ಉಡುಪಿ ಶ್ರೀಕೃಷ್ಣ ಮಠದಲ್ಲಿ ವಿಶ್ವರೂಪ ದರ್ಶನ 

ಭಗವಂತನ ಅನುಭೂತಿಯನ್ನು ಪಡೆಯಲು ಲೌಕಿಕರಿಗೆ ಇರುವ ಎರಡು ಮಾಧ್ಯಮಗಳು ಭಗವನ್‌ನಾಮ ಮತ್ತು ಭಗವತ್‌ರೂಪ. ಭಗವಂತನ ನಾಮಕ್ಕನುಗುಣವಾಗಿ ರೂಪವಿರುತ್ತದೆ ; ರೂಪಕ್ಕನುಗುಣವಾಗಿ ನಾಮವಿರುತ್ತದೆ. ಇಂದ್ರಿಯಾತೀತವಾದ ಅನುಸಂಧಾನವನ್ನು ಹೊರತಾಗಿಸಿ, ಸರಳ ಗ್ರಹಿಕೆಯಲ್ಲಿ ಹೇಳುವುದಾದರೆ ‘ನಾಮ’ ಶ್ರವಣಕ್ಕೆ, ಅಂದರೆ ಕಿವಿಯ ಕೇಳ್ಮೆಗೆ ಸಂಬಂಧಿಸಿದ್ದು, ‘ರೂಪ’ ದೃಶ್ಯಕ್ಕೆ ಅಂದರೆ ಕಣ್ಣೋಟಕ್ಕೆ ಸಂಬಂಧಿಸಿದ್ದು.

ನಿಜವಾಗಿ ಕಾವ್ಯವೆಂದರೆ ಏನು ; ಭಗವಂತನ ನಾಮನಾಮಗಳ ವಿಸ್ತರಣೆಯೇ ಕಾವ್ಯ. ಚಿತ್ರವೆಂದರೆ ಏನು ; ಅವರ ರೂಪರೂಪಗಳೇ ಚಿತ್ರಗಳು. ನಾವು ಪ್ರತಿನಿತ್ಯ ಕಣ್ಣಿನಲ್ಲಿ ಏನನ್ನು ಕಾಣುತ್ತೇವೆಯೇ ಅವು ಭಗವಂತನ ಪ್ರಾತಿನಿಧಿಕ ರೂಪಗಳು. ಪಂಚೀಕರಣ ತತ್ತ್ವಕ್ಕೆ ಅನುಗುಣವಾಗಿ ಪ್ರ-ಪಂಚದ ಸಕಲ ಸಂಗತಿಗಳೂ ಪಂಚ ತತ್ತ್ವಗಳಿಂದ ಮಾಡಲ್ಪಟ್ಟಿರುತ್ತವೆ. ಪಂಚಭೂತಾತ್ಮ ಸಂರಚಯಿತರಾದ ಮನುಷ್ಯರು ಎಲ್ಲರನ್ನೂ ಎಲ್ಲವನ್ನೂ ‘ರೂಪ’ಕಲ್ಪನೆಯಲ್ಲಿ ಪರಿಭಾವಿಸಲು ಪ್ರಯತ್ನಿಸುತ್ತೇವೆ. ರಾಮ ಎಂದರೆ ಇಂಥ ರೂಪ, ಕೃಷ್ಣನ ಆಕೃತಿ ಹೀಗೆ- ಎಂದೆಲ್ಲ ಕಲ್ಪಿಸಿಕೊಳ್ಳುತ್ತೇವೆ. ಅದೇ ಕಲ್ಪನೆಯಲ್ಲಿ ನಮ್ಮ ಶಿಲ್ಪಶಾಸ್ತ್ರಗಳನ್ನು, ಚಿತ್ರಶಾಸ್ತ್ರಗಳನ್ನು ಕಟ್ಟಿ ಕೊಳ್ಳುತ್ತೇವೆ. ಶಿಲ್ಪಗಳ ಮೂಲಕ, ಚಿತ್ರಗಳ ಮೂಲಕ ದೇವರನ್ನು ಕಾಣಲು ಪ್ರಯತ್ನಿಸುತ್ತೇವೆ.

ಬಹುಶಃ ದೇವರು ಕೂಡ ಇದನ್ನು ಇಷ್ಟ ಪಡುತ್ತಾಾನೆ ! ಪರೋಕ್ಷಪ್ರಿಯ ಇವ ಹಿ ದೇವಾಃ ಪ್ರತ್ಯಕ್ಷದ್ವಿಷಃ… ದೇವರು ಪರೋಕ್ಷ ಪ್ರಿಯ. ಅವನನ್ನು ಪ್ರತ್ಯಕ್ಷವಾಗಿಸಲು ಅವನ ಪರೋಕ್ಷ ವಿಚಾರಗಳನ್ನು ಹೇಳುತ್ತಿರುತ್ತೇವೆ. ಕೃಷ್ಣನನ್ನು ಕೃಷ್ಣನೆನ್ನುವ ಬದಲು ‘ರುಗ್ಮಿಣೀಶ’ಎನ್ನುತ್ತೇವೆ, ‘ಮುರಲೀಲೋಲ’ ಎನ್ನುತ್ತೇವೆ. ಇಂಥ ನಾಮಗಳನ್ನು ಹೇಳುತ್ತಿದ್ದಂತೆ ಅದಕ್ಕೆ ಸಂಬಂಧಿಸಿದ ರೂಪಗಳು ಕಣ್ಣೆದುರು ಬರುತ್ತೇವೆ. ಶ್ರೀವಿಷ್ಣು ದೇವರಿಗೆ ಇಪ್ಪತ್ತನಾಲ್ಕು ನಾಮಗಳಿವೆ, ಅದಕ್ಕೆ ಸಂಬಂಧಿಸಿ ಇಪ್ಪತ್ತನಾಲ್ಕು ರೂಪಗಳಿವೆ. ಇನ್ನೂ ವಿಸ್ತರಿಸಿದರೆ ಸಹಸ್ರನಾಮಗಳನ್ನೂ ಸಹಸ್ರ ರೂಪಗಳನ್ನೂ ಕಲ್ಪಿಸಿಕೊಳ್ಳಬಹುದಾಗುತ್ತದೆ. ಏಕಂ ಸತ್… ಎಂಬ ಉಕ್ತಿಯ ಅಂತರಾರ್ಥ ಇದೇ !

ಇಂಥ ಕಲ್ಪನೆಗಳ ಮೂಲಕವೇ ನಮ್ಮ ಬದುಕಿನೊಳಗೆ ‘ಕಲೆ’ಯನ್ನು ಅಳವಡಿಸಿಕೊಂಡಿರುತ್ತೇವೆ. ಕಲೆ ಎಂದರೆ ಮತ್ತೇನೂ ಅಲ್ಲ, ನಮಗರಿವಿಲ್ಲದಂತೆಯೇ ಒಂದು ವಿಶಿಷ್ಟ ಬಗೆಯ ಜೀವನ ವಿಧಾನ !

ಆ ಅರ್ಥದಲ್ಲಿ ಕಲೆಯೂ ದೇವರ ಆರಾಧನೆಯ ಮತ್ತೊಂದು ರೂಪವೇ ಆಗಿದೆ. ದೇವಾಲಯದಲ್ಲಿರುವ ಮೂರ್ತಿಗಳಲ್ಲಿ ಶ್ರೀಕೃಷ್ಣ ದೇವರ ರೂಪ ಕಲ್ಪನೆ ಮಾಡಿಕೊಳ್ಳುವುದು ಒಂದು ಬಗೆಯಾದರೆ, ಕಲಾಕೃತಿಗಳ ಮೂಲಕವೂ ಪೊಡವಿಗೊಡೆಯನನ್ನು ಕಂಡವರಿದ್ದಾಾರೆ. ಬಹುಶಃ ಭಾರತೀಯ ಪಾರಂಪರಿಕ ಚಿತ್ರಶೈಲಿಯ ಪ್ರತಿಪಾದ್ಯಗಳಾದ ಮೈಸೂರು ಮತ್ತು ತಂಜಾವೂರು ಕಲಾಕೃತಿಗಳು ಕೃಷ್ಣನ ರೂಪವನ್ನು ಜನಮಾನಸದಲ್ಲಿ ಸ್ಥಿರಗೊಳಿಸುತ್ತ ಬಂದಿವೆ. ನಮ್ಮದೇ ಕರ್ನಾಟಕದ ಸಾಂಸ್ಕೃತಿಕ ರಾಜಧಾನಿಯಾಗಿರುವ ಮೈಸೂರಿನಲ್ಲಿ ಮಹಾರಾಜರು ಚಿತ್ರಕಲೆಗೆ ವಿಶೇಷ ಪ್ರೋತ್ಸಾಹ ನೀಡಿದರು.

ಅವರ ಕಾಲದಲ್ಲಿಯೇ ‘ಮೈಸೂರು ಶೈಲಿ’ ಬೆಳೆದು ಬಂತು. ಅಂಥ ಮೈಸೂರು ಶೈಲಿಯ ಶ್ರೀಕೃಷ್ಣನ ಕಲಾಕೃತಿಗಳನ್ನು ಶ್ರೀಕೃಷ್ಣ ದೇವರ ಸನ್ನಿಧಾನದಲ್ಲಿ ಏರ್ಪಡಿಸಿರುವುದು ಯೋಗಾಯೋಗವೆಂದೇ ಹೇಳಬೇಕು. ಉಡುಪಿ ಪರ್ಯಾಯ ಶ್ರೀ ಅದಮಾರು ಮಠವು ಆರ್. ಜಿ. ಸಿಂಗ್ ನೇತೃತ್ವದ ರಾಮ್‌ಸಿಂಗ್ ಸಂಗ್ರಹಾಲಯದ ಮೈಸೂರು ಕಲಾಶೈಲಿಯ ಚಿತ್ರಪ್ರದರ್ಶನವನ್ನು ರಾಮ್ ಸನ್ಸ್ ಕಲಾ ಪ್ರತಿಷ್ಠಾನ ಮೈಸೂರು ಹಾಗೂ ಪ್ರಾಚಿ ಉಡುಪಿ ಇದರ ಸಹಕಾರದೊಂದಿಗೆ ಏರ್ಪಡಿಸುತ್ತಿದೆ. ಈ ಪ್ರದರ್ಶನದಲ್ಲಿ ಸುಮಾರು 2ಶತಮಾನದ ಇತಿಹಾಸವಿರುವ 47 ಕಲಾಕೃತಿಗಳು ಪ್ರಸ್ತುತಿಗೊಳ್ಳುತ್ತಿವೆ.

ಈ ಕಾರ್ಯಕ್ರಮವು ನವೆಂಬರ್ 26 ಗುರುವಾರ ಸಂಜೆ 4.30ಕ್ಕೆ ಪರ್ಯಾಯ ಶ್ರೀಅದಮಾರು ಮಠದ ಶ್ರೀ ಶ್ರೀ ಈಶಪ್ರಿಯತೀರ್ಥ ಶ್ರೀಪಾದರಿಂದ ಉದ್ಘಾಟನೆಗೊಳ್ಳಲಿದ್ದು, ಮುಖ್ಯ ಅತಿಥಿಗಳಾದ ಶ್ರೀ ಆರ್. ಜಿ. ಸಿಂಗ್ ಇವರು ಕಲಾಕೃತಿಗಳ ಕುರಿತಂತೆ ವಿವರ ನೀಡಲಿದ್ದಾರೆ. ಕಲಾಕೃತಿಗಳ‌ ಈ ಪ್ರದರ್ಶನವನ್ನು ನವೆಂಬರ್‌ 26ರಿಂದ 30ರ‌ ವರೆಗೆ ಶ್ರೀಕೃಷ್ಣ ಮಠದ ಬಡಗುಮಾಳಿಗೆಯಲ್ಲಿ ಏರ್ಪಡಿಸಲಾಗಿದ್ದು ಸಾರ್ವಜನಿಕರಿಗೆ ದೇವರ ದರ್ಶನದ ಸಮಯ ದಲ್ಲಿ‌ ವೀಕ್ಷಿಸಲು ಅವಕಾಶವಿರುತ್ತದೆ

 
 
 
 
 
 
 
 
 
 
 

Leave a Reply