ಶಾರದೆಯ ಆರಾಧನೆಯಲ್ಲಿ ಆರಾಧ್ಯ~ಪೂರ್ಣಿಮಾ ಜನಾರ್ದನ್ 

ಮಕ್ಕಳಲ್ಲಿ, ಸ್ತ್ರೀಯರಲ್ಲಿ ದೇವರನ್ನು ಕಂಡು ಪೂಜಿಸುವ ಸಂಸ್ಕೃತಿ ನಮ್ಮದು.  ನಮಗೆಲ್ಲರಿಗೂ ಕೊರೋನಾದ ಈ ಸಂದಿಗ್ಧತೆಯಲ್ಲಿ​ ನವರಾತ್ರಿಯ ಪರ್ವ ಕಾಲದಲ್ಲಿ  ಬೇರೆ ಬೇರೇ ​ದೇವಿ ​ದೇಗುಲಗಳಿಗೆ ತೆರಳಿ ಪೂಜೆ ಮಾಡಿಸಿ ಬರಲು ಒಂದಷ್ಟು ಅಳುಕು.  ಆದರೂ ಹಬ್ಬಗಳನ್ನು ಹೊಸತನದೊಂದಿಗೆ ಮಾಡಬೇಕೆಂಬ ತುಡಿತ ನಮ್ಮೆಲ್ಲರದು. ಜನ ​ಸಂದಣಿ ಇರುವ​ಲ್ಲಿಗೆ ಹೋಗದೆ ನಮ್ಮದೇ ಆದ ವಿಶಿಷ್ಟ ರೀತಿಯಲ್ಲಿ ಹಬ್ಬಗಳನ್ನು ಆಚರಿಸುವ ಪರಿಪಾಠ ಆರಂಭವಾಗಿದೆ. ಮಕ್ಕಳಿಗೆ ಕೃಷ್ಣಾಷ್ಟಮಿಯ ಸಂದರ್ಭದಲ್ಲಿ ಕೃಷ್ಣನ ವೇಷ, ರಾಧಾಕೃಷ್ಣ ವೇಷ ಹಾಕಿ ಸಂಭ್ರಮಿಸಿದರೆ ನವರಾತ್ರಿಯ ಈ ದಿನಗಳಲ್ಲಿ ಪುಟ್ಟ ಮಕ್ಕಳಿಗೆ ಇಲ್ಲವೇ ಯುವತಿಯರಿಗೆ ದೇವಿಯ ನಾನಾ ರೂಪಗಳನ್ನು ಹಾಕಿ ಸಂಭ್ರಮಿಸುವ ಸಮಯ. ​​
 ಇದೊಂದು ತ್ರಿಕೋನ ಹೊಂದಾಣಿಕೆಯ ಕಥೆ. ಒಂದು ದೈವಿಕ ​ಕಳೆಯ ​ಪುಟ್ಟ ಬಾಲೆಯನ್ನು ಶಾರದಾ ಮಾತೆಯಾಗಿ ಪರಿವರ್ತಿಸಿ ಅದರ ವಿವಿಧ ಭಾವನೆಗಳನ್ನು ಸೆರೆಹಿಡಿಯುವ ಪ್ರಯತ್ನ ಅಷ್ಟೊಂದು ಸುಲಭವಲ್ಲ.  ಪುಟ್ಟ ಮಗುವಿನ ಮನಸ್ಥಿತಿ​, ಭಾವಾಭಿನಯ, ಮಗುವಿನ ಆರೋಗ್ಯ ಅದಕ್ಕೆ ಅನುಕೂಲವಾಗುವಂತಹ ಸ್ಥಳ, ಸಮಯ, ವಾತಾವರಣ ಇದೆಲ್ಲವನ್ನು ಅವಲೋಕಿಸ​ ​ಬೇಕಾಗುತ್ತದೆ.  

ಮಗುವಿನ ಬಗ್ಗೆ ಪೂರಕ ​ಅಗತ್ಯತೆಗಳನ್ನು ಪೂರೈಸಿಕೊಂಡ ಬಳಿಕ ಆ ಮಗುವಿನ ತಂದೆ-ತಾಯಿ ಇಲ್ಲವೇ 
ಬಂ​ಧು ವರ್ಗದವರ ಸಹಕಾರದಿಂದ ನುರಿತ ಸೌಂದರ್ಯ ತಜ್ಞರು ಆ ಮಗುವಿನ ಮನಸ್ಥಿತಿ ಕೆಡದಂತೆ ಎಷ್ಟು ಸಾಧ್ಯವೋ ಅಷ್ಟು ಕಡಿಮೆ ಅಗತ್ಯ ಪರಿಕರಗಳನ್ನು ಉಪಯೋಗಿಸಿ ಸಿಂಗರಿಸುವ​ ಕಾಯಕ ಆರಂಭ. ಮಗುವಿಗೆ ಬೇಸರ ​ಬರದಂತೆ, ಮುಜುಗರ ​ಆಗದಂತೆ ಹಾಗೆ ತೊಂದರೆಯಾಗದೆ ಹಾಗೆ ಸುಮಾರು ಹೊತ್ತು ಹಿಡಿದಿಟ್ಟುಕೊಳ್ಳುವುದು,  ಅಂತೆಯೇ ​ಸವಿ ​ಮಾತಿನಿಂದ ಆಕೆಯನ್ನು ಒಪ್ಪಿಸುವುದು ಕಷ್ಟಸಾಧ್ಯ.  ಅದಕ್ಕೂ ನೈಪುಣ್ಯ​ತೆಯೊಂದಿಗೆ ಮನೆಮಂದಿಯ ಸಹಕಾರ ಅಗತ್ಯವಾಗಿ ಬೇಕು.
ಇಷ್ಟೆಲ್ಲಾ ಶ್ರಮವಹಿಸಿ ಒಂದು ಪುಟ್ಟ ಮಗುವನ್ನು ದೇವತೆಯಂತೆ ಅಲಂಕರಿಸಿ ಮನೆ ಮಂದಿ ಮಾತ್ರ ಸಂತಸ ಪಟ್ಟ​ರೆ ಸಾಕೇ.?  ಆ ಸಂತಸದ​ ​ಕ್ಷಣಗಳನ್ನು ಇನ್ನಷ್ಟು ಮಂದಿಗೆ ಹಂಚಿಕೊಳ್ಳುವುದರೊಂದಿಗೆ ಅದನ್ನು ಸ್ಮರಣೀಯವಾಗಿಸಬೇಕು,  ಅದಕ್ಕಾಗಿ ನುರಿತ ಛಾಯಾಗ್ರಾಹಕ ಜೊತೆಯಾಗಿರಬೇಕು.  ಅಂತಹ ಛಾಯಾಗ್ರಾಹಕನಿಗೆ ಛಾಯಾಗ್ರಹಣ ಒಳಹೊರಗುಗಳು ಮಾತ್ರವಲ್ಲ ಒಂದು ಮಗುವನ್ನು ಪುಸಲಾಯಿಸುವ, ಮೋಡಿ ಮಾಡುವ ಕಲೆಯೂ ಗೊತ್ತಿರಬೇಕು.  ತಾಳ್ಮೆ, ಆಸಕ್ತಿ, ಶ್ರದ್ಧೆ ಎಲ್ಲಿ ಹೇಗೆ ಛಾಯಾಚಿತ್ರ ತೆಗೆದರೆ ವಿಶಿಷ್ಟ ಪರಿಣಾಮ ಸಿಗಬಹುದೆಂಬ ಕಲ್ಪನೆ ಇರಬೇಕು.  ಅದಕ್ಕಾಗಿ ಸುಂದರ ಹಿನ್ನೋಟದ ಆಯ್ಕೆ , ನೆರಳು ಬೆಳಕಿನ ಚಮತ್ಕಾರ ಜೋಡಣೆ ಹೀಗೆ ಒಂದು ವಿಶಿಷ್ಟ ಛಾಯಾಚಿತ್ರ ಹಲವು  ವಿಶಿಷ್ಟತೆಗಳ ಸಂಗಮವಾಗಬೇಕು.  
ಈಗಾಗಲೇ ಫೇಸ್ಬುಕ್ ವಾಟ್ಸಾಪ್ ಮುಂತಾದ ಜಾಲತಾಣಗಳಲ್ಲಿ ​ ನಮ್ಮೀ ​ಪುಟ್ಟ ಮಗು ಶಾರದೆ​ಯು  ನಲಿದಾಡುತ್ತಿದ್ದಾಳೆ.   ಸುರತ್ಕ​ಲ್ ಪ್ರಶಾಂತ್ ಪೂಜಾರಿ ಹಾಗೂ ಜ್ಯೋತಿ ಪ್ರಶಾಂತ್ ಪೂಜಾರಿ ದಂಪತಿಗಳ ​ಐದು ​ವರುಷದ ಪುಟ್ಟ ಬಾಲೆ ಆರಾಧ್ಯ ಪಿ ಅಂಚನ್ ಶಾರದೆ​ಯಾಗಿ ಕಣ್ಮನ ಸೆಳೆಯುತ್ತಿದ್ದಾಳೆ.  ಒಮ್ಮೆ ಕಂಡರೆ ಕೈಮುಗಿಯ ಬೇಕೆಂಬ,  ಮತ್ತೊಮ್ಮೆ ಕಂಡಾಗ ಎತ್ತಿ ಮುದ್ದಾಡಬೇಕು ಎಂದು ಅನಿಸುವ ಪುಟ್ಟ ಶಾರದೆಯ ರೂಪ ಲಾವಣ್ಯಕ್ಕೆ ಅವಳ ಭಾವಾಭಿನಯಕ್ಕೆ ಮನ​ ​ಸೋಲದವರಿಲ್ಲ. 
ಮುಲ್ಕಿಯ ಪೊರ್ಲು ಬ್ಯೂಟಿ ಸಲೂನ್ ಇದರ ದೀಕ್ಷಾ​ ಹಾಗು ಸಂಗಡಿಗರು ​ ಸುಮಾರು ​ಮೂರು ಗಂಟೆ ಶ್ರಮವಹಿಸಿ ಮಗು​ವನ್ನು ​ಶಾರದೆಯಾಗಿ ​​ಸಿಂಗರಿಸಿದ್ದಾರೆ.  ಆರಾಧ್ಯಳ ಚಿಕ್ಕಮ್ಮ ಮತ್ತು ಮನೆಯವರು ವಿಶೇಷವಾಗಿ ಸಹಕರಿಸಿದ್ದಾರೆ.  ಕೃಷ್ಣಾಷ್ಟಮಿಯ ಸಂದರ್ಭ ಕೃಷ್ಣ ರಾಧೆಯರ ವಿವಿಧ ಭಂಗಿಗಳನ್ನು ತೆಗೆದು ಮನೆಮಾತಾಗಿದ್ದ ಛಾಯಾಚಿತ್ರ ಕಲಾವಿದ ವಿನಯ್ ವಿಕ್ಕಿ ಆರ್ ಪೂಜಾರಿ ಮತ್ತು ತಂಡ  ಇದೀಗ ಈ ಶಾರದೆಯ ಛಾಯಾಚಿತ್ರಕ್ಕೆ ವಿಶೇಷ ಮುತುವರ್ಜಿ ವಹಿಸಿ ಆಸಕ್ತಿಯಿಂದ ತುಂಬಾ ಸುಂದರ ಛಾಯಾಚಿತ್ರಗಳನ್ನು ನಮ್ಮ ಮುಂದಿರಿಸಿ​ ​ದ್ದಾರೆ. 
ಅದಕ್ಕೆ ಪೂರಕವಾಗಿ ಬಪ್ಪನಾಡು ದೇವಳದ ಪರಿಸರ ಸಾಥ್ ನೀಡಿದರೆ ಒಟ್ಟಾರೆಯಾಗಿ ಎಲ್ಲರೂ ಮನಸೆಳೆಯುವ ಪುಟ್ಟ ಮಗುವಿನ ಭಾವಪೂರ್ಣ ಅಂದದ ಮೊಗ​ದ ​ಚೆಂದದ ಭಾವವನ್ನು ಸೆರೆಹಿಡಿ​ದು ನಮ್ಮೊಂದಿಗೆ ಹಂಚಿಕೊಂಡ ಛಾಯಾಗ್ರಾಹಕ ಅಭಿನಂದನಾರ್ಹ.  ನಮ್ಮೆಲ್ಲರ ಪುಟ್ಟ ಶಾರದೆ ಹಾಗೂ ಶಾರದೆಯನ್ನು ಅಣಿಗೊಳಿಸುವಲ್ಲಿ ಸಹಕರಿಸಿದವರಿಗೆ ಎಲ್ಲರಿಗೂ ಅಕ್ಷರ ಮಾಲೆ ಧರಿಸಿದ ಅಕ್ಷರ ಮಾತೆ ಸರಸ್ವತಿ ಎಲ್ಲರಿಗೂ ಅಕ್ಷರ ಧಾರೆಯನ್ನಿತ್ತು ಸಲಹಲಿ​. ​ ಎಲ್ಲರ ಮನೆ-ಮನ ಅಕ್ಷರಧಾಮ ವಾಗಲಿ ಎಂದು ಹಾರೈಸುತ್ತಾ ನವರಾತ್ರಿಯ ಶುಭಾಶಯಗಳು​. ​
 
 
 
 
 
 
 
 
 
 
 

Leave a Reply