ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ತಿನ ರಜತೋತ್ಸವ ಸಂಭ್ರಮದಲ್ಲಿ ಸಪ್ತ ದಿನ ಸಡಗರ

ವಿಪ್ರಸಮಾಜವನ್ನು ಸಂಘಟಿಸಿ ಬೆಳೆಸುವ ನಿಟ್ಟಿನಲ್ಲಿ ಹಾಗೂ ಸಮಾಜದೊಂದಿಗೆ ಸ್ಪಂದಿಸುವ ಸದುದ್ದೇಶದಿಂದ 1986ರಲ್ಲಿ ಉಡುಪಿ ಪರಿಸರದ ವಿಪ್ರಯುವಕರು ಸಂಘಟಿತರಾಗಿ ಅಷ್ಟಮಠಾಧೀಶರ ಪರಮಾನುಗ್ರಹದಿಂದ ಮತ್ತು ಪರಮಪೂಜ್ಯ ಶೀರೂರು ಶ್ರೀ ಶ್ರೀಲಕ್ಷ್ಮೀವರತೀರ್ಥ ಶ್ರೀಪಾದರ ಮಾರ್ಗದರ್ಶನ ಮತ್ತು ಕೃಪಾಶೀರ್ವಾದದಿಂದ, ಶ್ರೀ ಜೆ. ಗೋಪಾಲ್ ರಾವ್ ಇವರ ನೇತೃತ್ವದಲ್ಲಿ ಅಸ್ತಿತ್ವಕ್ಕೆ ಬಂದ ಉಡುಪಿ ಜಿಲ್ಲಾ ಯುವಬ್ರಾಹ್ಮಣ ಪರಿಷತ್ತು ಕಳೆದ 36 ವರ್ಷಗಳಿಂದ ಜನಕಲ್ಯಾಣಕ್ಕಾಗಿ ಶಿಕ್ಷಣ, ವೈದ್ಯಕೀಯ ನೆರವು, ಆರೋಗ್ಯ ಸುರಕ್ಷಾ ಕಾರ್ಡ್ ಸೌಲಭ್ಯ, ಅಶಕ್ತರಿಗೆ ಧನಸಹಾಯ, ಲೋಕಕಲ್ಯಾಣಾರ್ಥವಾಗಿ ಸಾಮೂಹಿಕ ಸತ್ಯನಾರಾಯಣ ಪೂಜೆ, ಆಪತ್ತಿನಲ್ಲಿರುವವರಿಗೆ ರಕ್ಷಣೆ, ಸಮಾಜಕ್ಕೆ ಎದುರಾಗುವ ಅವಮಾನ, ಅನ್ಯಾಯದ ವಿರುದ್ಧ ಪ್ರತಿಭಟನೆ, ಇವೇ ಮುಂತಾದ ಧಾರ್ಮಿಕ-ಸಾಮಾಜಿಕ ಚಟುವಟಿಕೆಗಳ ಮೂಲಕ ಆಡಂಬರವಿಲ್ಲದೆ ನಿಸ್ವಾರ್ಥ ಮನೋಭಾವದಿಂದ ಸಮಾಜಕ್ಕೆ ತನ್ನ ಅಳಿಲಸೇವೆಯನ್ನು ಸಲ್ಲಿಸುತ್ತಾ ಬಂದಿದ್ದು ಈಗ ಹೆಮ್ಮರವಾಗಿ ಬೆಳೆದು ನಿಂತಿರುವುದು ತಮಗೆಲ್ಲ ತಿಳಿದ ವಿಷಯವೇ ಆಗಿದೆ. 

ಪರಿಷತ್ತಿನ ಈ ಎಲ್ಲ ಸಮಾಜಮುಖಿ ಚಟುವಟಿಕೆಗಳ ಮುನ್ನಡೆಗೆ ಸಹಕಾರವಾಗುವಂತೆ ದಾನಿಗಳಾದ ಶ್ರೀಯುತ ದಿನೇಶ ಮತ್ತು ಶ್ರೀಯುತ ಹರಿಕೃಷ್ಣ ಬೆಂಗಳೂರು ಇವರು ಗುಂಡಿಬೈಲಿನ ಹೊಸಬಾಕ್ಯಾರು ನಾಗಬನದ ಬಳಿ ದಾನರೂಪವಾಗಿ ನೀಡಿದ ಜಾಗದಲ್ಲಿ ಬಹುನಿರೀಕ್ಷೆಯ ಸುಂದರ, ಭವ್ಯ, ಸ್ವಂತ ಕಟ್ಟಡ ಬ್ರಾಹ್ಮ ಸಭಾಭವನ’ ನಿರ್ಮಾಣವಾಗಿ ಫೆಬ್ರವರಿ 2021ರಲ್ಲಿ ಲೋಕಾರ್ಪಣೆಗೊಂಡು ಜನಜನಿತವಾಗಿದೆ. 

ಸದ್ರಿ ಸಭಾಭವನವು ನಮ್ಮ ಸಮಾಜ ಬಾಂಧವರಿಗೆ ಅತ್ಯಂತ ಕನಿಷ್ಠ ದರದಲ್ಲಿ ಉಪಯೋಗಕ್ಕೆ ಲಭ್ಯವಿರುವ ಕಾರಣ ಈಗಾಗಲೇ ಬಹಳಷ್ಟು ಕಾರ್ಯಕ್ರಮಗಳು ಸಾಂಗವಾಗಿ ಸಂಪನ್ನಗೊಂಡಿವೆ. ಈ ಹಿನ್ನೆಲೆಯೊಂದಿಗೆ ಯುವಬ್ರಾಹ್ಮಣ ಪರಿಷತ್ 1997ರಲ್ಲಿ ದಶಮಾನೋತ್ಸವ ಆಚರಣೆಯ ಸಂದರ್ಭದಲ್ಲಿ ಅಂದಿನ ಅಧ್ಯಕ್ಷರಾದ ಬಿ.ವಿಜಯರಾಘವ ರಾವ್ ಮತ್ತು ಪ್ರಧಾನ ಕಾರ್ಯದರ್ಶಿ ಚೈತನ್ಯ ಎಂ. ಜಿ. ಇವರ ಮುಂದಾಲೋಚನೆ, ಮುತುವರ್ಜಿ ಮತ್ತು ನೇತೃತ್ವದಲ್ಲಿ ಲೋಕಕಲ್ಯಾಣಾರ್ಥವಾಗಿ ‘ಸಾಮೂಹಿಕ ಶ್ರೀಸತ್ಯನಾರಾಯಣ ಪೂಜೆ’ಯನ್ನು ಪ್ರಥಮವಾಗಿ ಪ್ರಾರಂಭಿಸಲಾ ತು. 

ತದನಂತರ ಅಧ್ಯಕ್ಷರುಗಳಾಗಿ ಪರಿಷತ್ತನ್ನು ಮುನ್ನಡೆಸಿದ ಭಾಸ್ಕರ ರಾವ್ ಕಿದಿಯೂರು, ಲಕ್ಷ್ಮೀನಾರಾಯಣ, ಮುರಳೀಧರ ತಂತ್ರಿ, ರಾಧಾಕೃಷ್ಣ ಭಟ್, ಕೆ. ಎಂ. ಉಡುಪ ನೀಲಾವರ, ರಂಜನ್ ಕಲ್ಕೂರ, ಯು. ನಾಗರಾಜ ತಂತ್ರಿ, ಎಂ. ಎಸ್. ವಿಷ್ಣು, ಶಶಿಧರ ಭಟ್, ವಿಷ್ಣುಪ್ರಸಾದ್ ಪಾಡಿಗಾರ್‌, ಚೈತನ್ಯ ಎಂ.ಜಿ. ಇವರ ಅವಧಿಯಲ್ಲಿ ಕೂಡ ಅನೂಚಾನವಾಗಿ ಸತತ 24 ವರ್ಷಗಳ ಕಾಲ ಧಾರ್ಮಿಕವಾಗಿ, ಶಾಸ್ರೋಕ್ತವಾಗಿ ಅತ್ಯಂತ ಶ್ರದ್ಧಾಭಕ್ತಿಯಿಂದ ನಡೆಸಿಕೊಂಡು ಬಂದು, ಪ್ರಸ್ತುತ ರಜತವರ್ಷದ ಸಂಭ್ರಮದಲ್ಲಿದೆ. 

ಈ ಸಂಭ್ರಮವನ್ನು ಅವಿಸ್ಮರಣೀಯವಾಗಿಸುವ ನಿಟ್ಟಿನಲ್ಲಿ ತಾ.01-01-2023 ರಿಂದ ತಾ.07-01-2023ರ ವರೆಗೆ ಪ್ರತಿದಿನ ಸಂಜೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ತದನಂತರ ತಾ.08-01-2023ನೇ ಭಾನುವಾರದಂದು ಲೋಕಕಲ್ಯಾಣಾರ್ಥವಾಗಿ ಜರುಗುವ 25ನೇ ವರ್ಷದ ಸಾಮೂಹಿಕ ‘ಶ್ರೀಸತ್ಯ ನಾರಾಯಣಪೂಜೆ’ಯು ಸಮಸ್ತ ವಿಪ್ರಸಮಾಜದ ಶ್ರೇಯೋಭಿವೃದ್ಧಿಗಾಗಿ ಹಮ್ಮಿಕೊಂಡಿರುವ ‘ಲಕ್ಷ್ಮೀಹೃದಯ ಹೋಮ’ ಪೂರ್ವಕವಾಗಿ ಬೆಳಗ್ಗೆ 8-00 ಗಂಟೆಯಿಂದ ನಮ್ಮ ಪರಿಷತ್ತಿನ ಕಟ್ಟಡ ‘ಬ್ರಾಡ್ಮಿ ಸಭಾಭವನ’ದಲ್ಲಿ, ಮೂಡುಬೆಟ್ಟು ರಮೇಶ ಭಟ್ಟ ಇವರ ನೇತೃತ್ವದಲ್ಲಿ ಜರಗಲಿದೆ. 

ತಾ. 01-01-2023 ಮತ್ತು ತಾ. 02-01-2023ರಂದು ಉಡುಪಿ ಜಿಲ್ಲಾ ಧಾರ್ಮಿಕ ಪರಿಷತ್‌ ಸದಸ್ಯರಾದ ಪ್ರೊ. ಹರಿಪ್ರಸಾದ್ ಭಟ್ ಹೆರ್ಗ ಇವರಿಂದ ‘ಧಾರ್ಮಿಕ ಆಚರಣೆಗಳ ಮಹತ್ವ’ ಎಂಬ ವಿಷಯದ ಬಗ್ಗೆ ಮತ್ತು ತಾ. 03-01-2023ರಿಂದ ತಾ. 07-01-2023ರ ವರೆಗೆ ವಿ| ಬ್ರಹ್ಮಣ್ಯತೀರ್ಥ ಆಚಾರ್ಯ ಬೆಂಗಳೂರು ಇವರಿಂದ ‘ಶ್ರೀಮದ್ಭಾಗವತದ ಅವಧೂತ ಗೀತಾ’ ಎಂಬ ವಿಷಯದ ಬಗ್ಗೆ ಪ್ರವಚನ ನಡೆಯಲಿದೆ.

ಈ ಸಾಮೂಹಿಕ ಶ್ರೀಸತ್ಯನಾರಾಯಣ ಪೂಜೆಯ ರಜತವರ್ಷದ ವಿಶೇಷ ಸಾಮಾಜಿಕ ಯೋಜನೆಯಾಗಿ ಪ್ರತಿವರ್ಷ ವಿಶಿಷ್ಟ ಸಾಧನೆಗೈದ ವಿಪ್ರಸಮಾಜದ ಓರ್ವ ಸಾಧಕರನ್ನು ‘ವಿಪ್ರ ವಿಭೂಷಣ’ ಎಂಬ ಬಿರುದು ನೀಡಿ ನಗದು ಸಹಿ ಗೌರವಿಸಿ ಸಮ್ಮಾನಿಸಲು ನಿರ್ಧರಿಸಲಾಗಿದೆ ಹಾಗೂ ಇನ್ನೊಂದು ಮಹತ್ವಾಕಾಂಕ್ಷೆಯ ಯೋಜನೆಯಾಗಿ ಸ್ವಂತ ಜಾಗ ಹೊಂದಿದ, ಆರ್ಥಿಕವಾಗಿ ಹಿಂದುಳಿದ ವಿಪ್ರ ಸಮಾಜದ ಒಂದು ಕುಟುಂಬಕ್ಕೆ ಮುಂದಿನ ವರ್ಷದಲ್ಲಿ ಉಚಿತವಾಗಿ ಮನೆ ಕಟ್ಟಿಕೊಡುವ ಸಂಕಲ್ಪ ಮಾಡಲಾಗುವುದು.

ಪತ್ರಿಕಾ ಗೋಷ್ಠಿಯಲ್ಲಿ ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ತು ಅಧ್ಯಕ್ಷ  ಚೈತನ್ಯ ಎಂ ಜಿ, ರಘುಪತಿ ರಾವ್, ಕುಮಾರ ಸ್ವಾಮಿ ಉಡುಪ, ವಿವೇಕಾನಂದ ಪಾಂಗಣ್ಣಾಯ ,ಪ್ರವೀಣ್ ಉಪಾಧ್ಯ ಉಪಸ್ತಿತರಿದ್ದರು.   

 

 
 
 
 
 
 
 
 
 
 
 

Leave a Reply