ಉಡುಪಿ: ಪುಲ್ವಾಮ ಹುತಾತ್ಮರಿಗೊಂದು ಸಲಾಂ

ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ವೀರ ಸೈನಿಕರು ರಾಷ್ಟ್ರಕ್ಕಾಗಿ ಮಾಡಿದ ತ್ಯಾಗ ಬಲಿದಾನವನ್ನು ಸ್ಮರಿಸುವ ನಿಟ್ಟಿನಲ್ಲಿ ಸ್ವಚ್ಛ ಭಾರತ್ ಫ್ರೆಂಡ್ಸ್, ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ ಉಡುಪಿ, ಉಡುಪ ರತ್ನ ಪ್ರತಿಷ್ಠಾನ ಸಂಯುಕ್ತ ಆಶ್ರಯದಲ್ಲಿ ಅಜ್ಜರಕಾಡಿನ ಹುತಾತ್ಮ ಸೈನಿಕ ಯುದ್ಧ ಸ್ಮಾರಕದಲ್ಲಿ ಭಾನುವಾರ ಸಂಜೆ ಯೋಧ ನಮನ ಕಾರ್ಯಕ್ರಮ ನಡೆಯಿತು.

ಭಾರತೀಯ ನೌಕಾಪಡೆಯಲ್ಲಿ ಸೇವೆ ಸಲ್ಲಿಸಿದ ಮಾಜಿ ಸೈನಿಕ ಗಣೇಶ್ ರಾವ್ ಮಾತನಾಡುತ್ತಾ, ಯುವಜನರಿಗೆ ಸೇನೆಗೆ ಸೇರಲು ಇದೊಂದು ಸೂಕ್ತವಾದ ಸಂದರ್ಭ. ಸೇನೆಯಲ್ಲಿ ಸಿಗುವ ಆತ್ಮತೃಪ್ತಿ ಬೇರೆ ಯಾವುದರಲ್ಲಿಯೂ ಸಿಗಲು ಅಸಾಧ್ಯ. ಅರ್ಪಣಾ ಮನೋಭಾವದಿಂದ ರಾಷ್ಟ್ರಕ್ಕಾಗಿ ಸೇವೆ ಸಲ್ಲಿಸಿ ಬದುಕನ್ನು ರಾಷ್ಟ್ರಕ್ಕಾಗಿ ಸಮರ್ಪಿಸಿದ ಹೆಮ್ಮೆಯ ಯೋಧರೇ ನಮಗೆಲ್ಲ ಸ್ಪೂರ್ತಿ. ದೇಶಕ್ಕಾಗಿ ಸೇವೆ ಸಲ್ಲಿಸಲು ಸಿಕ್ಕಿದ ಅವಕಾಶ ಎಂದಿಗೂ ಮರೆಯಲು ಅಸಾಧ್ಯ ಎಂದರು.

ಭೂಸೇನೆಯಲ್ಲಿ ಸೇವೆ ಸಲ್ಲಿಸಿದ ಮಾಜಿ ಸೈನಿಕ ವಾದಿರಾಜ ಹೆಗ್ಡೆ ಮಾತನಾಡುತ್ತಾ ಜೀವದ ಹಂಗು ತೊರೆದು ದೇಶಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡುವ ಯೋಧರಿಂದ ಕಲಿಯುವುದು ಸಾಕಷ್ಟಿದೆ. ದೇಶದ ವಿಚಾರ ಬಂದಾಗ ಒಗ್ಗಟ್ಟಿನ ಧ್ವನಿ ಇರಬೇಕು ಎಂದರು.

ನೆರೆದ ಎಲ್ಲರೂ ಹುತಾತ್ಮ ಯೋಧರಿಗೆ ಮೊಂಬತ್ತಿ ಬೆಳಗಿಸಿ ಪುಷ್ಪ ನಮನ ಸಮರ್ಪಿಸಿದರು. ಸಾಮೂಹಿಕ ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.

ನಗರಸಭಾ ಸದಸ್ಯೆ ರಶ್ಮಿ ಚಿತ್ತರಂಜನ್ ಭಟ್, ಮಾಜಿ ಸೈನಿಕರುಗಳಾದ ಸೈಮನ್ ಡಿಸೋಜ, ಭೀಮಯ್ಯ, ವಕೀಲ ರಫೀಕ್ ಖಾನ್, ಉದಯ ನಾಯ್ಕ್, ನಾಗರಾಜ್ ಭಂಡಾರ್ಕರ್, ಲಕ್ಷ್ಮಣ ಬಿ ಕೋಲ್ಕಾರ, ಸವಿತಾ ನೋಟಗಾರ್, ಈರಪ್ಪ ಗೌಂಡಿ, ರಮೇಶ್ ಎಲಿಬಳ್ಳಿ, ಪಾಂಪೇಶ್, ಹನುಮಂತರಾಯ ಪೂಜಾರಿ, ಶರಣಪ್ಪ, ರಾಜ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

ಸಿದ್ಧಬಸಯ್ಯ ಸ್ವಾಮಿ ಚಿಕ್ಕಮಠ ಪ್ರಸ್ತಾವಿಕವಾಗಿ ಮಾತನಾಡಿದರು. ರಾಘವೇಂದ್ರ ಪ್ರಭು ಕರ್ವಾಲು ಸ್ವಾಗತಿಸಿ ಜನಾರ್ದನ್ ಕೊಡವೂರು ವಂದಿಸಿದರು. ಗಣೇಶ್ ಪ್ರಸಾದ್ ಜಿ. ನಾಯಕ್ ಕಾರ್ಯಕ್ರಮ ನಿರೂಪಿಸಿದರು.

 

 
 
 
 
 
 
 
 
 
 
 

Leave a Reply