ಪ್ರವಾಸೋದ್ಯಮ ಕೇಂದ್ರಗಳನ್ನು​ ಗುರುತಿಸಿ ಸಮಗ್ರ ವರದಿ ನೀಡಿ~  ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ  

ಬೆಂಗಳೂರು: ರಾಜ್ಯದಲ್ಲಿರುವ ಪ್ರವಾಸೋದ್ಯಮ ಕೇಂದ್ರಗಳನ್ನು ಸರಿಯಾಗಿ ಗುರುತಿಸಿ ಅಭಿವೃದ್ದಿ ಪಡಿಸುವ ನಿಟ್ಟಿನಲ್ಲಿ ಸಮಗ್ರ ವರದಿಯೊಂದಿಗೆ ಅನುಮತಿ ಪಡೆಯಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಸೂಚಿಸಿದ್ದಾರೆ.ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಪ್ರವಾಸೋದ್ಯಮ ಇಲಾಖೆ ಪ್ರಮುಖ ಯೋಜನೆಗಳ ಕುರಿತಂತೆ  ಸಿಎಂ ಅವರ ಅಧ್ಯಕ್ಷತೆಯಲ್ಲಿ  ಸಭೆ ನಡೆದಿದೆ.

ರಾಜ್ಯದಲ್ಲಿ ಈಗಾಗಲೇ ಗುರುತಿಸಲಾಗಿರುವ ಪ್ರವಾಸೋದ್ಯಮ ಕೇಂದ್ರಗಳ ಸಮಗ್ರ ಅಭಿವೃಧ್ಧಿಗೆ ಇರುವ ಅಡೆತಡೆಗಳನ್ನು ಸಭೆಯಲ್ಲಿ ಚರ್ಚಿಸಿ ನಿರ್ಣಯ ಕೈಗೊಳ್ಳಲು ಮುಖ್ಯಮಂತ್ರಿಗಳು ಅನುಮತಿ ನೀಡಿದರು. ಈ ನಿಟ್ಟಿನಲ್ಲಿ ಅಗತ್ಯ ತಿದ್ದುಪಡಿಯೊಂದಿಗೆ ಪ್ರಸ್ತಾವನೆ ಯನ್ನು ಮಂಡಿಸಲು ಮುಖ್ಯ ಮಂತ್ರಿಗಳು ಸೂಚನೆ ನೀಡಿದ್ದಾರೆ.​​

ಪ್ರವಾಸೋದ್ಯಮಕ್ಕೆ ವ್ಯಾಪಕ ಅವಕಾಶಗಳಿರುವ ಜಿಲ್ಲೆಗಳನ್ನು ಗುರುತಿಸಿ ಅಧಿಕಾರಿಗಳನ್ನು ನಿಯೋಜಿ ಸುವಂತೆ ಇಲಾಖಾ ಸಚಿವ ಸಿ.ಟಿ.ರವಿ ಸಿಎಂ ಗೆ ಮನವಿ ಸಲ್ಲಿಸಿದರು. ಜಿಲ್ಲೆಗಳಲ್ಲಿ ಅಧಿಕಾರಿಗಳಿಲ್ಲದೆ ಪ್ರಗತಿ ಪರಿಶೀಲನೆ ಸಾಧ್ಯವಾಗುತ್ತಿಲ್ಲ ಎಂಬ ಅಂಶವನ್ನು  ಈ ಸಂದರ್ಭದಲ್ಲಿ ಯಡಿಯೂರಪ್ಪನವರ ಗಮನಕ್ಕೆ ತಂದರು. ಕೆ.ಎ.ಎಸ್ ಅಧಿಕಾರಿಗಳಿಗೆ ಹೆಚ್ಚುವರಿ ಪ್ರಭಾರವನ್ನು ನೀಡಬಹುದಾಗಿದೆ ಎಂದು ಸಿ.ಟಿ ರವಿ ಹೇಳಿದರು.

ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ ನೀಡುವೂದು ಇಲಾಖೆಯ ಮುಖ್ಯ ಉದ್ದೇಶವಾಗಬೇಕಿದ್ದು, ಅಭಿವೃದ್ಧಿ ತಾಣಗಳ ಗುರುತಿಸುವಿಕೆ, ನಿರ್ವಹಣೆ, ಸಂರಕ್ಷಣೆ ಆದ್ಯತೆಯಾಗಬೇಕು. ಯೋಜನೆಯನ್ನು ಸಂಪೂರ್ಣವಾಗಿ ಪೂರ್ತಿ ಗೊಳಿಸಬೇಕು, ಆಗ ಮಾತ್ರ ರಾಜ್ಯದ ಪ್ರವಾಸೋದ್ಯಮದಲ್ಲಿ ಅಭಿವೃದ್ದಿ ಯಲ್ಲಿ ಹೊಸ ಮೈಲಿಗಲ್ಲನ್ನು ಸಾಧಿಸಬಹುದು.

ಜೋಗ ಜಲಪಾತದ 120 ಕೋಟಿ ರೂ.ಗಳ ಯೋಜನೆ ಕೆ.ಪಿ.ಸಿ.ಎಲ್ ಮೂಲಕ ಅನುಷ್ಠಾನ ವಾಗುವುದು. ಈ ಮೇ ಯ ಅಂತ್ಯದೊಳಗೆ ಯೋಜನೆಯ ವೆಚ್ಚವನ್ನು ಅಂತಿಮಗೊಳಿಸಲಾಗುವುದು ಎಂದು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಮಾಹಿತಿ ತಿಳಿಸಿದರು.

ಕೆಮ್ಮಣ್ಣುಗುಂಡಿ ಮತ್ತು ನಂದಿ ಬೆಟ್ಟದ ಸಂಪೂರ್ಣ ಅಭಿವೃದ್ಧಿಯ ಹೊಣೆಯನ್ನು ಪ್ರವಾಸೋದ್ಯಮ ಇಲಾಖೆಗೆ ವಹಿಸುವಂತೆ ಪ್ರವಾಸೋದ್ಯಮ ಇಲಾಖಾ ಸಚಿವರು ಸಲಹೆ ಮಾಡಿದರು. ಬಾದಾಮಿ ಅಭಿವೃದ್ಧಿ ಆದ್ಯತೆಯ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು.

ಅಂತರ್ ರಾಷ್ಟ್ರೀಯ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವ ಈ ತಾಣದಲ್ಲಿ ವಿಶ್ವಮಟ್ಟದ ಸೌಲಭ್ಯಗಳನ್ನು ಕಲ್ಪಿಸಲು ಎ.ಪಿ.ಎಂ.ಸಿ ಭೂಮಿಯನ್ನು ಕೆ.ಎಸ್.ಟಿ.ಡಿ.ಸಿ ಗೆ ಹಸ್ತಾಂತರ ಮಾಡಿ ವಾಹನ ನಿಲ್ದಾಣ ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಬೇಕು. ಶ್ರೀರಂಗಪಟ್ಟಣ ಹಾಗೂ ಮೈಸೂರು ಹಾಥ್ ಅಭಿವೃದ್ಧಿಗೆ ಸಂಬಂಧಿಸಿದಂತೆಯೂ ಚರ್ಚೆ ನಡೆಯಿತು.

ಸಭೆಯಲ್ಲಿ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ಟಿ.ಕೆ.ಅನಿಲ್ ಕುಮಾರ್, ಕೆ.ಎಸ್.ಟಿ.ಡಿ.ಸಿ ಅಧ್ಯಕ್ಷರಾದ ಶೃತಿ, ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.​​

 
 
 
 
 
 
 
 
 
 
 

Leave a Reply