ಅನೇಕರಿಗೆ ಧನ್ಯತೆಯನ್ನು ನೀಡುವುದೇ ಅವಿಸ್ಮರಣೀಯ -ಪ್ರೊ. ಕೆ.ಜಿ.ಮಂಜುನಾಥ್

ಶಿರ್ವ:-ಜೀವನದಲ್ಲಿ ಅನೇಕ ಧನ್ಯತೆಯ ಕ್ಷಣಗಳು ಬರುತ್ತವೆ. ಹುದ್ದೆಯ ಮೌಲ್ಯದ ಅರಿವು ಇದ್ದಾಗ ಮಾತ್ರ ನೂರಾರು ಜನ ಧನ್ಯತೆಯ ಕ್ಷಣಗಳನ್ನು ಅನುಭವಿಸುವಂತೆ ಮಾಡಲು ಸಾಧ್ಯ. ಅನೇಕರಿಗೆ ಧನ್ಯತೆಯನ್ನು ನೀಡುವುದೇ ಅವಿಸ್ಮರಣೀಯ ಕಾರ್ಯ ಎಂದು ಶಿರ್ವ ಎಮ್‌ಎಸ್‌ಆರ್‌ಎಸ್ ಕಾಲೇಜಿನ ಉಪ ಪ್ರಾಂಶುಪಾಲ ಪ್ರೊ.ಕೆ.ಜಿ.ಮಂಜುನಾಥ್ ನುಡಿದರು.

ಅವರು ಶನಿವಾರ ಸಂಜೆ ಬಂಟಕಲ್ಲು ಸಾರ್ವಜನಿಕ ಶ್ರೀಗಣೇಶೋತ್ಸವ ವೇದಿಕೆಯಲ್ಲಿ ಬಂಟಕಲ್ಲು ವಾರ್ಡ್ ಸದಸ್ಯ ಕೆ.ಆರ್.ಪಾಟ್ಕರ್‌ರವರು ಶಿರ್ವ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ ತಮ್ಮ ಸೇವಾವಧಿಯ ಕೇವಲ 16 ತಿಂಗಳ ಅತ್ಯಲ್ಪ ಅವಧಿಯಲ್ಲಿ ಒಂದು ಕೋಟಿಗೂ ಅಧಿಕ ಮೌಲ್ಯದ ಅಭಿವೃದ್ಧಿ ಯೋಜನೆಗಳನ್ನು ಗ್ರಾಮಕ್ಕೆ ನೀಡುವ ಮೂಲಕ ತಮ್ಮ ಸೇವಾವಧಿ ಪೂರ್ತಿಗೊಳಿಸಿದ ಹಿನ್ನೆಲೆಯಲ್ಲಿ ಪಕ್ಷಾತೀತವಾಗಿ ಸ್ಥಳೀಯ 12 ಸಂಘಟನೆಗಳು ಸಂಯುಕ್ತವಾಗಿ ಏರ್ಪಡಿಸಿದ ಅಭಿನಂದನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಾ, ಈ ಕಾರ್ಯಕ್ರಮ ಪಾಟ್ಕರ್‌ರವರ ಬದ್ಧತೆ, ಕ್ರಿಯಾಶೀಲ ವ್ಯಕ್ತಿತ್ವಕ್ಕೆ ಹಿಡಿದ ಕೈಗನ್ನಡಿ ಎಂದರು.

ಈ ಸಂದರ್ಭದಲ್ಲಿ ಕೆ.ಆರ್,ಪಾಟ್ಕರ್, ಸಂಗೀತಾ ದಂಪತಿಗಳನ್ನು ಸಾರ್ವಜನಿಕವಾಗಿ ಸನ್ಮಾನಿಸಿ ಅಭಿನಂದಿಸಲಾಯಿತು. ಅಭಿನಂದನೆ ಸ್ವೀಕರಿಸಿದ ಪಂಚಾಯತ್ ನಿಕಟಪೂರ್ವ ಅಧ್ಯಕ್ಷ ಕೆ.ಆರ್.ಪಾಟ್ಕರ್ ಮಾತನಾಡಿ ಜವಾಬ್ದಾರಿ ವಹಿಸಿದ ಆರಂಭದಲ್ಲಿ ಕೊರೋನದ ಸಂಕಷ್ಟಕಾಲದಲ್ಲಿ ಸಾರ್ವಜನಿಕರ ಸ್ವಂದನೆ, ಅಭಿವೃದ್ಧಿ ಯೋಜನೆಗಳನ್ನು ಕೈಗೊಂಡಾಗ ಕೈನೀಡಿ ಸಹಕರಿಸಿದ ದಾನಿಗಳು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮತ್ತು ಸಿಬ್ಬಂಧಿವರ್ಗದವರ ಕ್ರಿಯಾಶೀಲ ಸ್ಪಂದನ, ಉತ್ತಮ ಕಾರ್ಯಗಳಿಗೆ ಸಕಾಲಿಕ ಪ್ರಚಾರ ನೀಡಿದ ಮಾಧ್ಯಮಗಳು ಈ ಎಲ್ಲಾ ಯಶಸ್ವಿಗೆ ಕಾರಣರಾಗಿದ್ದಾರೆ. ಗೌರವದ ಯಶಸ್ಸು ಸಂಪೂರ್ಣವಾಗಿ ಅವರಿಗೆ ಸಮರ್ಪಿಸುತ್ತೇನೆ ಎಂದರು. ತಮ್ಮ ರಾಜಿನಾಮೆ ತಮ್ಮ ಪಕ್ಷದ ಒಳಗಿನ ಆಂತರಿಕ ಒಪ್ಪಂದವಾಗಿದ್ದು, ಈ ಬಗ್ಗೆ ಯಾರೂ ಬೇಸರಿಸುವ ಅಗತ್ಯವಿಲ್ಲ ಎಂದರು. ಸಾರ್ವಜನಿಕರು ನೀಡಿದ ಪ್ರೀತ್ಯಾಧರಗಳಿಗೆ ಚಿರಋಣಿಯಾಗಿದ್ದು, ಸಮಾಜಸೇವೆನಿರಂತರವಾಗಿ ಮುಂದುವರಿಯುತ್ತದೆ ಎಂದರು.

ಯಶಸ್ವಿಯಾಗಿ ಅನುಷ್ಠಾನಗೊಂಡ ಯೋಜನೆಗಳು:- ಶಿರ್ವ ಪೇಟೆಯಲ್ಲಿ ಸುಸಜ್ಜಿತ ಬಸ್ಸು ತಂಗುದಾಣ, ಬಸ್ಸುಗಳ ವೇಳಾಪಟ್ಟಿ, ಟಿವಿ ಪರದೆಯ ಮೇಲೆ ಬಸ್ಸುಗಳು ನಿಲ್ದಾಣಕ್ಕೆ ಬರುವ ಹಾಗೂ ಹೊರಡುವ ಸಮಯ,ಸ್ಥಳಗಳ ಬಗ್ಗೆ ಸತತ ಮಾಹಿತಿ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ, ಗ್ರಾಮದ ಪ್ರಮುಖ ಸ್ಥಳಗಳಲ್ಲಿ ೪ ಸಣ್ಣ ಬಸ್ಸು ತಂಗುದಾಣಗಳು, ಆಯಕಟ್ಟಿನ ೭ ಕೇಂದ್ರಗಳಲ್ಲಿ ಸಿಸಿಕ್ಯಾಮರಾ ಅಳವಡಿಕೆ, ಸುಸಜ್ಜಿತ ರುದ್ರಭೂಮಿ, ಧ್ವಜಸ್ತಂಭ, ಪ್ರಮುಖ ಕೂಡುರಸ್ತೆಗಳಲ್ಲಿ ಸರ್ಕಲ್‌ಗಳು, ಆರೋಗ್ಯ ಉಪಕೇಂದ್ರ, ಪಂಚಾಯತ್ ಕಛೇರಿಯಲ್ಲಿ ಆಸನ ವ್ಯವಸ್ಥೆ, ಡಿಜಿಟಲ್ ಪಾವತಿ ವ್ಯವಸ್ಥೆ, ಗ್ರಾಮಸಭೆಯ ನೇರ ಪ್ರಸಾರ, ಗ್ರಾಮದ ಪ್ರಮುಖ ೮ ಕೇಂದ್ರಗಳಲ್ಲಿ ಹೈಮಾಸ್ ದೀಪಗಳ ವ್ಯವಸ್ಥೆ, ಎಸ್‌ಎಲ್‌ಆರ್‌ಎಮ್ ಘಟಕಕ್ಕೆ ೧೨ಲಕ್ಷ ಮೌಲ್ಯದ ದೊಡ್ಡ ವಾಹನದ ವ್ಯವಸ್ಥೆ, ಪ್ಲಾಸ್ಟಿಕ್ ನಿಷೇಧ ಜಾಗೃತಿ,ಉಚಿತ ಬಟ್ಟೆಚೀಲಗಳ ವಿತರಣೆ, “ಸ್ವಚ್ಛಶಿರ್ವ -ಸ್ವಸ್ಥ ಶಿರ್ವ” ಯೋಜನೆ, ಸರಕಾರದಿಂದ ಜನಸಾಮಾನ್ಯರಿಗೆ ಸಿಗುವ ವಿವಿಧ ಸೌಲಭ್ಯಗಳ ಮಾಹಿತಿ ಶಿಬಿರ, ಸಂಜೀವಿನಿ ಸಂತೆಗಳ ಪ್ರಾರಂಭ, ಬಂಟಕಲ್ಲಿನಲ್ಲಿ ಸುಸಜ್ಜಿತ ಹವಾನಿಯಂತ್ರಿತ ಅಂಗನವಾಡಿ, ಕೊರೋನಾ ಲಾಕ್‌ಡೌನ್ ಅವಧಿಯಲ್ಲಿ ಸಲ್ಲಿಸಿದ ಸೇವೆಗೆ ಜಿಲ್ಲಾ ಹಾಗೂ ರಾಜ್ಯಮಟ್ಟದಲ್ಲೂ ಪ್ರಶಂಸೆ.

ನಾಗರಿಕ ಸಮಿತಿಯ ಉಪಾಧ್ಯಕ್ಷ ಬಿ.ಪುಂಡಲೀಕ ಮರಾಠೆ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಅಭಿನಂದನಾ ಸಮಿತಿ ಹಾಗೂ ಬಂಟಕಲ್ಲು ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ಮಾಧವ ಕಾಮತ್ ವಹಿಸಿದ್ದರು. ಸಮಿತಿಯ ಗೌರವ ಅಧ್ಯಕ್ಷ ಇಗ್ನೇಷಿಯಸ್ ಡಿಸೋಜ, ಉಡುಪಿ ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ಬಂಟಕಲ್ಲು ರಾಮಕೃಷ್ಣ ಶರ್ಮಾ, ವಿವಿಧ ಸಂಘಟನೆಗಳ ಪ್ರತಿನಿಧಿಗಳಾದ ಗೀತಾ ವಾಗ್ಲೆ, ಡೆನೀಸ್ ಡಿಸೋಜ, ಮುರಲೀಧರ್ ಆಚಾರ್ಯ, ರೀನಾ ಡಿಸೋಜ, ಮಂಜುನಾಥ್ ಪೂಜಾರಿ, ಉಮೇಶ್ ರಾವ್, ವಿಲ್ಫೆçಡ್ ಪಿಂಟೊ ವೇದಿಎಯಲ್ಲಿ ಉಪಸ್ಥಿತರಿದ್ದರು. ಶಿಕ್ಷಕಿ ಅರುಂಧತಿ ಜಿ.ಪ್ರಭು, ವಸಂತಿ ಎ. ಆಚಾರ್ಯ ನಿರೂಪಿಸಿದರು. ಕಾರ್ಯದರ್ಶಿ ದಿನೇಶ್ ದೇವಾಡಿಗ ಧನ್ಯವಾದವಿತ್ತರು.
ಪ್ರಾರಂಭದಲ್ಲಿ ಕಲಾವಿದ ಪ್ರಕಾಶ್ ಸುವರ್ಣ ಕಟಪಾಡಿ ಬಳಗದವರಿಂದ ಸಂಗೀತ ರಸಮಂಜರಿ, ನಂತರ ಮಜಾ ಟಾಕೀಸ್ ಖ್ಯಾತಿಯ ಮೂರು ಮುತ್ತು ಕಲಾವಿದರು, ಕುಂದಾಪುರ ಇವರಿಂದ “ಹಾಸ್ಯ ರಸಾಯನ”ಕಾರ್ಯಕ್ರಮ ಜರುಗಿತು.

 
 
 
 
 
 
 
 
 
 
 

Leave a Reply