ಮಿಚಿಗನ್ ನಲ್ಲಿ ಕನ್ನಡಿಗರಿಂದ ಜನ್ಮಾಷ್ಠಮಿಯ ಸಂಭ್ರಮ 

ಭಾರತದಿಂದ ಸಾವಿರಾರು ಮೈಲು ದೂರದಲ್ಲಿದ್ದರೂ ನಮ್ಮ ಕಲೆ, ಭಾಷೆ ಹಾಗೂ ಸಂಸ್ಕೃತಿ ಮೊದಲಾದುವುಗಳನ್ನು ಉಳಿಸಿಕೊಳ್ಳುವ ಉದ್ದೇಶದಿಂದ ಉತ್ತರ ಅಮೇರಿಕಾದ ಮಿಚಿಗನ್ ನಲ್ಲಿ ನೆಲೆಸಿರುವ ಕನ್ನಡದ ಬಂಧು ಭಾಂದವರೆಲ್ಲ ಒಟ್ಟಾಗಿ ಸೇರಿ  ಇದೇ ಆಗಸ್ಟ್ ತಿಂಗಳ 21 ಭಾನುವಾರದಂದು ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು  ಮಿಚಿಗನ್ ನ ಟ್ರಾಯ್ ಭಾರತೀಯ ಮಂದಿರದಲ್ಲಿ ಬಹಳ ಸಡಗರ ಸಂಭ್ರಮದಿಂದ ಆಚರಿಸಿದರು.  ಸುಮಾರು 1200 ಜನರು ಈ ಸಮಾರಂಭಕ್ಕೆ ಸೇರಿದ್ದರು. ಬಂದ ಎಲ್ಲರಿಗೂ ಶ್ರೀ ಬಸಯ್ಯ ಕಲಾಲ್, ಶ್ರೀ ಮೋಹನ್ ಪ್ರಭಾಕರ್ ಮತ್ತು ಶ್ರೀ ತುಳಸಿ ಗೌಡರ ನೇತೃತ್ವದಲ್ಲಿ ಅನ್ನದಾನವನ್ನು ಮಾಡಲಾಯಿತು.
ಸುಮಾರು 1.30ಕ್ಕೆ  ಕಾರ‍್ಯಕ್ರಮದ ಸಂಘಟಕರಲ್ಲಿ ಒಬ್ಬರಾದ ಶ್ರೀ ವೆಂಕಟೇಶ್ ಹಾರನಹಳ್ಳಿಯವರು ಎಲ್ಲರನ್ನೂ ಸ್ವಾಗತ ಮಾಡಿದರು. ದೇವಸ್ಥಾನದ ಈಗಿನ ಅಧ್ಯಕ್ಷರಾದ ಶ್ರೀ ಸ್ವಾಮಿ ಆಕಾಸಪು ಮತ್ತು ಪಂಪ ಕನ್ನಡ ಕೂಟದ ಈಗಿನ ಅಧ್ಯಕ್ಷರಾದ ಶ್ರೀ ಪ್ರಶಾಂತ್ ಕಟ್ಟಿಯವರು ದೀಪ ಬೆಳಗುವ ಮೂಲಕ ಸಾಂಸೃತಿಕ ಕಾರ‍್ಯಕ್ರಮವು ಆರಂಭವಾಯಿತು. ಮಕ್ಕಳ ಇನ್ಸ್ಟ್ರುಮೆಂಟಲ್ ಫ್ಯೂಶನ್, ನೃತ್ಯ ರೂಪಕ, ಭರತ ನಾಟ್ಯ, ವಿವಿಧ ತಂಡಗಳಿಂದ ಭಜನೆ ಮೊದಲಾದ ಕಾರ‍್ಯಕ್ರಮಗಳು ಊರಿನ ಸೊಗಡನ್ನು ಬಿಂಬಿಸುವ ನೆನಪನ್ನು ಮೂಡಿಸಿತು. ಕುಮಾರಿ ಸ್ತುತಿ ಜಗಳೂರ್ ಮತ್ತು ಕುಮಾರಿ ವೈಷ್ಣವಿ ಜಗಳೂರ್ ಇಬ್ಬರು ಜೊತೆಯಾಗಿ ಸೇರಿ ಕಾರ‍್ಯಕ್ರಮದ ನಿರೂಪಣೆ ಮಾಡಿದರು.
ಯಕ್ಷ ಹೆಜ್ಜೆ, ಸ್ಕೂಲ್ ಆಫ್ ಯಕ್ಷಗಾನ, ಇಂಡಿಯಾನಾಪೊಲಿಸ್ ಇದರ ಮುಖ್ಯಸ್ಥ ಶ್ರೀ ಡಾ. ರಾಜೇಂದ್ರ ಕೆದ್ಲಾಯರ ನೇತೃತ್ವದಲ್ಲಿ “ಭಕ್ತ ಸುಧನ್ವ” ಎಂಬ ಯಕ್ಷಗಾನ ಪ್ರಸಂಗವನ್ನು ಹಾಡಿ ತೋರಿಸುವುದರ ಮೂಲಕ ಸಾಂಸೃತಿಕ ಕರ‍್ಯಕ್ರಮಕ್ಕೆ ಇನ್ನಷ್ಟು ಮೆರಗನ್ನು ಮೂಡಿಸಿದರು. ಬಾಲ ಕಲಾವಿದರಾದ ಸೈಂಟ್ ಲೂಯಿಸ್ನ ಸಪ್ತಕ ಉಪಾದ್ಯಾಯಳ  “ಕೃಷ್ಣ” ಮತ್ತು ಟ್ರೋಯ್ನ್ ಪ್ರಹ್ಲಾದ್ ರಾವ್ “ಸುಧನ್ವ” ಪಾತ್ರದ ಮೂಲಕ ಪ್ರೇಕ್ಷಕರ ಗಮನವನ್ನು ಸೆಳೆದರು.
ಅರ್ಜುನನಾಗಿ ಶ್ರೀ ರಾಜೇಂದ್ರ ಕೆದ್ಲಾಯ, ವೃಷಕೇತುವಾಗಿ ಶ್ರೀ ರಾಘವೇಂದ್ರ ರಾವ್ ಮಟ್ಟು, ಪ್ರದ್ಯುಮ್ನನಾಗಿ ಶ್ರೀ ವೆಂಕಟೇಶ್ ಪೊಳಲಿ ಪಾತ್ರದ ಮೂಲಕ ಪ್ರೇಕ್ಷಕರನ್ನು ಮನಸೂರೆಗೊಂಡರು.  ಸಂಘಟಕ ಶ್ರೀ ಪ್ರಶಾಂತ್ ಕುಮಾರ್ ಮಟ್ಟು ಹಂಸಧ್ವಜನ ಪಾತ್ರವನ್ನು ಮಾಡಿದರು. ವಿಶೇಷವಾಗಿ  ಡಾ. ರಾಜೇಂದ್ರ ಕೆದ್ಲಾಯರನ್ನು ಭಾರತೀಯ ಮಂದಿರದ ವೈಸ್ ಚೇಯರ್ ಮ್ಯಾನ್ ಶ್ರೀ ಮಹಾವೀರ್ ಕೆಥಾವಟ್ಟೆ ಗೌರವಿಸಿ, ಯಕ್ಷಗಾನವನ್ನು ಪ್ರತಿ ವರ್ಷವೂ ಭಾರತೀಯ ಮಂದಿರದಲ್ಲಿ ಮಾಡುವಂತೆ ಕೋರಿಕೊಂಡರು.

ಸಾಂಸ್ಕೃತಿಕ ತಂಡದ ಶ್ರೀಮತಿ ವಾಣಿ ರಾವ್,  ಶ್ರೀಮತಿ ಸೌಜನ್ಯ ಪಟ್ಟನ್, ಶ್ರೀಮತಿ ಅಶ್ವಿನಿ ಅಯ್ಯರ್ ಮತ್ತು ಶ್ರೀಮತಿ ರೂಪ ಭಟ್ ಇವರನ್ನು ಭಾರತೀಯ ಮಂದಿರದ ಜಂಟಿ ಖಜಾಂಚಿಯಾದ ಶ್ರೀಮತಿ ಗಂಗ ರಾಜಕುಮಾರ್ ಅವರು ಗೌರವಿಸಿದರು. ಪಂಪ ಕನ್ನಡ ಕೂಟದ ಈಗಿನ ಸಮಿತಿಯ ಉಪಾಧ್ಯಕ್ಷ  ಶ್ರೀ ಶ್ರೀಧರ್ ಪಾಟೀಲ್, ಶ್ರೀ ಸಂಜಯ ಭಟ್ ಮತ್ತು ಹಲವಾರು ಸದಸ್ಯರು ಭಾಗವಹಿಸಿ ತಮ್ಮ ಸೇವೆಯನ್ನು ಸಲ್ಲಿಸಿದರು. ಕೊನೆಯದಾಗಿ ಶ್ರೀ ಸಂತೋಷ್ ಗೋಳಿಯವರು , ಮತ್ತೊಬ್ಬ ಸಂಘಟಕ ಶ್ರೀ ನಗರಿ ಆಚಾರ್  ನಿರೂಪಿಸಿದರು.

ಈ ಜನ್ಮಾಷ್ಟಮಿ ಕಾರ‍್ಯಕ್ರಮ ಚೆನ್ನಾಗಿ ಮೂಡಿ ಬಂತು ಮತ್ತು ಎಲ್ಲರ ಮನ್ನಣೆಗೆ ಪಾತ್ರವಾಯಿತು ಎಂಬುದಕ್ಕೆ ಸೇರಿದ ಪ್ರೇಕ್ಷಕರೇ ಸಾಕ್ಷಿ. ನಮ್ಮ ಕನ್ನಡಿಗರೆಲ್ಲ ಒಟ್ಟಾಗಿ ಇಂತಹ ಕಾರ‍್ಯಕ್ರಮಗಳನ್ನು ಮುಂದೆ ನಡೆಸಿದಲ್ಲಿ ಅದಕ್ಕೆ ಸಂಪೂರ್ಣ ಸಹಕಾರವನ್ನು ಭಾರತೀಯ ಮಂದಿರವು ನೀಡುವುದಾಗಿ ಸಮಿತಿಯ ಸದಸ್ಯರು ಹೇಳಿದ್ದಾರೆ.
– ವರದಿ : ಪ್ರಶಾಂತ ಕುಮಾರ್ ಮಟ್ಟು, ಟ್ರಾಯ್, ಮಿಚಿಗನ್, ಯುಎಸ್ಎ

Leave a Reply