“ಗೆಜ್ಜೆಯ ದನಿಯ ಹೊಸರಾಗ”~ ರಾರಾ.

ಹೆಜ್ಜೆ ಹೆಜ್ಜೆಗೂ ಮಣಿಗಳ ಕುಲುಕುವ
ಗೆಜ್ಜೆಯ ದನಿಯಲೆ ರಾಗವಿದೆ /
ಲಜ್ಜೆಯ ಕೆನ್ನೆಯ ಎಸಳಿಗೆ ಮುತ್ತುವ
ಸಜ್ಜೆಯ ದುಂಬಿಗು ಯೋಗವಿದೆ//1//

ಅರಿಷಿಣ ಬೆರೆಸಿದ ಗಲ್ಲದ ಗುಳಿಯಲೆ
ಹರಿಹರರೊಲುಮೆಯ ಬಂಧವಿದೆ/
ಸರಿಸಿದ ಪಟದ ಮಂತ್ರದ ನಡುವಲೆ
ಸರಸದ ಬದುಕಿಗೆ ಭಾಷ್ಯವಿದೆ//2//

ತಲೆಯ ಸವರಲು ಹರಸಿದ ಅಕ್ಷತೆ
ನೆಲೆಯನೆ ಒಲವಿಗೆ ಕಲ್ಪಿಸಿದೆ/
ನೆಲವ ತೀಡುವ ಬಣ್ಣದ ಚರಣಕೆ
ಮಾಲೆಯ ಕೊರಳಿನ ಭಾರವಿದೆ//3//

ಕುಂಕುಮ ಬೆರೆಸಿದ ಓಕುಳಿಯಾಟಕೆ
ಸಂಕವ ಹಾಯುವ ನೇಹವಿದೆ/
ಬಿಂಕವ ತೋರದೆ ಬಾಗಿದ ಶಿರಕೆ
ಸಂಕಟ ಮರೆಸುವ ಕರುಣೆಯಿದೆ//4//

ಪಾಣಿಯ ಪಿಡಿದು ಇರಿಸಿದ ಅಡಿಯಲೆ
ವೇಣಿಯ ಮಲ್ಲಿಗೆ ಗಂಧವಿದೆ/
ವಾಣಿಯನರಿತು ಆಡಿದ ನುಡಿಯಲೆ
ಜಾಣ ಜಾಣೆಯರ ಭಾಗ್ಯವಿದೆ//5//

 
 
 
 
 
 
 
 
 
 
 

Leave a Reply