ಕೋವಿಡ್ -19 ನಿರ್ಮೂಲನೆಗೆ ಸರ್ಕಾರದೊಂದಿಗೆ ರೋಟರಿ ಸಂಸ್ಥೆ ಕೈಜೋಡಿಸಬೇಕು – “ರೋಟರಿ ರಾಜ ಪರ್ವ ಜಿಲ್ಲಾ ಕಾನ್ಫರೆನ್ಸ್ ನಲ್ಲಿ ಶಾಸಕ ರಘುಪತಿ ಭಟ್

ದೇಶ  ಕೋವಿಡ್ – 19 ಸಂಕಷ್ಟದಲ್ಲಿದೆ. ತಜ್ಞರ ಪ್ರಕಾರ ಇದು ಮುಂದಿನ ನಾಲ್ಕೈದು ವರ್ಷಗಳವರೆಗೆ ಇರಬಹುದು. ಹಾಗಾಗಿ ನಾವು ಕೋವಿಡ್ – 19 ನೊಂದಿಗೆ ಬದುಕಬೇಕಾಗಿದೆ. ಈ ನಿಟ್ಟಿನಲ್ಲಿ ಇದರ ಬಗ್ಗೆ ಜನಜಾಗೃತಿ ಅವಶ್ಯಕ. ಕೋವಿಡ್ – 19 ಮುಂಜಾಗ್ರತಾ ಕ್ರಮಗಳನ್ನು ಪಾಲಿಸುವುದು ಹಾಗೂ 45 ವರ್ಷ ಮೇಲ್ಪಟ್ಟ ಎಲ್ಲಾ ನಾಗರಿಕರು ವ್ಯಾಕ್ಸಿನ್ ಪಡೆದುಕೊಳ್ಳುವ ಬಗ್ಗೆ ಅಭಿಯಾನ ನಡೆಸಬೇಕಾಗಿದೆ. 

ಸಮಾಜದ ಜವಾಬ್ದಾರಿಯುತ  ವ್ಯಕ್ತಿಗಳು ರೋಟರಿ ಸಂಸ್ಥೆಯಲ್ಲಿ ಇರುವುದರಿಂದ ರೋಟರಿ ಸಂಸ್ಥೆ ಕೋವಿಡ್ – 19 ಬಗ್ಗೆ ಜನ ಜಾಗೃತಿ ಮೂಡಿಸುವ ಅಭಿಯಾನದಲ್ಲಿ ಸರ್ಕಾರದೊಂದಿಗೆ ಕೈಜೋಡಿಸಬೇಕು ಎಂದು ಶಾಸಕ ರಘುಪತಿ ಭಟ್ ಹೇಳಿದರು. ಉಡುಪಿಯ ಅಂಬಾಗಿಲು ಅಮೃತ್ ಗಾರ್ಡನ್ ನಲ್ಲಿ ನಡೆಯುತ್ತಿರುವ “ರೋಟರಿ ರಾಜ ಪರ್ವ 2021”  ಜಿಲ್ಲಾ ಕಾನ್ಫರೆನ್ಸ್ ನಲ್ಲಿ ಭಾನುವಾರ ಭಾಗವಹಿಸಿ ಮಾತನಾಡಿದರು.

ದೇಶವನ್ನ ಕಾಡುತ್ತಿದ್ದ ಪೋಲಿಯೋ ನಿರ್ಮೂಲನೆಯಲ್ಲಿ ಸರ್ಕಾರದ ಜೊತೆ ಕೈಜೋಡಿಸಿದ ರೋಟರಿ ಸಂಸ್ಥೆಯ ಕೊಡುಗೆ ದೊಡ್ಡದು. ಅದರಂತೆ ಪ್ರಸ್ತುತ ಕೋವಿಡ್ -19 ನಿರ್ಮೂಲನೆಗೆ ಜನಜಾಗೃತಿ ಮೂಡಿಸುವಲ್ಲಿ ಆರೋಗ್ಯ ಇಲಾಖೆ ಜೊತೆ ರೋಟರಿ ಸಂಸ್ಥೆ ಕೈಜೋಡಿಸಬೇಕು. ಇದಕ್ಕೆ ಬೇಕಾದ ಸಹಕಾರ ನೀಡುವುದಾಗಿ ತಿಳಿಸಿದ ಅವರು ನನ್ನ ನೇತೃತ್ವದಲ್ಲಿ ಉಡುಪಿ ಕ್ಷೇತ್ರದಾದ್ಯಂತ ಹಡಿಲು ಬಿದ್ದಿರುವ ಕೃಷಿ ಭೂಮಿಯನ್ನು ಸಾವಯವ ಪದ್ಧತಿಯಲ್ಲಿ ಸಾಗುವಳಿ ಮಾಡುವಂತಹ ಅಭಿಯಾನವನ್ನು ಆರಂಭಿಸಿದ್ದು, ಈ ಬಾರಿ 50 ಎಕ್ರೆ ಹಡಿಲು ಕೃಷಿ ಭೂಮಿಯನ್ನು ಸ್ಥಳೀಯರ, ಕೃಷಿ ಆಸಕ್ತರ, ಸಂಘ ಸಂಸ್ಥೆಗಳ ಸಹಕಾರದಲ್ಲಿ ಸಾವಯವ  ಪದ್ಧತಿಯಲ್ಲಿ ಸಾಗುವಳಿ ಮಾಡಿ ಯಶಸ್ವಿಯಾಗಿದ್ದೇವೆ.

ಮುಂದಿನ ದಿನಗಳಲ್ಲಿ ಉಡುಪಿ ಕ್ಷೇತ್ರದಾದ್ಯಂತ ಸಾವಯವ ಪದ್ಧತಿಯಲ್ಲಿ ಕೃಷಿ ಮಾಡಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ರೋಟರಿ ಸಂಸ್ಥೆಯಲ್ಲಿರುವ ಕೃಷಿ ಆಸಕ್ತರು ನಮ್ಮೊಂದಿಗೆ ಕೈಜೋಡಿಸಿ ಎಂದು ವಿನಂತಿಸಿದರು. ಈ ಸಂದರ್ಭದಲ್ಲಿ ರೋಟರಿ ಗವರ್ನರ್ ರಾಜಾರಾಮ್ ಭಟ್, ಸಹಾಯಕ ಗವರ್ನರ್ ದೇವದಾಸ್ ಕಿನ್ನಿಮೂಲ್ಕಿ, ರಾಜ ಪರ್ವ ಜಿಲ್ಲಾ ಕಾನ್ಫರೆನ್ಸ್ ನ ಅಧ್ಯಕ್ಷರಾದ ಆನಂದ್ ಶೆಟ್ಟಿ, ಅಲೆನ್  ಉಪಸ್ಥಿತರಿದ್ದರು. ಅಶೋಕ್ ಕುಮಾರ್ ಶೆಟ್ಟಿ ಮಟಪಾಡಿ ನಿರೂಪಿಸಿದರು.   
 
 
 
 
 
 
 
 
 
 
 

Leave a Reply