ಶಿರ್ವ ಹಿಂದೂ ಪ್ರೌಢಶಾಲೆ – ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ “ವಿದ್ಯಾಸೇತು” ಪುಸ್ತಕ ವಿತರಣೆ

ಶಿರ್ವ:- ವಿದ್ಯಾದಾನಕ್ಕಿಂತ ಶ್ರೇಷ್ಠ ದಾನ ಇನ್ನೊಂದಿಲ್ಲ. ಸಂಪತ್ತಿನ ವಿನಿಯೋಗದಲ್ಲಿ ಸಕಾರಾತ್ಮಕವಾಗಿ  ಸ್ಪಂದಿಸುವ ಮನಸ್ಸು ಮುಖ್ಯ. ಕನ್ನಡ ಮಾಧ್ಯಮ ಶಾಲೆಗಳ ಮಕ್ಕಳ ಶೈಕ್ಷಣಿಕ ಶ್ರೇಯೋಭಿವೃದ್ದಿಗೆ ರೋಟರಿ ಸಂಸ್ಥೆಯ ಕೊಡುಗೆ ಅನನ್ಯ ಎಂದು ಶಿರ್ವ ವಿದ್ಯಾವರ್ಧಕ ಸಂಘದ ಆಡಳಿತಾಧಿಕಾರಿ ಪ್ರೊ.ವೈ.ಭಾಸ್ಕರ್ ಶೆಟ್ಟಿ ಹೇಳಿದರು.

ಗುರುವಾರ ಹಿಂದೂ ಪ.ಪೂ.ಕಾಲೇಜು ಪ್ರೌಢ ಶಾಲಾ ವಿಭಾಗದ  ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ  ಶಿರ್ವ ರೋಟರಿ ವತಿಯಿಂದ ಪಠ್ಯವಸ್ತುವನ್ನು ಒಳಗೊಂಡ “ವಿದ್ಯಾಸೇತು” ಪುಸ್ತಕ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಾ, ಕಳೆದ ಹಲವಾರು ವರ್ಷಗಳಿಂದ ತಮ್ಮ ಶಿಕ್ಷಣ ಸಂಸ್ಥೆಗೆ ಶಿರ್ವ ರೋಟರಿ ನೀಡಿದ ಕೊಡುಗೆ ಹಾಗೂ ಸಹಕಾರವನ್ನು ಸ್ಮರಿಸಿ ಅಭಿನಂದಿಸಿದರು.

ಮುಂಬಯಿ ಘಾಟ್‌ಕೋಪರ್‌ನಲ್ಲಿ ವಾಸ್ತವ್ಯದಲ್ಲಿರುವ  ಶಾಲಾ ಹಳೆವಿದ್ಯಾರ್ಥಿನಿ ಶಿರ್ವ ಕೋಡು ತೋಟದಮನೆ ಶಶಿಕಾಂತಿ ಶೆಟ್ಟಿ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸಿ ಶುಭ ಹಾರೈಸಿದರು.  ಪ.ಪೂ.ಕಾಲೇಜಿನ ಪ್ರಾಂಶುಪಾಲ ಭಾಸ್ಕರ್ ಎ, ಪ್ರೌಢಶಾಲಾ ವಿಭಾಗದ ಹಿರಿಯ ಶಿಕ್ಷಕಿ ವಸಂತಿ ಬಾಯಿ ಕೃತಜ್ಞತೆ ಸಲ್ಲಿಸಿದರು. ವೇದಿಕೆಯಲ್ಲಿ ಶಾಲಾ ಹಳೆವಿದ್ಯಾರ್ಥಿ ರೊಟೇರಿಯನ್ ಸದಾನಂದ ಶೆಟ್ಟಿ ಕೋಡು ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿರ್ವ ರೋಟರಿ ಕಾರ್ಯದರ್ಶಿ ಜಿನೇಶ್ ಬಲ್ಲಾಳ್ ವಹಿಸಿ ಸ್ವಾಗತಿಸಿದರು. ರೋಟರಿ ಜಿಲ್ಲಾ ವೃತ್ತಿಸೇವಾ ಅವಾರ್ಡ್ ಸಮಿತಿ ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ಪ್ರಾಸ್ತಾವಿಕ ಮಾತುಗಳಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ರೋಟರಿಯ ಸೇವಾ ಯೋಜನೆಗಳ ಬಗ್ಗೆ ಮಾಹಿತಿ ನೀಡಿ ದಾನಿಗಳಾದ ಶಶಿಕಾಂತಿ ಶೆಟ್ಟಿ ಕೋಡು ತೋಟದಮನೆ ಇವರನ್ನು ಅಭಿನಂದಿಸಿದರು. ರೋಟರಿ ಸದಸ್ಯ ಹೊನ್ನಯ್ಯ ಶೆಟ್ಟಿಗಾರ್ ನಿರೂಪಿಸಿ, ಪ್ರೊ.ವಿಠಲ್ ನಾಯಕ್ ವಂದಿಸಿದರು. ಶಿಕ್ಷಕವೃಂದ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

 
 
 
 
 
 
 
 
 

Leave a Reply