Janardhan Kodavoor/ Team KaravaliXpress
26.6 C
Udupi
Sunday, November 27, 2022
Sathyanatha Stores Brahmavara

ಉತ್ಸಾಹದ ಚಿಲುಮೆ ಶ್ರೀಲಕ್ಷ್ಮೀವರರು~ಲಾತವ್ಯ ಆಚಾರ್ಯ

ಉಡುಪಿಯ ಕೃಷ್ಣಜನ್ಮಾಷ್ಟಮಿ,​ ​ವಿಟ್ಲಪಿಂಡಿ,​ ​ಸಪ್ತೊತ್ಸವ, ಚೂರ್ಣೋತ್ಸವ,​ ​ಗಣೇಶನ ಹಬ್ಬ ಬಂತೆಂದರೆ ತಕ್ಷಣ ಎಲ್ಲರ ಮನದಲಿ ಮೊದಲಿಗೆ ಮೂಡಿ ಬರುವವರು ಇತ್ತೀಚೆಗೆ ಹರಿಪಾದ ಸೇರಿದ ಶ್ರೀಶಿರೂರು ಮಠದ ಕೀರ್ತಿಶೇಷ ಶ್ರಿಲಕ್ಷ್ಮಿವರತೀರ್ಥ ಶ್ರೀಪಾದರು.ಸದಾ ಹೊಸ ಚಿಂತನೆ​ಯ ಚಟುವಟಿಕೆಯಿಂದ, ಸಜ್ಜನಿಕೆಯಿಂದ,​ ​ಪ್ರಾಮಾಣಿಕವಾದ ಪ್ರೀತಿ ಪ್ರೇಮದಿಂದ,​ ​ತಮ್ಮ ಉದಾರವಾದ ಸಹಾಯಹಸ್ತದಿಂದ​,​ ಕಲಾ ಪೋಷಣೆಯಿಂದ ಎಲ್ಲಾ ವರ್ಗದವರ ಗೌರವಕ್ಕೆ ಶಿರೂರು ಶ್ರೀಯವರು ಪಾತ್ರರಾಗಿದ್ದರು. 

ಶಿರೂರು ಶ್ರೀಯವರು ಇಲ್ಲದ ಉತ್ಸವದ ವೈಭವ ಸಂಭ್ರಮ ಊಹಿಸಲೂ ಅಸಾಧ್ಯ​: ಎಂಟರ ಎಳೆಯ ಹರಯದಲ್ಲೇ ಶ್ರಿ ಸೋದೇ​ ​ವಾದಿರಾಜಮಠದ ಶ್ರೀವಿಶ್ವೋತ್ತಮತೀರ್ಥ ಶ್ರೀಪಾದರಿಂದ ಸನ್ಯಾಸ ದೀಕ್ಷೆ ಸ್ವೀಕರಿಸಿ ಶ್ರೀ ಶಿರೂರು ಮಠದ ಶ್ರೀ ಲಕ್ಷ್ಮೀವರತೀರ್ಥರೆಂದು ನಾಮಾಂಕಿತರಾದ ಶ್ರೀಪಾದರು ತದನಂತರ ನಿರಂತರ 48 ವರ್ಷಗಳ ಕಾಲ ಉಡುಪಿಯ ಶ್ರೀಮಧ್ವಾಚಾರ್ಯ ಪ್ರತಿಷ್ಠಿತ ಕಡಗೋಲ ಕೃಷ್ಣಗೆ ಪೂಜಾ ಕೈಂಕರ್ಯಯಗಳನ್ನು ನೆರವೇರಿಸಿದ ಪುಣ್ಯ ಚೇತನ.

ಸನ್ಯಾಸ ಆಶ್ರಮದ ನಂತರ ಪಾಠ ಪ್ರವಚನದ ಜೊತೆಗೆ ಕೃಷ್ಣ ಮುಖ್ಯಪ್ರಾಣ ದೇವರಿಗೆ ನಿತ್ಯಪೂಜೆ ಸಲ್ಲಿಸುತ್ತಿದ್ದ ಶ್ರಿಪಾದರಿಗೆ ಕೃಷ್ಣನಿಗೆ ಸಲ್ಲುವ ಷೋಡಶ ಪೂಜೆಗಳಲ್ಲಿ ಅಲಂಕಾರ ಪೂಜೆ ಎಂದರೆ ಅಚ್ಚುಮೆಚ್ಚು.​ ​ಎಳೆಯ ಪ್ರಾಯದಿಂದಲೇ ನಿರಂತರವಾದ ವೈವಿಧ್ಯಮಯ ಅಲಂಕಾರಗಳ ಸೇವೆ ಸಲ್ಲಿಸುತ್ತಾ ಸಾಗಿದ ಶ್ರೀಪಾದರು ಕೆಲವೇ ವರ್ಷಗಳಲ್ಲಿ ಕೃಷ್ಣಾಲಂಕಾರದಲ್ಲಿ ಸಿದ್ಧ​ ​ಹಸ್ತರೆನಿಸಿದರು. ಶ್ರಾವಣ ಮಾಸ,​ ​ನವರಾತ್ರಿ, ಕೃಷ್ಣಜಯಂತಿ,​ ​ನೊಂಪು ಗೀತಾಜಯಂತಿಯ ಹಾಗೂ ಇನ್ನಿತರ ಪರ್ವಕಾಲಗಳಲ್ಲಿ ಶ್ರೀಪಾದರು ಕೃಷ್ಣನಿಗೆ ಅರ್ಪಿಸುತ್ತಿದ್ದ ಅಲಂಕಾರದ ಸೊಬಗನ್ನು ಕಂಡು ನಾಡಿನೆಲ್ಲೆಡೆಯಿಂದ ಆಗಮಿಸುತ್ತಿದ್ದ ಭಕ್ತರು ಭಾವುಕರಾಗುತ್ತಿದ್ದರು. ಅಷ್ಟೊಂದು ನಿಖರತೆ, ನೈಪುಣ್ಯತೆ,​ ​ಜೀವಕಳೆ ಅವರು ಸಲ್ಲಿಸುತ್ತಿದ್ದ ಅಲಂಕಾರ ಸೇವೆಯಲ್ಲಿ ತುಂಬಿರುತಿತ್ತು.

ಈ ಸಂದರ್ಭದಲ್ಲೇ ಕೃಷ್ಣನ ಅಲಂಕಾರ ಪೂಜೆಗೆ ಅತೀ ಅವಶ್ಯವಾದ ಲಕ್ಷಾಂತರ ರೂಪಾಯಿ ಮೌಲ್ಯದ ಬಗೆಬಗೆಯ ಚಿನ್ನ,​ ​ಬೆಳ್ಳಿಯ ಆಭರಣಗಳು ಶ್ರಿಪಾದರಿಂದ ಶ್ರೀಕೃಷ್ಣನಿಗೆ ಅರ್ಪಿತವಾಯಿತು. ದಶಾವತಾರದ ಅಲಂಕಾರ ಸಾಮಗ್ರಿಗಳು,(ನರಸಿಂಹ,​ ​ವರಾಹ ಹೊರತು) ಬೆಳ್ಳಿಯ ಗೋವು,​ ​ಅಶ್ವದ್ವಯಗಳು ಗಜದ್ವಯಗಳು, ವಟಪತ್ರಶಾಯಿ, ಸಿಂಹ,​ ​ವಿಧವಿಧದ ಆಭರಣಗಳು ಕೃಷ್ಣನ ಅಲಂಕಾರಕ್ಕಾಗಿ ಸಮರ್ಪಣೆಗೊಂಡಿತು.

ತಮ್ಮ ದ್ವಿತೀಯ ಪರ್ಯಾಯವಧಿಯಲ್ಲಿ ಶ್ರೀಪಾದರು ಶ್ರೀಕೃಷ್ಣನಿಗೆ ನಿರಂತರ 300ಅಲಂಕಾರಗಳ ಸೇವೆ ಸಲ್ಲಿಸಿದ ಸಂದರ್ಭದಲ್ಲಿ 300ನೇ ಅಲಂಕಾರದಂದು ಸುಮಾರು ಒಂದುಕೋಟಿ ರೂಪಾಯಿ ಬೆಲೆಬಾಳುವ ಸ್ವರ್ಣ ಗೀತೋಪದೇಶದ ರಥವನ್ನು ಗೀತಾಚಾರ್ಯ ಕೃಷ್ಣನಿಗೆ ಶ್ರೀಪಾದರು ಅರ್ಪಿಸಿದರು.​ ಈ ಪರ್ಯಾಯದ ಅವಧಿಯಲ್ಲಿ ಶ್ರಿಕೃಷ್ಣಮಠದಲ್ಲಿ ಸುಬ್ರಮಣ್ಯ ಗುಡಿಯ ಪಕ್ಕದಲ್ಲಿ ನವಗ್ರಹ ಮಂದಿರ​, ಕೃಷ್ಣ ಮಠದ ದಕ್ಷಿಣಪಾರ್ಶ್ವದ ಗೋಪುರ​, ಕೃಷ್ಣಮಠದ ಭದ್ರತಾ ಕೊಠಡಿಯ ನಿರ್ಮಾಣ,​ ​ಭಾಗೀರಥಿ ಗುಡಿಯ ನವೀಕರಣ, ಅಡುಗೆ ಶಾಲೆಗಳ ನವೀಕರಣ ಹೀಗೆ ಶ್ರೀಕೃಷ್ಣನ ಮಠಕ್ಕೆ ಸಂಬಂಧಿಸಿದಂತೆ ಅತೀ ಹೆಚ್ಚು ಮೌಲ್ಯದ ಕೊಡುಗೆಯನ್ನು ನೀಡಿರುವವರು ಶಿರೂರು ಶ್ರೀಪಾದರು. 

ತಮ್ಮ 2010-12ರ ತೃತೀಯ ಪರ್ಯಾಯವಧಿಯಲ್ಲಿ ಶ್ರೀಕೃಷ್ಣ​ ​ಆರೋಗ್ಯನಿಧಿ ಹಾಗೂ ಶಿಕ್ಷಣ ಪುರಸ್ಕಾರ ಎಂಬ ಯೋಜನೆಯ ಮೂಲಕ ಪ್ರತೀ ತಿಂಗಳು ಮೂರು ಲಕ್ಷ ರೂಪಾಯಿಯನ್ನು ಅನಾರೋಗ್ಯ ಪೀಡಿತರಿಗೆ ನೀಡಿ ಅವರ ಆರೈಕೆಗೆ ನೆರವಾಗುತ್ತಿದ್ದರು.​ ಹಾಗೆಯೇ ಶೈಕ್ಷಣಿಕ ಸಮಸ್ಯೆಯಲ್ಲಿ ಇರುವ ವಿದ್ಯಾರ್ಥಿಗಳಿಗೆ ಶಕ್ತ್ಯಾನುಸಾರ ಸಹಾಯ ನೀಡುತ್ತಿದ್ದರು.​ 

ಹಿರಿಯಡಕ ಸಮೀಪದ ಶಿರೂರು ಮೂಲಮಠದ ಶ್ರಿಮುಖ್ಯಪ್ರಾಣ ದೇವರ ಅನನ್ಯ ಉಪಾಸಕರಾಗಿದ್ದರು.​ ಈ ಸನ್ನಿಧಾನದಲ್ಲಿ ಪ್ರತೀ ಶನಿವಾರ ಜರಗುತ್ತಿದ್ದ ಅಂಜನೆಯದೇವರ ರಂಗಪೂಜೆಗೆ ನಾಡಿನೆಲ್ಲೆಡೆಯಿಂದ ಭಕ್ತ​ ​​ಸಮೂಹ ಹರಿದು​ ​ಬರುತ್ತಿತ್ತು. ಆಂಜನೇಯ ದೇವರ ಪೂಜಾ ನಂತರ ಶ್ರೀಪಾದರು ಭಕ್ತಾದಿಗಳಿಗೆ ಶ್ರಿದೇವರಲ್ಲಿ ಪ್ರಾರ್ಥಿಸಿ ನೀಡುತ್ತಿದ್ದ ಪ್ರಸಾದವಂತೂ ಭಕ್ತರ ಇಷ್ಟಾರ್ಥಗಳನ್ನು ಪವಾಡ ಎನ್ನುವ ರೀತಿಯಲ್ಲಿ ನೆರವೇರಿಸುತಿತ್ತು.

ಕ್ರೀಡೆ,​ ​ಸಾಹಿತ್ಯ,​ ​ಕಲೆ, ಸಾಂಸ್ಕೃತಿಕ ಕ್ಷೇತ್ರಗಳ ಅನೇಕ ಸಂಘಟನೆಗಳಿಗೆ ಪೋಷಕರಾಗಿದ್ದ ಶ್ರೀಪಾದರಿಗೆ ಇವೆಲ್ಲದರಲ್ಲೂ ಅಪಾರ ಗೌರವ,​ ​ಆಸಕ್ತಿ.​ ​ಉತ್ತಮ ಈಜುಗಾರ ಎನಿಸಿದ್ದ ಶ್ರೀಪಾದರು ಒಮ್ಮೆ ಖಾರ್ವಿ ಸಮಾಜದ ಯುವಕನೊಬ್ಬನಿಗೆ ಪ್ರೋತ್ಸಾಹಿಸುವ ನಿಮಿತ್ತ ಆತನ ಜೊತೆ ಉಡುಪಿಯ ಸೈಂಟ್ ಮೇರಿ ದ್ವೀಪದಿಂದ ಮಲ್ಪೆ ಕಡಲಕಿನಾರೆಯ ತನಕ ಈಜಿ ಎಲ್ಲರನ್ನೂ ಬೆರಗುಗೊಳಿಸಿದ್ದರು.​ ಕ್ರೀಡೆಯ ಮಹಾ ಅಭಿಮಾನಿಯಾಗಿದ್ದ ಶ್ರೀಪಾದರು ಅನೇಕ ಕ್ರೀಡಾ ಪಟುಗಳಿಗೆ ಕ್ರೀಡಾ ಸಂಘಟನೆಗಳಿಗೆ ಆರ್ಥಿಕವಾಗಿ ಸಹಾಯಹಸ್ತ ನೀಡಿ ಅವರ ಭವಿಷ್ಯಕ್ಕೆ ಬೆಳಕಾಗಿದ್ದರು.

ಶ್ರಿಪಾದರಿಗೆ ಕೃಷ್ಣಾಷ್ಟಮಿ ಬಂತೆಂದರೆ ಎಲ್ಲಿಲ್ಲದ ಸಡಗರ.​ ಮಕ್ಕಳು ಪುಟಾಣಿಗಳು, ಹಾಗೂ ಮುದ್ದು ಕಂದಮ್ಮಗಳಿಗಾಗಿ ಅನೇಕ ಬಗೆಯ ಸ್ಪರ್ಧೆಗಳನ್ನು ಆಯೋಜಿಸಿ ವೀಕ್ಷಿಸಿ ಆಕರ್ಷಕ ಬಹುಮಾನಗಳನ್ನು ನೀಡಿ ಪ್ರೋತ್ಸಾಹಿಸುತ್ತಿದ್ದರು.​ ಇದೇ ಸಂದರ್ಭದಲ್ಲಿ ಕಬಡ್ಡಿ,​ ​ಈಜು,​ ​ಲಗೋರಿ, ಪಿಲಿಚೆಂಡು,​ ​ಜಿಬಿಲಿ ಕುಟ್ಟಿದೊಣ್ಣೆಯಂತಹ ಅನೇಕ ಸಾಂಪ್ರದಾಯಿಕ ಕ್ರೀಡೆಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗಾಗಿ ರಾಜ್ಯಮಟ್ಟದ ಸ್ಪರ್ಧೆಯನ್ನು ಮಧ್ವಸರೋವರ, ರಾಜಾಂಗಣ,​ ​ಹಾಗೂ ರಥಬೀದಿಯಲ್ಲಿ ಆಯೋಜಿಸಿದ್ದು ಶ್ರೀಪಾದರ ವಿಶಿಷ್ಟ ಅಭಿರುಚಿಗೊಂದು ಉತ್ತಮ ಉದಾಹರಣೆ.​ ಹೀಗಾಗಿಯೇ ನಾಡಿನ ಜನತೆಗೆ ಕೃಷ್ಣನ ಹಬ್ಬ ಬಂತೆಂದರೆ ಮೊದಲಿಗೆ ನೆನಪಾಗುವುದು ಸಂಭ್ರಮಕ್ಕೆ ಸಾಟಿಯಿಲ್ಲದ ಶಿರೂರು ಶ್ರೀಪಾದರ ಆದ್ದೂರಿಯ ಕೃಷ್ಣ ಜನ್ಮಾಷ್ಟಮಿ

“ನಮ್ಮೂರ ಕೃಷ್ಣನ ಹಬ್ಬವನ್ನು ಆದ್ದೂರಿಯಾಗಿ ನಡೆಸಬೇಕು,ಈ ಹಬ್ಬದ ಪ್ರಮುಖ ಆಕರ್ಷಣೆ ಗಳಾದ ಹುಲಿವೇಷ, ಜನಪದವೇಷ ಹಾಗೂ ಇನ್ನಿತರ ವಾದ್ಯವೈವಿದ್ಯಗಳು ಉತ್ಸವದಿಂದ ಮರೆಯಾಗಬಾರದು” ಎನ್ನುವ ನಿಟ್ಟಿನಲ್ಲಿ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಕಣ್ಮನ ಸೆಳೆಯುವ ಬೃಹತ್ ವೇದಿಕೆ,​ ​ಹೈಟೆಕ್ ಧ್ವನಿ ಸಂಯೋಜನೆ, ದೃಶ್ಯ​ ​ಮಾಧ್ಯಮದಲ್ಲಿ ನೇರಪ್ರಸಾರ,​ ​ಬಣ್ಣಬಣ್ಣದ ಬೆಳಕು ಹಾಗೂ ಉತ್ಕೃಷ್ಟ ಗುಣಮಟ್ಟದ ಹಿನ್ನೆಲೆ ಸಂಗೀತ ಆಯೋಜಿಸಿ ಕೃಷ್ಣನ ಉತ್ಸವ ಕಾಣಲು ಬರುವ ಲಕ್ಷಾಂತರ ಭಕ್ತ ಸ್ತೋಮಕ್ಕೇ ಮನರಂಜನೆಯ ರಸದೌತಣವನ್ನೇ ಆಯೋಜಿಸುತ್ತಿದ್ದರು.


ವೇಷಧಾರಿಗಳನ್ನು ಪ್ರೋತ್ಸಾಹಿಸಲು ಉತ್ಸವ ಆರಂಭಕ್ಕೆ ಒಂದುವಾರಗಳ ಮೊದಲೇ,​ ​ಐವತ್ತು,​ ​ನೂರು,​ ​ಐನೂರು ಸಾವಿರಗಳ ನೋಟಿನ ಮಾಲೆಗಳನ್ನು ಪೋಣಿಸುವ ಕೆಲಸ ಶುರುವಾಗುತ್ತಿತ್ತು.​ ​ಮಠದ ಸುತ್ತ ಲಕ್ಷಾಂತರ ರೂಪಾಯಿ ಮೌಲ್ಯದ ನೋಟಿನ ಹಾರಗಳನ್ನು ನೇಯುವ ಕಾಯಕಕ್ಕಾಗಿ ಮಠದ ಹುಡುಗರು ಆಪ್ತರು ನಾಮುಂದು ತಾಮುಂದು ಎಂದು ಬಂದು ಶ್ರೀಯವರ ಜೊತೆ ಸೇರುತ್ತಿದ್ದರು.

ವಿಟ್ಲಪಿಂಡಿಯಂದು ಸುಮಾರು ಐದುಸಾವಿರಕ್ಕೂ ಮಿಕ್ಕಿ ಕೃಷ್ಣನ ಲಾಂಛನವಿರುವ ಟೀ ಶರ್ಟ್,​ ​ಮತ್ತು ಟೊಪ್ಪಿಯನ್ನು ಭಕ್ತಾದಿಗಳಿಗೆ ಪ್ರಸಾದದ ರೂಪದಲ್ಲಿ ವಿತರಣೆ ಮಾಡಿ ಸಂತೋಷ ಪಡುತ್ತಿದ್ದರು.​ ​ಪ್ರತೀ ವೇಷಧಾರಿಗಳಿಗೆ ಕೈತುಂಬಾ ಸಂಭಾವನೆ ಮತ್ತು ಕೃಷ್ಣನ ಉಂಡೆ ಚಕ್ಕುಲಿ ಪಂಚಕಜ್ಜಾಯ ಪ್ರಸಾದ ಮಾತ್ರವಲ್ಲ ಅವರ ಜೊತೆಗಿದ್ದ ವಾದ್ಯದವರಿಗೂ ಕೂಡಾ ಪ್ರತ್ಯೇಕ ಸಂಭಾವನೆಯನ್ನು ಕೈತುಂಬಿ ನೀಡುತ್ತಿದ್ದರು. ಉತ್ತಮವಾಗಿ ಕೀಬೋರ್ಡ್ ನುಡಿಸುತ್ತಿದ್ದ ಶ್ರೀಪಾದರು ನಡುನಡುವೆ ತಾವೇ ಕೆಲವು ಹಾಡುಗಳನ್ನ ಕೀಬೋರ್ಡ್ನಲ್ಲಿ ನುಡಿಸಿ ವೇಷಧಾರಿಗಳನ್ನು ಪ್ರೋತ್ಸಾಹಿಸಿ ಪ್ರೇಕ್ಷಕರಿಂದ ಪ್ರಚಂಡ ಕರತಾಡನ ಗಿಟ್ಟಿಸುತ್ತಿದ್ದರು.

ಕಿವಿಗಡುಚಿಕ್ಕುವ ತಾಸೆ, ಡೋಲು,ವಾದ್ಯಸಂಗೀತದೊಂದಿಗೆ ವಿಟ್ಲ ಪಿಂಡಿಯಂದು ಸಂಜೆ ನಾಲ್ಕು ಘಂಟೆಗೆ ಕೃಷ್ಣಮಠದ ವಾಹನ ತಂಗುದಾಣದಲ್ಲಿ ಆರಂಭವಾಗುತ್ತಿದ್ದ ಶ್ರೀಪಾದರ ಕೃಷ್ಣೋತ್ಸವವು ನಡುರಾತ್ರಿ 12ಗಂಟೆಯವರೆಗೆ ಸಾಗುತ್ತಿತ್ತು.​ ​ಶ್ರೀಪಾದರ ಕಾರ್ಯಕ್ರಮ ವೀಕ್ಷಣೆಗಾಗಿಯೇ ದೂರದೂರದ ಊರಿಂದ ಸಂತಸ ಸಡಗರದಿಂದ ಮಕ್ಕಳು ಮರಿಗಳೊಂದಿಗೆ ಕುಟುಂಬ ಸಮೇತರಾಗಿ ಆಗಮಿಸುತ್ತಿದ್ದ ಭಕ್ತ ಜನತೆ ಕಾರ್ಯಕ್ರಮ ಕೊನೆಯಾಗುವವರೆಗೆ, ಶ್ರೀಪಾದರು ವೇದಿಕೆಯಿಂದ ನಿರ್ಗಮಿಸುವ ತನಕ ಕದಲದೇ ಅಲ್ಲೇ ನಿಂತಿರುತ್ತಿದ್ದರು.​ 

ನಾಡಿನ ಕೃಷ್ಣ ಭಕ್ತರ ಜೊತೆಸೇರಿ​ ಕೃಷ್ಣನ ಉತ್ಸವವನ್ನು ಎಲ್ಲಿಲ್ಲದ ಪ್ರೀತಿ ಪ್ರೇಮ ಭಕ್ತಿ ಶ್ರದ್ದೆಯಿಂದ ಆಯೋಜಿಸುತ್ತಿದ್ದ ಕೃಷ್ಣ ಭಕ್ತ ಶ್ರೀಪಾದರು ಇಂದು ಕೃಷ್ಣ​ ​ಜಯಂತಿಗೆ ನಮ್ಮೊಂದಿಗಿಲ್ಲ​. ಆದರೆ ಅವರ ಕೃಷ್ಣಭಕ್ತಿ, ಮನುಷ್ಯಪ್ರೀತಿ, ಜನೋತ್ಸಾಹಾ, ಕಲಾರಾಧನೆ ಎಂದಿಗೂ ಜನಮಾನಸದಿಂದ ಮರೆಯಾಗದೆ ಮತ್ತೆ ಮತ್ತೆ ನೆನಪಿನ ಅಂಗಳದಲ್ಲಿ ತೇಲಿಬಂದು ನಮ್ಮಂತಹ ಸಾವಿರಾರು ಭಕ್ತರನ್ನು  ಭಾವುಕರನ್ನಾಗಿಸುತ್ತಿದೆ..ಜೈ ವಿಠ್ಠಲ.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!