​​ನಿರಂತರತೆಯ ಪ್ರತೀಕ ನಮ್ಮಜ್ಜಿ~ಸಂಧ್ಯಾ ಶೆಣೈ ಉಡುಪಿ​​ 

ಈ ಕೊಡವನ್ನು ನೋಡಿದಾಗ ಒಂದು ರೀತಿ ನಗು ಬಂದರೂ ಸ್ವಲ್ಪ ಆಳವಾಗಿ ಚಿಂತಿಸಿದಾಗ ತನ್ನ ಕರ್ತವ್ಯ ನಿರ್ವ ಹಿಸುತ್ತಾ ಹಲವಾರು  ಪೆಟ್ಟುಗಳನ್ನು ತಿನ್ನುತ್ತ ಮೈತುಂಬಾ ಅಲ್ಲಿ ಇಲ್ಲಿ ತಾಗಿ ಗುದ್ದು  ತಿಂದ ತಗ್ಗುಗಳು ಕಾಣಿಸುತ್ತಾ ಇದ್ದರೂ ಇವತ್ತಿಗೂ ಅದು ತನ್ನ ಕರ್ತವ್ಯವನ್ನು ಮಾಡುವಷ್ಟು ತಾಕತ್ತು ಇಟ್ಟು ಕೊಂಡಿರುವುದು ಮಾತ್ರ ಬೆರಗಾಗುವ ವಿಚಾರ.​ ಇದರ ಮೇಲೆ ಚಂದ್ರಲೋಕದ ಮೇಲಿರುವ ಗುಳಿಗಳಷ್ಟು ನುಗ್ಗು ಬಿದ್ದಿದ್ದರೂ ಆಕಾರ ಕೆಟ್ಟರೂ ಇನ್ನೂ ಮೂಲೆ ಗುಂಪಾಗದೆ  ತನ್ನ ಕೆಲಸವನ್ನು ಮಾತ್ರ ಚಾಚೂ ತಪ್ಪದೆ  ಮಾಡುತ್ತಾ ಇದೆ.​​

ಇದನ್ನು ನೋಡುವಾಗ  ಯಾಕೋ ನನಗೆ ನಮ್ಮ ಬಾಲ್ಯದಲ್ಲಿ ಮನೆ ಮನೆಯಲ್ಲಿಯೂ ಕಾಣ ಸಿಗುತ್ತಿದ್ದಂತಹ ಅಜ್ಜ ಅಜ್ಜಿಯರ ನೆನಪಾಗುತ್ತಿದೆ.​ ನನ್ನ ಮನೆಯಲ್ಲೂ ನನ್ನ ಅಜ್ಜಿ ,ಅಂದರೆ ಅಪ್ಪನ ಅಮ್ಮ ಇದ್ದರು.​ ​ತೊಂಬತ್ತ ಮೂರು ವರ್ಷಗಳ ಬದುಕನ್ನು ಬಾಳಿದವರು. ಅದೆಷ್ಟು ಸಾರಿ ಬಿದ್ದಿದ್ದಾರೋ ಸೊ೦ಟ ಮುರಿದುಕೊಂಡಿದ್ದಾರೋ ಅವರಿಗೇ ಗೊತ್ತು .ಆದರೂ ಸಾಯುವ ತನಕ  ತಮ್ಮಿಂದಾದಷ್ಟು ಏನಾದರೊಂದು  ಕೆಲಸವನ್ನು ಮಾಡಿಕೊಡುತ್ತಿದ್ದರು.

ಕೈ ಕಾಲು  ಸರಿಯಾಗಿಯೇ ಆಡುತ್ತಿದ್ದ೦ತಹ  ಸಮಯದಲ್ಲಿ ಅಮ್ಮನಿಗೆ ಸರಿಸಾಟಿಯಾಗಿ,​ ​ಅಥವಾ ಅಮ್ಮನಿಗಿಂತ ಸ್ವಲ್ಪ ಹೆಚ್ಚೇ ಅನ್ನುವಷ್ಟು ಕೆಲಸವನ್ನು ಮಾಡುತ್ತಿದ್ದರು​. ಅಜ್ಜಿ ಎಂದರೆ ನಮ್ಮೆಲ್ಲರಿಗೂ ಒಂದು ಧೈರ್ಯದ ಮಾದರಿ. ಅಜ್ಜಿ ಜೊತೆಯಲ್ಲಿದ್ದರೆ ನಮಗೆಲ್ಲರಿಗೂ ನೂರಾನೆಯ ಬಲ.​ ​ಅಷ್ಟೊಂದು ಉತ್ತಮ ರೀತಿಯಲ್ಲಿ ಎಲ್ಲ  ಕೆಲಸಗಳಲ್ಲೂ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದರು.

ಅಂಗಳಕ್ಕೆ ಸೆಗಣಿ ಸಾರಿಸುವುದು, ಬೆರಣಿ ತಟ್ಟುವುದು, ಹಲಸಿನ ಎಲೆಯಲ್ಲಿ ಖೊಟ್ಟೆ ಕಟ್ಟುವುದು, ಹದವಾಗಿ ಹಪ್ಪಳ ವನ್ನು ತಟ್ಟುವುದು,​ ​ಸಂಡಿಗೆ ​ಹಾಕುವುದು, ಹೂ ಕಟ್ಟುವುದು ಹೀಗೆ ಎಲ್ಲವನ್ನೂ ನಮಗೆ ಕಲಿಸಿದ್ದು ನಮ್ಮ ಅಜ್ಜಿ​. ಆದರೆ  ಕ್ರಮೇಣ ವಯಸ್ಸಾದಂತೆ ಕೈಕಾಲಿನ ಬಲ  ಕಡಿಮೆಯಾಗಿ ಹೆಚ್ಚು ಓಡಾಡಲಾಗದ ಪರಿಸ್ಥಿತಿ ಬಂದಾಗಲೂ ಸುಮ್ಮನೆ ಕೂತು,​ ​ಮಲಗಿ ಸಮಯ ವ್ಯರ್ಥಗೊಳಿಸದೇ , ಬೆಳಿಗ್ಗೆ  ಎದ್ದು ಅಪ್ಪ ಕೊಯ್ದಿಟ್ಟ  ನಮ್ಮದೇ ಮನೆಯ ತೋಟದ ಹೂವುಗಳನ್ನು ಸುಂದರ ಮಾಲೆ ಮಾಡಿ ದೇವರ ಪೂಜೆಗಾಗಿ ಇಡುತ್ತಿದ್ದರು.

ಜೊತೆಗೆ ಪ್ರತಿ ದಿನವೂ ಯಾವುದೇ ಆದರೂ ಹೂ ಮುಡಿಯಲು ಆಸೆ ಪಡುವ  ನನ್ನಮ್ಮನಿಗೂ ಪ್ರೀತಿಯಿಂದ ಒಂದು ಹೂವಿನ ಮಾಲೆ. ಅಮ್ಮ ಅಡುಗೆ ಮಾಡಲು ತಯಾರಿ ನಡೆಸುವಾಗ ತರಕಾರಿಗಳನ್ನು ಆರಿಸುವುದು ನಾರು ತೆಗೆಯುವುದು ಇಂಥದ್ದನ್ನೆಲ್ಲಾ ಮಾಡುತ್ತಿದ್ದರು.​ ಕುಳಿತಲ್ಲೇ ಬತ್ತಿ ಹೊಸೆಯುತ್ತಿದ್ದರು.​  ಅವರು ಕೂತಲ್ಲೇ ನೀರು, ರಾಗಿ,​ ​ಅಕ್ಕಿ ಇಂಥ ಎಲ್ಲ ಅಗತ್ಯದ ಸಾಮಾನುಗಳೆಲ್ಲವನ್ನೂ ತಂದಿಟ್ಟರೆ​, ​ಅದನ್ನು ಚೆನ್ನಾಗಿ ತೊಳೆದು ಅದರಲ್ಲಿರುವ ಹೊಯಿಗೆಯನ್ನೂ ಕಸ ಕಡ್ಡಿಗಳನ್ನೂ ಒಂದೂ ಬಿಡದಂತೆ ನಾಜೂಕಾಗಿ ಸ್ವಚ್ಛಗೊಳಿಸಿ ಬಿಡುತ್ತಿದ್ದರು.

ನಾವೇನಾದರೂ ಹಲಸಿನ ಎಲೆಯ ಖೊಟ್ಟೆ ಕಟ್ಟಲು ಕೂತರೆ ನಾಲ್ಕು ನಾಲ್ಕು ಒಂದೇ ಸೈಜಿನ  ಹಲಸಿನ ಎಲೆ ಗಳನ್ನು  ಒಟ್ಟು ಮಾಡಿ ಕೊಡುತ್ತಿದ್ದರು. ಶ್ರಾವಣ ಮಾಸದಲ್ಲಿ ಚೂಡಿ ಕಟ್ಟುವಾಗ ನಾವು ತಂದಿಟ್ಟ ಹೂವುಗಳನ್ನು ಬೇರೆ ಬೇರೆ ಪಾಲು ಮಾಡಿ ಇಡುವುದು ಅವರ ಖುಷಿಯ ಕೆಲಸ​. ಒಂದೇ ಕಣ್ಣಿನಲ್ಲಿ ದೃಷ್ಟಿ ಇದ್ದರೂ ಕಿಟಿಕಿಯ ಬಳಿಯಲ್ಲಿ ಕೂತು ಯಾವುದಾದರೂ ಪುಸ್ತಕವನ್ನು ಓದುತ್ತಿದ್ದರು.ಕೊನೆಯ ದಿನದ ತನಕವೂ ಕೈಯಲ್ಲೊಂದು ಊರುಗೋಲು ಹಿಡಿದು ತಮ್ಮ ಅಗತ್ಯಕ್ಕಾಗಿ ಮನೆಯ ಹಿಂದೆ ಸ್ವಲ್ಪ ದೂರದಲ್ಲೇ ಇರುವಂತಹ  ಶೌಚಾಲಯಕ್ಕೇ ಹೋಗುತ್ತಿದ್ದರು.

ಒಟ್ಟಾರೆಯಾಗಿ ಈ ಕೊಡಪಾನದಂತೆ ಕೊನೆಯುಸಿರು ಇರುವ ತನಕ ತಮ್ಮ ಆಕಾರ ಕೆಟ್ಟರೂ ಆಚಾರವನ್ನು ಬಿಡದೇ ಬದುಕಿ ಬಾಳಿದವರು.​ ಒಂದೇ ಎರಡೇ ಹೇಳುತ್ತಾ ಹೋದರೆ ಅದೆಷ್ಟೋ ವಿಷಯಗಳಿವೆ. ಯಾಕೋ ಈ ಕೊಡಪಾನ ನೋಡಿದಾಗ ನನ್ನಜ್ಜಿಯ ನೆನಪು ಒತ್ತರಿಸಿ ಒತ್ತರಿಸಿ ಬರುತ್ತಿದೆ.​ ಈಗ ತೊಂಬತ್ತ ಎರಡರ ಹರೆಯದ ನನ್ನಪ್ಪನೂ ಅದೇ ಮಾದರಿಯ ಜೀವನವನ್ನು ನಡೆಸುತ್ತಿರುವುದು ನಿಜವಾಗಿಯೂ ಹೆಮ್ಮೆಯ ಮನತುಂಬಿ ಬರುವಂ ತಹ ವಿಚಾರ​. ​

ಪಳಪಳನೆ ಹೊಳೆಯುವ ರೂಪದ ಒಂದೇ ಒಂದು ತೂತಾದರೂ  ಯಾತಕ್ಕೂ ಉಪಯೋಗಕ್ಕೆ  ಬಾರದ  ನಾಲ್ಕೇ ದಿನದ ಬಾಳುವೆಯ  ತಳುಕು ಬಳುಕಿನ ನಮ್ಮ೦ತಹ   ನಾಜೂಕಿನ ಜೀವದ ಸ್ಟೀಲ್ ಕೊಡಪಾನಕ್ಕಿ೦ತ, ಈ ರೀತಿಯ ಆಕಾರ ಕೆಟ್ಟರೂ ಇನ್ನೂ ಉಪಯೋಗಕ್ಕೆ ಬರುತ್ತಾ ಇರುವ ಈ ಕೊಡಪಾನ  ನಮ್ಮ ಹಿರಿಯರಂತೆ ಅನ್ನಿಸುತ್ತಿದೆ

 
 
 
 
 
 
 
 
 

Leave a Reply