ಎಂ.ಜಿ.ಎಂ ಸಂಧ್ಯಾ ಕಾಲೇಜು: ಯಕ್ಷಗಾನ ಪ್ರಶಿಕ್ಷಣ ಯೋಜನೆಯ ಉದ್ಘಾಟನೆ

ಮಹಾತ್ಮ ಗಾಂಧಿ ಸ್ಮಾರಕ ಸಂಧ್ಯಾ ಕಾಲೇಜಿನಲ್ಲಿ ಯಕ್ಷಗಾನ ಪ್ರಶಿಕ್ಷಣ ಯೋಜನೆಯ ಉದ್ಘಾಟನೆ ಸಮಾರಂಭ
ನಡೆಯಿತು. ಈ ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ ಸಾಲಿಗ್ರಾಮ ಮೇಳದ ಯಜಮಾನರಾದ ಶ್ರೀ ಪಳ್ಳಿ ಕಿಶನ್‌
ಹೆಗ್ಡೆ ಅವರು ಮಾತನಾಡಿ ಶಾಲಾ ಕಾಲೇಜಿನಲ್ಲಿ ಇಂಥ ಯಕ್ಷಗಾನ ತರಬೇತಿ ಕಾರ್ಯಕ್ರಮಗಳು ಜರುಗಿದಾಗ ಮಾತ್ರ
ಮಕ್ಕಳಲ್ಲಿ ಯಕ್ಷಗಾನ ಕಲೆಯ ಸದಭಿರುಚಿ ನಮದಲ್ಲಿ ಇರಲು ಸಾಧ್ಯವಾಗುತ್ತದೆ.

ಯಕ್ಷಗಾನ ಕಲೆ ಉಳಿಯಬೇಕು ಬೆಳೆಯಬೇಕು ಎಂದರೆ- ಅದು ಇಂದಿನ ಮಕ್ಕಳು ಅದರಲ್ಲಿ ಹೆಚ್ಚು ಸಕ್ರಿಯರಾಗಿ ತೊಡಗಿಸಿಕೊಳ್ಳಬೇಕು. ಯಕ್ಷಗಾನದಲ್ಲಿ ಇಂದಿನ ಕಾಲದಲ್ಲಿ ಕಲಾವಿದರಿಗೆ ಸಂತೃಪ್ತಿಯಿಂದ ಬದುಕುವ ಸಂಬಳ ಇದೆ. ಉತ್ತಮ ಕಲಾವಿದ ಉನ್ನತ ಸಾಂಸ್ಕೃತಿಕ ವ್ಯಕ್ತಿಯಾಗಿ ಬದುಕಬಹುದು.

ಇವೆಲ್ಲವೂ ನಿಮ್ಮ ಈ ವಿದ್ಯಾರ್ಥಿ ದೆಸೆಯಿಂದಲೇ ಬೆಳೆಯಬೇಕು. ಜೊತೆಗೆ ಯಕ್ಷಗಾನ ಒಂದು ಪಠ್ಯ-ವಿಷಯವಾಗಿ ಶಾಲಾ ಕಾಲೇಜುಗಳ ಮಕ್ಕಳಿಗೆ ನಿಯೋಜನೆ ಆಗಬೇಕು. ಅಭ್ಯಾಗತರಾಗಿ ಆಗಮಿಸಿದ ಡಾ. ಬಿ. ಜಗದೀಶ ಶೆಟ್ಟಿ ಅವರು ಮಾತನಾಡಿ ಯಕ್ಷಗಾನ ನಮ್ಮ ಕನ್ನಡದ ಜೀವನಾಡಿ ಕಲೆ. ಕನ್ನಡ ಸಾಹಿತ್ಯ ಸಂಸ್ಕೃತಿಯನ್ನು ಜಿವಂತವಾಗಿಟ್ಟ ಕಲೆ. ಕನ್ನಡ ಜಾನಪದ ಕಲೆಯಾಗಿ, ಪರಿಪೂರ್ಣ ರಂಗಕಲೆಯಾಗಿ ಅದು ಇಂದಿಗು ಎಂದಿಗೂ ಉಳಿಯುವ ಕಲೆಯಾಗಿದೆ. ಇಂಥ ಕಲಾವಿಚಾರವನ್ನು ನಮ್ಮ ಕಾಲೇಜು ಮಕ್ಕಳಿಗೆ ಅವಶ್ಯಕವಾಗಿ ಕಲಿಸುವುದು ಅವಶ್ಯಕ.

ಮಾಲತಿ ದೇವಿಯವರು ಚುಟುಕಾಗಿ ಮಾತನಾಡುವ ಮೂಲಕ ಮಕ್ಕಳಿಗೆ ಶುಭ ಕೋರಿದರು. ಕಾರ್ಯಕ್ರಮದ ಅಧ್ಯಕ್ಷತೆ
ವಹಿಸಿದ ಶ್ರೀ ವರದರಾಯ ಪೈ ಅವರು ಮಾತನಾಡಿ ನನ್ನ ಬಾಲ್ಯದಿಂದಲೂ ಯಕ್ಷಗಾನದಲ್ಲಿ ಆಸಕ್ತಿ, ಉತ್ಸಾಹ,
ಹುಮ್ಮಸ್ಸು. ಒಮ್ಮೆ ಆಟ ಆಗುವ ಸ್ಥಳದಿಂದ ಒಂದು ಬಾರಿ ಚೆಂಡೆ-ಮೃದಂಗದ ನಾದದ ಅಬ್ಬರವು ಕೇಳಿದ ತಕ್ಷಣ ಆಟಕ್ಕೆ
ಹೋಗಬೇಕು ಅನ್ನಿಸುವ ಇಚ್ಛೆ. ಇಂದಿಗೂ ಆ ಅಭಿರುಚಿ ಇದೆ.

ಯಕ್ಷಗಾನ ಕೇವಲ ಜನಪದ ಕಲೆಯಲ್ಲ. ಅದು ಜೀವನಪರ ಕಲೆ. ಅದರ ಮೂಲಕ ನಮ್ಮ ಬದುಕನ್ನು ತಿದ್ದಿ, ಮಹೋನ್ನತೆಯೆಡೆಗೆ ಕೊಂಡೊಯ್ಯುವ ಶಕ್ತಿಯಿದೆ. ಅಂಥ ಉತ್ಕೃಷ್ಟ ಕಲೆಯನ್ನು ನಮ್ಮ ಮಕ್ಕಳಿಗೆ ಅವಶ್ಯಕವಾಗಿ ಕಲಿಸಬೇಕು ಎಂದರು. ಕಾರ್ಯಕ್ರಮದ ಅಭ್ಯಾಗತರಾಗಿ ಆಗಮಿಸಿದ ಯಕ್ಷಗಾನ ಗುರುಗಳಾದ ಶ್ರೀ ಉಮೇಶ ಸುವರ್ಣ, ಶ್ರೀ ಕೃಷ್ಣಮೂರ್ತಿ ಭಟ್ಟ, ಶ್ರೀ ಮನೋಹರ ನಾಯಕ್‌ ಮತ್ತು ಶ್ರೀ ಅಭಯ ಯಕ್ಷಗಾನ ಶೈಲಿಯಲ್ಲಿ ಕಾರ್ಯಕ್ರಮದ ಗಣಪತಿಯ ಪಾರ್ಥನೆಯನ್ನು ನೆರವೇರಿಸಿ ಕೊಟ್ಟರು.

ಜೊತೆಗೆ ಯಕ್ಷಗಾನ ವಿದ್ವಾಂಸರಾದ ಶ್ರೀ ಎಂ.ಎಲ್‌ ಸಾಮಗರು ಉಪಸ್ಥಿತರಿದ್ದರು. ಕಾಲೇಜಿನ ಹಿರಿಯ ಪ್ರಾಧ್ಯಾಪಕರಾದ ಡಾ. ಎಂ. ವಿಶ್ವನಾಥ ಪೈ, ಡಾ. ಮಲ್ಲಿಕಾ ಶೆಟ್ಟಿ ಮತ್ತಿತರರು ಪಾಲ್ಗೊಂಡಿದ್ದರು. ಕಾಲೇಜಿನ ಪ್ರಾಚಾರ್ಯರಾದ ಡಾ. ದೇವಿದಾಸ ಎಸ್.‌ ನಾಯ್ಕ ಇವರು ಪ್ರಾಸ್ತಾವಿಕ ಮಾತನಾಡಿದರು. ಉಪನ್ಯಾಸಕ ಡಾ. ಸತೀಶ ಜಿ. ನಾಯ್ಕ ನಿರೂಪಿಸಿದರು. ಶ್ರೀಕರ ವಂದಿಸಿದರು.

Leave a Reply