ಸಂಜೆ ಮಲ್ಲಿಗೆ ~✍️ ವಿ.ಆರ್. ಭಟ್ , ಕುಕ್ಕುಜೆ 

ಇಂದು ಅರಳಿದ ಸಂಜೆ ಮಲ್ಲಿಗೆ
ಹೊತ್ತು ತಂದ ನೆನಪು
ಮುತ್ತು ಹರಿದಿದೆ ದಳದ ಮೇಲೆ
ಮೋಡ ಸರಿದು ಬೆಳಕು

ಮಳೆಯ ನೀರನು ಉಂಡ ನೆಲಕೆ
ಗರಿಕೆ ಹೆರುವ ಕನಸು..
ಮಣ್ಣ ಒಳಗೆ ಮೌನ ಸಂತೆ
ಚಿಟ್ಟೆ ಹುಳದ ಬದುಕು

ಮಾತು ಮುರಿದು ಧ್ಯಾನ ಹುಗಿದು
ಕಣ್ಣ ತೇವ ರೂಪ
ಒಮ್ಮೆ ರಾಗ ಒಮ್ಮೆ ಗೀತ
ಮನದ ಒಳಗೆ ಧೂಪ

ಗುಪ್ತ ರೂಪದಿ ಹರಿವ ನೀರಿಗೆ
ಚಿಗುರ ಮುಟ್ಟುವ ಮನಸು
ಸಾಗಿ ಕಡಲ ಸೇರುವ ಕಡೆಗೆ
ಮನದಿ ಆಸೆಯ ತುಣುಕು

ಹಚ್ಚಿದ ದೀಪ ಆರದಂತೆ
ಅಡ್ಡ ಕೈಯ ಹಿಡಿದು
ಮಂದ ಬೆಳಕಲಿ ಮೂಡಿದ ಹಾದಿಯು
ಸಾಗಲಿಂತು ನಡೆದು

(ಎಲ್ಲವನ್ನೂ ಮರೆತು ಮನೆಯ ಜಗಲಿಯಲ್ಲಿ ಕುಳಿತು ಮಳೆಹನಿಗಳನ್ನೇ ದಿಟ್ಟಿಸುತ್ತಾ ಕೂತವಗೆ ಬಂದ ಹೂವಿನ ಗಂಧವು ಆಕಸ್ಮಿಕವೇನಲ್ಲ.ಆದರೂ ಆ ಸುಗಂಧ ಹೊತ್ತು ತಂದ ಹಾರೈಕೆಗಳು ಮೈಯ ಸೋಕಿದಾಗ ಸುರಿಯುವ ಕಣ್ಣ ಹನಿಯು ವಿಸ್ಮಯ.ಹೋದ ವರ್ಷ ಹೊಸೆದ ಹೊಸ ಹೆಂಚಿಗೂ ಮಳೆಯ ಸಂಗಡವೇ ಹುರುಪು..!)

 

 
 
 
 
 
 
 
 
 
 
 

Leave a Reply