ನಾಳೆಯಿಂದ ಪಿಯು ಪರೀಕ್ಷೆ: ಸಮವಸ್ತ್ರ ಕಡ್ಡಾಯ

ಬೆಂಗಳೂರು: ನಾಳೆಯಿಂದ(ಮಾ.9) ಪಿಯುಸಿ‌ ಪರೀಕ್ಷೆ ಆರಂಭವಾಗಲಿದ್ದು, ಈ ಬಾರಿಯೂ ಕಳೆದ ಸಾಲಿನಂತೆ ದ್ವಿತೀಯ ಪಿಯು‌ ಪರೀಕ್ಷೆಗೆ ಸಮವಸ್ತ್ರ ನೀತಿ ಜಾರಿಯಾಗಿದೆ. ಹಿಜಾಬ್ ಧರಿಸಿ ಬಂದರೆ ದ್ವಿತೀಯ ಪಿಯು ಪರೀಕ್ಷೆಗೆ ಅವಕಾಶ ಇಲ್ಲ ಎಂದು ಶಿಕ್ಷಣ ಸಚಿವ ಬಿ ಸಿ ನಾಗೇಶ್ ಪುನರುಚ್ಚರಿಸಿದ್ದಾರೆ.

ವಿಧಾನ ಸೌಧದಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಮವಸ್ತ್ರ ನಿಯಮ ಪಾಲನೆ ಕಡ್ಡಾಯ. ಸಮವಸ್ತ್ರ ನಿಯಮ ಈಗಲೂ ಅನ್ವಯ. ಕಳೆದ ವರ್ಷದ ನಿಯಮವೇ ಈ ಬಾರಿಯೂ ಜಾರಿಯಲ್ಲಿರಲಿದೆ. ಆ ಮಕ್ಕಳು ಪರೀಕ್ಷೆಯಿಂದ ವಂಚಿತರಾಗುವುದು ಬೇಡ. ಕಳೆದ ವರ್ಷ 6 ವಿದ್ಯಾರ್ಥಿನಿಯರು ಹಿಜಾಬ್ ವಿವಾದದಿಂದ ಪರೀಕ್ಷೆ ಬರೆದಿಲ್ಲ. ಸಮವಸ್ತ್ರದ ನಿಯಮ ಪಾಲಿಸಿ ಪರೀಕ್ಷೆಗೆ ಹಾಜರಾಗಿ ಎಂದು ಆರು ವಿದ್ಯಾರ್ಥಿನಿಯರಿಗೆ ಮನವಿ ಮಾಡಿದರು.

ನಾಳಿನ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಒಟ್ಟು 7,26,195 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಕಲಾ ವಿಭಾಗದಲ್ಲಿ 2,34,815, ವಾಣಿಜ್ಯ 2,47,260, ವಿಜ್ಞಾನ ವಿಭಾಗದಲ್ಲಿ 2,44,120 ಮಂದಿ ಪರೀಕ್ಷೆ ಬರೆಯಲಿದ್ದಾರೆ.

ಪ್ರತಿ ಪ್ರಶ್ನೆಪತ್ರಿಕೆಯಲ್ಲಿ 20 ಅಂಕಗಳ ಎಂಸಿಕ್ಯೂ ಮಾದರಿ ಪ್ರಶ್ನೆಗಳು ಇರುತ್ತವೆ. ಮೌಲ್ಯಮಾಪನ ಬಳಿಕ ಐದು ಅಂಕಕ್ಕಿಂತ ಕಡಿಮೆ ಆದರೂ ಮಾರ್ಕ್ಸ್ ಕಾರ್ಡ್‌ನಲ್ಲಿ ನಮೂದಿಸಿಕೊಡಲಾಗುವುದು. ಇದು ಈ ಬಾರಿ ಹೊಸದಾಗಿ ಜಾರಿಯಾಗುತ್ತಿದೆ ಎಂದರು.

ಒಟ್ಟು 5,716 ಕಾಲೇಜುಗಳ ಪೈಕಿ 1,109 ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದೆ. 1,109 ಸಹ ಮುಖ್ಯ ಅಧೀಕ್ಷಕರು, 64 ಜಿಲ್ಲಾ ಜಾಗೃತ ದಳ, 525 ತಾಲೂಕು ಜಾಗೃತ ದಳ, 2,373 ವಿಶೇಷ ಜಾಗೃತ ದಳ ರಚಿಸಲಾಗಿದೆ. ಯಾವುದೇ ಅಕ್ರಮ ನಡೆಯದಂತೆ ಕ್ರಮ ಕೈಗೊಳ್ಳಲಾಗಿದೆ. ಮೊಬೈಲ್, ವಾಚ್ ತರುವುದನ್ನು ನಿಷೇಧಿಸಲಾಗಿದೆ. ವೈದ್ಯರ ಸಲಹಾ ಪತ್ರ ತರುವ ವಿಶೇಷಚೇತನ ಮಕ್ಕಳಿಗೆ ಪರೀಕ್ಷೆ ಬರೆಯಲು ಈ ಬಾರಿ ಹೆಚ್ಚು ಸಮಯ ನೀಡುತ್ತೇವೆ ಎಂದು ನಾಗೇಶ್ ತಿಳಿಸಿದರು.

 

 
 
 
 
 
 
 
 
 
 
 

Leave a Reply