Janardhan Kodavoor/ Team KaravaliXpress
28.6 C
Udupi
Thursday, August 11, 2022
Sathyanatha Stores Brahmavara

ನವರಾತ್ರಿ-೪ ~ ಎಲ್ಲೂರಿನ ‘ಅಮ್ನೂರು’~ಕೆ.ಎಲ್.ಕುಂಡಂತಾಯ

ಪಾರಂಪರಿಕ ಸಂಪ್ರದಾಯ, ಶಿಷ್ಟಾಚಾರ, ಒಡಂಬಡಿಕೆ, ಒಪ್ಪಿಗೆಗಳೊಂದಿಗೆ ಕರಾವಳಿಯಲ್ಲಿ ಅಭಿವೃದ್ಧಿಗೊಂಡ ದೇವಾಲಯ ಸಂಸ್ಕೃತಿಯ ಮಾದರಿಯಾಗಿ ಪ್ರಸಿದ್ಧಿಯನ್ನು ಪಡೆದ ದೇವಾಲಯಗಳಲ್ಲಿ ಎಲ್ಲೂರಿನ ಮಹತೋಭಾರ ಶ್ರೀ ವಿಶ್ವೇಶ್ವರ ದೇವ ಸ್ಥಾನ ಒಂದು. ಇಲ್ಲಿಯ ಉಪಸ್ಥಾನ ಸನ್ನಿಧಿಯಾಗಿ “ಅಮ್ನೂರು” ಗಮನ ಸೆಳೆಯುತ್ತದೆ. ಒಂದಷ್ಟು ವಿಶೇಷತೆಗಳನ್ನು ಹೊಂದಿ ಜಾಗ್ರತ ಸನ್ನಿಧಾನವಾಗಿದೆ.

ಎಲ್ಲೂರು ಕುಂದ ಹೆಗ್ಗಡೆ ಅರಸರ ಪರಂಪರೆಯ ಅರಸರೊಬ್ಬರು ಕಾಶಿಗೆ ಹೋಗಿ ವಿಶ್ವೇಶ್ವರ ದೇವರನ್ನು ಒಲಿಸಿಕೊಂಡು ಬರುತ್ತಾರೆ , ಅಣಬೆ ಹುಡುಕುತ್ತಿದ್ದ ಬುಡಕಟ್ಟು ವರ್ಗದ ವೃದ್ಧೆಗೆ ಕತ್ತಿಯನ್ನು ನೆಲಕ್ಕೆ ಘಾತಿಸಿದಾಗ ರಕ್ತ ಚಿಮ್ಮಿ ದೇವರು ಉದ್ಭವಿಸುತ್ತಾರೆ . ಮಣ್ಣಿನ ಸತ್ಯವಾಗಿ ಆವಿರ್ಭವಿಸಿದ ದೇವರು ಮಣ್ಣಿನ ಮಗಳಿಂದಲೇ “ಎಲ್ಲು” ಎಂದು ಹೆಸರಿಸಲ್ಪಟ್ಟು “ಮಣ್ಣಿನ ಒಡೆಯನಿಗೆ ಪರಿಚಯಿಸುವ ಚಿಂತನೆ ರೂಪಕದಂತೆ ನಡೆಯುತ್ತದೆ. ರಕ್ತದ ಹರಿಯುವಿಕೆಯನ್ನು ಸೀಯಾಳ ಹೊಯ್ಯುವ ಮೂಲಕ ನಿಯಂತ್ರಸಲಾಗುತ್ತದೆ.

ಅಂದಿನಿಂದಲೇ “ಎಲ್ಲೂರಿನ ಎಳೆದೇರ ಎಳನೀರು ಪ್ರಿಯನು” ತೌಳವ ಇತಿಹಾಸದ ಪುಟಗಳಲ್ಲಿ, ಪ್ರಾಚೀನ ದಾಖಲೆ ಗಳಲ್ಲಿ ಉಲ್ಲೇಖಿಸಲ್ಪಟ್ಟು, ಹಲವು ಧಾರ್ಮಿಕ ವಿಧಿ ವಿಧಾನಗಳನ್ನು ಮೂಲ ಸ್ವರೂಪದಲ್ಲಿ ಉಳಿಸಿಕೊಂಡು, ವೈಶಿಷ್ಟ್ಯ ಪೂರ್ಣ ಕಟ್ಟುಕಟ್ಟಳೆಗಳನ್ನು ಆಚರಿಸಿಕೊಂಡು ಬರುತ್ತಿರುವ ಉಭಯ ಜಿಲ್ಲೆಗಳ ಬೆರಳೆಣಿಕೆಯ ದೇವಾಲಯಗಳಲ್ಲಿ ಎಲ್ಲೂರು ಸೀಮೆಯ ವಿಶ್ವೇಶ್ವರ ದೇವಸ್ಥಾನ ಒಂದು. ಅರಸರ ಪ್ರತಿಷ್ಠೆಯ ಸಂಕೇತವಾದ ದೇವಾಲಯದಲ್ಲಿ ಇರುವ ಸಂಪ್ರದಾಯ ಗಳನ್ನು ಉಳಿಸಿಕೊಂಡರೆ ಸಾಕು. ಇನ್ನಾವುದೆ ಮಂದಿರ, ಗುಡಿ, ದೇವಾಲಯಗಳನ್ನು ಅನುಕರಿಸಬೇಕಾದ ಅಗತ್ಯವಿಲ್ಲ ಎಲ್ಲವೂ ಇಲ್ಲಿದೆ. ತಿಳಿಯಬೇಕು, ಅದರಂತೆ ನಡೆದುಕೊಳ್ಳಬೇಕು.

ಮೂಲಸ್ಥಾನ ಸ್ವಯಂಭೂ ಸನ್ನಿಧಾನವು “ಉಲ್ಲಾಯ” ಎಂದು ಜನಜನಿತವಾಗಿದ್ದರೆ ಉಪಸ್ಥಾನಗಳಲ್ಲಿ ಗಣಪತಿ ಒಂದು ,ಇನ್ನೊಂದು “ಅಮ್ನೂರು”(ಅನ್ನಪೂರ್ಣೇಶ್ವರಿ) ಎಂದೇ ಪ್ರಸಿದ್ಧವಾಗಿದೆ. “ಅಮ್ನೋರು”(ಅಮ್ಮನವರು) ಎಂಬುದೇ “ಅಮ್ನೂರು” ಎಂದಾಗಿರಬಹುದು. ಯಾವಾಗಲೂ ಭಾಷೆ ಮತ್ತು ಉಚ್ಚರಣೆಗಳು ಸೌಲಭ್ಯಾಕಾಂಕ್ಷಿಯಾಗಿರುತ್ತವೆ ತಾನೆ?ಕೈಯಲ್ಲಿ “ಅಕ್ಷಯ ಪಾತ್ರೆ”ಯನ್ನು ಧರಿಸಿ‌ ಪರ್ಯಂಕಾಸನದಲ್ಲಿ ಕುಳಿತಂತೆ ಇರುವ ಅಮ್ನೂರು ಹದಿನೆಂಟು ಇಂಚು ಎತ್ತರದ ಪ್ರತಿಮೆ. ಕೊಳಗದ ಆಕಾರದ ಕಿರೀಟ, ಅಲಂಕಾರಿಕ ಪತ್ರ ಕುಂಡಲಗಳು, ಪ್ರಭಾವಳಿ ಸಹಿತವಾಗಿರುವ ಮೂರ್ತಿ ಹದಿನಾ ರನೇ ಶತಮಾನದ್ದು ಎಂದು ಡಾ.ಗುರುರಾಜ ಭಟ್ಟರ ಅಭಿಪ್ರಾಯ.ನಮ್ಮ ಉಭಯ ಜಿಲ್ಲೆಗಳಲ್ಲಿ ಅನ್ನಪೂರ್ಣೇಶ್ವರಿ ಪ್ರತಿಮೆ ಗಳು ವಿರಳ ಎಂದು ಉಲ್ಲೇಖಿಸಿದ್ದಾರೆ‌.

ಅಮ್ನೂರು – ಗಣಪತಿ ಸಾನ್ನಿಧ್ಯಗಳು: ದೇವಾಲಯ ವಾಸ್ತುವಿನ ಒಂದು ಕಲ್ಪನೆಯಂತೆ ಮೂಲಸ್ಥಾನ ಸನ್ನಿಧಾನದಿಂದ ನೈಋತ್ಯದಲ್ಲಿ ಇರಬೇಕಾದ ಗಣಪತಿ, ವಾಯುವ್ಯದಲ್ಲಿ ಇರಬೇಕಾದ ಅಮ್ನೂರು ಅಥವಾ ಅನ್ನಪೂರ್ಣೇಶ್ವರಿ ಸನ್ನಿಧಾನಗಳು‌ ಎಲ್ಲೂರಿನಲ್ಲಿ ದೇವಾಲಯದ ಅಗ್ರಸಭೆಯಲ್ಲಿ (ಅಂಬೆಲ) ಸ್ಥಾನಪಡೆದಿವೆ. ದೇವಾಲಯ ಪ್ರವೇಶಿಸುವಾಗ ವಿಶ್ವೇಶ್ವರ ದೇವ ರನ್ನು ಕಂಡು ಕೈಮುಗಿದು ಎಡ , ಬಲ ನೋಡಿ ಗಣಪತಿ ಮತ್ತು ಅಮ್ನೂರು ಸಂಕಲ್ಪಗಳಿಗೆ ಕೈಮುಗಿದು ಒಳಾಂಗಣಕ್ಕೆ ಇಳಿದು ಮುಂದೆ ಸಾಗುತ್ತೇವೆ.

ಅಂಬಲದ ‘ನಡೆ’ಯನ್ನು ಕ್ರಮಿಸಲು ಎಷ್ಟು ಸಮಯಬೇಕು ,ಕ್ಷಣ ಸಾಕು ತಾನೆ ? ಎಲ್ಲೂರು ದೇವಳ ಪ್ರವೇಶಿಸುವ ಭಕ್ತರಿಗೆ ಈ ಅಪೂರ್ವ ಅನುಭವ ಆಗಿದೆ, ಆಗುತ್ತಿದೆ, ಮುಂದೆಯೂ ಆಗುತ್ತದೆ. ಈ ವಾಸ್ತು ಸಂಯೋಜನೆಗೆ ದೇವಳದಲ್ಲಿ ರೂಢಿ ಯಲ್ಲಿದ್ದ ಪುರಾತನ ಅನುಸಂಧಾನವೊಂದು ಆಧಾರ. ವಿಶ್ವೇಶ್ವರ ದೇವರ ಮೂಲಸ್ಥಾನ ಲಿಂಗವು ಸ್ವಯಂಭೂ ಆಗಿದೆ “ಇದು ನೈಸರ್ಗಿಕ, ರಚನೆಮಾಡಿದುದು ಅಲ್ಲ, ಸ್ಥಾಪಿಸಿದುದು ಅಲ್ಲ, ಇದಕ್ಕೆ ನಿಯತ ರೂಪಗಳಿಲ್ಲ, ಬ್ರಹ್ಮಸೂತ್ರ ಹೊಂದಿ ರುವುದಿಲ್ಲ, ಇವು ಪುರಾತನ ಲಿಂಗಗಳೆಂದು ಹೆಚ್ಚು ನಂಬಿಕೆಗೆ ಕಾರಣವಾಗಿದೆ”. ಇದು ಸ್ವಯಂಭೂ ಅಥವಾ ಉದ್ಭವ ಲಿಂಗಗಳಿಗೆ ಇತಿಹಾಸ ತಜ್ಞ ಡಾ.ಗುರುರಾಜ ಭಟ್ಟರ ನಿರೂಪಣೆ.

ಅನಿಯಮಿತ ಆಕಾರದ ಲಿಂಗದಲ್ಲಿ ಸ್ತ್ರೀ – ಪುರುಷ ವಿಭಾಗವನ್ನು ಗುರುತಿಸಿರುವ ವೈದಿಕ ವಿದ್ವಾಂಸ, ದೇವಳದ ಅರ್ಚಕರಾಗಿದ್ದ ದಿ.ಎಲ್ಲೂರು ಕೇಶವ ಭಟ್ಟರು ಮೂಲ ಲಿಂಗದಲ್ಲಿ ಮೂರು ಸನ್ನಿಧಾನಗಳಿವೆ ಎಂದು ಹೇಳಿದ್ದು, ಎಡದಲ್ಲಿ ಪಾರ್ವತಿ ಹಾಗೂ ಬಲ ತೊಡೆಯಲ್ಲಿ ಗಣಪತಿಯನ್ನು ಕುಳ್ಳಿರಿಸಿಕೊಂಡು ಸಾನ್ನಿಧ್ಯವಹಿಸಿರುವ ವಿಶ್ವೇಶ್ವರ ದೇವರ ಸ್ವರೂಪ ವನ್ನು ವಿವರಿಸಿದ್ದರು ( ತಾನು ಸ್ವತಃ ಅಂಬೆಲದಲ್ಲಿ ಕುಳಿತು ಅಭಿನಯಿಸಿ ಸಾನ್ನಿಧ್ಯಗಳ ಸ್ಥಾನಗಳನ್ನು ಪರಿಚಯಿಸಿದ್ದರು ಕೇಶವಭಟ್ಟರು) . ಈ ಚಿಂತನೆಯ ಅಭಿವ್ಯಕ್ತಿಯಾಗಿ ಈ ವಾಸ್ತು ಇಲ್ಲಿ ನೇರ್ಪುಗೊಂಡಿದೆ. ಈ ನಿರೂಪಣೆಗೆ ಆ ಕಾಲದಲ್ಲಿ ಪ್ರಸಿದ್ಧರಾಗಿದ್ದ ಸೀಮೆಯ ತಂತ್ರಾಗಮ ತಜ್ಞರು ಸಹಮತವನ್ನು ವ್ಯಕ್ತಪಡಿಸಿದ್ದರು.

‌ ಕಾಶಿ ಕ್ಷೇತ್ರದಲ್ಲಿ ವಿಶ್ವನಾಥನ ಮಂದಿರದ ಸಮೀಪವೇ ಅನ್ನಪೂರ್ಣೆಯ ದೇವಾಲಯವಿದೆ. ಈ ಅನ್ನಪೂರ್ಣೆ ಶಿವನ ಪತ್ನಿ ಪಾರ್ವತಿ. ಅಂತೆಯೇ ಕಾಶಿಯಿಂದ ಬಂದ ವಿಶ್ವನಾಥ(ವಿಶ್ವೇಶ್ವರ)ನ ಸನ್ನಿಧಿಯಲ್ಲಿ ಅನ್ನಪೂರ್ಣೆಗೆ (ಅಮ್ನೂರು) ಈ ಕ್ರಮದ ಸ್ಥಾನ ಕಲ್ಪನೆ. ಪೂರ್ವಾಭಿಮುಖವಾಗಿರುವ ದೇವರ ಎಡ ಬದಿಯಲ್ಲಿ ‘ಅಮ್ನೂರು’ ಸನ್ನಿಧಾನವನ್ನು ಕಾಣುತ್ತೇವೆ .ಗಣಪತಿಗೆ ಪಾಣಿಪೀಠದಲ್ಲೆ ಅವಕಾಶವಿರುವುದನ್ನೂ ಗಮನಿಸಿದರೆ ನಮ್ಮ ಪೂರ್ವಸೂರಿಗಳ ಕಲ್ಪನೆ  ಅನುಸಂಧಾನಕ್ಕೆ ತಲೆದೂಗಲೇ ಬೇಕು .

“ಅಮ್ನೂರು” : ಶಯನೋತ್ಸವ, ನವರಾತ್ರಿ ಪೂಜೆಗಳು:ನಿತ್ಯ ಪೂಜೆ , ದೀವಟಿಗೆ ಸೇವೆ , ರಂಗ ಪೂಜೆಗಳಾದಾಗ ಉಪಸ್ಥಾನ ಸನ್ನಿಧಾನಗಳಿಗಿರುವ ಪ್ರಾಶಸ್ತ್ಯದಂತೆ ಪೂಜೆ. ವಾರ್ಷಿಕ ಮಹೋತ್ಸವ ಕಾಲದಲ್ಲಿ ರಾತ್ರಿ ರಥೋತ್ಸವದ ಬಳಿಕ ದೇವರಿಗೆ ಶ್ರೀಭೂತಬಲಿ ನಡೆದು ಶಯನೋತ್ಸವವು ಮೂಲ ಸನ್ನಿಧಾನದಲ್ಲಿ ನಿದ್ರಾಕಲಶದಲ್ಲಿ ಪಾರ್ವತಿಯನ್ನು ಸಂಕಲ್ಪಿಸಿ ವಿಶ್ವೇಶ್ವರ ದೇವರಿಗೆ “ಪಾರ್ವತಿ ಪರಮೇಶ್ವರರಿಗೆ ಸುಖ ನಿದ್ದೆಯನ್ನು ಹಾರೈಸಿ ಗರ್ಭಗುಡಿಯ ಬಾಗಿಲನ್ನು ಹಾಕುವುದು ತಂತ್ರಾಗಮ ವಿಧಿ. ಎಲ್ಲೂರಿನಲ್ಲಿ ಪ್ರತ್ಯೇಕ ಅಮ್ನೂರು ( ಅನ್ನಪೂರ್ಣೇಶ್ವರಿ) ಸನ್ನಿಧಾನ  ಇರುವುದರಿಂದ, ಅಟ್ಟೆ ಪ್ರಭಾ ವಳಿ ಕಟ್ಟಿದ ಬಲಿದೇವರನ್ನು ಅಮ್ನೂರು ಸನ್ನಿಧಾನದಲ್ಲಿ ಮುಖಾಮುಖಿಯಾಗಿರಿಸಿ ಪಟ್ಟೆಯನ್ನು ಹೊದಿಸಿ ಸಾಂಕೇತಿಕ ಶಯನೋತ್ಸವವನ್ನು ನೆರವೇರಿಸುವ ಅಪೂರ್ವ ಕ್ರಮಕ್ಕೆ ಎಲ್ಲೂರಿನಲ್ಲಿ ಈ ಅವಕಾಶವಿದೆ .

ನವರಾತ್ರಿ ಕಾಲದಲ್ಲಿ ಅಮ್ನೂರಿಗೆ : ಪ್ರತಿದಿನ ನವರಾತ್ರಿ ಪೂಜೆ, ಪಂಚಕಜ್ಜಾಯದಲ್ಲಿ ರಂಗಪೂಜೆ. ಸಪ್ತಶತೀ ಪಾರಾಯಣ ಗಾರಿಗೆ (ದೋಸೆಯಂತಹ ಭಕ್ಷ್ಯ) ಸಹಿತ ಪಂಚಕಜ್ಜಾಯ ಸಮರ್ಪಣೆ ನೆರವೇರುತ್ತದೆ. ಲಲಿತಾ ಪಂಚಮಿಯಂದು: ಚಂಡಿ ಕಾಯಾಗ’ ನಡೆಯುತ್ತದೆ. ಅನ್ನಸಂತರ್ಪಣೆಯೂ ಇರುತ್ತದೆ .ಆದರೆ ಈ ವರ್ಷ ಕೊರೊನ ಕಾರಣವಾಗಿ ಸರಕಾರದ ಸೂಚನೆಯಂತೆ ನೆರವೇರುತ್ತದೆ. ದೇವಾಲಯದಲ್ಲಿ ನಡೆಯಬೇಕಾದ ನವರಾತ್ರಿ ಕಾಲದ ಪುಸ್ತಕ ಪೂಜೆಯು ಅಮ್ನೂರು ಸನ್ನಿಧಿಯಲ್ಲೆ ನಡೆಯುತ್ತದೆ. ನವರಾತ್ರಿ ಮಹಾನವಮಿಯಂದು ಮಧ್ಯಾಹ್ನದ ಪೂಜೆಗೆ ಒಂಬತ್ತು ಬಗೆಯ ಭಕ್ಷ್ಯ , ಮಧುರ ಪಾಯಸ ಸಮರ್ಪಣೆ ಅಮ್ನೂರಿಗೆ ವಿಶೇಷ ಪ್ರಾಶಸ್ತ್ಯದೊಂದಿಗೆ ನಡೆಯುತ್ತದೆ. ಈ ಪ್ರಯುಕ್ತ ವಿಶ್ವೇಶ್ವರ ದೇವರಿಗೆ ರಾತ್ರಿ ಸಣ್ಣರಂಗಪೂಜೆ ನೆರವೇರುತ್ತದೆ.

‌‌‌‌‌‌ಅಮ್ನೂರು ಸನ್ನಿಧಿಯಲ್ಲಿ ದುರ್ಗಾನಮಸ್ಕಾರ ಸೇವೆಯೂ ನೆರವೇರುತ್ತದೆ .”ಸ್ವಯಂವರ ಪಾರ್ವತಿ” ಪೂಜೆಯೂ ಅಮ್ನೂರು ಸನ್ನಿಧಿಯಲ್ಲಿ ನಡೆಯುತ್ತಿತ್ತು. ಇಷ್ಟಾರ್ಥ ‘ಸಿದ್ಧಿದಾಯಕಿ ಅಮ್ನೂರು’ ಎಂದು ನಂಬಲಾಗಿತ್ತು. ಉಡುಪಿ ಜಿಲ್ಲೆ, ಕಾಪು ತಾಲೂಕು ಎಲ್ಲೂರು ಗ್ರಾಮದಲ್ಲಿದೆ ವಿಶ್ವೇಶ್ವರ ದೇವಾಲಯ. ಉಡುಪಿ – ಮಂಗಳೂರು ನಡುವೆ ರಾಷ್ಟ್ರೀಯ ಹೆದ್ದಾರಿಯಲ್ಲಿ‌ ಉಚ್ಚಿಲದಿಂದ ಐದು ಕಿ.ಮೀ. ಪೂರ್ವದಲ್ಲಿದೆ ಎಲ್ಲೂರು. ಪಡುಬಿದ್ರಿ – ಕಾರ್ಕಳ ಹೆದ್ದಾರಿಯಲ್ಲಿ ನಂದಿಕೂರಿನಲ್ಲಿ ಉತ್ತರಕ್ಕೆ ತಿರುಗಿ ಮುದರಂಗಡಿಗಾಗಿ ಎಲ್ಲೂರು ತಲುಪಬಹುದು. ಹಾಗೆಯೆ ಶಿರ್ವದಿಂದಲೂ ಮುದರಂಗಡಿಗಾಗಿ ಎಲ್ಲೂರಿಗೆ ಬರಬಹುದು.(ದೂ : 0820 2550365).

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!