ಉಸಿರಾಟದ ಸಮಸ್ಯೆ ಇದ್ದರೂ ರಜೆ ನೀಡಿಲ್ಲವೆಂದು ಆಕ್ಸಿಜನ್‌ ಸಿಲಿಂಡರ್‌ ಸಹಿತ ಬ್ಯಾಂಕ್‌ಗೆ ಬಂದ ಉದ್ಯೋಗಿ

ರಾಂಚಿ: ಕರೊನಾ ಸೋಂಕಿನಿಂದ ಬಳಲುತ್ತಿದ್ದರೂ ರಜೆ ಕೊಟ್ಟಿಲ್ಲ ಎಂದು ಕೋಪಗೊಂಡ ಬ್ಯಾಂಕ್‌ ಸಿಬ್ಬಂದಿಯೊಬ್ಬರು ಆಕ್ಸಿಜನ್ ಸಿಲಿಂಡರ್ ಸಹಿತ ಕೆಲಸಕ್ಕೆ ಹಾಜರಾಗಿರುವ ಘಟನೆ ಜಾರ್ಖಂಡ್‌ನ ಬೊಕೊರಾದ ಸೆಕ್ಟರ್ 4ರಲ್ಲಿ ನಡೆದಿದೆ.

ಪಂಜಾಬ್ ನ್ಯಾಷನಲ್ ಬ್ಯಾಂಕ್‌ ಉದ್ಯೋಗಿ ಅರವಿಂದ್ ಕುಮಾರ್ ಈ ರೀತಿ ಮಾಡಿದ್ದು, ಅವರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.ಕರೊನಾ ಸೋಂಕಿಗೆ ತುತ್ತಾಗಿದ್ದ ಅರವಿಂದ್‌ ಅವರು ಚಿಕಿತ್ಸೆ ಪಡೆಯುತ್ತಿದ್ದರು. ನಂತರ ಪರೀಕ್ಷೆ ಮಾಡಿಸಿದಾಗ ನೆಗಟಿವ್ ವರದಿ ಬಂದಿತ್ತು. ಆದರೆ ಉಸಿರಾಟದ ತೊಂದರೆಯಿಂದಾಗಿ ಮನೆಯಲ್ಲಿಯೇ ಆಕ್ಸಿಜನ್ ಸಪೋರ್ಟ್ ಮೇಲೆ ವಿಶ್ರಾಂತಿ ಮಾಡುತ್ತಿದ್ದರು. ಮಾತ್ರವಲ್ಲದೇ ಶ್ವಾಸಕೋಶದಲ್ಲಿ ಸೋಂಕು ತಗುಲಿದ್ದರಿಂದ ವೈದ್ಯರು ವಿರಾಮ ತೆಗೆದುಕೊಳ್ಳುವಂತೆ ಹೇಳಿದ್ದರು.

ಈ ಹಿನ್ನೆಲೆಯಲ್ಲಿ ಸಂಪೂರ್ಣ ವೈದ್ಯಕೀಯ ದಾಖಲೆ ಸಹಿತ ಅರವಿಂದ್‌ ಅವರು, ಬ್ಯಾಂಕ್‌ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆದು ರಜೆಗಾಗಿ ಮನವಿ ಮಾಡಿದ್ದರು. ಆದರೂ ಕೆಲಸಕ್ಕೆ ಹಾಜರಾಗುವಂತೆ ಒತ್ತಡ ಹಾಕಲಾಗಿತ್ತು ಎಂದು ಆರೋಪಿಸಿರುವ ಅರವಿಂದ್‌ ಸಿಟ್ಟಿನಿಂದ ಹಾಜರಾಗಿದ್ದಾರೆ. ಆದರೆ ಆಕ್ಸಿಜನ್ ಸಿಲಿಂಡರ್ ಸಹಿತವಾಗಿಯೇ ಬರುವಂತಾಗಿದೆ ಎಂದು ಮಾಧ್ಯಮಗಳ ಎದುರು ಅಳಲು ತೋಡಿಕೊಂಡಿದ್ದಾರೆ.ಇದರಿಂದ ಬೇಸರಗೊಂಡ ಅವರು ರಾಜೀನಾಮೆಯನ್ನು ಕೊಟ್ಟಿದ್ದಾರೆ. ಆದರೆ ಅಧಿಕಾರಿಗಳು ಸ್ವೀಕರಿಸುತ್ತಿಲ್ಲ ಎನ್ನಲಾಗಿದೆ. ಕುಟುಂಬದವರು ಬ್ಯಾಂಕ್‌ಗೆ ಬಂದಿದ್ದು, ಹಿರಿಯ ಅಧಿಕಾರಿಗಳು ಪ್ರತಿಕ್ರಿಯೆ ನೀಡಲು ಒಪ್ಪುತ್ತಿಲ್ಲ.

 
 
 
 
 
 
 
 
 
 
 

Leave a Reply