| ಕೃಷಿಗೆ ತೊಡಗುವ ಸಂದೇಶವಿರುವ ಯುಗಾದಿ|~ ‌ಕೆ.ಎಲ್.ಕುಂಡಂತಾಯ

ಕಪ್ಪುಗು ಎಡ್ಡೆನಾ,
ಬೊಲ್ದುಗು ಎಡ್ಡೆನಾ…?

ಕೋಲ, ಬಲಿ, ಅಂಕ, ಆಯನಗಳ ಉತ್ಸಾಹ, ನಾಗ – ಬಹ್ಮಲೋಕ, ದೈವಗಳ ಸಾಮ್ರಾಜ್ಯ ಸೃಷ್ಟಿಯಾಗುತ್ತಾ ಪ್ರತಿ ರಾತ್ರಿಯೂ ದಿವ್ಯವಾಗುವ ಶ್ರಾಯ. ಇದಕ್ಕೆ ಪೂರಕವಾಗಿ ಒದಗಿ ಬಂದಿರುತ್ತದೆ ವಸಂತ ಋತುವಿನ ಬಿನ್ನಾಣ. ಈ ನಡುವೆ ಕಾಲ ನಿಯಾಮಕ ಸೂರ್ಯ ಮೇಷ ರಾಶಿ ಪ್ರವೇಶಿಸಿ ಹೊಸ ಕ್ರಮಣ ಆರಂಭಿಸುವ ಪರ್ವ ಕಾಲ ‘ಸೌರಯುಗಾದಿ’ ಸಮನಿಸುತ್ತದೆ.

ಗೌಜಿ – ಗದ್ದಲಗಳಿಲ್ಲದ, ಸಂಭ್ರಮದ ವಿಧಿಯಾಚರಣೆಗಳಿಲ್ಲದ ‘ಇಗಾದಿ’ ಸೌರ ಮಾನಿಗಳಿಗೆ ‘ವರ್ಷಾರಂಭ’ ಎಂಬ ಶ್ರದ್ಧೆಯೊಂದಿಗೆ ಆಚರಿಸಲ್ಪಡುತ್ತದೆ. ಆದರೆ ಕೃಷಿಯನ್ನು ಆಧರಿಸಿ ಜೀವನ ರೂಪಿಸಿಕೊಂಡ ಮಣ್ಣಿನ ಮಕ್ಕಳಿಗೆ ಕೃಷಿ ಕಾರ್ಯವನ್ನು ಆರಂಭಿಸುವ ದಿನ ಸೌರ ಯುಗಾದಿ. ಸೌರಪದ್ಧತಿಯಂತೆ ತುಳುವರ ಮೊದಲ ತಿಂಗಳು ‘ಪಗ್ಗು’. ಪಗ್ಗು ತಿಂಗಳ ಹದಿನೆಂಟು ಅಥವಾ ಮುಂದಿನ ದಿನಗಳಲ್ಲಿ ಕೃಷಿಯಲ್ಲಿ ಸಂಪೂರ್ಣ ತೊಡಗಿಕೊಳ್ಳುವ ಕೃಷಿಕನಿಗೆ ಸೌರ ಯುಗಾದಿಯಂದು ಸಾಂಕೇತಿಕವಾಗಿ ತನ್ನ ಚಟುವಟಿಕೆ ಗಳನ್ನು ಆರಂಭಿಸುವ ನಿಯಮ ರೂಢಗೊಂಡಿತ್ತು.

ಜಾತ್ರೆ-ನೇಮಗಳ ಸಹಿತ ಶುಭ ಶೋಭನಾದಿಗಳ ಗುಂಗಿನಿಂದ ಹೊರ ಬಂದು ಕೃಷಿಗೆ ತೊಡಗು ಎಂಬ ಆಶಯವೂ ‘ಸೌರ ಯುಗಾದಿ’ಯ ಆಚರಣೆಯಲ್ಲಿದೆ. ಹೊಸ ವರ್ಷ ಆರಂಭವಾಗಿರುವುದರಿಂದ ಶುಭ ಪ್ರತೀಕ್ಷೆಯೂ ಸೌರಯುಗಾದಿಯ ಆಶಯವಾಗಿದೆ. ಕೃಷಿ ಮತ್ತು ಮುಂದಿನ ವರ್ಷದ ಜೀವನ ನಿರಾತಂಕವಾಗಿ ನಡೆಯಲಿ ಎಂಬ ಹರಕೆಯೊಂದಿಗೆ ‘ಕಣಿ’ ದರ್ಶನ. ಈ ಮೂಲಕ ನೂತನ ವರ್ಷದ ಮೊದಲ ದಿನ ಮಂಗಲದ್ರವ್ಯಗಳನ್ನು ಹೊಂದಿರುವ ‘ಕಣಿ’ಯನ್ನು ನೋಡುವುದು ಹಲವೆಡೆ ಪ್ರಧಾನ ವಿಧಿಯಾಗಿ ನಡೆಯುತ್ತದೆ.

ದೇವಾಲಯಗಳಿಗೆ ಹೋಗುವುದು, ದೈವಗಳಿಗೆ ಸೇವೆ ಸಲ್ಲಿಸುವುದು ಮುಖ್ಯ ಆಚರಣೆಯಾಗುವ ಕ್ರಮವೂ ಚಾಲ್ತಿಯಲ್ಲಿದೆ. ತುಳುನಾಡಿನ ಉದ್ದಕ್ಕೂ ವೈವಿಧ್ಯತೆಯಿಂದ ನಡೆಯುವ ‘ಇಗಾದಿ’ ಅಥವಾ ‘ಯುಗಾದಿ’ ‘ವಿಷು’ ಎಂದೇ ವಿಶೇ?ಷವಾಗಿ ‘ಬಿಸು’ವಾಗಿ ಸ್ವೀಕರಿಸಲ್ಪಟ್ಟು ನಡೆಯತ್ತದೆ.

ಆದರೆ ಕೃಷಿಕನ ಲಕ್ಷ್ಯವಿರುವುದು ಮುಂದಿನ ವರ್ಷದ ಬೇಸಾಯದ ಸ್ವರೂಪ ಹೇಗಿರಬೇಕು ಎಂದು ನಿರ್ಧರಿಸುವಲ್ಲಿ. ಅದಕ್ಕಾಗಿ ಆತ ‘ಯುಗಾದಿ ಫಲ’ ಕೇಳುವಲ್ಲಿ ಆಸಕ್ತನಿರುತ್ತಾನೆ. ಈ ವರ್ಷದ ಮಳೆ ಹೇಗೆ ಎಂದು ಪಂಚಾಂಗ ವಿವರಿಸುವ ‘ಯುಗಾದಿ ಫಲ’ವು ಮಳೆಯ ಪ್ರಮಾಣವನ್ನು ತಿಳಿಸುತ್ತದೆ. ಯಾವ ಬಣ್ಣದ ಧಾನ್ಯಗಳ ಬೆಳೆ ಹುಲುಸಾಗಿ ಬೆಳೆದೀತು ಎಂಬ ಭವಿಷ್ಯವನ್ನು ತಿಳಿಯುವ ಕುತೂಹಲವೂ ರೈತನದ್ದಾಗಿರುತ್ತದೆ.

‘ಕಪ್ಪುಗು ಎಡ್ಡೆನಾ, ಬೊಲ್ದುಗು ಎಡ್ಡೆನಾ’ (ಕಪ್ಪು ಬಣ್ಣದ ಧಾನ್ಯ ಅಥವಾ ಅಕ್ಕಿಯಾಗುವ ಭತ್ತದ ತಳಿ ಆದೀತೋ ಬಿಳಿ ಬಣ್ಣದವು ಆದೀತೊ ಅಥವಾ ಯಾವುದು ಒಳ್ಳೆಯದಾದೀತು) ಎಂಬ ನಿರ್ಧಾರಕ್ಕೆ ಬಂದು ‘ಕಜೆಬಿದೆ’ ಅಥವಾ ‘ಮಡಿಬಿದೆ’ಯನ್ನು ‘ಕೈಬಿತ್ತ್’ ಪಾಡುನಿ ಎಂಬ ಯುಗಾದಿಯಂದು ನಡೆಸಲಾಗುವ ಕೃಷಿ ಆರಂಭದ ಪ್ರಕ್ರಿಯೆಯಲ್ಲಿ ಅನುಸರಿಸುವ ಪದ್ಧತಿ ಇತ್ತು ಎಂದು ಹಿರಿಯ ಕೃಷಿಕರು ಇಂದಿಗೂ ನೆನಪಿಸಿಕೊಳ್ಳುತ್ತಾರೆ. ಆದರೆ ಕೃಷಿಯೇ ಅವಗಣಿಸಲ್ಪಡುತ್ತಿರುವ ಈ ಕಾಲಘಟ್ಟದಲ್ಲಿ ಅಲ್ಲೊಬ್ಬ ಇಲ್ಲೊಬ್ಬ ಪೂರ್ಣ ಪ್ರಮಾಣದ ಕೃಷಿಕ ದೊರೆಯಬಹುದು, ಆತನಲ್ಲಿ ಈ ಪರಂಪರೆ ಉಳಿದಿರಬಹುದು.

ಭೂ ಸುಧಾರಣೆಯ ಪೂರ್ವದಲ್ಲಿ ‘ಬೆನ್ನಿಬುಡ್ಪುನಿ ಮತ್ತು ಬೆನ್ನಿಮಲ್ಪುನಿ’ ಎಂಬ ನಿರ್ಣಯಕ್ಕೆ ಯುಗಾದಿ ನಿಗದಿತ ದಿನವಾಗಿತ್ತು. ಏಕೆಂದರೆ ಕೃಷಿ ಆರಂಭವೇ ಇಲ್ಲಿಂದ ಆಗಿರುವುದರಿಂದ ಭೂ ಒಡೆತನ ಉಳುವವನದ್ದಾಗಿರದಿದ್ದುದ ಕಮಲರಿಂದ ಭೂ ಒಡೆಯನಿಗೆ ಮುಂದಿನ ವರ್ಷದ ಅಥವಾ ಹೊಸ ವರ್ಷದಲ್ಲಿ ಕೃಷಿ ಮುಂದುವರಿಸಲು ‘ಬುಳೆಪು ಕಾಣಿಕೆ’ ಸಲ್ಲಿಸಿ ಅಪ್ಪಣೆ ಕೇಳುವ ಕ್ರಮವೂ ಮರೆತುಹೋಗಿದೆ. ಆದರೆ ಊರ ದೇವಾಲಯಕ್ಕೆ ಈ ಕಾಣಿಕೆ ಸಂದಾಯದ ಸಂಪ್ರದಾಯ ಇಂದಿಗೂ ಕೆಲವೆಡೆ ಇದ್ದಂತಿದೆ.

ಮನೆಯ ಹಿರಿಯರನ್ನು ಗೌರವದಿಂದ ಕಾಣುವ ಅಂದರೆ, ಅವರಿಗೆ ನಮಸ್ಕರಿಸುವುದೂ ಸತ್‌ಸಂಪ್ರದಾಯವಾಗಿದೆ. ಮನೆಮಂದಿಗೆ ಹಾಗೂ ಪೂರ್ಣ ಕಾಲಿಕ ಕೆಲಸದವರಿಗೂ ಹೊಸಬಟ್ಟೆ ಕೊಡುವ ಕ್ರಮವು ‘ಇಗಾದಿ’ಯಂದು ನಡೆಯುತ್ತದೆ. ಇಗಾದಿಯ ಅಂಗವಾಗಿ ‘ತಾರಾಯಿ ಕುಟ್ಟುನಿ’ ಒಂದು ಜನಪದ ಆಟವಾಗಿ, ‘ಬಿಸುತ ಕಟ್ಟ’ ಎಂಬ ಕೋಳಿ ಅಂಕವೂ ‘ಬಿಸು’ ಅಂಗವಾಗಿ ನಡೆಯುವುದಿದೆ.
ಹಬ್ಬಗಳ ಆಚರಣೆಯ ಗುರಿ ‘ಆನಂದ’ವನ್ನು ಪಡೆಯುವುದು. ಆದರೆ ಯುಗಾದಿ ಸರಳ, ಭಾವನಾತ್ಮಕ ಆಚರಣೆಯಾಗಿ ನೆರ ವೇರುತ್ತದೆ.

ಇಲ್ಲಿ ಹಳೆಯ ಕಹಿಯನ್ನು ಮರೆಯುವ, ‘ಸಿಹಿ’ಯನ್ನು ಬಯಸುವ ನಿರೀಕ್ಷೆ ಇದೆ. ಕಹಿಯಲ್ಲೂ ಸಿಹಿಯನ್ನು ಆನಂದಿಸುವ ಅಧ್ಯಾತ್ಮವಿದೆ. ಒಟ್ಟಿನಲ್ಲಿ ‘ಕರ್ತವ್ಯ’ಕ್ಕೆ ಎಚ್ಚರಿಕೆ ಇದೆ. ‘ತೊಡಗು’ ಎಂಬ ಸಂದೇಶವಿದೆ. ಅದೇನಿದ್ದರೂ ಕೃಷಿ ಆರಂಭಕ್ಕೆ ಇಗಾದಿ (ಯುಗಾದಿ ಅಥವಾ ಬಿಸು) ಎಂಬ ಅನುಸಂಧಾನವಿದ್ದಾಗ ಮಾತ್ರ.

ಆದರೆ ಈ ಕಾಲದಲ್ಲೂ ‘ಇಗಾದಿ’ ನೆನಪಿದೆ, ಯುಗಾದಿ ಆಚರಿಸಲ್ಪಡುತ್ತಿದೆ, ‘ಬಿಸು ಕಣಿ’ಯ ದರ್ಶನ ಸಂಭ್ರಮದಿಂದ ನಡೆಯುತ್ತಿದೆ ಎನ್ನುವುದು ಮಾತ್ರ ಸಂತಸದ ಸಂಗತಿ. ವೈವಿಧ್ಯಮಯ ಕಲ್ಪನೆಯೊಂದಿಗೆ ಸೂಕ್ತ ಅನುಸಂಧಾನ ವಿಧಾನದಿಂದ ‘ಸೌರಯುಗಾದಿ’ ನೆರವೇರುವುದು. ಇದರ ಹಿನ್ನೆಲೆ ಕೃಷಿ ಆಧಾರಿತ ಬದುಕಿನ ನೋಟ.

*ಹಳೆಯ ಕಹಿಯನ್ನು ಮರೆತು ಮುಂದೆ ಅಡಿ ಇಡುವ ಸಂಭ್ರಮದ ನಡುವೆಯೂ ‘ಬಾಗುವ’ (ನಮಸ್ಕರಿಸುವ) ಸಂದೇಶವಿದೆ.

* ‘ಕಣಿ’ ಎಂಬುದು ಹಣ್ಣು, ಕಾಯಿ, ಅಕ್ಕಿ, ಕನ್ನಡಿ, ಚಿನ್ನಾಭರಣ ಇತ್ಯಾದಿ ಮಂಗಳ ದ್ರವ್ಯಗಳನ್ನು ದೇವರ ಮುಂದೆ ಜೋಡಿಸಿಟ್ಟು ಯುಗಾದಿಯಂದು ಬೆಳಗ್ಗೆ ಎದ್ದೊಡನೆ ನೋಡುವ ಮಂಗಲದ್ರವ್ಯ ದರ್ಶನ ಪ್ರಕ್ರಿಯೆ. * ‘ಕಣಿ’ಯಿಂದ ಶುಭಫಲ ನಿರೀಕ್ಷೆ ಇದೆ.

* ‘ವಿಷು’ ಎಂಬುದು ‘ಸೌರಯುಗಾದಿ’. ಇದು ತುಳುವರಲ್ಲಿ ‘ಬಿಸು’ ಆಯಿತು. ಈ ಹೆಸರಿನಲ್ಲಿ ವಿವಿಧ ಸಾಮೂಹಿಕ ಆಚರಣೆಗಳು ಇತ್ತೀಚೆಗೆ ನಡೆಯುತ್ತಿವೆ. * ಉತ್ತರದಿಂದ ದಕ್ಷಿಣ ತುಳುನಾಡಿನತ್ತ ಗಮನಿಸಿದರೆ ನಾಲ್ಕೈದು ವಿಧದ ಸೌರ ಯುಗಾದಿಯ ಆಚರಣಾ ವೈವಿಧ್ತವಿದೆ. * “ನಾಲೆರು ಮಾದಾವುನಿ, ಕೈಬಿತ್ತ್ ಪಾಡುನಿ” ಯುಗಾದಿಯ ಪರ್ವದಲ್ಲಿ ನಡೆಯುವ ಕೃಷಿ ಆರಂಭದ ಕಾರ್ಯ. * ಸೌರಯುಗಾದಿಯಲ್ಲಿ ಜಾನಪದ – ಶಿಷ್ಟ ಸಂಸ್ಕೃತಿಗಳ ಸುಗಮ ಸಮಾಗಮದ ಆಚರಣಾ ವಿಧಾನವಿದೆ.

* ‘ಕಣಿ’ಯೊಂದಿಗೆ ಅಟ್ಟದ ಮೇಲಿನಲ್ಲಿರುವ ‘ತಾಳೆಗರಿ’ಯ ಗ್ರಂಥಗಳನ್ನು ಸ್ವಚ್ಛಗೊಳಿಸಿ ಇಡುವ ಕ್ರಮವಿದೆ. ಇತ್ತೀಚೆಗೆ ಪಂಚಾಂಗ(ಹೊಸತು)ವನ್ನು ಇಡುವುದು ರೂಢಿಯಾಗಿದೆ. * ಯುಗಾದಿ ಫಲ : ಸೇಮೆಯ ದೇವಾಲಯಗಳಲ್ಲಿ, ಗ್ರಾಮ ದೇವಸ್ಥಾನಗಳಲ್ಲಿ,ಐಗಳ ಮಠದಲ್ಲಿ, ಗೌರವಾನ್ವಿತರ ಮನೆಗಳಲ್ಲಿ “ಯುಗಾದಿಫಲ” ಓದುವ ಕ್ರಮವಿತ್ತು.ಅಲ್ಲಿಗೆ ಹಿರಿಯ ರೈತರು ತೆರಳಿ ತಮಗೆ ಬೇಕಾದ ಮಾಹಿತಿಗಳನ್ನು‌ಪಡೆಯುತ್ತಿದ್ದರು.
‌ • ಕೆ.ಎಲ್.ಕುಂಡಂತಾಯ

 
 
 
 
 
 
 
 
 
 
 

Leave a Reply