Janardhan Kodavoor/ Team KaravaliXpress
27.6 C
Udupi
Monday, December 5, 2022
Sathyanatha Stores Brahmavara

​ಉಡುಪಿಗೆ ಕಷ್ಟ ಬಂದಾಗ ನೆನಪಾಗುವ ಇಷ್ಟದ ಶಿರೂರು ಸ್ವಾಮೀಜಿ ​

ಉಡುಪಿ ಜಿಲ್ಲೆಗೆ ಇಂದು ಅಪ್ಪಳಿಸಿರುವ ನೆರೆ ಹಾವಳಿ ಕಂಡಾಗ 11 ವರ್ಷಗಳ ಹಿಂದೆ ಮಂತ್ರಾಲಯ ಕ್ಷೇತ್ರದಲ್ಲಿ ಸಂಭವಿಸಿದ ಅನಿರೀಕ್ಷಿತ ಜಲಪ್ರಳಯದ ನೆನಪಾಗುತ್ತದೆ.​ ಅಂದು ಶ್ರೀಶಿರೂರು ಮಠದ ಲಕ್ಷ್ಮೀವರತೀರ್ಥ ಶ್ರೀಪಾದರು ತಮ್ಮ ತೃತೀಯ ಪರ್ಯಾಯದ ಪೂರ್ವಭಾವಿ ತಯಾರಿಯಲ್ಲಿದ್ದರು.​ ಆದರೂ ಉಡುಪಿಯಲ್ಲಿದ್ದುಕೊಂಡೇ ಮಂತ್ರಾಲಯದ ಜಲ ದುರಂತಕ್ಕೆ ಇನ್ನಿಲ್ಲ ಎನ್ನುವಂತೆ ಸಹಕರಿಸಿ ಪ್ರತಿಸ್ಪಂದಿಸಿದ್ದರು.ಇಂದಿನ ಜಲಪ್ರಳಯದ ಸಂದರ್ಭದಲ್ಲಿ ಉಡುಪಿಯ ಬಹುತೇಕರಿಗೆ ಮತ್ತೆ ಮತ್ತೆ ನೆನಪಿಗೆ ಬರುತ್ತಿದ ಏಕೈಕ ವ್ಯಕ್ತಿಯೆಂದರೆ ಶ್ರೀ ಲಕ್ಷ್ಮೀವರತೀರ್ಥ ಶ್ರೀಪಾದರು.​ ​ಅಂದು ಶ್ರೀಪಾದರು ನೆರೆ ಪರಿಹಾರ ನಿಧಿಗಾಗಿ ಪಾದಯಾತ್ರೆ ನಡೆಸಿದ ಸಂದರ್ಭದಲ್ಲಿ ರೋಚಕ ಘಟನೆಯೊಂದು ಸಂಭವಿಸಿತ್ತು.

ಶಿರೂರು ಮಠದ ಶ್ರೀ ಲಕ್ಷ್ಮೀವರತೀರ್ಥ ಶ್ರೀಪಾದರಿಗೆ ಮಂತ್ರಾಲಯದ ರಾಘವೇಂದ್ರರೆಂದರೆ ಅಪಾರ ಭಯ ಭಕ್ತಿ. ಅವರು ರಾಯರ ಸ್ತುತಿ ಸ್ತೋತ್ರಗಳನ್ನು ಪಠಿಸದ ದಿನಗಳೇ ಇಲ್ಲ. ಅಂತೆಯೇ ಉಡುಪಿಯ ರಾಯರ ಮಠಕ್ಕೂ ಶಿರೂರು ಮಠಕ್ಕೂ ವಿಶೇಷ ನಂಟು. ಹಲವು ದಶಕಗಳಿಂದ ಪರಸ್ಪರ ಮೈತ್ರಿ,​ ​ಸಹಕಾರ, ಒಡನಾಟ ಇಲ್ಲಿ ಮನೆಮಾಡಿತ್ತು. ರಾಯರ ಆರಾಧನೆಯ ಸಂದರ್ಭದಲ್ಲಿ ಹೆಚ್ಚಾಗಿ ಶಿರೂರು ಶ್ರೀಪಾದರೇ ಬಂದು ಮಹಾಪೂಜೆ ಸಲ್ಲಿಸಿ, ಪಲ್ಲಪೂಜೆ ನಡೆಸುತ್ತಿದ್ದರು.​ ​ರಾಯರ ಪೂಜೆಗೆ ಅವಕಾಶ ಸಿಕ್ಕಾಗೆಲ್ಲಾ ವಿಶೇಷ ಶ್ರದ್ದಾ ಭಕ್ತಿಯಿಂದ ರಾಯರನ್ನು ಆರಾಧಿಸುತ್ತಿದ್ದರು.​ ​ಶ್ರೀಪಾದರ 3ನೆ ಪರ್ಯಾಯಕ್ಕೆ 2 ತಿಂಗಳು ಮಾತ್ರ ಬಾಕಿ ಇತ್ತು. ಮಂತ್ರಾಲಯ ಕ್ಷೇತ್ರ ಹಾಗೂ ಉತ್ತರ ಕರ್ನಾಟಕದಲ್ಲಿ ಹಿಂದೆಂದೂ ಕಂಡರಿಯದ ಜಲಪ್ರಳಯ ಸಂಭವಿಸಿತು. ಮಂತ್ರಾಲಯಕ್ಕಂತೂ ಸಿಕ್ಕಾಪಟ್ಟೆ ಹಾನಿಯಾಗಿತ್ತು. ಶ್ರೀರಾಯರ ಬೃಂದಾವನ ಸಹಿತ ಇಡೀ ಊರೇ ನೀರೊಳಗೆ ಮುಳುಗಿತು. ಸಾವಿರಾರು ಜನ ಮನೆ ಮಠ ಕಳೆದುಕೊಂಡು ನಿರಾಶ್ರಿತರಾದರು.

ಅಕ್ಕಿ, ಬೇಳೆ, ಬಟ್ಟೆ,​ ​ಬರೆ ಎಲ್ಲದಕ್ಕೂ ಬರ ಬಂದಿತು.​ ​ಮಂತ್ರಾಲಯಕ್ಕೆ ಎರಗಿದ ಈ ಪ್ರವಾಹದಿಂದಾಗಿ ರಾಯರ ಅನನ್ಯ ಭಕ್ತರಾಗಿದ್ದ ಶಿರೂರು ಶ್ರೀಯವರಿಗೆ ಅತೀವ ದುಃಖವಾಯಿತು. ನಮ್ಮ ರಾಯರ ಮಂತ್ರಾಲಯ ಕ್ಷೇತ್ರದಲ್ಲಿ ಉದ್ಭವಿಸಿರುವ ಎಲ್ಲ ಸಮಸ್ಯೆಗಳು ಆದಷ್ಟು ಶೀಘ್ರವಾಗಿ ಪರಿಹಾರವಾಗಬೇಕೆಂದು ಶ್ರೀಕೃಷ್ಣ ಮುಖ್ಯಪ್ರಾಣ ಹಾಗೂ ಮಠದ ಪಟ್ಟದ ದೇವರಾದ ವಿಠಲ ದೇವರಿಗೆ ವಿಶೇಷ ಪೂಜೆಗಳನ್ನು ಸಲ್ಲಿಸಿದರು.​ ​ಮಠದ ವತಿಯಿಂದ ಅಕ್ಕಿ,ಬೇಳೆ, ತೆಂಗಿನಕಾಯಿ, ಎಣ್ಣೆಯನ್ನು ಮಂತ್ರಾಲಯಕ್ಕೆ ಕಳುಹಿಸಲು ಸಿದ್ಧತೆ ನಡೆಸುತ್ತಿದ್ದರು.​ ​ಜೊತೆಗೆ ಉಡುಪಿಯ ಕೆಲ ಸಂಘಟನೆಯ ಪ್ರಮುಖರನ್ನು ಕರೆಸಿ​, ಮಂತ್ರಾಲಯದ ಸಂತ್ರಸ್ತರಿಗಾಗಿ ಉಡುಪಿ ನಗರದ ಪ್ರಮುಖ ಬೀದಿಗಳಲ್ಲಿ ಪಾದಯಾತ್ರೆ ನಡೆಸಿ ಸಾಧ್ಯವಾದಷ್ಟು ಸಂಪನ್ಮೂಲತೆಗಳನ್ನು ಸಂಗ್ರಹಿಸಿ ಮಂತ್ರಾಲಯಕ್ಕೆ ತೆರಳಿ ಅರ್ಪಿಸಿಬರಬೇಕೆಂದು ತಿಳಿಸಿದರು. ಪಾದಯಾತ್ರೆಯಲ್ಲಿ ತಾವೂ ಕೂಡಾ ಭಾಗವಹಿಸುವುದಾಗಿ ತಿಳಿಸಿದರು. ಮರುದಿನ ಮುಂಜಾನೆ ಶ್ರೀಪಾದರು ಪೂಜೆ ಮುಗಿದ ತಕ್ಷಣ ಮಠದ ಸಿಬ್ಬಂದಿಗಳು ಹಾಗೂ ವಿವಿಧ ಸಂಘಟನೆಗಳ ಜೊತೆ ಸುಮಾರು 10ಗಂಟೆಗೆ “ಮಂತ್ರಾಲಯ ಹಾಗೂ ಉತ್ತರ ಕರ್ನಾಟಕದ ಜಲಪ್ರಳಯದಲ್ಲಿ ನೊಂದ ಸಂತ್ರಸ್ತರಿಗೆ ಸಹಾಯ ನೀಡಿ” ಎಂಬ ಉದ್ಘೋಷವಿರುವ ಬ್ಯಾನರ್ ಸಂಘಟನೆಯ ಕಾರ್ಯಕರ್ತರಿಗೆ ರಥಬೀದಿಯಲ್ಲಿ ಹಸ್ತಾಂತರಿಸಿ ಪಾದಯಾತ್ರೆಯನ್ನು ಕೃಷ್ಣ ಮಠದ ಮುಂಭಾಗದಿಂದ ಆರಂಭಿಸಿದರು.​ ​ಮೊದಲ ನಗದು ದೇಣಿಗೆಯಾಗಿ ದೊಡ್ಡ ಮೊತ್ತವನ್ನು ತಾವೇ ಪಾದಯಾತ್ರೆಯ ಹುಂಡಿಗೆ ಅರ್ಪಿಸಿದರು. ರಥಬೀದಿಯಲ್ಲಿ ಪಾದಯಾತ್ರೆಯ ಮೆರವಣಿಗೆ ಆಗಮಿಸುತ್ತಿದ್ದಂತೆ ಅನೇಕ ವರ್ತಕರು ಪಾದಯಾತ್ರಿಗಳು ಸ್ವಇಚ್ಛೆಯಿಂದಲೇ ಬಂದು ತಮ್ಮ ಕೊಡುಗೆಯನ್ನು ನೀಡಿ ಶ್ರೀಪಾದರಿಗೆ ನಮಸ್ಕರಿಸಿ ಸಾಗುತ್ತಿದ್ದರು.​ ​

ಮೆರವಣಿಗೆಯು ಫಲಿಮಾರು ಮಠದ ಸಮೀಪ ಆಗಮಿಸುತ್ತಿದ್ದಂತೆ ಅಲ್ಲೇ ಅಂಗಡಿ ಬದಿಯಲ್ಲಿ ನಿಂತಿದ್ದ ಗುಂಪೊಂದು ಪಾದಯಾತ್ರೆಯ ಕಾರ್ಯಕರ್ತರನ್ನು ಟೀಕಿಸಲಾರಂಭಿಸಿತು.ಮಾತಿಗೆ ಮಾತು ಬೆಳೆಯುತ್ತಾ ಸಾಗಿತು. ಸಂಘರ್ಷಕ್ಕೆ ತಿರುಗುವಂತಹ ಸ್ಥಿತಿ ಉಂಟಾಯಿತು.ಮೆರವಣಿಗೆಯ ಮುಂಭಾಗದಲ್ಲಿದ್ದ ಶ್ರೀಪಾದರು ದೂರದಿಂದ ಇವೆಲ್ಲವನ್ನು ಗಮನಿಸುತ್ತಿದ್ದರು. ಇನ್ನೇನು ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತದೆ ಎನ್ನುವಾಗ ಶ್ರೀಪಾದರು ಮದ್ಯ ಪ್ರವೇಶಿಸಿದರು. ಆ ಸಮಯದಲ್ಲಿ ಅಚಾನಕ್ ಆಗಿ ಘಟನೆಯೊಂದು ಜರಗಿತು.​ ​ಅದೇನೆಂದರೆ ರಥಬೀದಿಯಲ್ಲಿ ಅನೇಕ ಭಿಕ್ಷುಕರಿದ್ದರು. ಅವರಲ್ಲೊಬ್ಬ ಎರಡು ಕಾಲು ಹಾಗು ಒಂದು ಕೈಗಳನ್ನು ಕಳಕೊಂಡಿದ್ದ. ಆತ 4 ಸಣ್ಣ ಕಬ್ಬಿಣದ ಚಕ್ರಕ್ಕೆ 2ಅಡಿ ಚೌಕಾಕಾರದ ಕಬ್ಬಿಣದ ಪಟ್ಟಿಯನ್ನು ಹೊಡೆಸಿ ಅದರ ಮೇಲೆ ಹಲಗೆಯ ತುಂಡೊಂದನ್ನು ಇರಿಸಿ ಆ ಚಕ್ಕಡಿಯಂತಿರುವ ಗಾಡಿಯನ್ನು ಕೈಯಲ್ಲೇ ತಳ್ಳಿಕೊಂಡು ಕಲ್ಯಾಣಪುರದ ಸಂತೆಕಟ್ಟೆಯಿಂದ ಉಡುಪಿಯ ರಥಬೀದಿಗೆ ಪ್ರತಿದಿನ ಬರುತ್ತಿದ್ದ.ಅಲ್ಲಿ ಭಕ್ತರು ನೀಡುವ ಭಿಕ್ಷೆಯಿಂದ ಆತನ ಜೀವನ ಸಾಗುತ್ತಿತ್ತು.

ಪಾದಯಾತ್ರೆಯ ಗಲಾಟೆಯ ಸಂದರ್ಭದಲ್ಲಿ ಇವರ ಕಾಲುಗಳ ಎಡೆಯಿಂದ ಚಕ್ಕಡಿ ಸಮೇತ ಬಂದ ಆ ಭಿಕ್ಷುಕ “ಗುರುಗಳೇ” ಎನ್ನುತ್ತಾ ಗಟ್ಟಿಯಾಗಿ ಕೂಗಿಕೊಂಡಾಗ ಒಂದು ಕ್ಷಣ ಎಲ್ಲರೂ ಸ್ತಬ್ದರಾದರು.​ ​ಕೂಡಲೇ ಕಾರ್ಯಕರ್ತನೊಬ್ಬ “ಏನೋ ನಿಂದು ನಿಂಗೇನಿಲ್ಲಿ ಕೆಲಸ” ಎಂದು ಕೋಪದಿಂದ ಏರು ಧ್ವನಿಯಲ್ಲಿ ಬೈದಾಗ ಆ ಭಿಕ್ಷುಕ ತನ್ನ ಚಕ್ಕಡಿಯ ಬದಿಯಲ್ಲಿದ್ದ ಸಣ್ಣ ಡಬ್ಬಿಯೊಂದರಿಂದ ಒಂದಿಷ್ಟು ಚಿಲ್ಲರೆ ಹಣವನ್ನು ಶ್ರೀಪಾದರಿಗೆ ನೀಡಿ ನಮಸ್ಕರಿಸುತ್ತಾ ಹೇಳಿದಾ..ಗುರುಗಳೇ ರಾಯರಿಂದ ನನ್ ಜೀವನಾ ಸಾಗ್ತಾ ಇದೆ.ಈಗಲೂ ಅವರೇ ಕಾಪಾಡ್ತಿದ್ದಾರೆ.​ ​ರಾಯರ ಭಕ್ತರು ನೀಡುವ ಭಿಕ್ಷಯಿಂದ ನನಗೆ ಊಟ ಸಿಕ್ತಾ ಇದೆ.​ ​ಒಂದು ಕಾಲದಲ್ಲಿ ಸಂಸಾರ,​ ​ಸಂಪತ್ತು, ಕೈಕಾಲು ಎಲ್ಲಾ ಸರಿ ಇದ್ದಾಗ ಒಂದು ಪೈಸಾ ಕೂಡಾ ನಾನು ದಾನ ಮಾಡಿಲ್ಲ ಅದಕ್ಕೆ ನನ್ ಸ್ಥಿತಿ ಹೀಗೆ ಇದೆ.​ ​ಈಗ ನೀವು ರಾಯರಿಗೆ ಮಾಡ್ತಾ ಇರೋ ಕೆಲಸಾ ಕೇಳಿ ಸಂತೋಷ ಆಯಿತು.​ ​ನಾನ್ ಕೊಟ್ಟಿರೋ 23 ರೂಪಾಯಿಯನ್ನು ಮಂತ್ರಾಲಯದ ರಾಯರಿಗೆ ತಲುಪಿಸಿ ಎಂದು ದೈನ್ಯದಿಂದ ಹೇಳಿದಾಗ ಅಲ್ಲಿ ನೆರೆದಿದ್ದ ಅಷ್ಟೂ ಜನರ ಕಣ್ಣಲ್ಲಿ ನೀರು ತುಂಬಿ ಬಂದಿತ್ತು.

ಪಾದಯಾತ್ರೆಯವರನ್ನು ಟೀಕಿಸಿದ ಗುಂಪು ಭಿಕ್ಷುಕನ ಮಾತಿನಿಂದ ಗರಬಡಿದವರಂತೆ ನಿಂತಿದ್ದರು.​ ​ತಕ್ಷಣ ಶ್ರೀಪಾದರು ಆ ಭಿಕ್ಷುಕನಲ್ಲಿ ನೀನು ನಾಳೆಯಿಂದ ಊಟಕ್ಕೆ ಕೃಷ್ಣ ಮಠಕ್ಕೆ ಬರಬೇಕು ಎಂದು ಹೇಳಿ ಪಾದಯಾತ್ರೆಯನ್ನು ಮುಂದುವರೆಸಿದರು.​ ​3 ದಿನಗಳ ನಂತರ ಪಾದಯಾತ್ರೆಯಿಂದ ಸಂಗ್ರಹವಾದ ಬಹುದೊಡ್ಡ ನಗದು ಮೊತ್ತ ಹಾಗೂ 5 ಟ್ರಕ್ ಲೋಡ್ ಬಟ್ಟೆ,​ ​ಬೇಳೆ ಅಕ್ಕಿ,​ ​ಎಣ್ಣೆ ಹಾಗೂ ಇತರೇ ಅವಶ್ಯಕ ಸಾಮಗ್ರಿಗಳನ್ನು ಜಿಲ್ಲಾಧಿಕಾರಿಯವರ ಉಪಸ್ಥಿತಿಯಲ್ಲಿ ಮಂತ್ರಾಲಯ ಕ್ಷೇತ್ರಕ್ಕೆ ಕಳುಹಿಸಿಕೊಡಲಾಯಿತು.​ ​ಅಲ್ಲದೇ ಸುಮಾರು 10ಮಂದಿ ಕಾರ್ಯಕರ್ತರನ್ನು ಅಲ್ಲಿ ನಡೆಯುತ್ತಿದ್ದ ಶ್ರಮದಾನಕ್ಕಾಗಿ ಮಠದಿಂದ ಕಳುಹಿಸಲಾಯಿತು.

ವಿಶೇಷವೆಂದರೆ ಚಕ್ಕಡಿಯಲ್ಲಿ ಬರುತ್ತಿದ್ದ ಆ ಭಿಕ್ಷುಕ ಮತ್ತೆಂದೂ ಯಾರಿಗೂ ಕಾಣಸಿಗಲೇ ಇಲ್ಲ.​ ​ಶ್ರೀಪಾದರೂ ಎಷ್ಟೇ ಹುಡುಕಿಸಿದರೂ ಆತ ಎಲ್ಲಿಗೆ ಹೋದ..ಏನಾದ ಎಂಬುದರ ಯಾವ ಸುಳಿವೂ ಕೂಡಾ ದೊರಕಲಿಲ್ಲ…ಮೊನ್ನೆ ಮೊನ್ನೆಯವರೆಗೂ ಶ್ರೀಪಾದರು ಈ ಘಟನೆಯನ್ನು ನನ್ನಂತೆಯೇ ಅವರ ಅನೇಕ ಆತ್ಮೀಯರಲ್ಲಿ ಹಂಚಿಕೊಂಡಿದ್ದರು. ಜೀವನದ ಕೊನೆಯವರೆಗೂ ಶ್ರೀಪಾದರಿಗೆ ಕಾಡುತ್ತಿದ್ದ ಎರಡು ಯಕ್ಷ ಪ್ರಶ್ನೆ ಯೆಂದರೆ..ಆ ಭಿಕ್ಷುಕ ಯಾರು ? ಎರಡನೆಯದು ನಿಜವಾದ ಭಿಕ್ಷುಕರು ಯಾರು?….

 

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!