ಉಚಿತ ಚಂಡೆವಾದನ ತರಬೇತಿ ತರಗತಿ ಉದ್ಘಾಟನೆ

ಶಿರ್ವ:-ಸಂಗೀತ ಸಾಧನಗಳು ಮನಸ್ಸನ್ನು ಅರಳಿಸುವ ಜೊತೆಗೆ ಮನೋಲ್ಲಾಸವನ್ನು ನೀಡುತ್ತವೆ. ಯೋಗ್ಯ ಗುರುಗಳ ಮಾರ್ಗದರ್ಶನದಲ್ಲಿ  ಆಸಕ್ತಿ,ಸತತ ಪರಿಶ್ರಮದಿಂದ ಕರಗತ ಮಾಡಿಕೊಳ್ಳ ಬಹುದು.  ಪ್ರತೀಯೊಬ್ಬ ವ್ಯಕ್ತಿಯಲ್ಲೂ ವಿಶಿಷ್ಟವಾದ ಸುಪ್ತ ಪ್ರತಿಭೆಗಳಿದ್ದು, ಅವಕಾಶ,ಆಸಕ್ತಿ, ಉತ್ತೇಜಕ ಸನ್ನಿವೇಶಳಿಂದ ಅದು ವಿಕಸನಗೊಳ್ಳುತ್ತದೆ ಎಂದು ಕಾಪು ತಾಲೂಕು ಕಸಾಪ ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ನುಡಿದರು.

ಅವರು ರವಿವಾರ ಸಂಜೆ ಬಂಟಕಲ್ಲು ಸಮೀಪದ 92ಹೇರೂರು ಶ್ರೀರಾಘವೇಂದ್ರ ಭಜನಾ ಮಂದಿರದ ಸಭಾಂಗಣದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ, ಗ್ರಾಮಾಭಿವೃದ್ಧಿ ಯೋಜನೆ, ಹೇರೂರು ಒಕ್ಕೂಟ, ಶ್ರೀರಾಘವೇಂದ್ರ ಸಮಾಜಸೇವಾ ಮಂಡಳಿ, ಶ್ರೀರಾಘವೇಂದ್ರ ಮಹಿಳಾ ಭಜನಾ ಮಂಡಳಿ, ದೇವಾಡಿಗರ ಸಂಘ 92 ಹೇರೂರು ಬಂಟಕಲ್ಲು ಇದರ ವತಿಯಿಂದ ಆಸಕ್ತರಿಗೆ “ಉಚಿತ  ಚಂಡೆವಾದನ ತರಬೇತಿ” ತರಗತಿಯನ್ನು ಉದ್ಘಾಟಿಸಿ ಮಾತನಾಡುತ್ತಾ, ತಾಯಂದಿರು ಮಕ್ಕಳಿಗೆ ಭಜನೆ ಸಹಿತ ವಿವಿಧ ಸಂಗೀತೋಪಕರಣಗಳ ಕಲಿಕೆಗೆ ಹೆಚ್ಚಿನ ಪ್ರೋತ್ಸಾಹ ನೀಡುವಂತೆ ಕರೆಯಿತ್ತರು.

ಮುಖ್ಯ ಅತಿಥಿಗಳಾಗಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾ.ಯೋ.ಮೇಲ್ವಿಚಾರಕಿ ಪಲ್ಲವಿ ಭಾಗವಹಸಿ ಮಾತನಾಡುತ್ತಾ, ಕಲಾಸಕ್ತಿ ಮತ್ತು ನಿರಂತರ ಕಲಿಕೆಯಿಂದ ಕಲಾವಾದನಗಳ ಪ್ರಾಕಾರಗಳು ಕರಗತವಾಗುತ್ತವೆ. ಆಸಕ್ತಿಯಿಂದ ಭಾಗವಹಿಸಿ ಎಂದರು. ಚಂಡೆವಾದನ ಗುರುಗಳಾದ ಮುಲ್ಕಾಡಿ ರಾಘವೇಂದ್ರ ಭಟ್ ಮಾತನಾಡಿ, ಸಂಗೀತ ಉಪಕರಣಗಳ ಕಲಿಯುವಿಕೆಯಿಂದ ಮನಸ್ಸು ಅರಳುತ್ತದೆ, ಆರೋಗ್ಯ ವರ್ಧಿಸುತ್ತದೆ ಎಂದರು.

ವೇದಿಕೆಯಲ್ಲಿ ಶ್ರೀಗುರುರಾಘವೇಂದ್ರ ಸಮಾಜ ಸೇವಾ ಮಂಡಳಿ ಅಧ್ಯಕ್ಷ ಸುಜಿತ್‌ಕುಮಾರ್,  ದೇವಾಡಿಗರ ಸಂಘದ ಅಧ್ಯಕ್ಷ ಜಯ ಸೇರಿಗಾರ, ಮಹಿಳಾ ಭಜನಾ ಮಂಡಳಿ ಅಧ್ಯಕ್ಷೆ ವಸಂತಿ ಆಚಾರ್ಯ ಉಪಸ್ಥಿತರಿದ್ದರು.

ಸಮಾರಂಭದ ಅಧ್ಯಕ್ಷತೆಯನ್ನು ಗ್ರಾಮಾಭಿವೃದ್ಧಿ ಯೋಜನೆ ಹೇರೂರು ಒಕ್ಕೂಟದ ಅಧ್ಯಕ್ಷ ದಿನೇಶ ದೇವಾಡಿಗ ವಹಿಸಿ ಸ್ವಾಗತಿಸಿದರು.ಪ್ರೀತಿ ಆಚಾರ್ಯ ಪ್ರಾರ್ಥಿಸಿದರು.ಸುಕನ್ಯಾ ನಿರೂಪಿಸಿದರು. 

 
 
 
 
 
 
 
 
 
 
 

Leave a Reply