ನೀರೆಯ ಸೀರೆಯ ಸೆರಗಿನ ಬೆರಗು~ ~ಪೂರ್ಣಿಮಾ ಜನಾರ್ದನ್ ಕೊಡವೂರು

ಅಪ್ಪಟ ಸಾಂಪ್ರದಾಯಿಕ ಭಾರತೀಯ ನಾರಿ ಎಂದಾಕ್ಷಣ ನೆನಪಿಗೆ ಬರುವವಳು ಸೀರೆಯುಟ್ಟ ನೀರೆ.ಮಹಿಳೆಯ ಮನಕ್ಕೊಪ್ಪುವ ಸೀರೆ ಭಾರತೀಯ ಸಂಸ್ಕೃತಿಯ ಪ್ರತೀಕ.ಅಂದಗಾತಿಯ ಅಂದವನ್ನು ಹೆಚ್ಚಿಸುವ ಸೀರೆ ಹಾಗು ಸೀರೆಯ ಚೆಂದ ಹೆಚ್ಚಿಸುವ ಅದರ ಸೆರಗಿನ ಬೆರಗಿನ ಸರಸವನ್ನೊಮ್ಮೆ ಪ್ರಹಸನ ರೂಪದಲ್ಲಿ ನೋಡೋಣ.

ಭಾರತದ ಭವ್ಯ ಸಂಸ್ಕೃತಿಯ ಪ್ರತೀಕ,ಸ್ತ್ರೀ ಯರ‌ ಅಚ್ಚುಮೆಚ್ಚಿನ ಉಡುಗೆ ಸೀರೆ.

* ಅಗೋ ಅಲ್ಲಿ ನೋಡಿ,ಇಂದಷ್ಟೆ ದೂರದರ್ಶನದಲ್ಲಿ ಬಿತ್ತರಗೊಂಡ ಮದರ್ ಉಡುಪಿ ಸ್ಪರ್ಧೆಗೆ ಅಣಿಯಾಗುತ್ತಿದ್ದಾಳೆ ಶ್ರೀಮತಿ ಕ್ಷಿತಿಜ..ಮೊದಲ ಸ್ಪರ್ಧೆ, ಮೊದಲ‌ ವೇದಿಕೆ ಹಾಗಾಗಿ ಆತಂಕ,ಕಳವಳ ಸಹಜ.ಆಕೆಗೀಗ ಧೈರ್ಯ ಕ್ಕೆ ಆಸರೆ ಸೀರೆಯ ಸೆರಗು.ಬಿಂಕದಿಂದ ಸೀರೆಯ ಸೆರಗನ್ನು ಬೀಸುತ್ತಾ ಕ್ಯಾಟ್ ವಾಕ್ ಮಾಡುವ ಆಕೆಯ ಬಿನ್ನಾಣವನ್ನೊಮ್ಮೆ ನೋಡಿ.

*. ಅರೇ ನಮ್ಮ ತಾರುಣಿ ಮನೆಯಿಂದ ಹೊರಡುವಾಗ ಬಿಸಿಲೂ ಇರಲಿಲ್ಲ, ಮಳೆಹನಿಯೂ ಇರಲಿಲ್ಲ,ಮಾದಕವಾದ ಮೋಡ ಕವಿದ ವಾತಾವರಣ. ಆದರೆ ರಸ್ತೆಗೆ ಇಳಿದು ಕೊಂಚ ಹೊತ್ತಿನಲ್ಲೆ ಉರಿ ಬಿಸಿಲು‌ .ಮೈಯ ಚರ್ಮ ಕಪ್ಪಾಗುವುದರೊಂದಿಗೆ ಮುಖವೂ ಸುಟ್ಟ ಬದನೆಕಾಯಿ. ಇರಲಿ ಸ್ವಲ್ಪವಾದರೂ ಸೂರ್ಯ ದೇವರಿಗೆ ಅಡ್ಡವಾಗಲೆಂದು ಈಕೆ ಮೊರೆ ಹೋಗುವುದು ಸೀರೆಯ ಸೆರಗಿಗೆ‌.ಅಂದದ ಮೊಗಕೆ ಸೀರೆಯ ಸೆರಗ ಅಡ್ಡ ಹಿಡಿದು ಬರುತ್ತಿರುವ ಈ ಲಲನೆಯನೊಮ್ಮೆ ನೋಡಿ.

*.ನಮ್ಮ ಸೌದಾಮಿನಿಯೋ ಬಲು ಹುಷಾರು. ಗೊಣಗುಟ್ಟುತ್ತಲಾದರೂ ಮನೆ ಕ್ಲೀನ್ ಇಡುವುದರಲ್ಲಿ ನಿಸ್ಸೀಮೆ.ವಾರಕ್ಕೊಮ್ಮೆ ಯಾದರೂ ಮೂಲೆ ಮೂಲೆಗಳ ತದಕಿ ಧೂಳು ಹೊಡೆಯುವುದು ಮಾಮೂಲು. ಅಲ್ಲಿ ನೋಡಿ ಆಕೆ ತನ್ನ ಪ್ರೀತಿಯ ಸೀರೆ ಸೆರಗಿಂದ ಮುಖ ಮುಚ್ಚಿ ಧೂಳು ಗುಡಿಸಿ ತೆಗೆಯುವ ರೀತಿ.

*. ನಮ್ಮ ರಾಧಿಕಾಳ ತುಂಟ ಕಂದನ ನೋಡಿ..ಅರೆಗಳಿಗೆಯೂ ಕೂತಲ್ಲಿ ಕೂಡದ ಮಾತು ಕೇಳದ ಫಟಿಂಗ.ಸದಾ ಕಾಲ ನೀರಲ್ಲಿ ಆಟವಾಡಿ ಬರುವುದಲ್ಲದೆ ಅಂಗಡಿಯಲ್ಲಿಟ್ಟ ತಂಪು ಪಾನೀಯಗಳನ್ನು ಹೊತ್ತು ಗೊತ್ತಿಲ್ಲದೆ ಉದರಕ್ಕೆ ತುಂಬಿಕೊಳ್ಳುವ ಆತುರದವ‌. ಇಂತಹವರಿಗೆ ಶೀತ ಬಾಧೆ ಬಾಧಿಸದೆ ಬಿಟ್ಟೀತೆ..ಕೊಟ್ಟ ಕರವಸ್ತ್ರವನ್ನು ಹಾದಿ ಬೀದಿಯಲ್ಲಿ ಬಿಸುಟು ಅಮ್ಮನ ಮುಂದೆ ಮುಖ ಮೇಲೆ ಮಾಡಿ ನಿಲ್ಲುವ ಇವನ ಮೂಗಲ್ಲಿ ಒಸರುವ ಸಿಂಬಳವ ಒರೆಸದಿದ್ದಲ್ಲಿ ನಾಲಿಗೆಯಿಂದ ಬಾಯಿಗಿಳಿಸುವ ಈ ಪೋಕರಿಯ ಮೂಗು ಒರೆಸಲು ಅಮ್ಮನಿಗೆ ಸೆರಗಲ್ಲದೆ ಬೇರೆ ಯಾವ ವಸ್ತ್ರ ಆ ಕೂಡಲೇ ಸಿಕ್ಕೀತು…ಚಿಕ್ಕ ಮಕ್ಕಳ ಅಮ್ಮಂದಿರೇ ಸೀರೆಯ ಸೆರಗಿನ ಲಾಭ ಕಂಡಿರಲ್ಲವೆ..

*. ಹುಂ….ಇದೆಲ್ಲ ಶಾಲಿನಿಯಂತ ಎಲ್ಲ ಗೃಹಿಣಿಯರ ನಿತ್ಯ ಕಾಯಕ,ನಿತ್ಯ ಬವಣೆ. ಅಡುಗೆ ಮನೆಯಲ್ಲಿ ಒಮ್ಮೆ ಒಂದು ಜಾಗದಲ್ಲಿಟ್ಟರೆ ಮತ್ತೊಮ್ಮೆ ಹುಡುಕಿದರೆ ಅಲ್ಲಿ ಸಿಗದ ವಸ್ತುಗಳು.ಒಲೆಯ ಮೇಲೆ ಹಾಲಿಟ್ಟು ಅದು ಕುದಿಯಿತೆಂದು ಕೆಳಗಿಳಿಸಲು ತಿರುಗಿ ನೋಡಿದರೆ ಇಕ್ಕಳ ಮಾಯ.ಅಗ್ನಿದೇವ ಕ್ಷೀರ ಧಾರೆಯ ತನ್ನೊಳಗೆ ಆಹುತಿ ತೆಗೆದುಕೊಳ್ಳುವ ಮೊದಲೇ ಹಾಲಿನ ಪಾತ್ರೆ ಕೆಳಗಿಳಿಸಲು ಆಕೆಗೆ ಆ ಕೂಡಲೆ ಹೊಳೆದ ಉಪಾಯ ತನ್ನ ಸೀರೆಯ ಸೆರಗು.ನೋಡಿ ಆಕೆ ಬಲು ಜಾಗರೂಕತೆಯಿಂದ ಸೀರೆಯ ಸೆರಗಿನ ಆಸರೆಯಿಂದ ಬಿಸಿ ಹಾಲಿನ ಪಾತ್ರೆ ಕೆಳಗಿಡುವ ರೀತಿ…

* ಹಾ…ಎಷ್ಟು ಹೇಳಿದರೂ ಅಷ್ಟೇ…ಸಂಜೆ ತನ್ನ ಕೆಲಸ ಮುಗಿಸಿ ಮನೆ ಅಂಗಳ ಕ್ಕೆ ಕಾಲಿಟ್ಟೊಡನೆ ಆಕೆಗೆ ಅಲ್ಲೇ ನಳದ ನೀರಿಗೆ ಬೊಗಸೆ ಒಡ್ಡಿ ಮುಖ ತುಂಬ ನೀರು ಎರಚಿ ಒಂದು ನಿಮಿಷ ಬಿಟ್ಟು ಮತ್ತೆ ತನ್ನ ಸೀರೆ ಸೆರಗಿನಿಂದ ಮೊಗವನೊರಸಿಕೊಂಡರೆ ಅದುವೇ ಸುಖ…ಟವೆಲ್,ಟಿಶ್ಯೂ,ಯಾವುದೂ ಈ ಸೆರಗಿನಲ್ಲೊರೆಸುವ ಖುಷಿಗೆ ಸಮನಲ್ಲ…

*. ನಮ್ಮೂರಿನ ಶರಧಿ ಅಂದರೆ ಬಲು ಆಪ್ಯಾಯಮಾನ ಬಯಲು ಸೀಮೆಯ ವನಿತೆ ಸುನಿಧಿಗೆ.ಅಂತೂ ಮಧ್ಯಂತರ ರಜಾ ಸಮಯದಲ್ಲಿ ಏನೆಲ್ಲ ಹೊಂದಾಣಿಕೆಯ ನಂತರ ಬಂದಳಾಕೆ ಮಲ್ಪೆಯ ಸಮುದ್ರ ತೀರಕೆ.ಬಸ್ಸಿನಲ್ಲಿ ಕುಳಿತು ನಿಸರ್ಗದ ಆಸ್ವಾದನೆ ಯಲ್ಲಿದ್ದವಳಿಗೆ ಒಮ್ಮೆಗೆ ಮೂಗಿಗೆ ಬಡಿಯಿತು ತಡೆಯಲಾರದ ವಾಸನೆ.ತನ್ನ ಕೈ ಚೀಲದಲ್ಲಿದ್ದ ಕರವಸ್ತ್ರವನ್ನು ಹುಡುಕುವಷ್ಟು ತಾಳ್ಮೆಯಿರದ ಆಕೆಯ ಕೈ ಕೂಡಲೆ ಹೋದದ್ದು ಸೆರಗಿಗೆ… ಸೀರೆಯ ಸೆರಗು ಈಗ ಮೂಗಿಗೆ ಬಡಿದ ದುರ್ನಾತದ ರಕ್ಷಣೆಗೆ…

*.ಅಲ್ಲಿ ನೋಡಿ ಮದುಮಗಳಿಗೆ ಸಿಂಗರಿಸುತ್ತಿದ್ದಾಳೆ ಆಕೆಯ ಸಹೋದರಿ ರಶ್ಮಿ ಹಾಗು ಸ್ನೇಹಿತೆಯರು. ಅಪರೂಪದಲ್ಲಿ ಹಾಕಿದ ಪೊನ್ನಂಗಾಯಿ ಕಾಯಿಯ ಕಾಡಿಗೆ ಕಣ್ಣಿನಿಂದ ಇಳಿಯುತ್ತಿದೆ. ಕರವಸ್ತ್ರವೂ ಇಲ್ಲ, ಟಿಶ್ಯೂ ಕೂಡಾ ಕಾಣ್ತಾ ಇಲ್ಲ.ಇರುವುದೊಂದೇ ಆಕೆಯ ಸೀರೆಯ ಸೆರಗು.ತನ್ನ ನಲ್ಮೆಯ ತಂಗಿಗೆ, ತನ್ನ ಪ್ರೀತಿಯ ಸೀರೆಯ ಸೆರಗಿನಿಂದ ಕಾಡಿಗೆ ಒರಸುತ್ತಾ ಮುಖದ ಅಂದಕ್ಕೆ ಕೊನೆಯ ಸ್ಪರ್ಶ ನೀಡುತ್ತಿದ್ದಾಳೆ.

* ಅಲ್ಲಾ ಎಷ್ಟು ಸಲ ಹೇಳಿದರೂ ಅರ್ಥ ವೇ ಆಗಲ್ಲ ಈಕೆಗೆ…. ಆಗಾಗ ಕೈ ತೊಳೆಯುವುದು ,ಮತ್ತೆ ಒದ್ದೆ ಕೈಯನ್ನು ಸೀರೆ ಸೆರಗಲ್ಲಿ ಒರೆಸಿಕೊಳ್ಳುವುದು… ಏನಾದರೂ ಮುಟ್ಟಿ ತೊಳೆದ ಕೈ ಎದುರಲ್ಲಿ ಪುಟ್ಟ ಕರವಸ್ತ್ರ ಇದ್ದರೂ ತನ್ನಷ್ಟಕ್ಕೇ ಕೈ ಒರೆಸಲು ಎಳೆಯುವುದು ಸೀರೆಯ ಸೆರಗನ್ನು…

* .ಈಗೆಲ್ಲಾ ಕಡೆ ಕಿವಿಗೆ ಹಾಕುವ ಗುಗ್ಗಿ ಕಡ್ಡಿ,ಬಡ್ ಗಳದ್ದೇ ಹಾವಳಿ‌. ಅಗ್ಗದ ಮಾಲುಗಳು ಸಿಕ್ಕಿ ಅದರಿಂದ ಆಗುವ ರಾಧ್ಧಾಂತವೇ ಬೇಡವೆಂದು ಆಧುನಿಕ ಉಪಕರಣಗಳಿಂದ ದೀರ ಇರುವ ನಮ್ಮ ಸಾವಿತ್ರಮ್ಮನಿಗೆ ತನ್ನ ಸೀರೆಯ ಸೆರಗೇ ತನ್ನ ಮೂಗನ್ನು ಮತ್ತು ಕಿವಿಯನ್ನು ಸ್ವಚ್ಛ ಗೊಳಿಸುವ ಸಾಧನ.ಈ ಅತೀ ಅಗ್ಗದ ವಿಧಾನಕ್ಕೆ ದುಡ್ಡೂ ಬೇಕಿಲ್ಲ,ಅಡ್ಡ ಪರಿಣಾಮಗಳೂ ಇಲ್ಲ.

*. ಅಲ್ಲಿ‌ನೋಡಿ.. ನಮ್ಮೂರಲ್ಲಿ ಹುಟ್ಟಿ ಬೆಳೆದರೂ ಈ ಪಾವನಿ ಮದುವೆ ಆದದ್ದು ದೂರದ ಗುಜರಾತಿನ‌ ಒಬ್ಬ ಮಾರ್ವಾಡಿ ಸಾಹುಕಾರನನ್ನು. ಒಂದಷ್ಟು ಗತ್ತು,ದೌಲತ್ತು… ಅದರೊಂದಿಗೆ ಇಡೀ ಕುಟುಂಬದ ಜವಾಬ್ದಾರಿ. ಯಜಮಾನ ಕೇಳಿದಾಗಲೆಲ್ಲ ಕೊಡಲು ಮನೆಯ ತ್ರಿಜೋರಿಯ ಕೀಲಿ ಹತ್ತಿರದಲ್ಲೇ ಇರಬೇಕು .ಅಲ್ಲದೆ ತನ್ನ ಬಳಿಯಲ್ಲಿ ಇದ್ದರೆ ಸುರಕ್ಷಿತವು ಹೌದು .ಅದಕ್ಕೆ ಯಾವುದೇ ಕೆಲಸ ಮಾಡುವಾಗ ತೊಂದರೆ ಆಗದಂತೆ , ಅದು ಕಳೆದು ಹೋಗದಂತೆ ತನ್ನ ಬಳಿಯೇ ಇರಿಸಿಕೊಳ್ಳಲು ಆಕೆ ಕಂಡುಕೊಂಡ ಸುರಕ್ಷಿತ ಸಮರ್ಪಕ ಜಾಗವೆಂದರೆ ತನ್ನ ಸೀರೆಯ ಸೆರಗಿನ ಅಂಚು‌. ಇಡೀ ಮನೆಯ ವಹಿವಾಟೇ ತನ್ನದೆಂಬಂತೆ ಘನ ಗಾಂಭೀರ್ಯದಿಂದ ಓಡಾಡುತ್ತಿರುವ ಆಕೆಯ ಗತ್ತು ನೋಡಿ .

*.
ನಮ್ಮ ಸಾನ್ವಿಯ ಮಗಳು ಸಂಪ್ರೀತಿ ಬಲು ತುಂಟಿ . ಯಾವಾಗಲೂ ಅರ್ಜೆಂಟು ಗಡಿಬಿಡಿ. ಕೊಟ್ಟ ತಿಂಡಿಯನ್ನು ಗಬ ಗಬನೆ ನುಂಗಿ ಪ್ಲೇಟನ್ನು ಅಲ್ಲೇ ಬಿಸಾಡಿ ಕೈ ತೊಳೆದು ಓಡಲು ಅಣಿಯಾದವಳಿಗೆ ಮುಖ ಒರೆಸಿಕೊಳ್ಳಲು ಬೇಕು ತಾಯಿಯ ಸೀರೆಯ ಸೆರಗು. ಅದರಲ್ಲಿ ಸಿಗುವ ಸುಖ ಬೇರೆಲ್ಲೂ ಇಲ್ಲ ಎಂಬುದು ಅವಳ ವಾದ. ಅದಕ್ಕೆ ಎದುರಾಡುವ ಹಾಗಿಲ್ಲ ಅಲ್ಲವೇ….

*
ನಮ್ಮ ರತ್ನಕ್ಕನಿಗೆ ಹೂ ಬಿಡಿಸಿ ತಂದು ಮಾಲೆ ಪೋಣಿಸಿ ದೇವರಿಗೆ ಕೊಡುವುದು ಅಂದರೆ ಬಹಳ ಇಷ್ಟದ ಕೆಲಸ. ಮಳೆ ಇರಲಿ ಬಿಸಿಲಿರಲಿ, ಅವರದು ಅದು ನಿತ್ಯ ಕಾಯಕ .ಹೂ ಬುಟ್ಟಿಯ ತರಲು ಮರೆತರೂ ಅವರಿಗಿಲ್ಲ ಚಿಂತೆ. ತನ್ನ ಸೀರೆಯ ಸೆರಗನ್ನೇ ಹೂ ಬುಟ್ಟಿಯನ್ನಾಗಿಸಿ ಪುಷ್ಪಗಳನ್ನು ಒಟ್ಟುಗೂಡಿಸಿ ತರುವ ಆಕೆಯ ನೋಡಿ ..

*
ನಮ್ಮ ಈ ಲಲಿತಕ್ಕ ಭಾರಿ ಸಂಪ್ರದಾಯಸ್ತೆ. ಮನೆಗೆ ಬಂದ ಮುತ್ತೈದೆಯರಿಗೆ ಅರಶಿನ ಕುಂಕುಮ ಹೂ ರವಕೆ ಕಣ ನೀಡಿ ಆದರಿಸುವುದು ಇವರಿಗೆ ಬಲು ಅಚ್ಚುಮೆಚ್ಚಿನ ಕಾಯಕ. ಅಲ್ಲಿ ನೋಡಿ ಒಬ್ಬರು ಸಂಪ್ರದಾಯಬದ್ಧವಾಗಿ ಸೆರಗ ಹೊದ್ದು ಬಾಗಿನ ನೀಡಿದರೆ ಇನ್ನೊಬ್ಬ ಮುತ್ತೈದೆ ತನ್ನ ಸೆರಗನು ಒಡ್ಡಿ ಬಾಗಿನ ಸ್ವೀಕರಿಸುವುದು ನೋಡ ಲೆಷ್ಟು ಚಂದ ಅಲ್ಲವೇ …

*ಪಾಪ ನಮ್ಮ ಮಾಲಿನಿಯ ಮನೆಯಲ್ಲಿ ಸ್ವಲ್ಪ ಆರ್ಥಿಕ ಬಡತನ, ಆದರೆ ಪ್ರೀತಿಗೆ ಬಡತನವಿಲ್ಲ . ಆಕೆಗೆ ತನ್ನ ಮುದ್ದು ಮಕ್ಕಳೆಂದರೆ ಬಲು ಅಕ್ಕರೆ .ಹಾಗಾಗಿ ಸಂಜೆ ಮನೆಗೆ ಬರುವಾಗ ಒಂದಷ್ಟು ಚಾಕಲೇಟ್ ಇಲ್ಲವೇ ಸಿಹಿ ತಿನಿಸು ಕಟ್ಟಿಕೊಂಡು ಬರುತ್ತಾಳೆ .ಅಮ್ಮ ತನ್ನ ಸೆರಗಿನಲ್ಲಿ ಕಟ್ಟಿಕೊಂಡು ಬರುವ ಸಿಹಿ ತಿಂಡಿ ನೋಡಿ ಮಕ್ಕಳಿಗೆ ಖುಷಿಯೋ ಖುಷಿ. ಸೆರಗಿಗೆ ಬಿಗಿದ ಗಂಟನ್ನು ಬಿಚ್ಚಿ ತಿಂಡಿ ಹಂಚುವಾಗ ಆಕೆಯ ಮುಖದಲ್ಲಿ ಸಂತೃಪ್ತಿ ,ಮಕ್ಕಳ ಮೊಗದಲ್ಲಿ ಖುಷಿ ನೋಡಿ…

* ಆ ಮಠದ ಸ್ವಾಮೀಜಿ ಅಂದರೆ ಬಲು ಗೌರವ ಎಲ್ಲರಿಗೂ… ನಿತ್ಯ ಪ್ರವಚನ ಮುಗಿದ ಬಳಿಕ ಅವರು ನೀಡುವ ಮಂತ್ರಾಕ್ಷತೆಯನ್ನು ಸೆರಗು ಹೊದ್ದು ಭಕ್ತಿ ಭಾವದಿಂದ ಸ್ವೀಕರಿಸಿ ಅದನ್ನು ಸೆರಗತುದಿಯಲ್ಲೇ ಗಂಟು ಹಾಕಿ ಜೋಪಾನವಾಗಿ ಮನೆಗೆ ತಂದು ಮನೆ ಮಂದಿಗೆ ನೀಡಿ ಮನೆಯಲ್ಲಿದ್ದ ಅಕ್ಷಯ ಪಾತ್ರೆ ಅಕ್ಕಿಯ ಪಾತ್ರೆಗೆ ಹಾಕಿದರೆ ಏನೋ ನೆಮ್ಮದಿ.

* ಈಗೀಗಂತೂ ಆವಾಗಾವಾಗ ವಿದ್ಯುತ್ ಕೈಕೊಡುವ ಕಿರಿಕಿರಿ. ಆ ಬೀಸಣಿಗೆಯೋ ಒಮ್ಮೆ ಒಂದು ಕಡೆ ಇದ್ದರೆ ಇನ್ನೊಮ್ಮೆ ಇನ್ನೊಂದು ಕಡೆ, ಬೇಕೆಂದರೆ ಸಿಗುವುದೇ ಇಲ್ಲ ..ಇರಲಿ ಬಿಡಿ…ನನ್ನ ಪೊಲ್ಲು ಮಗುವಿಗೆ ನನ್ನ ಸೀರೆಯ ಸೆರಗಿನ ಗಾಳಿಯೇ ಹಿತ. ಮಲಗೂ ನನ್ ಪುಟ್ಟ ..ನೀ ಮಲಗು ನನ್ ಚಿನ್ನಾ…

*…ಅಬ್ಬಾ…ಎಷ್ಟು ತುಂಟ ಇವ.. ಬೇಕೆಂದರೆ ಕೈಗೇ ಸಿಗುವುದಿಲ್ಲ .ನಂಗಂತೂ ಸಾಕಾಯಿತು… ಅಲ್ಲಾ ಇವ ಈ ಮಳೆಯಲ್ಲಿ ಹೀಗೆ ನೆನೆದು ಬಂದರೆ ಹೇಗೆ? ಶೀತ ಜ್ವರ ಬರದೇ ಇದ್ದೀತಾ… ಬಾರೋ ಇಲ್ಲಿ.. ನೀರಿಳಿಯುತ್ತಿರುವ ತಲೆಯನ್ನು ಒಮ್ಮೆ ತಿಕ್ಕಿ ತಿಕ್ಕಿ ಒರೆಸುವೆ….

*. ಅಲ್ಲ ಮಾರ್ರೆ ನನ್ನ ಮಗಳಿಗೆ ತುಂಬಾ ನಾಚಿಕೆ. ನಾವು ಮಾತ್ರ ಇದ್ದರೆ ಅವಳ ಕಿತಾಪತಿ ಮಾತುಕತೆಗೆ ಅಂತ್ಯ ಇಲ್ಲ… ಪಟ ಪಟ ಮಾತನಾಡುತ್ತಾ ಕೈಕಾಲಡಿ ಬೀಳುವಂತೆ ಓಡಾಡುವ ಈ ಚಿನಕುರುಳಿ ಯಾರಾದರೂ ಬಂದದ್ದು ಕಂಡರೆ ಮಾತ್ರ ನನ್ನ ಸೆರಗಿನೊಳಗೆ . ಬಂದವರ ಮಾತು ,ನೋಟ ,ಪ್ರಶ್ನೆಯಿಂದ ಅವಳಿಗೆ ಬಚ್ಚಿಟ್ಟುಕೊಳ್ಳಲು ನನ್ನ ಸೀರೆಯ ಸೆರಗೇ ಅವಳಿಗೆ.. ಆಸರೆ ….

*. ಇಲ್ಲೇ ಹತ್ತಿರ ಸ್ವಲ್ಪ ಉದ್ಯಾನವನಕ್ಕೆ ಅಂತ ಮಗುವನ್ನು ಕರೆದುಕೊಂಡು ಹೋಗಿದ್ದೆ.ಆಟ ಆಡಿ ಆಡಿ ನಮ್ ಗೊಂಬೆಗೆ ಅಲ್ಲೇ ನಿದ್ದೆ.. ಮತ್ತೇನು ಮಾಡೋದು .ನನ್ನ ಕಾಲೇ ಅವಳಿಗೆ ಹಾಸಿಗೆ‌‌.ನನ್ನ ಸೆರಗೇ ಅವಳಿಗೆ ಹೊದಿಕೆ …

* ಮನೆ ಒಳಗೆ ಒಂದಿಷ್ಟು ಗಡಿಬಿಡಿಯಲ್ಲಿದ್ದಾಗ ಕೆಳಗೆ ಸೊಪ್ಪು ಬೇಕೇನವ್ವ.‌ ಕಾಯಿಪಲ್ಲೆ ಬೇಕೆನವ್ವ ಅಂತ ಕೂಗು ಕೇಳಿತು. ದಿನ ಇಡುವ ಜಾಗದಲ್ಲಿ ಕೈ ಚೀಲ ಕಾಣೆ .ಪರವಾಗಿಲ್ಲ ಇದನ್ನು ಹುಡುಕುತ್ತಾ ಕುಳಿತರೆ ನಮ್ಮ ಸೊಪ್ಪಿನವಳು ಹೋಗಿ ಆದೀತು…
ಇದೆಯಲ್ಲ ನನ್ನ ಸೆರಗು.. ಇದರಲ್ಲೇ ಮೆಣಸು ಬೀನ್ಸು ಟೊಮೆಟೊ ಹಾಕಿಸಿ ಕೊಂಡು ಬರುತ್ತೇನೆ….

*. ಇಲ್ಲೇ ನಮ್ಮ ತೋಟದಲ್ಲಿ ಒಂದಷ್ಟು ಸಪೂರದ ಮರದ ಅಡರುಗಳನ್ನು ಸೇರಿಸಿಟ್ಟಿದ್ದೆ .ಆಚೆ ಮನೆಯಲ್ಲಿ ಮನೆ ಕೆಲಸ ಮಾಡುತ್ತಿದ್ದ ಕಸ್ತೂರಿಯಕ್ಕ ಇದನ್ನು ಉರುವಲಿಗೆ ಕೊಂಡೊಯ್ಯಲೇ ಎಂದು ಕೇಳಿ ಮತ್ತೆ ಆ ಹುಡುಗಿ ಸಲೀಸಾಗಿ ತನ್ನ ಸೀರೆಯ ಸೆರಗನ್ನು ಸಿಂಬಿ ಮಾಡಿ ಇಡೀ ಕಟ್ಟನ್ನು ಹೆಗಲಿಗೇರಿಸಿಕೊಂಡು ಸಲೀಸಾಗಿ ಹೊರಟೇಬಿಟ್ಟಳಲ್ಲ….

* ಬೇಡ ಬೇಡ ಅಂದರೂ ಅಣ್ಣನ ದೊಡ್ಡ ಸೈಕಲ್ ತಗೊಂಡು ಹೋಗಿ ರಸ್ತೆಯಲ್ಲಿ ಬಿಟ್ಟು ಇದೀಗ ನೋಡಿ ಮೈಯೆಲ್ಲಾ ಅರಚಿದ ಗಾಯ ಮಾಡಿಕೊಂಡು ಬಂದಿದ್ದಾನೆ. ಅರೆ ಛೆ ..ಛೆ‌‌..ಕಾಲ ಬೆರಳು ಕಿತ್ತೋಗಿ ರಕ್ತ ಸುರಿತಾ ಇದೆ …ಸದ್ಯಕ್ಕೆ ಯಾವ ಪ್ರಥಮ ಚಿಕಿತ್ಸೆಯ ಪೆಟ್ಟಿಗೆ ( ಫಸ್ಟ್ ಏಯ್ಡ್ ಬಾಕ್ಸ್) ಕಾಣ್ತಾ ಇಲ್ಲ .ಇರಲಿ ನನ್ನ ಸೀರೆಯ ಸೆರಗು ಇದೆಯಲ್ಲ… ಅದನ್ನೇ ಸ್ವಲ್ಪ ಕತ್ತರಿಸಿ ರಕ್ತ ಬರದಂತೆ ಗಾಯಕ್ಕೆ ಕಟ್ಟುಹಾಕುವೆ… ಮಹಾಭಾರತದಲ್ಲಿ ದ್ರೌಪದಿ ಕೂಡ ಕೃಷ್ಣನ ಕಾಲಿನಲ್ಲಿ ರಕ್ತ ಬರುವಾಗ ಹೀಗೆಯೇ ಮಾಡಿದ್ದಲ್ಲ ..

* ಅಲ್ಲಾ ಮಾರ್ರೆ..ಇದೀಗ ಕನ್ನಡಕ ಹುಡುಕಲು ಕನ್ನಡಕ ಬೇಕೆಂಬಂತಾಗಿದೆ..ಅದನ್ನು ಅಲ್ಲಿ ಇಲ್ಲಿ ಇಟ್ಟು ಬೇರೆಲ್ಲೋ ಹುಡುಕುವುದು. ಅದರ ಪೆಟ್ಟಿಗೆ, ಸಣ್ಣ ತುಂಡು ತೆಳು ಬಟ್ಟೆ ಎಲ್ಲಿ ಉಂಟೋ… ಯಾರಿಗೊತ್ತು…ಇರಲಿ ಕನ್ನಡಕ ಸಿಕ್ಕಿತು.. ಪರವಾಗಿಲ್ಲ ಅದು ಸರಿಯಾಗಿ ಕಾಣಬೇಕಾದರೆ ನಾನು ನನ್ನ ಸೀರೆ ಸೆರಗಿನಿಂದ ತಿಕ್ಕಿ ತಿಕ್ಕಿ ಒರೆಸಬೇಕು .ಅಲ್ವಾ …
.*. ಇವರು ನಮ್ಮನೇಲಿರುವ ಒಬ್ರು ಭಾರಿ ಸ್ಮಾರ್ಟ್ ಅಜ್ಜಿ .ಇಷ್ಟು ವಯಸ್ಸಾದರೂ ಅವರ ಹಣದ ಲೆಕ್ಕಾಚಾರ ಮಾತ್ರ ಸೂಪರ್ .ಮತ್ತೆ ತುಂಬಾ ಜಾಗೃತೆ ಕೂಡ.. ಆಗೆಲ್ಲ ಮನೆ ತುಂಬಾ ಮಕ್ಕಳು, ಇಲ್ಲವೇ ಮನೆಗೆ ಬರುವ ಭಿಕ್ಷುಕರು ಬಹಳ . ಹಾಗಾಗಿ ಇವರ ಸೆರಗಿನ ತುದಿಯಲ್ಲಿ ಒಂದಷ್ಟು ಚಿಲ್ಲರೆ ಗಂಟು. ಈ ಮಕ್ಕಳನ್ನು ರಮಿಸಲೂ ಆಯಿತು, ಭಿಕ್ಷುಕರನ್ನು ಸಾಗ ಹಾಕಲೂ ಆಯಿತು. ಒಳಗೆ ಹೊರಗೆ ಹುಡುಕದೆ ನಿಂತಲ್ಲೇ ಸೆರಗಿನ ಗಂಟನ್ನು ಸಡಿಲಿಸಿ, ಅವರಿಗೆ ಇವರು ನಾಣ್ಯ ಕೊಡುವ ಗತ್ತು ನೋಡಬೇಕು ..

ಈ ರೀತಿ ಕಾರ್ಯಕ್ರಮಗಳು ಇರುವಾಗ ಬಸ್ಸಿನಲ್ಲಿ ಪ್ರಯಾಣ ಮಾಡುವಾಗೆಲ್ಲ ಈ ಪುಟ್ಟ ಮಕ್ಕಳಿಗೆ ಹೇಗೆ ಗೊತ್ತಾಗುತ್ತೋ ಓ ಅಂತ ಅಳಲು ಶುರು ಮಾಡುತ್ತವೆ. ಏನು ಕೊಟ್ಟರೂ ಬಾಯಿ ಮುಚ್ಚುವುದಿಲ್ಲ. ಅದಕ್ಕೋ ಒಂದೆಡೆ ಹಸಿವು ಇನ್ನೊಂದೆಡೆ ನಿದ್ದೆ. ಹೀಗಿರುವಾಗ ತುಂಬಾ ಜನ ಇರುವಲ್ಲಿ ಒಂದು ಬದಿಯಲ್ಲಿ ಕುಳಿತು ಮಗುವಿಗೆ ಸ್ತನ್ಯಪಾನ ಮಾಡಿಸಲು ಸೆರಗು ಹೊದ್ದು ಅದರ ಹೊಟ್ಟೆ ತುಂಬ ಹಾಲು ಕುಡಿಸಲು ನಮ್ಮ ಮಾನ ಕಾಪಾಡಲು ನಮಗೆ ನಮ್ಮ ಸೆರಗೇ ಗತಿ

*ಅಲ್ಲಾ ಈಗೀಗ ಈ ಹವಾಮಾನ ಯಾವ ರೀತಿ ಬದಲಾಗುತ್ತದೋ? ಬೆಳಿಗ್ಗೆ ಹೊರಟಾಗ ಸ್ವಲ್ಪ ಕೂಡ ಮೋಡ ಇರಲಿಲ್ಲ.. ಒಳ್ಳೆ ಹತ್ತಿ ಹರಡಿದಂತೆ ಶುಭ್ರ ಆಕಾಶವಿತ್ತು .ಹಾಗಾಗಿ ಛತ್ರಿ ಮನೆಯಲ್ಲಿ ಬಿಟ್ಟು ಬಂದೆ .ಆದರೆ ಬಸ್ ಹತ್ತಿ ಹತ್ತು ನಿಮಿಷ ಬಸ್ ಹತ್ತಿ ಮತ್ತೆ ಇಳಿಯುವಾಗ ಹನಿ ಹನಿ ತುಂತುರು ಮಳೆ .ಪರವಾಗಿಲ್ಲ ,ಸ್ವಲ್ಪ ದೂರ ತಾನೇ …ಸೆರಗನ್ನೇ ಕೊಡೆಯನ್ನಾಗಿಸಿ ಮಳೆಗೆ ಅಡ್ಡವಿಟ್ಟು ಮನೆಕಡೆ ಹೋದರಾಯಿತು. ಮಳೆಗೂ ನೀನೇ ಕೊಡೆ.. ಬಿಸಿಲಿಗೂ ನೀ ಕೊಡೆ .ನಿನ್ನ ನಾನು ಬಿಡೆ.

.* ಅಬ್ಬಾ.ರಾತ್ರಿ ಒಮ್ಮೆಲೇ ಮಗುವಿನ ಅಳು. ಮಗುವಿನ ಹಣೆ ಮುಟ್ಟಿ ನೋಡಿದರೆ ಸುಡು ಸುಡು ಬಿಸಿ. ರಾತ್ರಿ ಇಡೀ ಸೆರಗಿನ ತುದಿಗೆ ಸಣ್ಣ ಪಾತ್ರೆಯಲ್ಲಿನ ತಣ್ಣನೆ ನೀರನ್ನು ಅದ್ದಿ ಮಗುವಿನ ಹಣೆಗಿಟ್ಟು ಗೋಡೆಗೆ ಒರಗಿ ಅಲ್ಲೇ ತೂಕಡಿಸಿ ಈಗ ಮಗುವಿನ ಹಣೆ ಬೆಳಗ್ಗೆ ಮುಟ್ಟಿ ನೋಡಿದರೆ ಜ್ವರ ಸ್ವಲ್ಪವಾಸಿ .

*. ಬೆಳಿಗ್ಗೆ ಕಚೇರಿ ಕೆಲಸಕ್ಕೆ ಹೊರಡುವ ಧಾವಂತದಲ್ಲಿದ್ದಾಗಲೇ ಬಂದರು ನೆರೆ ಮನೆಯ ಒಡೆಯ. ಬೇಗ ಬೇಗ ಕಾಫಿ ಮಾಡಿಕೊಂಡು ತಂದಿಡುವ ಅಂದರೆ ಲೋಟ ಪೂರ್ತಿ ಬಿಸಿ ಬಿಸಿಬಸಿ….ಟ್ರೇ ಹುಡುಕುವ ವ್ಯವಧಾನ ಎಲ್ಲಿದೆ …ಇರಲಿ ಇದೆಯಲ್ಲಾ ಸೀರೆ ಸೆರಗು. ಅದುವೇ ನಮಗೆ ಎಲ್ಲದಕ್ಕೂ .‌‌‌

*. ಆಗದಿಂದ ಹೇಳ್ತಾ ಇದ್ದೆ. ಅಲ್ಲಿ ಟೀಪಾಯ್ ಮೇಲೆ ಕಾಫಿ ಇಟ್ಟಿದ್ದೇನೆ, ಬೇಗ ಕುಡಿಯಿರಿ ಎಂದು. ಬೆಳಿಗ್ಗೆ ಎದ್ದು ಪೇಪರ್ ಓದುವುದು ,ಮೊಬೈಲ್ ನೋಡುವುದು ಇದೇ ಆಯ್ತು .ಎಲ್ಲೋ ಜ್ಞಾನ. ಕಡೆಗೂ ಅವಸರದಲ್ಲಿ ಮೊಬೈಲ್ ಮೇಲೆ ಕಾಫಿ ಚೆಲ್ಲಿಕೊಂಡು ನನಗೆ ಬೈಗುಳು. ಮೊಬೈಲ್ ಒರಸಲು ಬಟ್ಟೆ ತಾ ಅಂತ .ಅಷ್ಟು ಕಾಯಲು ಎಲ್ಲಿ ಪುರುಸೊತ್ತು… ನನ್ನ ಸೆರಗೇ ನನಗೆ ಮೊಬೈಲ್ ಒರಸಲು ಸಾಧನ…ಅಬ್ಬಾ ಅಂತೂ ಮೊಬೈಲ್ ಸ್ವಚ್ಛವಾಯಿತು…

ಹಾ..ಒಂದು ಹೆಣ್ಣಿನ ಸೀರೆ ಸೆರಗಿಗೆ ಎಂತಹ ಮಹತ್ವವಿದೆ ಕಂಡಿರಲ್ಲ ..ಅಷ್ಟೇ ಅಲ್ಲ ಇದರ ಉಪಯೋಗ ಹೇಳುತ್ತಾ ಹೋದರೆ ಇನ್ನೂ ಇದೆ . ನೋಡಿದಿರಲ್ಲ , ಭೂಮಿಗೆ ಬಂದ ಘಳಿಗೆಯಿಂದ ದೊಡ್ಡವರಾಗುವ ತನಕ ತಾಯಿಯ ಸೀರೆ ಸೆರಗು, ಮದುವೆಯಾಗುವ ದಿನ ಮದುಮಗ ಕಲಶ ಕನ್ನಡಿ ಹಿಡಿದ ತಂಗಿಯ ಸೆರಗು, ಬದುಕಿನುದ್ದಕ್ಕೂ ಪತ್ನಿಯ ಸೆರಗು …ಜೀವನದ ಅಂತ್ಯ ಕಾಲದಲ್ಲಿ ಮಗಳು, ಸೊಸೆ ಮೊಮ್ಮಕ್ಕಳ ಸೆರಗಿನೊಂದಿಗೆ ಪುರುಷನ ಜೀವನದ ಸಾರ್ಥಕ್ಯ ಅಲ್ಲವೇ..
ಈ ನೀರೆಯ ಸೀರೆಯ ಸೆರಗಿನ ಬೆರಗಿಗೆ ಜೈ ಅನ್ನೋಣವೇ..

 
 
 
 
 
 
 
 
 
 
 

Leave a Reply