ಬೆಂಗಳೂರು: ಕೋವಿಡ್ ನಿರ್ವಹಣೆಗಾಗಿ ಪ್ರತಿ ಗ್ರಾಮ ಪಂಚಾಯಿತಿಗೆ 50 ಸಾವಿರ ರೂಪಾಯಿ ಮುಂಗಡ ನೀಡಲು ಮುಖ್ಯಮಂತ್ರಿ ನಿರ್ಧರಿಸಿದ್ದಾರೆ. ಹಳ್ಳಿಗಳಲ್ಲಿ ಸೋಂಕಿತರ ಮನೆಗೆ ಭೇಟಿ ನೀಡಿ ಕೋವಿಡ್ ಕೇರ್ ಕೇಂದ್ರಕ್ಕೆ ಸಾಗಿಸಲು ಸ್ಥಳೀಯಮಟ್ಟದ ಕಾರ್ಯಪಡೆಗೆ ಇದರಿಂದ ಅನುಕೂಲವಾಗಲಿದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ತಿಳಿಸಿದರು.
ಗುರುವಾರ ಸುದ್ದಿಗಾರರ ಜೊತೆ ಮಾತನಾಡಿದ ಸಿ.ಎಂ ಕೋವಿಡ್ ಪ್ರಕರಣ ಹೆಚ್ಚುತ್ತಿರುವ ಕಡೆಗಳಲ್ಲಿ ತಲಾ 25ರಂತೆ ಆಮ್ಲಜನಕ ಸಾಂದ್ರಕಗಳನ್ನು ಕಳುಹಿಸಿಕೊಡಲಾಗುತ್ತಿದೆ. ಕೇಂದ್ರದಿಂದ ಇತ್ತೀಚೆಗೆ 800 ಆಮ್ಲಜನಕ ಸಾಂದ್ರಕಗಳು ಬಂದಿದ್ದು, ಅವುಗಳನ್ನು ಮೂಲಸೌಕರ್ಯ ಕಡಿಮೆ ಇರುವ ಮಂಡ್ಯ, ಚಿತ್ರದುರ್ಗ, ಕೋಲಾರ, ಹಾಸನ, ಚಿಕ್ಕಬಳ್ಳಾಪುರ ಮೊದಲಾದ ಜಿಲ್ಲೆಗಳಿಗೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ರಾಜ್ಯದ ವೈದ್ಯಕೀಯ ಕಾಲೇಜುಗಳಲ್ಲಿ ಕೋವಿಡ್ ಚಿಕಿತ್ಸೆಗೆ ಐಸಿಯು ವ್ಯವಸ್ಥೆ, ಆಮ್ಲಜನಕ ಪೂರೈಕೆ ಸೇರಿದಂತೆ ಹೆಚ್ಚು ನೆರವು ನೀಡಲು ಉದ್ದೇಶಿಸಲಾಗಿದೆ. ಇದಕ್ಕಾಗಿ ತುಮಕೂರು, ಚಿತ್ರದುರ್ಗ ಜಿಲ್ಲೆಗೆ ಭೇಟಿ ನೀಡುತ್ತೇನೆ. ಬಳಿಕ ದಾವಣಗೆರೆ, ಹಾವೇರಿ, ಹುಬ್ಬಳ್ಳಿ, ಗದಗ ಜಿಲ್ಲೆಗಳಿಗೆ ಭೇಟಿ ನೀಡುತ್ತೇನೆ’ ಎಂದರು.ಅಂಕಿ ಅಂಶ ಮುಚ್ಚಿಟ್ಟರೆ ಯಾವುದೇ ಲಾಭವಿಲ್ಲ. ಒಂದೂಕಾಲು ಲಕ್ಷಕ್ಕಿಂತ ಹೆಚ್ಚು ಕೋವಿಡ್ ಪರೀಕ್ಷೆ ನಡೆಯುತ್ತಿದ್ದು, ಇದನ್ನು ಹೆಚ್ಚಿಸಲು, 24 ಗಂಟೆಯೊಳಗೆ ಪರೀಕ್ಷಾ ವರದಿ ನೀಡಲು ಸೂಚಿಸಲಾಗಿದೆ.
ಕಪ್ಪು ಶಿಲೀಂಧ್ರ ರೋಗ ನೋಡಿಕೊಂಡು ಔಷಧಿ ವಿತರಣೆ ಮಾಡಲಾಗುತ್ತಿದೆ. ಹೆಚ್ಚಿನ ಪ್ರಮಾಣದ ಔಷಧಿ ಹಂಚಿಕೆ ಮಾಡಬೇಕೆಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಕೋವಿಡ್ನಿಂದ ಗುಣಮುಖರಾದವರ ಆರೋಗ್ಯದ ಮೇಲೆಯೂ ನಿಗಾ ಇಡಬೇಕೆಂದು ಸೂಚನೆ ನೀಡಲಾಗಿದೆ ಎಂದರು.