ಹಡಿಲು ಗದ್ದೆಗಳಲ್ಲಿ ಕೃಷಿ ಮಾಡುವ ಉದ್ದೇಶದ ಕೇದಾರೋತ್ಥಾನ ಟ್ರಸ್ಟ್(ರಿ.) ಉದ್ಘಾಟನೆ

ಉಡುಪಿ ವಿಧಾನಸಭಾ ಕ್ಷೇತ್ರದ ಹಡಿಲು ಗದ್ದೆಗಳಲ್ಲಿ ಕೃಷಿಯನ್ನು ಮಾಡುವ ಉದ್ದೇಶವನ್ನು ಹೊಂದಿದ ಕೇದಾರೋತ್ಥಾನ ಟ್ರಸ್ಟ್(ರಿ.) ಇಂದು ಉದ್ಘಾಟನೆಗೊಂಡಿತು. ಉಡುಪಿಯ ಅಮೃತ ಗಾರ್ಡನ್ ನಲ್ಲಿ ಸಮಾವೇಶಗೊಂಡ ಟ್ರಸ್ಟಿನ ಸದಸ್ಯರ ಸಮ್ಮುಖದಲ್ಲಿ ಟ್ರಸ್ಟಿನ ಅಧ್ಯಕ್ಷ ಕೆ ರಘುಪತಿ ಭಟ್ ಧ್ಯೇಯೋದ್ದೇಶಗಳನ್ನು ವಿವರಿಸಿದರು.

ಈ ವರ್ಷ ಕನಿಷ್ಠ 2ಸಾವಿರ ಎಕರೆ ಹಡಿಲು ಗದ್ದೆಯಲ್ಲಿ ಭತ್ತದ ಸಾವಯವ ಬೇಸಾಯ ಮಾಡಬೇಕು ಎಂಬ ಸಂಕಲ್ಪವನ್ನು ಪುನರುಚ್ಚರಿಸಿದರು. ಟ್ರಸ್ಟಿನ ಕಾರ್ಯದರ್ಶಿಯಾಗಿ ಮುರಳಿ ಕಡೆಕಾರ್, ಕೋಶಾಧಿಕಾರಿಯಾಗಿ ರಾಘವೇಂದ್ರ ಕಿಣಿ ಇವರನ್ನು ಆಯ್ಕೆ ಮಾಡಲಾಯಿತು. ಪ್ರದೀಪ್ ಜೋಗಿಯವರನ್ನು ಲೆಕ್ಕಪರಿಶೋಧಕರಾಗಿ ನೇಮಿಸಿಕೊಳ್ಳಲಾಯಿತು.ಈ ಸಂದರ್ಭದಲ್ಲಿ ಪ್ರಗತಿಪರ ಕೃಷಿಕರಾದ ಕುದಿ ಶ್ರೀನಿವಾಸ ಭಟ್ ಹಾಗೂ ಕೃಷಿ ಅಧಿಕಾರಿಗಳಾದ ಕೆಂಪೇಗೌಡ ಅವರು ಮಾರ್ಗದರ್ಶನ ನೀಡಿದರು.

ಟ್ರಸ್ಟ್‌ಗೆ ಆರಂಭಿಕ ದೇಣಿಗೆಯಾಗಿ ಶ್ರೀ ರಾಘವೇಂದ್ರ ಕಿಣಿ ಅವರು 1,11,111ರೂಪಾಯಿಯನ್ನು ನೀಡಿದರು. ಟ್ರಸ್ಟ್ ನಲ್ಲಿ ಉಡುಪಿ ನಗರಸಭೆಯ 35 ನಗರ ಸಭಾ ಸದಸ್ಯರು, 19 ಪಂಚಾಯತ್ ಅಧ್ಯಕ್ಷರುಗಳು ಹಾಗೂ 8ಮಂದಿ ಸಾಮಾಜಿಕ ಕಾರ್ಯಕರ್ತರು ಸದಸ್ಯರಾಗಿರುತ್ತಾರೆ. ಮುಂದೆ ಆಸಕ್ತ ಸಾಮಾಜಿಕ ಕಾರ್ಯಕರ್ತರನ್ನು ಸದಸ್ಯರಾಗಿ ನೊಂದಾಯಿಸಿಕೊಳ್ಳುವ ಅವಕಾಶವಿದೆ ಎಂಬುದಾಗಿ ಶ್ರೀ ಕೆ. ರಘುಪತಿ ಭಟ್ ಅವರು ವಿವರಿಸಿದರು.ಸದಸ್ಯರು ತಮ್ಮ ಕ್ಷೇತ್ರದ ಕೃಷಿ ಕಾರ್ಯ ಸಿದ್ಧತೆಯ ಬಗ್ಗೆ ಮಾಹಿತಿಯನ್ನು ನೀಡಿದರು.ಇದೇ ವೇಳೆ ಟ್ರಸ್ಟ್‌ನ ಲಾಂಛನವನ್ನು ಅನಾವರಣಗೊಳಿಸಲಾಯಿತು.

 
 
 
 
 
 
 
 
 
 
 

Leave a Reply