ಕೊರೊನಾ ನಿರ್ಬಂಧದ ನಡುವೆಯೂ ನಡೆಯಿತು ನಾಗರ ಪಂಚಮಿ ಆಚರಣೆ

       ಕೊರೊನಾ ನಿರ್ಬಂಧದ ನಡುವೆಯೂ ನಡೆಯಿತು ನಾಗರ ಪಂಚಮಿ ಆಚರಣೆ

ಕೊರೊನಾ ನಿರ್ಬಂಧದ ನಡುವೆಯೂ ಶನಿವಾರ ಜಿಲ್ಲೆಯಲ್ಲಿ ಸಾಂಪ್ರದಾಯಿಕ ಶ್ರದ್ಧಾಭಕ್ತಿಯಿಂದ ನಾಗರಪಂಚಮಿ ಆಚರಿಸಲಾಯಿತು. ಕೊರೊನಾ ಸೋಂಕು ಪಸರಿಸುವುದನ್ನು ತಡೆಯುವ ನಿಟ್ಟಿನಲ್ಲಿ ಗುಂಪು ಸೇರುವುದು ಹಾಗೂ ಸಾರ್ವಜನಿಕವಾಗಿ ಹಬ್ಬದಾಚರಣೆಗೆ ಸರಕಾರ ನಿರ್ಬಂಧ ವಿಧಿಸಿದ್ದರಿಂದ ಕೇವಲ ಅರ್ಚಕರಿಗೆ ಸೀಮಿತಗೊಳಿಸಿ ಹಬ್ಬ ಆಚರಿಸಲಾಯಿತು.

ತುಳುನಾಡಿನಲ್ಲಿ ನಾಗಾರಾಧನೆಗೆ ವಿಶೇಷ ಪ್ರಾಶಸ್ತ್ಯವಿದ್ದು, ಅನೇಕರು ತಮ್ಮ ಮೂಲ ನಾಗಸನ್ನಿಧಿಗೆ ತೆರಳಿ ತನು ಸಮರ್ಪಿಸಿ ಧನ್ಯತಾಭಾವ ತಳೆಯುವುದು ವಾಡಿಕೆ. ಆದರೆ, ಈ ಬಾರಿ ಅದಕ್ಕೆ ಕೊರೊನಾ ಅಡ್ಡಿಯಾಗಿತ್ತು. ಹಾಗಾಗಿ ತಾವಿದ್ದಲ್ಲಿಯೇ ನಾಗಪೂಜೆ ಸಲ್ಲಿಸಿದರು.

ಮನೆಗಳ ಸನಿಹದ ನಾಗಬನ, ದೇವಳಗಳ ನಾಗಬನ, ಹೊಲ ಗದ್ದೆಗಳ ಸನಿಹದ ನಾಗಬನ ಮಾತ್ರವಲ್ಲದೆ ಜಿಲ್ಲೆಯ ಪ್ರಸಿದ್ಧ ನಾಗ ಕ್ಷೇತ್ರಗಳಾದ ಅರಿತೋಡು, ತಾಂಗೋಡು, ಮುಚ್ಚಿಲಗೋಡು, ಮಾಂಗೋಡು, ಸೂಡ, ಕಂದಾವರ,ಕೊಡವೂರು,  ಕುಂಜೂರು ಮೊದಲಾದೆಡೆ ನಾಗನಿಗೆ ಅಭಿಷೇಕ, ತಂಬಿಲ, ನಾಗದರ್ಶನ ಇತ್ಯಾದಿಗಳು ಸಾಂಕೇತಿಕವಾಗಿ ನಡೆಯಿತು. ಆದರೆ, ಭಕ್ತಾದಿಗಳ ಸಂಖ್ಯೆ ಕಡಿಮೆ ಇತ್ತು. ಬಸ್ ಹಾಗೂ ವಾಹನ ಸಂಚಾರವೂ ವಿರಳವಾಗಿತ್ತು.

ಬೆಳಗ್ಗಿನ ವೇಳೆ ಮಳೆ ಸುರಿದಿದ್ದು, ಇಲ್ಲಿನ ನಂಬಿಕೆಯಂತೆ ನಾಗನಿಗೆ ಎರೆದ ಹಾಲು ಇತ್ಯಾದಿ ಪಂಚಾಮೃತಗಳು ಕಡಲು ಸೇರಬೇಕು ಎಂಬುದು ದಿಟವಾಯಿತು.

 
 
 
 
 
 
 
 
 
 
 

Leave a Reply