ಮಾರ್ಚ್‌ 22 ರಿಂದ 28 ರವರೆಗೆ ಸುಮನಸಾ ಕೊಡವೂರು ನಾಟಕೋತ್ಸವ “ರಂಗಹಬ್ಬ-9″

ಉಡುಪಿ: 2002ರಲ್ಲಿ ಆರಂಭಗೊಂಡ ಸುಮನಸಾ ಕೊಡವೂರು ಪ್ರತಿ ವರ್ಷ ತಲಾ ಮೂರು ನಾಟಕಗಳನ್ನು ಸಿದ್ದಪಡಿಸಿ ಇದುವರೆಗೆ ಸುಮಾರು 700ಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿದೆ, ಯಕ್ಷಗಾನ ಸಾಹಿತ್ಯ, ಜನಪರ, ಶೈಕ್ಷಣಿಕ ಮೊದಲಾದ ಕ್ಷೇತ್ರಗಳಲ್ಲಿ ನಿರಂತರ ಚಟುವಟಿಕೆಗಳನ್ನು ಮಾಡುತ್ತಿದೆ. 19 ಬಾರಿ ರಾಜ್ಯಮಟ್ಟದ ನಾಟಕ ಸ್ಪರ್ಧೆಗಳಲ್ಲಿ, 4 ಬಾರಿ ರಾಷ್ಟ್ರೀಯ ನಾಟಕ ಸ್ಪರ್ಧೆಯಲ್ಲಿ ಬಹುಮಾನ ಪಡೆದ ತಂಡ, ಉಡುಪಿ ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಕೂಡ ಲಭಿಸಿದೆ.
ಳೆದ ವರ್ಷಗಳಲ್ಲಿ ರಾಷ್ಟ್ರೀಯ, ಪೌರಾಣಿಕ ರಂಗಹಬ್ಬವನ್ನು ಉಡುಪಿಯ ಭುಜಂಗ ಪಾರ್ಕಿನ ಬಯಲು ರಂಗಮಂದಿರದಲ್ಲಿ ಸಂಘಟಿಸಿ ಯಶಸ್ವಿಯಾಗಿದ್ದೇವೆ ಎಂದು ಉಡುಪಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸುಮನಸಾದ ಗೌರವಧ್ಯಕ್ಷ ಎಮ್.ಎಸ್ ಭಟ್ ತಿಳಿಸಿದರು.

ಸಂಸ್ಥೆಯ ಸಕ್ರಿಯತೆಗೆ ಪೂರಕವಾಗಿ 2021ರ ಮಾರ್ಚ್ 22ರಿಂದ 28 ವರೆಗೆ ಸಂಜೆ 6.30ಕ್ಕೆ “ರಂಗಹಬ್ಬ-9″ ನಾಟಕೋತ್ಸವನ್ನು ಹಮ್ಮಿಕೊಂಡಿದ್ದೇವೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಹಾಗೂ ನಗರಸಭೆ ಉಡುಪಿ, ಸಂಸ್ಕೃತಿ ನಿರ್ದೇಶನಾಲಯ ನವದೆಹಲಿ, ಶ್ರೀ ಪೇಜಾವರ ಅಧೋಕ್ಷಜ ಮಠ ಉಡುಪಿ ಇದರ ಸಹಯೋಗದೊಂದಿಗೆ ನಾಟಕೋತ್ಸವ ನಡೆಯಲಿದ್ದು, ಕಾರ್ಯಕ್ರಮದ ಉದ್ಘಾಟನೆಯನ್ನು ಕಲಾ ಪೋಷಕ ಆನಂದ ಸಿ.ಕುಂದರ್ ಅವರು ನೇರವೇರಿಸಲಿರುವರು.

 ಅಧ್ಯಕ್ಷತೆಯನ್ನು ಶಾಸಕ ಕೆ.ರಘುಪತಿ ಭಟ್ ವಹಿಸಲಿರುವರು. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ವಹಿಸಸಲಿರುವರು. ಪ್ರತಿದಿನ ರಂಗಸಾಧಕರಿಗೆ ಸನ್ಮಾನ, ಅದೃಷ್ಟ ಪ್ರೇಕ್ಷ ಕರಿಗೆ ಟ್ರಾವೆಲಿಂಗ್ ಬ್ಯಾಗ್‌ನ ಕೊಡುಗೆಯೊಂದಿಗೆ ಬಹಳಷ್ಟು ಕುತೂಹಲ ಹಾಗೂ ವಿಭಿನ್ನ ಅಭಿವ್ಯಕ್ತಿಯನ್ನು ಪ್ರಸ್ತುತ ಪಡಿಸುವ ಈ ರಂಗಹಬ್ಬ-9ಕ್ಕೆ ಕಲಾಭಿಮಾನಿಗಳ ಪ್ರೋತ್ಸಾಹ ಹಾಗೂ ಸಹಕಾರವನ್ನು ಬಯಸುತ್ತಿದ್ದೇವೆ ಎಂದರು.

ಯಕ್ಷಗಾನ ಉನ್ನತಿಗೆ ಸದಾ ಶ್ರದ್ಧಾ ಬದ್ಧರಾಗಿ, ಸೃಜನಶೀಲತೆಯ ಪ್ರತೀಕವಾಗಿದ್ದ ದಿ.ಯು.ದುಗ್ಗಪ್ಪರವರ ನೆನಪಿನಲ್ಲಿ “ಯಕ್ಷಸುಮ” ಪ್ರಶಸ್ತಿಯನ್ನು ಯಕ್ಷಗಾನ ಗುರು ಬಿರ್ತಿ ಬಾಲಕೃಷ್ಣ ಗಾಣಿಗ ಅವರಿಗೆ ಕೊಡಮಾಡ ಲಾಗುವುದು ಹಾಗೂ ಪ್ರತಿದಿನ ರಂಗ ಸಾಧಕರೊಬ್ಬರನ್ನು ಸನ್ಮಾನಿಸಲಾಗುವುದು. ನವ ಚಿಗುರು ಗಳಲ್ಲಿರುವ ರಂಗಾಸಕ್ತಿ ಪ್ರಸ್ತುತಿಗೊಳ್ಳಲೆಂದು ಕಾಲೇಜು ವಿದ್ಯಾರ್ಥಿಗಳಿಗೆ ಕಿರು ಪ್ರಹಸನ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು ಮಾರ್ಚ್ 26 ರ ಸಮಾರಂಭದಲ್ಲಿ ಪರ್ತಕರ್ತ ಬಾಲಕೃಷ್ಣ ಶಿಬಾರ್ಲ ಅವರ “ಕಾಪ” ತುಳು ನಾಟಕ ಕೃತಿಯನ್ನು ಚಿಂತಕಿ ಆತ್ರಾಡಿ ಅಮೃತಾ ಶೆಟ್ಟಿ ಬಿಡುಗಡೆಗೊಳಿಸಲಿರುವರು ಎಂದರು.

ಪ್ರದರ್ಶನಗೊಳ್ಳಲಿರುವ ನಾಟಕಗಳು: ಮಾರ್ಚ್ 22 : ಭೂಮಿಗೀತ ಸಾಂಸ್ಕೃತಿಕ ವೇದಿಕೆ, ಪಟ್ಲ – ಸಂತೋಷ ನಾಯಕ್ ನಿರ್ದೇಶನದ ಕನ್ನಡ ನಾಟಕ ಗೆಲಿಲಿಯೊ, ಮಾರ್ಚ್ 23: ಸುಮನಸಾ ಕೊಡವೂರು, ಉಡುಪಿ – ಜೋಸೆಫ್ ನಿರ್ದೇಶನದ ಕನ್ನಡ ನಾಟಕ ನೆರಳಿಲ್ಲದ ಮನುಷ್ಯರು, ಮಾರ್ಚ್ 24: ದಿವ್ಯರಂಗ ಬೆಂಗಳೂರು ಜೋಸೆಫ್ ನಿರ್ದೇಶನದ ಕನ್ನಡ ನಾಟಕ ಮಾಯಾ ಮೋಹಜಾಲ,

ಮಾರ್ಚ್‌ 25: ಸುಮನಸಾ ಕೊಡವೂರು ಉಡುಪಿ – -ಬನ್ನಂಜೆ ಸಂಜೀವ ಸುವರ್ಣ ನಿರ್ದೇಶನದ ಕನ್ನಡ ಯಕ್ಷನಾಟಕ ರಾಮ ಭಕ್ತ ಜಾಂಬವಂತ,  ಮಾರ್ಚ್ 26: ಭೂಮಿಕಾ (ರಿ.) ಹಾರಾಡಿ. – ಬಿ.ಎಸ್.ರಾಮ್ ಶೆಟ್ಟಿ ನಿರ್ದೇಶನದ ಕನ್ನಡ ನಾಟಕ ನಮ್ಮ ನಿಮ್ಮೊಳಗೊಬ್ಬ, ಮಾರ್ಚ್ 27: ಸುಮನಸಾ ಕೊಡವೂರು, ಉಡುಪಿ ವಿದ್ದು ಉಚ್ಚಿಲ್, ನಿರ್ದೇಶನದ ಕನ್ನಡ ನಾಟಕ ಕರುಳ ತಪ್ಪದ ಮೇಲೆ, ಮಾರ್ಚ್ 28: ಸನ್ನಿಧಿ ಕಲಾವಿದರು-ರವಿಕುಮಾರ್ ಕಡೆಕಾರ್ ನಿರ್ದೆಶನದ ತುಳು ನಾಟಕ ಮಾಯೊದ ಬೊಲ್ಪು.

ಪತ್ರಿಕಾಗೋಷ್ಠಿಯಲ್ಲಿ ಸುಮನಸಾ ಅಧ್ಯಕ್ಷ – ಪ್ರಕಾಶ್ జి.ಕೊಡವೂರು, ಉಪಾಧ್ಯಕ್ಷ ವಿನಯ್ ಕುಮಾರ್, ಜೊತೆ ಕಾರ್ಯದರ್ಶಿ ಕುಮಾರಿ ಪ್ರಜ್ಞಾ, ಕೋಶಾಧಿಕಾರಿ-ಚಂದ್ರಕಾಂತ್ ಕುಂದರ್, ಯೋಗೀಶ್ ಕೊಳಲಗಿರಿ ಉಪಸ್ಥಿತರಿದ್ದರು.

 
 
 
 
 
 
 
 
 

Leave a Reply