಯಿಸುತ್ತದೆಯೇ?

ಇಲ್ಲ

9. ಕೋವಿಡ್ ಲಸಿಕೆಯಿಂದ ಬರುವ ರೋಗನಿರೋಧಕ ಶಕ್ತಿ ಜೀವನ ಪೂರ್ತಿ ಲಭ್ಯವೇ?
ಇಲ್ಲ, ಎರಡನೇ ಲಸಿಕೆ ಪಡೆದ 2 ವಾರಗಳ ನಂತರ  ದೇಹದಲ್ಲಿ ಪೂರ್ಣ ಪ್ರಮಾಣದ ಪ್ರತಿಕಾಯಗಳು ಉತ್ಪತ್ತಿ ಯಾಗುತ್ತವೆ. ಸಾಮಾನ್ಯವಾಗಿ ಒಮ್ಮೆ ಉತ್ಪನ್ನವಾದ ಪ್ರತಿಕಾಯಗಳು 6-7 ತಿಂಗಳು ದೇಹಕ್ಕೆ ರಕ್ಷಣೆ ನೀಡುತ್ತವೆ.

10. ಕೋವಿಡ್ ಲಸಿಕೆ ಪಡೆದ ನಂತರ ರಕ್ತದಾನ ಮಾಡಬಹುದೇ?
ಎರಡನೇ ಡೋಸ್ ಪಡೆದ 4 ವಾರಗಳ ನಂತರ ರಕ್ತದಾನ ಮಾಡಬಹುದು

ಊಹಾಪೋಹಗಳಿಗೆ ಕಿವಿಗೊಡದೆ ಲಸಿಕೆ ಹಾಕಿಸಿ ಕೊಳ್ಳಿ, ಇತರರೂ ಲಸಿಕೆ ಹಾಕಿಸಿ ಕೊಳ್ಳಲು ಪ್ರೇರಣೆ ನೀಡಿ.  ಲಸಿಕೆ ಪಡೆದ ನಂತರವೂ ಮಾಸ್ಕ್ ಬಳಸಿ, ದೈಹಿಕ ಅಂತರ ಕಾಪಾಡಿ, ಕೈಗಳನ್ನು ಆಗಾಗ ಸಾಬೂನು ಬಳಸಿ ತೊಳೆಯಿರಿ. ಕೊರೋನ ಸೋಂಕು ತಡೆಗಟ್ಟಲು ನಿಮ್ಮ ಜವಾಬ್ದಾರಿಯನ್ನು  ನಿರ್ವಹಿಸಿರಿ. 

 

 
 
 
 
 
 
 
 
 

Leave a Reply