ಯಕ್ಷಗಾನ ಕಲಾವಿದರು ಅಮೆರಿಕಾಕ್ಕೆ ಬನ್ನಿ ~ ಶ್ರೀ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು.

ಉಡುಪಿ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಂಗಣದ ಬಯಲು ರಂಗ ಮಂದಿರಲ್ಲಿ ಮಂಗಳವಾರ ಸುಧಾಕರ ಆಚಾರ್ಯ ಸಂಘಟಿಸಿದ್ದ ಪಾವಂಜೆ ಯಕ್ಷಗಾನ ಮೇಳದ ಯಕ್ಷಗಾನ ಸಂದರ್ಭದಲ್ಲಿ ಕಲಾವಿದ ದಂಪತಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಮಾಜಿ ಅಧ್ಯಕ್ಷ ಪ್ರೊ. ಎಂ. ಎಲ್. ಸಾಮಗ ಮತ್ತು ವಿದುಷಿ ಪ್ರತಿಭಾ ಎಂ. ಸಾಮಗ ಅವರನ್ನು ಅಭಿನಂದಿಸಿ ಮಾತನಾಡಿದರು.
ಧಾರ್ಮಿಕವಾಗಿ ಆರಾಧನಾ ಕಲೆಯಾಗಿಯೂ ಯಕ್ಷಗಾನ ರೂಢಿಯಲ್ಲಿದೆ. ಹರಕೆ ಹೇಳುವ ಕಲೆ ಯಕ್ಷಗಾನ ಹೊರತುಪಡಿಸಿ ಇನ್ನೊಂದು ಕಲೆ ಇಲ್ಲ,  ತತ್ವ ಪ್ರಚಾರಕ್ಕೂ ಅದು ಪೂರಕ.  ಅಂಥ ಯಕ್ಷಗಾನ ಕಲೆಯ ಮೂಲ ಉಡುಪಿ. ಅದಮಾರು ಮಠದ ನರಹರಿತೀರ್ಥರಿಂದ ಪ್ರತಿಪಾದ್ಯವಾದ ಯಕ್ಷಗಾನ ಕಲೆ ಇಂದು ಸಾಗರಾಚೆಯೂ ಮನ್ನಣೆ ಪಡೆದಿದೆ ಎಂದರು.
ಯಕ್ಷಗಾನ ಕಲಾವಿದರು ಅಮೆರಿಕಾಕ್ಕೆ ಬನ್ನಿ ಎಂದು ಆಹ್ವಾನ ನೀಡಿದ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು, ಯಕ್ಷಗಾನ ಕಲೆಗೆ ಪುತ್ತಿಗೆ ಮಠ ಸದಾ ಪ್ರೋತ್ಸಾಹ ನೀಡುತ್ತಿದೆ. ಅಮೆರಿಕಾದಲ್ಲಿರುವ ಪುತ್ತಿಗೆ ಶಾಖಾಮಠದಲ್ಲಿ ಈಗಾಗಲೇ ಯಕ್ಷಗಾನ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಅಮೆರಿಕಾದಲ್ಲಿರುವ ತಮ್ಮ ಮಠದ 8 ಶಾಖಾಮಠಗಳಲ್ಲೂ ಯಕ್ಷಗಾನ ಪ್ರದರ್ಶನಕ್ಕೆ ಅವಕಾಶ ನೀಡಲಾಗುವುದು. ಅಮೆರಿಕಾ ಮಾತ್ರವಲ್ಲದೆ, ಭಾರತದ ವಿವಿಧೆಡೆ ಮತ್ತು ಇತರ ರಾಷ್ಟ್ರಗಳಲ್ಲಿರುವ ಪುತ್ತಿಗೆ ಶಾಖಾ ಮಠಗಳಲಿ ಯಕ್ಷಗಾನ ಪ್ರದರ್ಶನಕ್ಕೆ ಅವಕಾಶ ನೀಡುವುದಾಗಿ ಶ್ರೀಪಾದರು ಭರವಸೆ ನೀಡಿದರು.
ಸಿನೆಮಾದಲ್ಲಿ ಸ್ಟಾರ್ ಮಾನ್ಯತೆ ಪಡೆದ ನಟ, ನಟಿಯರಿದ್ದಂತೆ ಕರ್ನಾಟಕದ ಗಂಡುಕಲೆ ಯಕ್ಷಗಾನದಲ್ಲಿ ಸ್ಟಾರ್ ಮಾನ್ಯತೆ ಪಡೆದ ಭಾಗವತ ಪಟ್ಲ ಸತೀಶ್  ಶೆಟ್ಟಿ ಅವರು. ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿರುವ ಪಟ್ಲ ಅವರಿಗೆ ಇನ್ನಷ್ಟು ಶ್ರೇಯಸ್ಸಾಗಲಿ ಎಂದು ಹಾರೈಸಿದರು.
ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದಭಾರತೀ ಸ್ವಾಮೀಜಿ, ತಮ್ಮ ಮಠದಲ್ಲಿ ಹಿಂದಿನಿಂದಲೂ ಯಕ್ಷಗಾನಕ್ಕೆ ಪ್ರೋತ್ಸಾಹ ನೀಡುತ್ತಾ ಬರಲಾಗಿದೆ. ಈಚೆಗೆ ಬ್ರಹ್ಮೈಕ್ಯರಾದ ಶ್ರೀ ಕೇಶವಾನಂದಭಾರತೀ ಸ್ವಾಮೀಜಿಯವರಂತೂ ಯಕ್ಷಗಾನವನ್ನು ಬದುಕಿನ ಉಸಿರಾಗಿಸಿದವರು ಎಂದು ಸ್ಮರಿಸಿದರು. ಮುಂದೆಯೂ ಶ್ರೀಮಠ ಯಕ್ಷಗಾನಕ್ಕೆ ಆದ್ಯತೆ ನೀಡಲಿದೆ ಎಂದು.

ಈ ಸಂದರ್ಭದಲ್ಲಿ ಕಲಾಪೋಷಕ ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ. ಮೋಹನ ಆಳ್ವ,  ಮೂಡುಬಿದಿರೆ ಉದ್ಯಮಿ ಕೆ. ಶ್ರೀಪತಿ ಭಟ್, ಪುತ್ತಿಗೆ ಅಮೆರಿಕಾ ಶಾಖಾಮಠ ವ್ಯವಸ್ಥಾಪಕ ಯೋಗೀಂದ್ರ ಭಟ್, ಮಣಿಪಾಲ ಭುವನಪ್ರಸಾದ ಹೆಗ್ಡೆ, ಮಣಿಪಾಲ ಮಾಹೆ ಹೆಲ್ತ್ ಸೈನ್ಸ್ ವಿಭಾಗ ಡೀನ್ ಡಾ. ಅರುಣ್ ಮಯ್ಯ, ಪಾವಂಜೆ ಯಕ್ಷಗಾನ ಮೇಳ ವ್ಯವಸ್ಥಾಪಕ ಶಶೀಂದ್ರಕುಮಾರ್, ಪಾವಂಜೆ ಮೇಳ ನಿರ್ದೇಶಕ ಹಾಗೂ ಪಟ್ಲ ಫೌಂಡೇಶನ್ ಅಧ್ಯಕ್ಷ ಪಟ್ಲ ಸತೀಶ ಶೆಟ್ಟಿ, ಪಾವಂಜೆ ಕ್ಷೇತ್ರದ ಅರ್ಚಕ ಯಾಜಿ ನಿರಂಜನ ಭಟ್ ಮೊದಲಾದವರಿದ್ದರು.. 

ಕಾರ್ಯಕ್ರಮ ಸಂಘಟಕ ಸುಧಾಕರ ಆಚಾರ್ಯ ಸ್ವಾಗತಿಸಿದರು. ಶ್ರೀಮತಿ ಸುಧಾಕರ ಆಚಾರ್ಯ, ಡಾ. ದಿವ್ಯ ಮತ್ತು ಸತ್ರಾಜಿತ ಭಾರ್ಗವ ಇದ್ದರು. ಈ ಸಂದರ್ಭದಲ್ಲಿ ಕಲಾವಿದರಾದ ಪ್ರೊ. ಎಂ. ಎಲ್. ಸಾಮಗ ಮತ್ತು ಪ್ರತಿಭಾ ಎಂ. ಸಾಮಗ ದಂಪತಿಯನ್ನು ಗೌರವಿಸಲಾಯಿತು. 

ಬಳಿಕ ಪಾವಂಜೆ ಮೇಳದ ಕಲಾವಿದರಿಂದ `ಶ್ರೀದೇವಿ ಮಹಾತ್ಮೆ’ ಕಾಲಮಿತಿ ಯಕ್ಷಗಾನ ಪ್ರದರ್ಶನ ನಡೆಯಿತು. ನೂತನ ಪಾವಂಜೆ ಮೇಳ ಸ್ಥಾಪನೆಯ ಬಳಿಕ ಉಡುಪಿಯಲ್ಲಿ ನಡೆಯುತ್ತಿರುವ ಮೇಳದ ಪ್ರಥಮ ಪ್ರದರ್ಶನಕ್ಕೆ ಅಪಾರ ಸಂಖ್ಯೆಯ ಪ್ರೇಕ್ಷಕರು ಆಗಮಿಸಿದ್ದರು.     ​ಚಿತ್ರ : ಪಾಡಿಗಾರು ಲಕ್ಷ್ಮೀನಾರಾಯಣ ಉಪಾಧ್ಯ 

 
 
 
 
 
 
 
 
 
 
 

Leave a Reply