ಗಾದೆ ತೋರಣ -5 ~ಪೂರ್ಣಿಮಾ ಜನಾರ್ದನ್

ಊಟ ಬಲ್ಲವನಿಗೆ ರೋಗವಿಲ್ಲ‌…. ಮಾತು ಬಲ್ಲವನಿಗೆ ಜಗಳವಿಲ್ಲ….

ಮನುಷ್ಯನ ಜೀವನ ಕ್ರಮದಲ್ಲಿ ಶುಚಿ ರುಚಿಯಾದ ಹಿತವಾದ ಊಟ, ಮೃದು ಮಧುರ ಮಿತವಾದ ಮಾತು ಬಲು ಮುಖ್ಯ. ನಮ್ಮ ಜೀವನಕ್ಕೆ ಅಗತ್ಯವಾದಷ್ಟೇ ಆಹಾರದ ಸೇವನೆ ಹಾಗು ಸಂದರ್ಭಕ್ಕೆ ತಕ್ಕಷ್ಟು ಮಾತಿನ‌ ಬಳಕೆ ನಮ್ಮ ವ್ಯಕ್ತಿತ್ವವನ್ನು ರೂಪಿಸುತ್ತದೆ.

ನಾವು ಏನು ,ಯಾವಾಗ ,ಹೇಗೆ ತಿನ್ನಬೇಕು ಎಂಬ ಅರಿವು ನಮ್ಮಲ್ಲಿರಬೇಕು. ಅದರೊಂದಿಗೆ ಎಲ್ಲಿ ಹೇಗೆ ಏನು ಎಷ್ಟು ಮಾತನಾಡಬೇಕೆಂಬ ಪರಿಜ್ಞಾನ ನಮಗಿದ್ದಲ್ಲಿ ಜೀವನದಲ್ಲಿ ಯಶಸ್ಸು ಗಳಿಸಲು ಸುಲಭ ಸಾಧ್ಯ. ಪುಕ್ಕಟೆ ಸಿಕ್ಕಿತೆಂದು ಆಹಾರವನ್ನು ಒಟ್ಟಾರೆ ಸೇವಿಸಿದರೆ ಅಜೀರ್ಣದಿಂದ ಖಾಯಿಲೆ ಬೀಳುವುದು ಖಂಡಿತ.

ಮಾತು ಆಡಲು ಬರುವುದೆಂದು ಒಟ್ಟಾರೆ ಮಾತನಾಡಿದರೆ ಅನರ್ಥ ಸಂಭವಿಸುವುದು ಖಚಿತ. ಎರಡಕ್ಕೂ ಕಾರಣವಾದ ನಾಲಿಗೆ ನಮ್ಮ ಹತೋಟಿಯಲ್ಲಿದ್ದರೆ ಒಳಿತು. ಅಲ್ಲದೆ ಒಂದು ಹೊತ್ತು ಉಂಡವ ಯೋಗಿ, ಎರಡು ಹೊತ್ತು ಉಂಡವ ಭೋಗಿ, ಮೂರು ಹೊತ್ತು ಉಂಡವ ರೋಗಿ, ನಾಲ್ಕು ಹೊತ್ತು ಉಂಡವನನ್ನು ಹೊತ್ತುಕೊಂಡು ಹೋಗಿ ಎಂಬ ಸೂಕ್ತಿ‌ ಕೂಡಾ ಸರಿಯಾದ ಸತ್ವಯುತ ಆಹಾರ ಸೇವನೆಯ ಮಹತ್ವವನ್ನು ಸಾರುತ್ತದೆ.

ಅದರೊಂದಿಗೆ ಮಾತೇ ಮುತ್ತು..ಮಾತೇ ಮೃತ್ಯು ಎಂಬ ಪ್ರಸಿದ್ಧ ಹೇಳಿಕೆ ಕೂಡಾ ಮಾತಿನ‌ ಮಹತ್ವ ತಿಳಿಸುತ್ತದೆ. ಹಾಗಾಗಿ ನಮ್ಮ ಆರೋಗ್ಯಕ್ಕೆ ಬೇಕಾದಷ್ಟೇ ಊಟ ಮಾಡೋಣ..ನಮ್ಮ ವ್ಯಕ್ತ್ತಿತ್ವ ಇತರರು ಇಷ್ಟ ಪಡುವಂತೆ ಮಾತನ್ನು ಆಡೋಣ.

ಆ ಮೂಲಕ ನಮಗೆ ಬರಬಹುದಾದ ರೋಗವನ್ನು, ನಮ್ಮಿಂದ ಆಗಬಹುದಾದ ಜಗಳವನ್ನು ದೂರವಿಡೋಣ ಎಂಬ ಆಶಯದೊಂದಿಗೆ ಊಟ ಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಿಗೆ ಜಗಳವಿಲ್ಲ ಎಂಬ ಗಾದೆ ಮಾತಿನ ತೋರಣದ ಪ್ರಸ್ತುತಿ. ನಮಸ್ಕಾರ..

 
 
 
 
 
 
 
 
 
 
 

1 COMMENT

Leave a Reply