ಕೊಡವೂರು :ಇಕೊ ಬ್ರಿಕ್ಸ್ ಗೌರವಾರ್ಪಣೆ

ಕೊಡವೂರು ಶಾಲಾ ಹಳೆ ವಿದ್ಯಾರ್ಥಿ ಸಂಘ ಹಾಗೂ ಯುವಕ ಸಂಘ(ರಿ) ಕೊಡವೂರು ಮತ್ತು ಸ್ನೇಹಿತ ಯುವ ಸಂಘ ಕಾನಂಗಿ ಇವರ ಸಂಯುಕ್ತಾ ಶ್ರಯದಲ್ಲಿ ಡಿಸೆಂಬರ್ 1ರಂದು ಕೊಡವೂರಿನ ವಿಪ್ರಶ್ರೀ ಸಭಾಭವನದಲ್ಲಿ ಆಯೋಜಿಸಲಾದ ಇಕೊ ಬ್ರಿಕ್ಸ್ ಕಾರ್ಯಕ್ರಮದಲ್ಲಿ ಮರುಬಳಕೆಗೆ ಸಾಧ್ಯವಾಗದ ಪ್ಲಾಸ್ಟಿಕನ್ನು ಬಾಟಲಿಗಳಲ್ಲಿ ತುಂಬಿಸಿ ಇಕೊ ಬ್ರಿಕ್ಸ್ ನ ಪರಿಕಲ್ಪನೆಯನ್ನು ಕಾರ್ಯರೂಪಕ್ಕೆ ತಂದು ತಮ್ಮಲ್ಲಿರುವ ಪರಿಸರ ಪ್ರಜ್ಞೆಯನ್ನು ನಿರೂಪಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಕೊಡವೂರು ವಾರ್ಡಿನ ನಗರಸಭಾ ಸದಸ್ಯ ವಿಜಯ ಕೊಡವೂರು ಶಾಲು ಹೊದಿಸಿ, ಪ್ರಮಾಣ ಪತ್ರ ನೀಡಿ ಗೌರವಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಮಣಿಪಾಲ ಎಂ.ಐ.ಟಿ ಯ ಪ್ರಾಧ್ಯಾಪಕ ನಾರಾಯಣ ಶೆಣೈ ಯವರು ಜಗತ್ತಿನ ಸಕಲ ಚರಾಚರಗಳಿಗೆ ಪ್ಲಾಸ್ಟಿಕ್ ನಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ನಾವೆಲ್ಲ ತಿಳಿದು ಕೊಂಡು ಅದರ ಬಳಕೆಯನ್ನು ಮಿತಗೊಳಿಸಿ, ಪ್ಲಾಸ್ಟಿಕ್ ನ ಪರ್ಯಾಯ ವಸ್ತುಗಳ ಬಗ್ಗೆ ಗಮನಹರಿಸಿ ಮಾನವನ ಆರೋಗ್ಯಕ್ಕೆ,ಪ್ರಾಣಿಗಳ ಜೀವಕ್ಕೆ ಹಾಗೂ ಪರಿಸರಕ್ಕೆ ಆಗುವ ಹಾನಿಯನ್ನು ತಪ್ಪಿಸಲು ಶ್ರಮಿಸೋಣ ಎಂದರು.
ಇಕೊ ಬ್ರಿಕ್ಸ್ ನಲ್ಲಿ ತೊಡಗಿಸಿಕೊಂಡ ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿ ಇನ್ನು ಮುಂದೆಯೂ ಮರುಬಳಕೆಗೆ ಸಾಧ್ಯವಾಗದ ಪ್ಲಾಸ್ಟಿಕ್ ಪರಿಸರಕ್ಕೆ ಹಾನಿಯುಂಟು ಮಾಡದಂತೆ ತಮ್ಮ ಮನೆಗಳಲ್ಲಿ ಬಾಟಲಿ ಗಳಲ್ಲಿ ತುಂಬಿಸಿ ಇಡುವುದಾಗಿ ಪ್ರತಿಜ್ಞೆ ಮಾಡಿದರು.
ಯುವಕ ಸಂಘದ ಉಪಾಧ್ಯಕ್ಷ ಶರತ್ ಚಂದ್ರ ಉದ್ದಿನಹಿತ್ಲು, ರವಿರಾಜ್ ಸಾಲ್ಯಾನ್, ಪ್ರಭಾಕರ್ ಎಸ್. ಕೋಟ್ಯಾನ್, ಚಂದ್ರಶೇಖರ್ ಎನ್ ಕುಂದರ್ ಉಪಸ್ಥಿತರಿದ್ದರು. ಯುವಕ ಸಂಘದ ಅಧ್ಯಕ್ಷ ಪ್ರಭಾತ್ ಕೋಟ್ಯಾನ್ ಸ್ವಾಗತಿಸಿದರು. ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಸತೀಶ್ ಕೊಡವೂರು ನಿರೂಪಿಸಿ, ವಂದಿಸಿದರು.
 
 
 
 
 
 
 
 
 
 
 

Leave a Reply