ಅಜ್ಜರಕಾಡಿನ ಬಂಡೆಗಳು ಗಾಂಧಿ ಸ್ಮೃತಿಯ ಪಾರಂಪರಿಕ ಸ್ಥಳವಾಗಿವೆ:ವಿನೀತ್ ರಾವ್

ಅಜ್ಜರಕಾಡು ಮೈದಾನದ ಪಕ್ಕದ ಬಂಡೆಗಳು  ಉಡುಪಿ ನಗರದ ಸ್ವಾತಂತ್ರ ಸಂಸ್ಕೃತಿಯ ಕುರುಹುಗಳಾಗಿದೆ. ಈ ಸ್ಥಳದಲ್ಲಿ 1920 ರಿಂದಲೂ ಪ್ರಜ್ಞಾವಂತರು ಸೇರಿ ಗಾಂಧಿ ಪ್ರಾಯೋಜಿತ ರಚನಾತ್ಮಕ ಕಾರ್ಯಕ್ರಮಗಳನ್ನು ಉಡುಪಿ ಯಲ್ಲಿ ಹೇಗೆ ಅನುಷ್ಠಾನಗೊಳಿಸಬಹುದೆಂದು ಚರ್ಚಿಸುತ್ತಿದ್ದರು. ಮಹಾತ್ಮಗಾಂಧಿ ಮಂಗಳೂರಿಗೆ 1920 ಮತ್ತು 1927ರಲ್ಲಿ ಬೇಟಿ ನೀಡಿದ್ದರು. 
ನಂತರ ಮಹಾತ್ಮಗಾಂಧಿ1934 ಫೆಬ್ರವರಿ 25ರ ಮಧ್ಯಾಹ್ನ 3.30ಕ್ಕೆ ಇದೇ ಅಜ್ಜರಕಾಡು ಮೈದಾನದಲ್ಲಿ ಬಂದು ದಲಿತೋದ್ಧಾರದ ಬಗ್ಗೆ ಮಾತನಾಡಿದರು. ಮೇಲ್ವರ್ಗದವರ ಹೃದಯ ಪರಿವರ್ತನೆಯಿಂದ ದೇವಾಲಯಗಳು ಸರ್ವರಿಗೂ ತೆರೆದುಕೊಳ್ಳಬೇಕು. ಉಡುಪಿಯ ಕೃಷ್ಣನೇ ಮಡಿವಂತರ ಕಡೆಯಿಂದ ಕನಕನ ಕಡೆಗೆ ತಿರುಗಿದ್ದಾನೆ ಎಂದಿದ್ದರು ಗಾಂಧಿ. ಅಂದು ಗಾಂಧಿ ಪರಿಹಾರ ನಿಧಿಗೆ 1240 ರೂಪಾಯಿಗಳನ್ನು ಸಂಗ್ರಹಿಸಿಕೊಡಲಾಗಿತ್ತು ಮತ್ತು ಸುಮಾರು 3000 ಜನ ಸೇರಿದ್ದರೆಂದು ‘ರಾಷ್ಟಬಂಧು’ ಪತ್ರಿಕೆ ವರದಿಮಾಡಿದೆ.
ಸ್ವಾತಂತ್ರ್ಯ ದೊರಕುವವರೆಗೂ ಅಜ್ಜರಕಾಡು ಪ್ರಜ್ಞಾವಂತರ ಚರ್ಚೆಯ ಕೇಂದ್ರವಾಗಿತ್ತು. ಮುಂದೆ ಇಲ್ಲಿ ರೇಡಿಯೋ ಕೇಂದ್ರ ಸ್ಥಾಪನೆಯಾಗಿ ಈ ಕಾರ್ಯ ಮುಂದುವರಿಯಿತು. ಈಗ ಈ ಸ್ಥಳದ ಪಕ್ಕದಲ್ಲಿ ಡಾ.ಜಿ.ಶಂಕರ್ ಸರ್ಕಾರಿ ಕಾಲೇಜು ಜ್ಞಾನ ಪ್ರಸರಣ ಕಾರ್ಯದಲ್ಲಿ ತೊಡಗಿದೆ. ಎಂದು ಎಂ.ಜಿ.ಎಂ ಕಾಲೇಜಿನ ಗಾಂಧಿಅಧ್ಯಯನ ಕೇಂದ್ರದ ಸಂಯೋಜಕ  ವಿನೀತ್ ರಾವ್ ಅಭಿಪ್ರಾಯ ಪಟ್ಟರು. ಅವರು ಡಾ.ಜಿ.ಶಂಕರ್ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಆಯೋಜಿಸಿದ “ಗಾಂಧಿ ಸಂಸ್ಮರಣಿ” ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಪ್ರಾಂಶುಪಾಲ ಡಾ.ಭಾಸ್ಕರ್ ಶೆಟ್ಟಿ ಎಸ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಗಾಂಧಿ ಅಧ್ಯಯನ ಕೇಂದ್ರದ ಸಂಯೋಜಕ ಡಾ. ರಾಮದಾಸ ಪ್ರಭು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪ್ರಾಧ್ಯಾಪಕ ಪ್ರೊ ನಿತ್ಯಾನಂದ ಎನ್ ಕಾರ್ಯಕ್ರಮ ನಿರೂಪಿಸಿ, ಅತಿಥಿಗಳನ್ನು ಸ್ವಾಗತಿಸಿದರು. ಡಾ. ರಾಜೇಂದ್ರ ಕೆ ಧ್ಯನ್ಯವಾದ ಸಮರ್ಪಿಸಿದರು.
 
 
 
 
 
 
 
 
 
 
 

Leave a Reply