ರೋಟರಿ-ಮಾಹೆ ಮಕ್ಕಳ ಕ್ಯಾನ್ಸರ್ ಸಹಾಯನಿಧಿ ಉದ್ಘಾಟನೆ

ಉಡುಪಿ : ನವಜಾತ ಶಿಶುಗಳಲ್ಲಿ ಮತ್ತು ಮಕ್ಕಳಲ್ಲಿ ಕಂಡುಬರುವ ಕ್ಯಾನ್ಸರ್ ರೋಗವನ್ನು ಚಿಕಿತ್ಸೆಯಿಂದ ಸಂಪೂರ್ಣವಾಗಿ ಗುಣಪಡಿಸಬಹುದು. ಆದರೆ ದುಬಾರಿಯಾಗಿರುವ ಈ ಚಿಕಿತ್ಸೆಗೆ ಹೆತ್ತವರ ಹಣದ ಕೊರತೆಯ ಸಮಸ್ಯೆಯಿಂದ ಮಕ್ಕಳನ್ನು ಉಳಿಸಲು ಸಮಾಜ ಸಹಕರಿಸಬೇಕಾಗಿದೆ.

ಈ ನಿಟ್ಟಿನಲ್ಲಿ ರೋಟರಿ ಮಣಿಪಾಲ ಟೌನ್ ಮತ್ತು ಮಾಹೆ ಸಂಸ್ಥೆಯು ಸೇರಿ ಸ್ಥಾಪಿಸಿರುವ ಮಕ್ಕಳ ಕ್ಯಾನ್ಸರ್ ನಿಧಿಗೆ ಜನರು ಉದಾರ ದೇಣಿಗೆ ನೀಡಬೇಕು. ರೋಟರಿಯವರು ಸಂಗ್ರಹಿಸಿದ ಮೊತ್ತದಷ್ಟೇ ಹಣವನ್ನು ಸೇರಿಸಿ ಅದನ್ನು ದ್ವಿಗುಣಗೊಳಿಸುತ್ತದೆ ಎಂದು ಮಾಹೆಯ ಪ್ರೊ. ಉಪಕುಲಪತಿ ಡಾ. ಪಿ.ಎಲ್.ಎನ್.ಜಿ. ರಾವ್ ಕರೆ ನೀಡಿದರು.

ಮಕ್ಕಳ ಕ್ಯಾನ್ಸರ್ ನಿಧಿಯನ್ನು ಉದ್ಘಾಟಿಸಿದ ಅವರು, ಮಕ್ಕಳ ಕ್ಯಾನ್ಸರ್ ನಗರಗಳಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ. ಇದನ್ನು ಪ್ರಸ್ತುತ ಸಂಪೂರ್ಣವಾಗಿ ಗುಣಪಡಿಸಬಹುದು. ಆದರೆ ಇದರ ಚಿಕಿತ್ಸೆ ಬಹಳ ದುಬಾರಿಯಾಗಿದ್ದು ರೋಗವು, ಹೆತ್ತವರಲ್ಲಿ ಆರ್ಥಿಕಶಕ್ತಿಯಿಲ್ಲದೇ ಮಾರಣಾಂತಿಕವಾಗುತ್ತದೆ.
ಸಾರ್ವಜನಿಕ ಸಂಸ್ಥೆಗಳು ಮತ್ತು ಸಮಾಜದ ಪ್ರತಿಯೊಬ್ಬರೂ ಈ ನಿಧಿಗೆ ಸಹಾಯ ಮಾಡಬೇಕು ಎಂದು ಅವರು ಕರೆನೀಡಿ ತಮ್ಮ ಮೂರುದಿನದ ವೇತನವನ್ನು ನೀಡುವುದಾಗಿ ಘೋಷಿಸಿದರು.

ಆಂಕಾಲಜಿಯ ಪ್ರೊಫೆಸರ್ ಡಾ. ವಾಸುದೇವ ಭಟ್ ಮಕ್ಕಳ ಕ್ಯಾನ್ಸರ್ ಬಗ್ಗೆ ವಿವರವಾದ ಮಾಹಿತಿ ನೀಡಿದರು. ಮುಖ್ಯ ಅತಿಥಿ ಡಾ. ನವೀನ್ ಸಾಲಿನ್ಸ್ ಮಣಿಪಾಲ ಕೆ.ಎಂ.ಸಿ ಯ ಕ್ಯಾನ್ಸರ್ ವಿಭಾಗದಲ್ಲಿ ಕೊಡಲ್ಪಡುತ್ತಿರುವ ಚಿಕಿತ್ಸಾ ವಿಶೇಷತೆಗಳನ್ನು ವಿವರಿಸಿದರು.

ಗರ್ಭಸ್ಥ ಶಿಶು ಮತ್ತು ನವಜಾತ ಶಿಶುಗಳಲ್ಲಿ ಈ ರೋಗ ಹರಡುತ್ತಿರುವ ಬಗ್ಗೆ ಕಾರಣ, ರೋಗ ಬರದಂತೆ ಮಾಡುವ ಮತ್ತು ಪರಿಹಾರಗಳ ಕುರಿತು ಸಂಶೋಧನೆ ನಡೆಯುತ್ತಿವೆ ಎಂದು ರೋ.ಡಾ. ರವಿರಾಜ್ ಮಾಹಿತಿ ನೀಡಿದರು.

ರೋಟರಿ ಅಧ್ಯಕ್ಷ ರೋ. ಗಣೇಶ್ ನಾಯಕ್ ಮಾತನಾಡಿ ಟೌನ್ ರೋಟರಿಯಿಂದ ವಿವಿಧ ಕಾರ್ಯಕ್ರಮಗಳನ್ನು ನಡೆಸಿ ₹ 6.25 ಲಕ್ಷಗಳನ್ನು ಮಾಹೆಯೊಂದಿಗೆ ಸೇರಿ ಅಷ್ಟೇ ಮೊತ್ತವನ್ನು ಅವರು ಸೇರಿಸಿ ₹ 12.50 ಲಕ್ಷ ವಾಗಿದೆ. ಈ ನಿಧಿಯ ಬಡ್ಡಿಯಿಂದ ಅರ್ಹ ಮಕ್ಕಳಿಗೆ ಧನ ಸಹಾಯ ಮಾಡಲಾಗುವುದು. ನಮ್ಮ ಗುರಿಯಂತೆ ಈ ಮೊತ್ತವು ₹ 3.00 ಕೋಟಿ ದಾಟಬೇಕು. ಇದಕ್ಕೆ ಜನರ ಸಹಕಾರವನ್ನು ಬಯಸುತ್ತಿದ್ದೇವೆ ಎಂದು ನುಡಿದರು.

ವಲಯ ಅಧಿಕಾರಿ ಸಚ್ಚಿದಾನಂದ ನಾಯಕ್, ರೋ. ಡಾ. ರವಿರಾಜ್, ರೋ. ಕೆ. ಜೈವಿಠ್ಠಲ್, ರೋ. ಡಾ. ಶ್ರಿಧರ್ ಡಿ, ರೋ. ಡಾ. ಭರತರಾಜಗುರು, ರೋ. ಹಿಲ್ಡಾ ಕರ್ನೇಲಿಯೋ, ರೋ. ಸುರೇಶ್ ಕೆ ಮತ್ತಿತರರು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply