ಮನೆ ಮದ್ದು, ಆಯುರ್ವೇದ ಔಷಧಿಗಳಿಗೆ ಪ್ರಾಮುಖ್ಯತೆ ಹೆಚ್ಚಾಗುತ್ತಿದೆಯಾ…

ಕೊರೊನಾ ಎಂಬ ಸಾಂಕ್ರಾಮಿಕ ರೋಗ ಜಗತ್ತಿನಾದ್ಯಂತ ಪಸರಿಸಿದ ನಂತರ ಜನರ ದೈನಂದಿನ ಚಟುವಟಿಕೆಗಳು, ಜೀವನ ಶೈಲಿಗಳಲ್ಲಿ ಮಹತ್ತರವಾದ ಬದಲಾವಣೆಗಳಾಗಿದೆ. ಈ ರೋಗ ಬರುವುದಕ್ಕಿಂತ ಮೊದಲು ತಲೆನೋವು, ಜ್ವರ, ಕೆಮ್ಮು, ಶೀತ , ಕಫ, ಭೇಧಿ, ಮುಂತಾದ ಆರೋಗ್ಯ ಸಮಸ್ಯೆ ಬಂತೆಂದರೆ ಮನೆಯ ಹಿರಿಯರು ಯಾವುದಾದರೂ ಕಷಾಯ ಮಾಡಿಕೊಡುತ್ತೇನೆ ಕುಡಿ ಸರಿಯಾಗುತ್ತದೆ ಎಂದು ಹೇಳಿದರೂ, ಅದರಲ್ಲಿ ನಂಬಿಕೆಗಳು ನಮ್ಮಲ್ಲಿ ಕಡಿಮೆ ಇತ್ತು, ಶೀಘ್ರದಲ್ಲಿ ಉಪಶಮನ ಗೊಳ್ಳುವ ಅಲೋಪತಿ ಔಷಧಿಗಳಿಗಾಗಿ ಮೆಡಿಕಲ್ ಗಳತ್ತವೋ, ಅಥವಾ ವೈದ್ಯರ ಬಳಿ ತೆರಳಿ ಒಂದಷ್ಟು ಮಾತ್ರೆಗಳನ್ನು ತಿನ್ನುತ್ತಿದ್ದೆವು.

ಹಿಂದೆ ಯಾವುದೇ ರೀತಿಯ ನೋವು ಬಂದರೂ ಮೆಡಿಕಲ್ ಶಾಪ್ ಗಳತ್ತ ಮುಖ ಮಾಡುತ್ತಿದ್ದ ಜನರು, ಈಗ ಮನೆ ಮದ್ದು, ಆಯುರ್ವೇದ ಔಷಧಗಳ ಮೇಲೆ ಅವಲಂಬಿತರಾಗಿದ್ದಾರೆ. ಯಾವುದೇ ಮೆಡಿಕಲ್ ಶಾಪ್ ಗಳಲ್ಲಿ ವೈದ್ಯರು ಬರೆದುಕೊಟ್ಟ ಚೀಟಿ ಇಲ್ಲದೆ ಮಾತ್ರೆಗಳನ್ನು ಕೊಡುವಂತಿಲ್ಲ ಎಂಬ ಸರ್ಕಾರದ ಕಟ್ಟು ನಿಟ್ಟಿನ ಆದೇಶವೂ ಕಾರಣವಾದರೆ, ಇನ್ನೊಂದು ರೀತಿಯಲ್ಲಿ ವೈದ್ಯರ ಬಳಿ ಹೋದಾಗ, ಕೊರೊನ ಪರೀಕ್ಷೆ ಮಾಡಿಸಿ ಎಂದು ಹೇಳಿದರೆ, ಎಂಬ ಭಯ ಜನರಿಗಿದೆ.

ಹಿಂದೆ ಜಾಂಡೀಸ್(ಅರಶಿನ ಕುತ್ತಾ) ಗೋರ, ನೀರುಕೊಟ್ಟಲೆ, ಮುಂತಾದ ಕಾಯಿಲೆಗಳು ಬಂದಾಗ ಮಾತ್ರ ಮನೆಯ ಹಿರಿಯರ ಬಳಿಯೋ, ಊರಿನ ನಾಟಿ ವೈದ್ಯರ ಬಳಿಯೋ ತೆರಳಿ ಆಯುರ್ವೇದ ಗಿಡ ಮೂಲಿಕೆಗಳ ಮಾಹಿತಿ ತಿಳಿದು ಕಷಾಯ ಮಾಡಿ ಜನರು ಕುಡಿಯುತ್ತಿದ್ದರು. ಆದರೆ ಈಗ ಸಾಮಾನ್ಯ ಶೀತ, ಕಫ, ಜ್ವರ ತಲೆನೋವು ಇತ್ಯಾದಿ ಸಮಸ್ಯೆಗಳಿಗೆ, ಕಾಳು ಮೆಣಸು, ಅಮೃತ ಬಳ್ಳಿ, ನೆಲನೆಲ್ಲಿ, ತುಳಸೀ ಆಡುಸೋಗೆ ಸೊಪ್ಪು, ಸಂಬರಬಳ್ಳಿ ಸೊಪ್ಪು ಇತ್ಯಾದಿ ಗಿಡಮೂಲಿಕೆಗಳ ಕಷಾಯ ಮಾಡಿ ತಮ್ಮ ಸಮಸ್ಯೆ ಗಳಿಗೆ ಪರಿಹಾರವನ್ನು ಕಂಡು ಕೊಂಡಿದ್ದಾರೆ. ಇನ್ನು ಕೆಲವರು ಆಯುರ್ವೇದ ವೈದ್ಯರ ಬಳಿ ತೆರಳಿ ತಮ್ಮ ಆರೋಗ್ಯ ಸಮಸ್ಯೆಗಳಿಗೆ, ವೈದ್ಯರು ಕೊಡುವ ಆಯುರ್ವೇದ ಔಷಧಗಳನ್ನು ಸೇವಿಸಿ ಗುಣಮುಖರಾಗಿದ್ದಾರೆ.

ಆಯುರ್ವೇದ ಔಷಧಿಗಳನ್ನು ತಯಾರಿಸುವ ಹಲವು ಕಂಪೆನಿಗಳು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಔಷಧಿಗಳನ್ನು ತಯಾರಿಸಿ ಮಾರುಕಟ್ಟೆಗೆ ಸಾಕಷ್ಟು ಪ್ರಮಾಣದಲ್ಲಿ ಬಿಡುಗಡೆಗೊಳಿಸುತ್ತಿದೆ. ಇನ್ನು ಜನರು ದೈನಂದಿನ ಆಹಾರ ಪದಾರ್ಥಗಳಲ್ಲಿ ನೀರುಳ್ಳಿ, ಬೆಳ್ಳುಳ್ಳಿ ಯನ್ನು ಅಧಿಕವಾಗಿ ಉಪಯೋಗಿಸುತ್ತಿದ್ದಾರೆ ಏಕೆಂದರೆ, ಇವುಗಳಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಅಂಶಗಳಿವೆ. ಇನ್ನು ಜನರು ಸ್ವ- ಆರೋಗ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ಕೊಡುತ್ತಿದ್ದಾರೆ. ಜನರು ನಿಧಾನವಾಗಿ, ಮನೆ ಮದ್ದು, ಹಾಗೂ ಆಯುರ್ವೇದ ಔಷಧಿಗಳತ್ತ ಅವಲಂಬಿತರಾಗುತ್ತಿದ್ದಾರೆ. ನಮ್ಮ ಆರೋಗ್ಯ ಸಮಸ್ಯೆಗಳಿಗೆ ನಾವೇ ಪರಿಹಾರ ಕಂಡುಕೊಳ್ಳೋಣ

 
 
 
 
 
 
 
 
 
 
 

Leave a Reply