ಮೊದಲ ಹಂತದಲ್ಲಿ ರಾಜ್ಯಕ್ಕೆ 54 ಬಾಕ್ಸ್ ಗಳಲ್ಲಿ 6.48 ಲಕ್ಷ ಕೊರೋನಾ ಲಸಿಕೆ ಡೋಸ್ ಬಂದಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 54 ಬಾಕ್ಸ್ ಗಳಲ್ಲಿ 6.48 ಲಕ್ಷ ಡೋಸ್ ಬಂದಿದ್ದು, ಉತ್ತಮವಾಗಿ ಪ್ಯಾಕೇಜ್ ಮಾಡಿ ತರಲಾಗಿದೆ. ನಿರ್ದಿಷ್ಟ ತಾಪಮಾನದಲ್ಲಿ ತಂದ ಲಸಿಕೆಯನ್ನು ಸಂಗ್ರಹ ಕೇಂದ್ರದಲ್ಲಿ ಇಡಲಾಗಿದೆ ಎಂದರು. ನಾಳೆ ಬೆಳಗಾವಿಗೆ 1.40 ಲಕ್ಷ ಡೋಸ್ ಲಸಿಕೆ ಬರಲಿದೆ.
ಆತ್ಮನಿರ್ಭರ ಭಾರತ ಪರಿಕಲ್ಪನೆಯಡಿ ಪ್ರಧಾನಿ ಮೋದಿಯವರು ಕಂಪನಿಗಳಿಗೆ ಸಹಕಾರ ನೀಡಿರುವುದರಿಂದ ಕೇವಲ 210 ರೂ.ಗೆ ಲಸಿಕೆ ದೊರೆಯುತ್ತಿದೆ. ಕೊರೋನಾ ನಿಯಂತ್ರಣಕ್ಕೆ ಶ್ರಮಿಸಿದ ಎಲ್ಲ ಸಿಬ್ಬಂದಿ ಜನವರಿ 16 ರಿಂದ ಆರಂಭವಾಗುವ ಲಸಿಕೆ ನೀಡುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು.
ಇದಕ್ಕಾಗಿ ಮಾರ್ಗಸೂಚಿ ನೀಡಲಾಗುವುದು ಎಂದರು. ಲಸಿಕೆಗಳನ್ನು ಸುರಕ್ಷಿತವಾಗಿ ತಂದು ದಾಸ್ತಾನು ಮಾಡುವ ಅನುಭವ ನಮ್ಮ ಸಿಬ್ಬಂದಿಗಿದೆ. ಆರೋಗ್ಯ ಇಲಾಖೆಯ ಅಧಿಕಾರಿಗಳ ಕಾರ್ಯಕ್ಷಮತೆ ಮೇಲೆ ಯಾರಿಗೂ ಅಪನಂಬಿಕೆ ಬೇಡ. ಎಲ್ಲ ಪ್ರಕ್ರಿಯೆಗಳು ನಿಯಮದಂತೆ ನಡೆಯುತ್ತಿವೆ ಎಂದರು.