Janardhan Kodavoor/ Team KaravaliXpress
31.6 C
Udupi
Tuesday, May 24, 2022
Sathyanatha Stores Brahmavara

“ಚಿತ್ತಭಿತ್ತಿಯಲಿ ಮಾಲವಿಕೆ” ~ರಾರಾ.

ಎಚ್ಚರ ಇರುಳೆಲ್ಲ
ಕೌಮುದಿ ಕಾಡದೆ ಬಿಡಲಿಲ್ಲ/
ಅತ್ತ ಹೊರಳಿ ಚಿತ್ತ ಕೆರಳಿ
ಮೆತ್ತನೆ ಹಸೆಯಲ್ಲೇ, ನೆನಪು!
ಗೆಳತಿಯು ಇಲ್ಲಿಲ್ಲ
ಆಕೆಯ ನಾಟ್ಯವು ಸುತ್ತೆಲ್ಲ //1//

ಆಸೆಗೆ ಕೊನೆಯಿಲ್ಲ
ಹಂಸದ ನಡಿಗೆಯ ಮರೆತಿಲ್ಲ /
ಗೆಜ್ಜೆ ಕಟ್ಟಿ ಹೆಜ್ಜೆ ಇಟ್ಟು
ಲಜ್ಜೆಯ ಮೊಗದಲ್ಲೇ, ಪ್ರೀತಿ !
ಹಿಡಿಯಲು ಸಿಗಲಿಲ್ಲ
ಹೊಕ್ಕಳು ಹೃದಯದ ತುಂಬೆಲ್ಲ //2//

ತುಟಿಯಲಿ ಚೆಲುವೆಲ್ಲ
ಹವಳದ ಕೆಂಪದು ಸಮವಲ್ಲ /
ತಾಳ ರಾಗ ಭಾವ ಕಲೆತು
ಕೊಳಲದು ಮರೆಯಲ್ಲೇ, ಉಸಿರು !
ಗೀತೆಯ ಮರೆತಿಲ್ಲ
ಹಾಡಿದ ರಾಗಕೆ ಕೊನೆಯಿಲ್ಲ //3//

ದಂತದ ಹೊಳಪೆಲ್ಲ
ಮನಸಿನ ಕನ್ನಡಿ ಒಳಗೆಲ್ಲ /
ಕೆನ್ನೆ ಉಬ್ಬಿ ಕಣ್ಣು ಹೊಳೆದು
ಸನ್ನೆಯ ನಗುವಲ್ಲೇ, ಇರುಳು !
ಹಗಲಿನ ತೆರವೆಲ್ಲ
ಬೀರಿದೆ ಕಿರಣವ ಇಳೆಗೆಲ್ಲ //4//

ಕನಸಿಗೆ ನೆಲೆಯಿಲ್ಲ
ಬೆಸೆಯುವ ಬಯಕೆಯು ಫಲಿಸಿಲ್ಲ /
ಬಡನಡು ಬಳಸಿ ಚುಂಬಿಸಿ ಅಧರ
ಮಿಡಿಯಲು ರಸಗಲ್ಲ, ನಲ್ಲೆಯು !
ಹೊರಳಿದ ಕಡೆಯೆಲ್ಲ
ಒಲವಿಗೆ ಕಾಲವೆ ಬಲಿತಿಲ್ಲ //5//


ಕವಿತೆಯ ಹಿನ್ನೆಲೆ : –
ಚಿತ್ರಪಟದಲ್ಲಿ ಮಾಲವಿಕೆಯ ಸೌಂದರ್ಯವನ್ನು ಕಂಡು, ಮಹಾರಾಜ ಅಗ್ನಿಮಿತ್ರನು ಅವಳಲ್ಲಿ ಅನುರಕ್ತನಾಗಿದ್ದಾನೆ. ನಾಟ್ಯಸ್ಪರ್ಧೆಯ ನೆಪದಿಂದ ವೇದಿಕೆಯೇರಿದ ಆಕೆಯನ್ನು ಪ್ರತ್ಯಕ್ಷವಾಗಿ ಕಂಡ ಆತನಲ್ಲಿ ಒಲವು ನೂರ್ಮಡಿಗೊಂಡಿದೆ. ಆಕೆಯ ಅನುಪಮ ಚೆಲುವು, ಮಧುರ ಧ್ವನಿ, ಇಂಪಾದ ಹಾಡು, ಗೆಜ್ಜೆಯ ಲಯ, ಆಂಗಿಕ ಚಲನೆ , ಮುಖದ ಮಂದಹಾಸ.. ಹೀಗೆ ಒಂದೊಂದು ಗುಣವೂ ಆತನನ್ನು ಆಕರ್ಷಿಸಿದೆ. ಆದರೆ ಆಕೆಯನ್ನು ವರಿಸಲು ನೂರೆಂಟು ವಿಘ್ನಗಳಿವೆ.
ಈ ಸಮಯದ ಆತನ ಮನಸ್ಸಿನ ಪರಿತಾಪವೇ…..
“ಚಿತ್ತಭಿತ್ತಿಯಲಿ ಮಾಲವಿಕೆ” ಎಂಬ ಈ ಕವಿತೆ.

ಮಹಾಕವಿ ಕಾಳಿದಾಸನ ” ಮಾಲವಿಕಾಗ್ನಿಮಿತ್ರಮ್ ” ಎಂಬ ಶೃಂಗಾರ ರಸ ಪ್ರಧಾನ ನಾಟಕದ ಹಿನ್ನೆಲೆಯಲ್ಲಿ ಈ ಕವಿತೆ.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!