ಪಿಪಿಸಿ: ಯಕ್ಷಗಾನ ಪ್ರಸಂಗ ಕೃತಿಗಳ ಅನಾವರಣ

ಉಡುಪಿ: ಪೂರ್ಣಪ್ರಜ್ಞ ಕಾಲೇಜಿನ ಕನ್ನಡ ಉಪನ್ಯಾಸಕ ಶಿವಕುಮಾರ ಅಳಗೋಡು ಬರೆದ ‘ದೇವಸೇನಾ ಪರಿಣಯ’ ಮತ್ತು ‘ದಂಡಕ ದಮನ’ ಯಕ್ಷಗಾನ ಪ್ರಸಂಗ ಕೃತಿಗಳನ್ನು ಉಡುಪಿ ಶ್ರೀ ಅದಮಾರು ಮಠ ಶಿಕ್ಷಣ ಮಂಡಳಿಯ ಅಧ್ಯಕ್ಷ ಶ್ರೀ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಬಿಡುಗಡೆಗೊಳಿಸಿ ಆಶೀರ್ವಚಿಸಿದರು.
ಕಾಲೇಜಿನ ಕನ್ನಡ ವಿಭಾಗ ಹಾಗೂ ಸಾಂಸ್ಕೃತಿಕ ಸಂಘಗಳು ಆಂತರಿಕ ಗುಣಮಟ್ಟ ಖಾತರಿ ಘಟಕದ ಮಾರ್ಗ ದರ್ಶನದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಿದ್ದವು. ಸಂಗೀತ, ಸಾಹಿತ್ಯಕ್ಕೆ ನಮ್ಮ ಸಂಸ್ಕೃತಿಯಲ್ಲಿ ಅಗ್ರ ಸ್ಥಾನ ನೀಡಲಾಗಿದೆ. ಇವುಗಳಲ್ಲಿ ಆಸಕ್ತಿ ಇಲ್ಲದವನು ಪಶುವಿಗೆ ಸಮಾನ ಎಂದೂ ಹೇಳಲಾಗಿದೆ. ಉತ್ತಮ ಸಂಸ್ಕಾರ ಗಳನ್ನು ಬೆಳೆಸಿಕೊಂಡು, ಸುಸಂಸ್ಕೃತ ಬದುಕಿಗೆ ಅಗತ್ಯವಿರುವ ಸಾಹಿತ್ಯ, ಸಂಗೀತದತ್ತ ಎಲ್ಲರೂ ಒಲವನ್ನು ಬೆಳೆಸಿಕೊಳ್ಳಬೇಕೆಂದು ಶ್ರೀಗಳು ಅನುಗ್ರಹ ಸಂದೇಶ ನೀಡಿದರು. 
ರಾಜ್ಯಮಟ್ಟದ ಯಕ್ಷಗಾನ ಪ್ರಸಂಗ ರಚನಾ ಸ್ಪರ್ಧೆಯಲ್ಲಿ ಪ್ರಥಮ ಪ್ರಶಸ್ತಿ ಪುರಸ್ಕೃತ ದೇವಸೇನಾ ಪರಿಣಯ ಪ್ರಸಂಗದ ಕತೃ ಅಳಗೋಡು ಇವರನ್ನು ಶ್ರೀಗಳು ಇದೇ ಸಂದರ್ಭದಲ್ಲಿ ಸಮ್ಮಾನಿಸಿದರು. ಮುಖ್ಯ ಅಭ್ಯಾಗತರಾಗಿ ಆಗಮಿಸಿದ್ದ ಕಾಲೇಜಿನ ಗೌರವ ಕೋಶಾಧಿಕಾರಿ  ಪ್ರದೀಪ್‌ಕುಮಾರ್ ಮಾತನಾಡಿ, ನಮ್ಮ ಕಾಲೇಜಿನ ಸಾಹಿತ್ಯ ಹಾಗೂ ಸಾಂಸ್ಕೃತಿಕ ಪರಿಸರ ಶ್ರೀಮಂತವಾಗಿದ್ದು, ಅದನ್ನು ಮುಂದುವರಿಸಿಕೊಂಡು ಹೋಗುವಂತೆ ಸಲಹೆ ನೀಡಿದರು. ಕಾಲೇಜಿನ ಪ್ರಾಂಶುಪಾಲ ಡಾ. ರಾಘವೇಂದ್ರ.ಎ. ಅಧ್ಯಕ್ಷತೆ ವಹಿಸಿದ್ದರು.
ತೆಂಕುತಿಟ್ಟು ಯಕ್ಷಗಾನದ ಖ್ಯಾತ ಭಾಗವತರಾದ  ಕಾವ್ಯಶ್ರೀ ಅಜೇರು, ಕನ್ನಡ ವಿಭಾಗದ ಮುಖ್ಯಸ್ಥ ಡಾ. ಶ್ರೀಕಾಂತ್ ಸಿದ್ದಾಪುರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕನ್ನಡ ಉಪನ್ಯಾಸಕಿ ಡಾ. ಪ್ರಜ್ಞಾ ಮಾರ್ಪಳ್ಳಿ ಕಾರ್ಯ ಕ್ರಮ ನಿರೂಪಿಸಿದರು. ಸತೀಶ್ ಚಿತ್ರಾಪು ವಂದಿಸಿದರು.
ಶಿವಕುಮಾರ ಅಳಗೋಡು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಭಾ ಕಾರ‍್ಯಕ್ರಮದ ಬಳಿಕ ಕಾವ್ಯಶ್ರೀ ಅಜೇರು ಅವರು, ಅನಾವರಣಗೊಂಡ ಪ್ರಸಂಗಗಳಿಂದ ಆಯ್ದ 33 ಛಂದಸ್ಸಿನ 33 ಪದ್ಯಗಳನ್ನು 33 ರಾಗಗಳಲ್ಲಿ ಹಾಡಿ ದರು. ಗಣೇಶ್ ಭಟ್ ಸಿದ್ದಕಟ್ಟೆ ಚಂಡೆವಾದಕರಾಗಿ, ಅವಿನಾಶ್ ವಿಟ್ಲ ಮದ್ದಳೆ ವಾದಕರಾಗಿ ಭಾಗವಹಿಸಿದರು.
 
 
 
 
 
 
 
 
 
 
 

Leave a Reply