ಕುಂಬು ಮಂಡೆ (ಹಾಳು ತಲೆ)~ ವಾಸಂತಿ ಅಂಬಲಪಾಡಿ

ದೊಡ್ಡಣಗುಡ್ಡೆ ಯಿಂದ ನಮ್ಮ ಕಾಲೇಜಿಗೆ ಹೋಗಬೇಕಾದರೆ ಕಲ್ಸಂಕ ದಾಟಿಯೇ ಹೋಗಬೇಕು. ಅಂಬಾಗಿಲು ಪೆರಂಪಳ್ಳಿ ಕಡೆಯಿಂದ ಉಡುಪಿಗೆ ಹೋಗುವ ವಾಹನಗಳು ಒಂದು ಬದಿಯಲ್ಲಿದ್ದರೆ ಇನ್ನೊಂದು ಬದಿಯಲ್ಲಿ ಸಿಟಿ ಬಸ್ ಸ್ಟ್ಯಾಂಡ್ ಕಡೆಯುಂದ ಅಂಬಾಗಿಲು ದೊಡ್ಡಣಗುಡ್ಡೆ ಪೆರಂಪಳ್ಳಿಗೆ ಹೋಗುವ ವಾಹನಗಳು, ಮಣಿಪಾಲ ಕಡೆಯಿಂದ ಉಡುಪಿಗೆ ಬರುವ ವಾಹನಗಳು ಇನ್ನೊಂದು ರಸ್ತೆಯಲ್ಲಿ, ಸಿಟಿ ಬಸ್ ಸ್ಟ್ಯಾಂಡ್ ಕಡೆಯಿಂದ ಮಣಿಪಾಲ ಕಡೆಗೆ ಹೋಗುವ ವಾಹನಗಳು ಇನ್ನೊಂದು ರಸ್ತೆಯಲ್ಲಿ.

ಕೃಷ್ಣಮಠ ರಾಜಾಂಗಣ ಕಡೆಯಿಂದ ಬರುವ ಮತ್ತು ಹೋಗುವ ವಾಹನಗಳು ಮತ್ತೊಂದು ರಸ್ತೆಯಲ್ಲಿ. ಹೀಗೆ ಕಲ್ಸಂಕ ಜಂಕ್ಷನ್ ನಲ್ಲಿ ಒಟ್ಟಾಗುವ ವಾಹನ ಸವಾರರ ಫಜೀತಿ ಹೇಳತೀರದು.ಅದಕ್ಕಿಂತಲೂ ಅಲ್ಲಿ ಟ್ರಾಫಿಕ್ ಪೋಲಿಸ್ ಆಗಿ ಕಾರ್ಯ ನಿರ್ವಹಿಸುವವರ ಅವಸ್ಥೆ ಹೇಳಿ ಪ್ರಯೋಜನವಿಲ್ಲ. ಯಾವ ಜನ್ಮದಲ್ಲಿ ಏನು ಪಾಪ ಮಾಡಿದ್ದರೋ ಈ ಜನ್ಮದಲ್ಲಿ ಬಿಸಿಲು ಚಳಿಗಾಳಿ ಮಳೆಯಿರಲಿ ಅಳುಕದೆ ನಿಂತೇ ಇರುವೆ ಅರೆ ಹೊಯ್ ಅರೆ ಹೊಯ್ ಎಂಬ ಸಿನಿಮಾ ಹಾಡು ಅವರನ್ನು ನೊಇಡುವಾಗೆಲ್ಲಾ ನೆನಪಾಗುತ್ತದೆ ಪಾಪ.

ಎಂದಿನಂತೆ ಇಂದೂ ಕಾಲೇಜಿಗೆ ಹೊರಟಿದ್ದೆ. ಕಾಲೇಜಿನಲ್ಲಿ ಸೆಮಿನಾರ್ ಇದ್ದುದರಿಂದ ಒಂಭತ್ತು ಕಾಲಿಗೆ ಕಾರ್ಯಕ್ರಮ ಶುರುವಾಗುವುದರಲ್ಲಿತ್ತು. ನಮ್ಮದು ಭಗಿನಿಯರ ಆಡಳಿತಕ್ಕೊಳಪಟ್ಟ ವಿದ್ಯಾ ಸಂಸ್ಥೆ ಆಗಿರುವುದರಿಂದ ಸಮಯಕ್ಕೆ ಮಹತ್ವ ತುಂಬಾ ಇತ್ತು. ಆ ಕೆಲಸ ಈ ಕೆಲಸ ಎಂದು ಗಂಟೆ ನೋಡುತ್ತೇನೆ. ಒಂಭತ್ತು ಗಂಟೆ ಆಗಿ ಐದು ನಿಮಿಷ ಕಳೆದಿದೆ. ಹತ್ತು ನಿಮಿಷದೊಳಗೆ ಕಾಲೇಜು ಮುಟ್ಟಬೇಕು.

ಸ್ಕೂಟಿಯನ್ನು ಎಂದಿಗಿಂತ ಸ್ವಲ್ಪ ವೇಗವಾಗಿ ಬಿಟ್ಟೆ ಅನ್ನಿ. ಎಷ್ಟೇ ವೇಗವಾಗಿ ಹೋದರೂ ಕಲ್ಸಂಕ ತಲುಪುವಾಗ ವಾಹನ ದಟ್ಟಣೆ ಎದುರಾಯಿತು. ವಾಹನಗಳನ್ನು ನೋಡಿದರೆ ಐದು ನಿಮಿಷ ಚಲಿಸುವಂತಿಲ್ಲ. ನನ್ನ ಮುಂದೆ ಟೆಂಪೋ. ಹಿಂದೆ ಕಾರು ಹಾರ್ನ್ ಮಾಡುತ್ತಿದೆ.ನನ್ನ ಎಡಗಡೆ ಕಾರು, ಬೈಕು, ರಿಕ್ಷಾ, ಸೈಕಲ್, ಬಸ್, ಶಾಲಾ, ಕಾಲೇಜಿಗೆ ಹೋಗುವ ಮಕ್ಕಳನ್ನು ಬಿಡಲು ಬಂದ ಪೋಷಕರು, ಆಫೀಸ್ ಕೆಲಸಕ್ಕೆ ಹೋಗುವವರು ಹೀಗೆ. ತರಹೇ ವಾರಿ ಜನಗಳು. ಒಟ್ಟಾರೆ ಹೇಳಬೇಕೆಂದರೆ ಎಲ್ಲರ ಮುಖದಲ್ಲೂ ಟೆನ್ಷನ್ ಟೆನ್ಷನ್. ಹಾಗೇ ಕಣ್ಣಾಡಿಸಿದೆ.

ಸಮಯ ವ್ಯರ್ಥ ಮಾಡದೆ ಎಲ್ಲಾ ಕಡೆಗೂ ಗಮನಿಸುವ ಗುಣ ಮೊದಲಿನಿಂದಲೂ ಇದ್ದುದರಿಂದ ಎಡಗಡೆಯ ಕಾರಿನ ಮುಂದೆ ಇರುವ ಶಾಲಾ ಹುಡುಗಿಯೊಬ್ಬಳು ತಾಯಿಯನ್ನು ತಬ್ಬಿಕೊಂಡು ಸ್ಕೂಟಿಯಲ್ಲಿ ಕುಳಿತಿದ್ದಳು. ಬಹುಶಃ ಮೂರನೆ ತರಗತಿ ಇರಬಹುದು. ಅವಳೂ ಆ ಕಡೆ ಈ ಕಡೆ ನೋಡುತ್ತಾ ಇದ್ದವಳು ನನ್ನನ್ನೊಮ್ಮೆ ನೋಡಿದಳು. ನಾನೂ ಅವಳನ್ನು ನೋಡಿ ಮೆಲ್ಲನೆ ಹುಬ್ಬನ್ನು ಏರಿಸಿದಂತೆ ಮಾಡಿ ಕಣ್ಣು ಹೊಡೆದೆ.

ಆಕೆಯೂ ಅಪರಿಚಿತಳಾದರೂ ಪರಿಚಿತಳಂತೆ. ನಕ್ಕಳು.. ಹಾಗೆಯೇ ಒಮ್ಮೆ ಮುಂದೆ ನೋಡಿ ಪುನಃ ನನ್ನೆಡೆಗೆ ತಿರುಗಿ ಹುಬ್ಬೇರಿಸಿ ಕಣ್ಣು ಹೊಡೆದುದನ್ನು ಕಂಡು ನಗುಬಂತು. ಅಷ್ಟು ಹೊತ್ತಿಗೆ ನಮ್ಮ ರಸ್ತೆಯ ವಾಹನಗಳಿಗೆ ಹೋಗಲು ಒಂದು ಕೈಯನ್ನು ಮೇಲೆ. ಇನ್ನೊಂದು ಕೈಯನ್ನು ಎದುರು ಹೋಗಲು ಸನ್ನೆ ಮಾಡುವಂತೆ ಟ್ರಾಫಿಕ್ ಪೋಲಿಸ್ ಅನುವು ಮಾಡಿಕೊಟ್ಟಿದ್ದರು. ಅವಸರದಲ್ಲಿ ಹೋಗುವವರ ನಡುವೆ ನನಗೂ ಹೋಗಲಿಕ್ಕಿದ್ದುದರಿಂದ ಆ ಮುಗ್ಧ ನಗೆ ನಕ್ಕ ಮಗು ಎಲ್ಲಿ ಹೋದಳು ಎಂದು ಗಮನಿಸಲೂ ಇಲ್ಲ. ಅಂತೂ ಒಂಭತ್ತು ಕಾಲಿಗೆ ಕಾಲೇಜು ಮುಟ್ಟಿದೆ ಅನ್ನಿ.

ನಾನೀಗ ಈ ವಿಷಯ ನಿಮ್ಮೆದುರು ಯಾಕೆ ಪ್ರಸ್ತಾಪಿಸಿದೆನೆಂದರೆ ಸಂದರ್ಭ ಒಂದೇ ಆದರೂ ಭಾವನೆಗಳು ಬೇರೆ ಎಂಬಂತೆ ಅಂದು ಸಾಯಂಕಾಲ ಐದೂವರೆಗೆ ಸಾಹಿತ್ಯದ ಕಾರ್ಯಕ್ರಮಕ್ಕೆ ವೀಕ್ಷಕಳಾಗಿ ಹೋಗಬೇಕಾಗಿದ್ದು ದರಿಂದ ಹೊರಟಿದ್ದೆ. ಎಂದಿನಂತೆ ಟ್ರಾಫಿಕ್ ಜಾಮ್… ವಾಹನ ದಟ್ಟಣೆ. ವಾಹನಗಳ ನಡುವೆ ನಾನೂ ಸ್ಕೂಟಿಯನ್ನು ನಿಲ್ಲಿಸಿದ್ದೆ. ಪುರುಷ ಸವಾರರ ಸಂಖ್ಯೆ ಸ್ವಲ್ಪ ಅಧಿಕ ವಾಗಿತ್ತು. ಜತೆಗೆ ಹಾರ್ನ್ ಹಾಕುವ ಶಬ್ದವೂ ಹೆಚ್ಚಾಗಿತ್ತು. ನನ್ನ ಬಲಗಡೆ ನಿಂತ ವಾಹನ ಸವಾರ ಕುಡಿದಿದ್ದನೋ ಅಥವಾ ಬಿ.ಪಿ ಖಾಯಿಲೆ ಇತ್ತೋ ಗಟ್ಟಿಯಾಗಿ ಹಾರ್ನ್ ಹಾಕುತ್ತಿದ್ದ.

ಜತೆಗೆ ಒಂದಷ್ಟು ದೂರದಲ್ಲಿದ್ದ ಟ್ರಾಫಿಕ್ ಪೋಲಿಸ್ ಗೆ ತುಳುವಲ್ಲಿ ಬೈಯುತ್ತಿದ್ದ. ” ಅವ್ ಏರುಂಬೆ ಕುಂಬು ಮಂಡೆದಾಯೆ ನಿನನ್ ಬೇಲೆ ದೆತೊಂದಿನಿ?. ಆಯಗ್ ಸುರುಟು ಬೆರಿಕ್ ಹಾಕೊಡು” (ಅದು ಯಾರು ಹಾಳು ತಲೆಯವನು ನಿನ್ನನ್ನು ಕೆಲಸಕ್ಕೆ ಸೇರಿಸಿದ್ದು. ಮೊದಲು ಆತನ ಬೆನ್ನಿಗೆ ಬಡಿಯ ಬೇಕು ) ಆತನ ಮಾತುಕತೆ ನಗು ತರುವಂತಿದ್ದರೂ ನಗುವಂತಿಲ್ಲ. ಎಲ್ಲರೂ ಅಪರಿಚಿತರೇ. ಅಲ್ಲದೆ ನಿಜವಾಗಿ ನೋಡುವುದಾದರೆ ಕುಂಬು ಮಂಡೆಯವನು ಆ ಕುಡುಕ ಸವಾರನೇ ಹೊರತು ಪೋಲೀಸ್ ಅಲ್ಲ ಎಂದು ಅವನ ಹತ್ತಿರ ವಾದ ಮಾಡಲು ಸಾಧ್ಯವೇ? ವಾದ ಮಾಡಿದರೆ ಅನಾಹುತವನ್ನು ಮೈ ಮೇಲೆ ಎಳೆದುಕೊಂಡಂತೆ.

ಅಲ್ಲದೆ ನಲ್ವತ್ತರಿಂದ ಹಿಡಿದು ಎಪ್ಪತ್ತು ವರುಷಗಳ ಅಪರಿಚಿತ ಪರಪುರುಷರೊಂದಿಎ ಮಹಿಳೆಯೊಬ್ಬಳು ನಕ್ಕ ಳೆಂದರೆ ಅಪಾರ್ಥ ಮಾಡಿಕೊಳ್ಳುವವರೇ. ಒಂದೆರಡು ನಿಮಿಷ ಒಬ್ಬನೇ ಮಾತನಾಡುತಿದ್ದರೂ ಎಲ್ಲರೂ ಹಾರ್ನ್ ಹಾಕುವವರೇ ಹೊರತು ಅವನ ಮಾತನ್ನು ಕೇಳುವವರೇ ಇಲ್ಲ. ಸರಿ ವಾಹನಗಳ ಸಾಲು ಮುಂದೆ ಮುಂದೆ ಹೋದಾಗ ಟ್ರಾಫಿಕ್ ಪೋಲೀಸ್ ರನ್ನು ಕಂಡಾಗ ” ಕುಂಬು ಮಂಡೆಯವನ ” ನೆನಪಾಗಿ ನಗುವನ್ನು ಹತೋಟಿ ಯಲ್ಲಿರಿಸಿ ಕಾರ್ಯಕ್ರಮದಲ್ಲಿ ಭಾಗವಹಿಸಿದೆ .
🖋 ವಾಸಂತಿ ಅಂಬಲಪಾಡಿ

 
 
 
 
 
 
 
 
 

Leave a Reply