ವಿದ್ಯಾಗಮ‌ ಸದ್ಯ ಸ್ಥಗಿತ

ಬೆಂಗಳೂರು: ಕರೊನಾ ಸಂದರ್ಭದಲ್ಲಿ ಮಕ್ಕಳು ಕಲಿಕೆಯಿಂದ ವಿವಶರಾಗಬಾರದು ಎಂಬ ಉದ್ದೇಶದಿಂದ ರಾಜ್ಯ ಸರ್ಕಾರ ‘ವಿದ್ಯಾಗಮ’ ಕಾರ್ಯಕ್ರಮ ರೂಪಿಸಿತ್ತು. ಆದರೀಗ ಇದರ ಮೇಲೂ ಕರೊನ ಕರಿಛಾಯೆ ಆವರಿಸಿದೆ. ಈ ಯೋಜನೆಯಲ್ಲಿ ಭಾಗಿಯಾದ ಶಿಕ್ಷಕರಲ್ಲಿ ಕರೊನಾ ಹೆಚ್ಚಾಗಿ ಕಂಡು ಬರುತ್ತಿದೆ. ಹಾಗಾಗಿ ಈ ಕೂಡಲೇ ಇದನ್ನು ನಿಲ್ಲಿಸಬೇಕು ಎಂಬ ದಟ್ಟವಾದ ಅಭಿಪ್ರಾಯ ಎಲ್ಲರಲ್ಲೂ ಕೇಳಿ ಬಂದಿತ್ತು.

ಅಂತೂ ಇದರ ಬಗ್ಗೆ ಅಂತಿಮ ತೀರ್ಮಾನ ಕೈಗೊಂಡ ಶಿಕ್ಷಣ ಸಚಿವ ಸುರೇಶ್​ ಕುಮಾರ್​, ಈ ವಿದ್ಯಾಗಮ‌ ಕಾರ್ಯ ಕ್ರಮವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ನಿರ್ದೇಶಿಸಿದ್ದಾರೆ.

ಈ ವಿದ್ಯಾಗಮ ಯೋಜನೆ ಮತ್ತು ಶಾಲೆ ಆರಂಭಿಸುವ ಯೋಚನೆಯ ವಿರುದ್ಧ ರಾಜ್ಯಾದ್ಯಂತ ವ್ಯಾಪಕವಾಗಿ ಅಸಮಾಧಾನ ವ್ಯಕ್ತವಾಗಿತ್ತು. ಇಂತಹ ಕರೊನ ಪರಿಸ್ಥಿತಿಯಲ್ಲಿ ಶಾಲೆ ಪ್ರಾರಂಭ ಮಾಡುವುದು ಬೇಡ, ಮೊದಲು ಶಿಕ್ಷಕರು ಹಾಗೂ ಮಕ್ಕಳ ಜೀವ ಉಳಿಸಿ. ಕಲಿಕೆ ನಂತರ ಎಂಬ ಅಭಿಪ್ರಾಯ ಕೇಳಿಬಂದಿತ್ತು. ಇದನ್ನು ವಿಪಕ್ಷಗಳೂ ಎತ್ತಿ ಹಿಡಿದಿದ್ದವು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಶಿಕ್ಷಣ ಸಚಿವರು, ಯಾವುದೇ ಕಾರಣಕ್ಕೂ ವಿದ್ಯಾಗಮವನ್ನು ನಿಲ್ಲಿಸುವುದಿಲ್ಲ ಎಂದಿದ್ದರು.

ಆದರೆ ಸಚಿವರು ನಿಲುವು ಬದಲಿಸಿದ್ದು, ವಿದ್ಯಾಗಮಕ್ಕೆ ತಾತ್ಕಾಲಿವಾಗಿ ನಿಲ್ಲಿಸಿದ್ದಾರೆ. ಈ ಬಗ್ಗೆ ಸುರೇಶ್​ ಕುಮಾರ್ ತಮ್ಮ ಫೇಸ್​ಬುಕ್​ ಖಾತೆಯಲ್ಲಿ ಮಾಹಿತಿ ನೀಡಿದ್ದು, ರಾಜ್ಯದಲ್ಲಿ ಜಾರಿಗೆ ತಂದಿರುವ ವಿದ್ಯಾಗಮ ಕಾರ್ಯಕ್ರಮದ ಬಗ್ಗೆ ಕೇಳಿ ಬಂದ ನಾನಾ ಅಭಿಪ್ರಾಯಗಳನ್ನು ಗಮನಿಸಿದ್ದೇನೆ. ವಿದ್ಯಾಗಮ ಆರ್ಥಿಕವಾಗಿ ಹಿಂದುಳಿದಿರುವ ಕುಟುಂಬಗಳ ಮಕ್ಕಳ ಹಿತವನ್ನು ಮನದಲ್ಲಿ ಇಟ್ಟುಕೊಂಡು ಯೋಜಿಸಿರುವ ಕಾರ್ಯಕ್ರಮ.

ಆದರೂ ವಿವಿಧ ವಲಯಗಳಿಂದ ಕಂಡು ಬರುತ್ತಿರುವ ಕಾಳಜಿಗೆ ಮನ್ನಣೆ ಕೊಟ್ಟು ಶಿಕ್ಷಣ ಇಲಾಖೆ ಈ ಕುರಿತು ಜಿಲ್ಲಾವಾರು ಅಂಕಿ-ಅಂಶಗಳ ಸ್ವೀಕಾರ‌ ಸಂಗ್ರಹಿಸಲು ಉದ್ದೇಶಿಸಿದೆ. ಸದ್ಯ ಅದರ ಸಮರ್ಪಕ‌ ವಿಶ್ಲೇಷಣೆ‌ ಪೂರ್ಣವಾಗುವವರೆಗೂ ವಿದ್ಯಾಗಮ‌ ಕಾರ್ಯಕ್ರಮವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ನಿರ್ದೇಶಿಸಲಾಗಿದೆ ಎಂಬ ಮಾಹಿತಿ ನೀಡಿದ್ದಾರೆ.

 
 
 
 
 
 
 
 
 
 
 

Leave a Reply