ಬಲ್ಲಿರೇನಯ್ಯಾ.. ಯಕ್ಷಗಾನ ಪ್ರಾರಂಭ – ಕೋಟ ಎಸ್ ಪಿ  

ಉಡುಪಿ: ಕರಾವಳಿಯ ಪ್ರಸಿದ್ಧ ಕಲೆ ಯಕ್ಷಗಾನದ ಸವಿ ಸವಿಯದೆ ಬೇಸರಗೊಂಡಿರುವ ಯಕ್ಷ ಪ್ರೇಮಿಗಳಿಗೆ ಸಿಹಿ ಸುದ್ದಿ ಕಾದಿದೆ. ಹೌದು, ಯಕ್ಷಗಾನ ಮೇಳಗಳು ಮುಂದಿನ ತಿಂಗಳ ಕೊನೆಯಲ್ಲಿ ತಿರುಗಾಟಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿವೆ. ಸರಕಾರವು ಮೇಳಗಳ ಬೆಂಬಲಕ್ಕೆ ನಿಲ್ಲುವ ಭರವಸೆ ನೀಡಿದೆ. ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಧಾರ್ಮಿಕ ದತ್ತಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಮಂಗಳೂರಿನಲ್ಲಿ ಯಕ್ಷಗಾನ ಮೇಳಗಳ ತಿರುಗಾಟದ ಕುರಿತು ಸಮಾ ಲೋಚನಾ ಸಭೆಯನ್ನು ಮಂಗಳವಾರದಂದು ನಡೆಸಿದ್ದಾರೆ.

ಇನ್ನು ಸದ್ಯದಲ್ಲೇ ಉಡುಪಿಯಲ್ಲಿಯೂ ಈ ಸಭೆ ಜರಗಲಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಟೀಲು, ಬಪ್ಪನಾಡು, ಸಸಿಹಿತ್ಲು ಸೇರಿದಂತೆ 20ಕ್ಕೂ ಹೆಚ್ಚು ವೃತ್ತಿಪರ ತೆಂಕುತಿಟ್ಟಿನ ಯಕ್ಷಗಾನ ಮೇಳಗಳಿದ್ದು ಅದರಲ್ಲಿ ಸರಿಸುಮಾರು 1000ಕ್ಕೂ ಅಧಿಕ ಕಲಾವಿದರು ಮತ್ತು ಪೂರಕ ಕೆಲಸಗಾರರಿದ್ದಾರೆ. ಯಕ್ಷಗಾನ ಮೇಳಗಳು ಕೊರೋನ ನಿಯಮಗಳನ್ನು ಅಳವಡಿಸಿಕೊಂಡು ನವೆಂಬರ್ ಅಂತ್ಯಕ್ಕೆ ಪ್ರದರ್ಶನಕ್ಕೆ ಸಿದ್ಧತೆ ಮಾಡಿಕೊಳ್ಳಬೇಕೆಂದು ಅಧಿಕಾರಿಗಳು, ಕಲಾವಿದರು ಹಾಗೂ ಮೇಳಗಳ ವ್ಯವಸ್ಥಾಪಕರಿಗೆ ಇಂದು ನಡೆದ ಸಭೆಯಲ್ಲಿ ಸೂಚಿಸಲಾಗಿದೆ.

ಈಗಾಗಲೇ ಕೋವಿಡ್ – 19 ನಿಂದಾಗಿ ನೊಂದ ಕಲಾವಿದರ ಕುಟುಂಬದ ನೆರವಿಗೆ ಸರಕಾರ ಸಹಾಯಹಸ್ತ ಚಾಚಬೇಕು ಎಂಬ ಮನವಿಯೊಂದಿಗೆ ಈಗಿರುವ ಮೇಳಗಳಲ್ಲಿ ಯಾವುದಾದರೂ ನಿಲುಗಡೆಯಾದಲ್ಲಿ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿನ ಸಂಪನ್ಮೂಲವಿರುವ ದೇಗುಲದ ಮೂಲಕ ಹೆಚ್ಚುವರಿ ಮೇಳಗಳನ್ನು ರಚಿಸಲು ಇಲಾಖೆ ಪರಿಶೀಲಿಸಬೇಕೆಂಬ ಮನವಿಯೂ ಕೇಳಿಬಂದಿದೆ.

ಇನ್ನು ಯಾವ ಮೇಳಕ್ಕೆ ತೊಂದರೆಯಾದರೂ ಮುಜರಾಯಿ ಇಲಾಖೆ, ಕನ್ನಡ ಸಂಸ್ಕೃತಿ ಇಲಾಖೆ, ಯಕ್ಷಗಾನ ಬಯಲಾಟ ಅಕಾಡೆಮಿಯು ಯಾವುದೇ ಕಲಾವಿದನಿಗೂ ತೊಂದರೆ ಆಗದಂತೆ ಕಲಾವಿದರ ಬೆಂಬಲಕ್ಕೆ ನಿಲ್ಲಲಿದೆ ಎಂಬ ಭರವಸೆ ನೀಡಲಾಗಿದೆ. ಯಕ್ಷಗಾನ ಮೇಳಗಳ ತಿರುಗಾಟಕ್ಕೆ ಪ್ರಮಾಣಿತ ಕಾರ್ಯಾಚರಣೆ ವಿಧಾನ ರೂಪಿಸಿ ನೀಡಲಾಗುತ್ತದೆ. ಇದನ್ನು ಉಡುಪಿ ಮತ್ತು ದ.ಕ. ಜಿಲ್ಲೆಗಳನ್ನು ಒಳಗೊಂಡು ಮಾಡಲಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ. ಸಭೆಯಲ್ಲಿ ದ.ಕ. ಜಿಲ್ಲಾಧಿಕಾರಿಯವರು ಮತ್ತು ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply