“ಹಿಮಬಾಲೆಯ ಅನುರಾಗ”~ರಾರಾ.

ಕವಿತೆಯೋದುವ ಮುನ್ನ :-
ದಕ್ಷಪ್ರಜಾಪತಿಯ ಯಜ್ಞಕುಂಡದಲ್ಲಿ ಪ್ರಾಣತ್ಯಾಗ ಮಾಡಿದ ದಾಕ್ಷಾಯಣಿಯು , ಮುಂದಿನ ಜನ್ಮದಲ್ಲಿ ಹಿಮವಂತನ ಮಗಳಾಗಿ ಜನಿಸಿ, ಉಗ್ರ ತಪವನ್ನಾಚರಿಸಿ, ಪುನಃ ಹರನನ್ನೇ ವರಿಸುತ್ತಾಳೆ.
ತಪಸ್ಸನ್ನು ಪರೀಕ್ಷಿಸಲು ವಟುರೂಪದಿಂದ ಬಂದ ಪರಶಿವನ, ವಿಡಂಬನೆಯ ನುಡಿಗೆ ಈಕೆ
ಮರುಳಾಗುವುದಿಲ್ಲ. ಶಿವನ ಕುರಿತಾದ ಈಕೆಯ ಪ್ರೀತಿ ಅಚಲ.
ಮಹಾಕವಿ ಕಾಳಿದಾಸನ ” ಕುಮಾರಸಂಭವ” ಮಹಾಕಾವ್ಯದ ಈ ಕಥಾಭಾಗದ ಹಿನ್ನೆಲೆಯಲ್ಲಿ ಮೂಡಿಬಂದ ಕವಿತೆಯಿದು.

ಎತ್ತರೆತ್ತರದ ಮುಗಿಲಿನ ಮುತ್ತಿಗೆ
ಉತ್ತರ ಬಿಳುಪಿನ ಹಿಮಬಾಲೆ/
ಬಿತ್ತರವರಿಯದ ಈಶನ ಕೊರಳಿಗೆ
ಸುತ್ತಲು ಪ್ರೇಮದ ಹೂಮಾಲೆ//1//

ಹಾಲಿನ ಕಡಲಿನ ಬುರುಗಿನ ಮಾಟಕೆ
ಮೇಲುದ ಹೊದೆಸಿದೆ ಹೊಸಹರಯ/
ಬಾಲಚಂದಿರನ ಒನಪಿನ ಮುಕುಟಕೆ
ಮೇಲಿದೆ ರಾಗದ ನವವಿಷಯ//2//

ದಕ್ಷನ ಯಾಗದ ಸಿಡುಕಿನ ಮೋರೆಗೆ
ಕುಕ್ಷಿಯ ಉರಿಯಲಿ ದಕ್ಷಸುತೆ /
ರಕ್ಷೆಯ ಕಾಣದ ಚಿಟಿ ಚಿಟಿ ಅಗ್ನಿಗೆ
ಶಿಕ್ಷೆಯ ವಿಧಿಸಿದ ರುದ್ರಕಥೆ //3//

ಕನಸಿನ ವರನನೆ ವರಿಸುವ ತವಕಕೆ
ಮನಸಿನ ಎಸಳಲೆ ನೀರಪಸೆ/
ಜನಿಸಿದ ಬಯಕೆಯ ಇನಿಯನ ಮೋಹಕೆ
ಮುನಿಸಿನ ಮುಗುದೆಗೆ ಶುಕ್ರದೆಸೆ //4//

ತಪದ ತನುವಿನ ಬೆಳ್ಳಿಯ ಬೆಳಕಿಗೆ
ಜಪದ ತುಟಿಯಲೆ ಮೃದುಹಾಸ /
ನೆಪಕೆ ಎಳಸದ ಗಿರಿಜೆಯ ಪ್ರೀತಿಗೆ
ವಿಪಿನದೆಡೆಯಲೆ ಕೈಲಾಸ //5//

 
 
 
 
 
 
 
 
 
 
 

Leave a Reply