ಉಡುಪಿ: ಕಾನೂನು ಸೇವೆಗಳ ಪ್ರಾಧಿಕಾರ, ರೋಟರಿ ಉಡುಪಿ, ಇನ್ನರ್ ವೀಲ್ ಕ್ಲಬ್ ಉಡುಪಿ ಮತ್ತು ಚೈಲ್ಡಲೈನ್ ಉಡುಪಿ ಇವರ ಜಂಟಿ ಆಶ್ರಯದಲ್ಲಿ ರಾಷ್ಟ್ರೀಯ ಹೆಣ್ಣುಮಕ್ಕಳ ದಿನಾಚರಣೆಯು ಬೀಡಿನಗುಡ್ಡೆ ಲೇಬರ್ ಕಾಲನಿಯಲ್ಲಿ ನಡೆಯಿತು. ಶ್ರೀ ಕೃಷ್ಣಬಾಲನಿಕೇತನ ಮಕ್ಕಳಿಂದ ಹೆಣ್ಣುಮಕ್ಕಳ ಸಬಲೀಕರಣದ ಬಗ್ಗೆ ಬೀದಿನಾಟಕ ಪ್ರದರ್ಶಿಸಲಾಯಿತು.
ಎಲ್ಲರನ್ನು ರೋಟರಿ ಅಧ್ಯಕ್ಷೆ ರೋ. ರಾದಿಕಾ ಲಕ್ಷ್ಮೀನಾರಾಯಾಣ್ ಅವರು ಸ್ವಾಗತಿಸಿದರು. ಚೈಲ್ಡಲೈನ್ ನ ನಿರ್ದೇಶಕ ರೋ. ರಾಮಚಂದ್ರ ಉಪಾದ್ಯಾಯ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಹಿರಿಯ ಸಿವಿಲ್ ನ್ಯಾಯಾಧೀಶೆ ಮತ್ತು ಉಡುಪಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯೆ ಕಾವೇರಿ ಕಾರ್ಯಕ್ರಮವನ್ನು ಉಧ್ಘಾಟಿಸಿ ಹೆಣ್ಣುಮಕ್ಕಳ ಸಬಲೀಕರಣದ ಬಗ್ಗೆ ಮತ್ತು ಮಕ್ಕಳಿಗೆ ಅದರ ಮಹತ್ವದ ಬಗ್ಗೆ ತಿಳಿಸಿದರು.
ಮಕ್ಕಳಿಗೆ ನಡೆಸಲಾಗಿದ್ದ ವಿವಿಧ ಸ್ಪರ್ಧೆಗಳಿಗೆ ಬಹುಮಾನ ವಿತರಿಸಿದ ಮುಖ್ಯ ಅತಿಥಿ ನಗರಸಭಾಧ್ಯಕ್ಷೆ ಶ್ರೀಮತಿ ಸುಮಿತ್ರಾ ನಾಯಕ್ ಅವರು ತಮ್ಮ ನಗರದಲ್ಲಿರುವ ಎಲ್ಲಾ ಬಡ ಹೆಣ್ಣು ಮಕ್ಕಳಿಗೆ ಸರಕಾರದಿಂದ ಸಿಗುವ ಸವಲತ್ತುಗಳನ್ನು ಮುಟ್ಟಿಸುವಲ್ಲಿ ನಮ್ಮ ಸಹಕಾರವನ್ನು ನೀಡುತ್ತೇವೆಂದು ಭರವಸೆ ನೀಡಿದರು.
ಮಹಿಳಾ ಪೋಲೀಸ್ ಠಾಣಾಧಿಕಾರಿ ಶ್ರೀಮತಿ ವೈಲೆಟ್ ಫೇಮಿನಾ ಅವರು ಮಕ್ಕಳಿಗೆ ಏನೇ ತೊಂದರೆಯಾದಲ್ಲಿ ಪೋಲೀಸರನ್ನು ಸಂಪರ್ಕಿಸಬೇಕು ಎಂದು ತಿಳಿಸಿದರು. ನಗರಸಭಾ ಸದಸ್ಯೆ ಶ್ರೀಮತಿ ರಜನಿ ಹೆಬ್ಬಾರ್ ಮಾತನಾಡಿ ಇಂತಹ ಕಾರ್ಯಕ್ರಮ ತಮ್ಮ ವಾರ್ಡ್ನಲ್ಲಿ ಆಚರಿಸಿದ ಬಗ್ಗೆ ಎಲ್ಲರನ್ನೂ ಅಭಿನಂದಿಸಿದರು.
ಇನ್ನರ್ ವೀಲ್ ಕ್ಲಬ್ ನ ಅಧ್ಯಕ್ಷೆ ಶ್ರೀಮತಿ ಮಾಲತಿ ತಂತ್ರಿಯವರು ವಂದಿಸಿದರು. ಮಕ್ಕಳ ಕಲ್ಯಾಣಸಮಿತಿಯ ಮಾಜಿ ಅಧ್ಯಕ್ಷ ಶ್ರೀ ನಾರಾಯಣ, ರೋಟರಿ ಸದಸ್ಯರು, ಚೈಲ್ಡ್ ಲೈನ ಸದಸ್ಯರು ಮತ್ತು ಸ್ಥಳೀಯರು ಭಾಗವಹಿಸಿದ್ದರು.