ವಯೋನಿವ್ರತ್ತಿ ಹೊಂದಿದ ಶಿಕ್ಷಕಿ ಮಲ್ಲಿಕಾದೇವಿಗೆ ಅಭಿನಂದನೆ

ಉಡುಪಿ: ಸುಮಾರು 150 ವರುಷಗಳ ಇತಿಹಾಸವಿರುವ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಕೊಡವೂರಿನಲ್ಲಿ 36 ವರುಷಗಳ ಕಾಲ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ಮೇ 31ರಂದು ವಯೋನಿವ್ರತ್ತಿ ಹೊಂದಿದ ಮಲ್ಲಿಕಾ ದೇವಿಯವರನ್ನು ಕೊಡವೂರಿನ ನಗರಸಭಾ ಸದಸ್ಯ ವಿಜಯ ಕೊಡವೂರು ನೇತೃತ್ವದಲ್ಲಿ ಅವರ ಸ್ವಗ್ರಹದಲ್ಲಿ ಅಭಿನಂದಿಸಲಾಯಿತು.

ವಿಜಯ ಕೊಡವೂರು ಮಾತನಾಡಿ ನಮ್ಮ ಕೊಡವೂರು ಶಾಲೆಯಲ್ಲಿ ಧೀರ್ಘ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಶಿಕ್ಷಕಿ ಮಲ್ಲಿಕಾ ದೇವಿಯವರು ಉತ್ತಮ ರೀತಿಯಲ್ಲಿ ಸೇವೆಯನ್ನು ಸಲ್ಲಿಸಿ ಶಾಲೆಗೆ ಒಳ್ಳೆಯ ಹೆಸರು ಬರುವಲ್ಲಿ ಪ್ರಮುಖ ಪಾತ್ರ ವಹಿಸಿರುತ್ತಾರೆ.ಹಾಗೆಯೇ ಸಾವಿರಾರು ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಕಿಯಾಗಿ ಅವರು ಸತ್ಪಥದಲ್ಲಿ ಮುನ್ನಡೆಯಲು ಪ್ರೇರಣೆ ನೀಡಿರುತ್ತಾರೆ ಎಂದರು. ಉಪಸ್ಥಿತರಿದ್ದ ಶ್ರೀ ಶಂಕರನಾರಾಯಣ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಟಿ.ರಾಘವೇಂದ್ರ ರಾವ್ ಮಾತನಾಡಿ ಶಿಕ್ಷಣ ಪ್ರತಿಷ್ಠಾನವನ್ನು ಪ್ರಾರಂಭಿಸುವ ಪರಿಕಲ್ಪನೆಗೆ ದಾರಿ ಮಾಡಿಕೊಟ್ಟವರು ಹಾಗೆಯೇ ನಮ್ಮ ಶಾಲೆ ಸಮಗ್ರವಾಗಿ ಸುಲಲಿತವಾಗಿ ಸಾಗಿಬರುವಂತೆ ಹೆಚ್ಚಿನ ಶ್ರಮ ವಹಿಸಿರುವ ಮಲ್ಲಿಕಾದೇವಿ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿ ಅವರು ನಿವೃತ್ತ ಜೀವನ ಸಂತ್ರಪ್ತಿಯಿಂದ ಕೂಡಿರಲಿ ಎಂದು ಹಾರೈಸಿದರು.

ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಸತೀಶ್ ಕೊಡವೂರು ಮಾತನಾಡಿ ಸತತ 36 ವರುಷಗಳ ಕಾಲ ಕೊಡವೂರು ಶಾಲೆಯಲ್ಲಿ ಶಿಕ್ಷಕಿಯಾಗಿ ಕರ್ತವ್ಯನಿಷ್ಠೆ,ಪ್ರಾಮಾಣಿಕತೆ, ಹಾಗೂ ಸಮಯಪ್ರಜ್ಞೆ ಯಿಂದ ಸೇವೆ ಗೈದಿರುತ್ತಾರೆ ಮತ್ತು ಊರಿನ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಸಂಘಟನೆ ಗಳ ಮಾರ್ಗದರ್ಶಕರಾಗಿ ಆ ಸಂಘಟನೆಗಳ ಕಾರ್ಯಕ್ರಮಗಳಲ್ಲಿ ತನ್ನನ್ನು ಸಕ್ರಿಯವಾಗಿ ತೊಡಗಿಸಿಕೊಂಡು ಶಾಲೆಗೂ ಮತ್ತು ಊರಿನ ಸಂಘಟನೆಗಳಿಗೂ ಸೌಹಾರ್ದತೆಯ ನಂಟನ್ನು ಶಿಕ್ಷಕಿ ಮಲ್ಲಿಕಾ ದೇವಿಯವರು ಬೆಸೆದಿದ್ದರು ಎಂದರು.

ಆತ್ಮೀಯ ಸನ್ಮಾನಕ್ಕೆ ಹಾಗು ಸೇವಾವಧಿಯಲ್ಲಿ ಸಹಕರಿಸಿದ ಎಲ್ಲರಿಗೂ ನಿವ್ರತ್ತ ಶಿಕ್ಷಕಿ ಮಲ್ಲಿಕಾ ದೇವಿ ಕ್ರತಜ್ಞತೆ ಸಲ್ಲಿಸಿ, ನಿವ್ರತ್ತಿಯಾದರೂ ಸುಧೀರ್ಘ ಕಾಲ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಿದ ಈ ಶಾಲೆಯ ಮೇಲೆ ಭಾವನಾತ್ಮಕವಾಗಿ ನಿಕಟ ಸಂಪರ್ಕವನ್ನು ಇಟ್ಟುಕೊಂಡು ಶಾಲೆಯ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳುವುದಾಗಿ ಹೇಳಿದರು. ಕಾರ್ಯಕ್ರಮದಲ್ಲಿ ಯುವಕ ಸಂಘದ ಉಪಾಧ್ಯಕ್ಷ ಚಂದ್ರಕಾಂತ್ ಶೆಟ್ಟಿಗಾರ್, ಸಲಹೆಗಾರ ಅಶೋಕ್ ಶೆಟ್ಟಿಗಾರ್,ನಿವ್ರತ್ತ ಶಿಕ್ಷಕಿ ಮಲ್ಲಿಕಾ ದೇವಿಯವರ ಪತಿ ತಿಮ್ಮಪ್ಪ .ಬಿ.ಪೂಜಾರಿ,ಪುತ್ರ ಮನೀಷ್ ಉಪಸ್ಥಿತರಿದ್ದರು.

 

 
 
 
 
 
 
 
 
 
 
 

Leave a Reply