ಪ್ರಸ್ತುತ ಕೋಸ್ಟಲ್ವುಡ್ ಚಿತ್ರರಂಗ ಅಭೂತಪೂರ್ವವಾಗಿ ಬೆಳೆಯುತ್ತಿದ್ದು, ಹೊಸ ಹೊಸ ಚಿತ್ರಗಳ ಮೂಲಕ ನೂರಾರು ಯುವ ಪ್ರತಿಭೆಗಳು ಬೆಳಕಿಗೆ ಬರುವಂತಾಗಿದೆ. ತುಳುಚಿತ್ರರಂಗದಲ್ಲಿ ಹೊಸಬರು ಕೂಡಿಕೊಂಡು ತುಳುವರಿಗಾಗಿ ಕಟ್ಟಿಕೊಟ್ಟಿರುವ ವಿಐಪೀಸ್ ಲಾಸ್ಟ್ ಬೆಂಚ್ ಹಾಸ್ಯಮಯ ತುಳು ಸಿನೆಮಾ ಇದೀಗ ಕರಾವಳಿಯಾದ್ಯಂತ ಚಿತ್ರಮಂದಿರದಲ್ಲಿ ತೆರೆಕಂಡಿದೆ.
ಎ.ಎಸ್.ಪ್ರೋಡಕ್ಷನ್ಸ್ ಲಾಂಛನದಲ್ಲಿ ಯುವನಿರ್ಮಾಪಕಿ ಆಶಿಕಾ ಸುವರ್ಣ ನಿರ್ಮಿಸಿ, ಪ್ರಧಾನ್ ಎಂಪಿ ನಿರ್ದೇಶಿಸಿರುವ ಲಾಸ್ಟ್ ಬೆಂಚ್ ಯಶಸ್ವೀ ಪ್ರದರ್ಶನಗಳನ್ನು ಕಾಣುತ್ತಿದ್ದು, ಕಾಂತಾರ ಚಿತ್ರದ ನಂತರ ಕರಾವಳಿಯಲ್ಲಿ ಲಾಸ್ಟ್ ಬೆಂಚ್ ಚಿತ್ರ ಭಾರೀ ಸದ್ದು ಮಾಡುತ್ತಿದೆ. ಸದಭಿರುಚಿಯ ಚಿತ್ರಗಳಿಗೆ ಪ್ರೇಕ್ಷಕರು ಮನ್ನಣೆ ನಿಡುತ್ತಾರೆ ಎಂಬುದಕ್ಕೆ ಲಾಸ್ಟ್ಬೆಂಚ್ ಚಿತ್ರ ಜ್ವಲಂತ ಸಾಕ್ಷಿಯಾಗಿದೆ.
ತಮ್ಮ ಕಾಲೇಜು ದಿನಗಳನ್ನು ನೆನಪಿಸಿಕೊಂಡು ದಿನೇ ದಿನೇ ಚಿತ್ರಮಂದಿರದತ್ತ ಮುನ್ನುಗ್ಗುತ್ತಿರುವ ಪ್ರೇಕ್ಷಕರಿಗೆ 100 ಪರ್ಸೆಂಟ್ ಹಾಸ್ಯದ ರಸದೌತಣವನ್ನು ಉಣಬಡಿಸುತ್ತಿದೆ. ಕಾಲೇಜು ಜೀವನದ ಹಾಸ್ಯ ಸನ್ನಿವೇಶಗಳನ್ನು ಲಾಸ್ಟ್ ಬೆಂಚ್ ಚಿತ್ರದಲ್ಲಿ ನೈಜವಾಗಿ ತೋರಿಸಲಾಗಿದೆ ಎಂಬುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಅನೇಕರು ಬರೆದುಕೊಂಡಿದ್ದಾರೆ.
ಲಾಸ್ಟ್ ಬೆಂಚಿನ ಕಾಲೇಜು ಹುಡುಗರ ರಂಪಾಟ, ಮೆರೆದಾಟ,ಕೀಟಲೆಗಳನ್ನು ಸಂಪೂರ್ಣ ಹಾಸ್ಯ ಮಿಶ್ರಿತವಾಗಿ ಕಟ್ಟಿಕೊಟ್ಟಿರುವ ಲಾಸ್ಟ್ ಬೆಂಚ್ ಕುಟುಂಬ ಸಮೇತರಾಗಿ ನೋಡಬಲ್ಲ ಅಪ್ಪಟ ಮನೋರಂಜನೆ ಕೊಡುವ ಚಿತ್ರವಾಗಿ ಮೂಡಿಬಂದಿದೆ ಎಂಬುದು ಸಿನಿಪ್ರಿಯರ ಅಂಬೋಣವಾಗಿದೆ.
ಹಾಸ್ಯದಿಗ್ಗಜ ತುಳುನಾಡ ಮಾಣಿಕ್ಯ ಅರವಿಂದ ಬೋಳಾರ್ ಅವರನ್ನು ಕೇಂದ್ರವಾಗಿರಿಸಿಕೊಂಡಿರುವ ಮೂವರು ಮಲ್ಟಿಸ್ಟಾರ್ ಅದ್ಬುತವಾಗಿ ನಟಿಸಿರುವ ಕಾಮಿಡಿ ಚಿತ್ರ ಇದಾಗಿದೆ.
ಸಿನೆಮಾದುದ್ದಕ್ಕೂ ಪ್ರೇಕ್ಷಕರನ್ನು ನಗಿಸುತ್ತಾ ಹೊಟ್ಟೆ ಹುಣ್ಣಾಗಿಸುವ ಸಂಭಾಷಣೆಗಳನ್ನು ಕಟ್ಟಿಕೊಟ್ಟಿ ರುವ ಲಾಸ್ಟ್ ಬೆಂಚ್ ತುಳುಚಿತ್ರ ಎಲ್ಲಾ ವರ್ಗದ ಪ್ರೇಕ್ಷಕರನ್ನು ಆಕರ್ಷಿಸುತ್ತಿದೆ. ಮಾತ್ರವಲ್ಲದೆ ತುಳು ವರು ಕುಟುಂಬ ಸಮೇತರಾಗಿ ಬಂದು ಥಿಯೇಟರ್ಗೆ ಬಂದು ನೋಡುತ್ತಿರುವುದೇ ಇದಕ್ಕೆ ಸಾಕ್ಷಿಯಾಗಿದೆ.
ತುಳುವಿನ ಲಾಸ್ಟ್ ಬೆಂಚ್ ಚಿತ್ರ ತುಳು ಭಾಷೆಯಲ್ಲಿ ಮೂಡಿಬಂದಿರುವ ಪ್ರಥಮ ಮಲ್ಟಿ ಸ್ಟಾರ್ ಚಿತ್ರ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ತುಳು ಚಿತ್ರರಂಗದ ಮೂವರು ಯಶಸ್ವಿ ನಾಯಕ ನಟರುಗಳಾದ ಪೃಥ್ವಿ ಅಂಬರ್, ರೂಪೇಶ್ ಶೆಟ್ಟಿ, ವಿನೀತ್ ಕುಮಾರ್ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿ ತಮ್ಮ ಅದ್ಭುತ ನಟನೆಯ ಮೂಲಕ ಈ ಚಿತ್ರವನ್ನು ಗೆಲ್ಲಿಸಿದ್ದಾರೆ.
ಉತ್ತಮ ಚಿತ್ರಕತೆಯನ್ನು ಹೆಣೆದು ತುಳು ಚಿತ್ರ ಪ್ರೇಮಿಗಳ ನಿರೀಕ್ಷೆಗೂ ಮೀರಿ ಯುವ ನಿರ್ದೇಶಕ ಪ್ರಧಾನ್ ಎಂ.ಪಿ. ತನ್ನ ಪ್ರತಿಭಾ ಕೌಶಲವನ್ನು ಮೆರೆದಿದ್ದಾರೆ. ಹೊಸಬರ ತಂಡದೊಂದಿಗೆ ಲಾಸ್ಟ್ ಬೆಂಚ್ ಚಿತ್ರವನ್ನು ದಿಗ್ದರ್ಶನ ಮಾಡಿ ಸ್ಯಾಂಡಲ್ವುಡ್ ಸಿನೆಮಾಕ್ಕೆ ಸರಿಸಾಟಿಯಾಗಿಸಿದ್ದಾರೆ. ಮಾತ್ರವಲ್ಲದೆ ತುಳುನಾಡಿನ ಓರ್ವ ಭರವಸೆಯ ನಿರ್ದೇಶಕನಾಗಿ ಇವರು ಮೂಡಿಬಂದಿದ್ದಾರೆ.
ಚಿತ್ರದುದ್ದಕ್ಕೂ ಕಾಮಿಡಿ ಲೆಕ್ಚರರ್ ಅರವಿಂದ ಬೋಳಾರ್ ಜೊತೆ ಪಿಟಿ ಮಾಸ್ಟರ್ ಭೋಜರಾಜ್ ವಾಮಂಜೂರ್, ಪ್ರಿನ್ಸಿಪಾಲ್ ರಾಮಕುಂಜ, ಲೇಡಿ ಲೆಕ್ಚರರ್ ರೂಪಾ ವರ್ಕಾಡಿ ಹಾಗೂ ವಿಸ್ಮಯ ವಿನಾಯಕ್, ಪ್ರವೀಣ್ ಮರ್ಕಮೆ ಅವರು ಕಾಲೇಜು ಹುಡುಗರ ಕಲರ್ಫುಲ್ ಲೈಫ್ನೊಂದಿಗೆ ನವಿರಾದ ಹಾಸ್ಯದ ಹೊನಲನ್ನು ಹರಿಸಿದ್ದಾರೆ.
ಚಿತ್ರದಲ್ಲಿ ನಾಯಕನಟಿಯರಾಗಿ ಆರಾಧ್ಯ ಶೆಟ್ಟಿ ಮತ್ತು ನಿರೀಕ್ಷಾ ಶೆಟ್ಟಿ ಕಾಲೇಜ್ ಕ್ಯೂಟ್ ಆಗಿ ಕಾಣಿಸಿ ಕೊಂಡು ಮಲ್ಟಿ ಸ್ಟಾರ್ಗಳನ್ನು ಪೀಡಿಸುವ ಕನ್ಯೆಯರಾಗಿ ಗಮನಸೆಳೆಯುತ್ತಾರೆ. ಕಾಮಿಡಿ ಸ್ಟಾರ್ಗಳ ಜೊತೆ ಪ್ರಜ್ವಲ್ ಪ್ರಕಾಶ್ ಪಾಂಡೇಶ್ವರ್ ಕಾಲೇಜಿನ ಡೀಸೆಂಟ್ ವಿದ್ಯಾರ್ಥಿಯ ಪಾತ್ರದ ಮೂಲಕ ಪ್ರೇಕ್ಷಕರ ಮನಸ್ಸಿನಲ್ಲಿ ಅಚ್ಛಳಿಯದೇ ಉಳಿಯುತ್ತಾರೆ.
ಕಾಲೇಜು ಹುಡುಗರು ಇಷ್ಟ ಪಡುವ ಸುಮಧುರ ಹಾಡುಗಳ ಕಂಪೋಸಿಂಗ್ ಹಾಗೂ ಕೊರಿಯೋಗ್ರಫಿ ಚಿತ್ರದ ಪ್ಲಸ್ ಪಾಯಿಂಟ್. ಬೇಬಿ ಐಸಿರಿ ಅವರ ಅಭಿನಯ ಚೆನ್ನಾಗಿ ಮೂಡಿಬಂದಿದೆ. ಲಾಸ್ಟ್ ಬೆಂಚ್ ಹುಡುಗರು ಮಾತ್ರ ಚಿತ್ರದುದ್ದಕ್ಕೂ ಪ್ರೇಕ್ಷಕರನ್ನು ನಕ್ಕು ನಗಿಸಿ ಚಿತ್ರದ ಕ್ಲೈಮಾಕ್ಸ್ನಲ್ಲಿ ಪ್ರೇಕ್ಷಕರ ಕಣ್ಣಲ್ಲಿ ಒಂದು ಹನಿ ಕಣ್ಣೀರು ತೊಟ್ಟಿಕ್ಕುವಂತೆ ಮಾಡುತ್ತಾರೆ.
ತುಳುನಾಡಿನ ಸಿನೆಮಾ ಪ್ರೇಕ್ಷಕರು ತುಂಬು ಮನಸ್ಸಿನಿಂದ ಸ್ವೀಕಾರ ಮಾಡಿರುವ ಸದಭಿರುಚಿಯ ಲಾಸ್ಟ್ ಬೆಂಚ್ ತುಳು ಸಿನೆಮಾವನ್ನು ಪ್ರತಿಯೊಬ್ಬ ಪ್ರೇಕ್ಷಕನೂ ಕೂಡಾ ಥಿಯೇಟರ್ಗೆ ಬಂದು ನೋಡಿ ಪ್ರೋತ್ಸಾಹಿಸಿದಲ್ಲಿ ತುಳುವರಿಂದ ಮತ್ತಷ್ಟು ಉತ್ತಮ ಚಿತ್ರಗಳನ್ನು ನಿರೀಕ್ಷಿಸಲು ಸಾಧ್ಯವಿದೆ. ಹಾಗಾಗಿ ಲಾಸ್ಟ್ಬೆಂಚ್ ಚಿತ್ರವನ್ನು ಎಲ್ಲರೂ ತಪ್ಪದೇ ನೋಡಿ ನಿಮ್ಮ ಕಾಲೇಜು ಜೀವನದ ಸವಿ ಸವಿ ನೆನಪುಗಳನ್ನು ಈ ಮೂಲಕ ಹಸಿರಾಗಿಸಿಕೊಳ್ಳಿರಿ.
@ ಪ್ರಕಾಶ ಸುವರ್ಣ ಕಟಪಾಡಿ