ಮೂರ್ತಿ ದೇರಾಜೆಯವರಿಗೆ ಮಲಬಾರ್ ವಿಶ್ವರಂಗ ಪುರಸ್ಕಾರ – 2023

ದೇರಾಜೆ ಮನೆತನದ ಸಿರಿ – ಕಲಾವಿದ ಕುಟುಂಬದ ಕುಡಿ ಶ್ರೀಯತ ಮೂರ್ತಿಯವರ ಹುಟ್ಟೂರು ದಕ್ಷಿಣ ಕನ್ನಡದ ಒಂದು ಪುಟ್ಟ ಊರು ವಿಟ್ಲ. ದೇರಾಜೆ ಸೀತಾರಾಮಯ್ಯ ಹಾಗೂ ಪಾರ್ವತಿ ದಂಪತಿಗಳ ಹೆಮ್ಮೆಯ ಪುತ್ರ.

ಜೀವನದುದ್ದಕ್ಕೂ ಕಲಾ ಕೃಷಿಯನ್ನು ಮಾಡುತ್ತಾ ಕಲಾ ಕುಸುಮಗಳ ಸುತ್ತ ಜೀವನ ನಡೆಸುತ್ತ ಒಂದಷ್ಟನ್ನು ಕಿಸೆಯಲ್ಲಿಟ್ಟುಕೊಂಡು ಸೌರಭವನ್ನು ಆಸ್ವಾದಿಸುತ್ತಾ ಆನಂದಿಸುತ್ತಾ ನಡೆದು ಬಂದವರು . ಅರಳು ಚಿಗುರುಗಳಲ್ಲಿ ಕಲೆಯ ಸೊಗಡನ್ನು ತೆಗೆದು ಸೊಬಗನ್ನು ಅರಳಿಸಿ ಜಗಕ್ಕೆ ಪರಿಚಯಿಸಿದವರು ಇವರು. ಕೇಳುವ ಕಿವಿ ಇರಲು ನೋಡುವ ಕಣ್ಣಿರಲು ಎಲ್ಲೆಲ್ಲೂ ಸಂಗೀತವೆ ಎಲ್ಲೆಲ್ಲೂ ಸೌಂದರ್ಯವೇ ಎಂಬಂತೆ ಮನೆ – ಮನಸ್ಸು – ಮನೆ ಮಂದಿ ಎಲ್ಲದರಲ್ಲೂ ಕಲಾಮಯ ವಿಸ್ಮಯಗಳನ್ನು ಸೃಷ್ಟಿಸಿ ಪೋಷಿಸಿ ಸಂತಸ ಪಡುವವರು ಇವರು.

ಇವರ ಕಲಾ   ಪ್ರೀತಿಗೆ  ಇವರ ಮನೆ ಮಂದಿಯೇ ಸಾಕ್ಷಿ.. ಭಾರವಿ, ಪಾಣಿನಿ, ಮೈಥಿಲಿ, ವರ್ಚಸ್ವಿ , ನೀಹಾರಿಕಾ, ಅಪ್ರ ಮೇಯ, ಸುಮಾ, ಸುಮತಿ ಎಲ್ಲರೂ ಶೃತಿ ,ರಾಗ, ಲಯ, ತಾಳ, ಭಾವ, ಮಾಧುರ್ಯ ರಂಗಾಂತರಂಗಗಳ ಸಮ್ಮಿಲನ. ವಂಶ ವೃಕ್ಷದೆಲ್ಲ ರೆಂಬೆ ಕೊಂಬೆಗಳ ತುಂಬ ಕಲಾ ಫಲ ಪುಷ್ಪಗಳೇ.

ದೇರಾಜೆಯವರ ಬಾಲ್ಯಕ್ಕೆ ಸಂಬಂಧ ಪಟ್ಟಂತೆ ವಿಟ್ಲ, ಮಂಗಳೂರಿನಲ್ಲಿ ಓದು ಮುಗಿಸಿ ಮುಂದೆ ಮೈಸೂರು ಮಹಾರಾಜ ಕಾಲೇಜಿನಲ್ಲಿ ಎಂ ಎ . ಸೈಕಾಲಜಿ ಪದವಿ ಪಡೆದರು. ತದ ನಂತರ ಅವರ ವೃತ್ತಿ ಜೀವನಕ್ಕೆ ಸಿಂಡಿಕೇಟ್ ಬ್ಯಾಂಕ್ ಆಸರೆ ಯಾಯಿತು. ಮುಂದೆ ಇವರ ಕಲಾಪ್ರೇಮವೇ ಸ್ವಯಂ ನಿವೃತ್ತಿಗೆ ಪ್ರೇರಣೆ ನೀಡಿತು.

ಬಾಲ್ಯದಲ್ಲಿ ಬಣ್ಣದ ಬದುಕಿಗೆ ಬಣ್ಣ ತುಂಬಿದ್ದ ತಂದೆ ಹಾಗೂ ಅವರ ಗೆಳೆಯರಿಂದಾಗಿ ಹುಟ್ಟಿಕೊಂಡ ಯಕ್ಷಗಾನದ ನಂಟು ಕ್ರಮೇಣ ಮನದಂಗಳದಿಂದ ಮೋಡದ ಪರಿ ಮರೆಯಾಗಿ ನಾಟಕ, ರಂಗ ಸಂಗೀತಾದಿ ಕುಶಲ ಕಲೆಗಳ ಮೇಲೆ ಬೆಳಕು ಚೆಲ್ಲಿತು. ಮಕ್ಕಳ ರಂಗಭೂಮಿ ಇವರ ಆಸಕ್ತಿಯ ಕಡಲಾಯ್ತು. ಪ್ರದರ್ಶನಕ್ಕಿಂತ ಪ್ರಕ್ರಿಯೆ ಮುಖ್ಯ ಎಂಬ ಸಿದ್ದಾಂತವನ್ನು ಅಳವಡಿಸಿ ಕೊಂಡು 34 ವರ್ಷಗಳಿಂದ ಮಕ್ಕಳೊಡನೆ ಮಕ್ಕಳಂತಿದ್ದು ಮಕ್ಕಳ ಮನ ಮಂಥನ ಗೈದು ನವನೀತ ತೆಗೆಯುವ ಕಾಯಕ ಗೈದು ಎಲ್ಲರಿಂದ ಸೈ ಎನಿಸಿಕೊಂಡವರು ದೇರಾಜೆ..

ಮಕ್ಕಳಿಗೆ ಕಥೆ ಹೇಳಿ ಅವರ ಯೋಚನೆ, ಯೋಜನೆ ಕಲ್ಪನೆಗಳಿಗೆ ಆಕಾರ ನೀಡಿ ನಾಟಕ ಕಟ್ಟುವ ರಂಗ ಕಾಯಕದಿಂದ ರಂಗನಾಯಕನೆನಿಸಿಕೊಂಡ ರಂಗಶಿಲ್ಪಿ ದೇರಾಜೆ ಮೂರ್ತಿ. ರಂಗದಲ್ಲಿ ಹುಟ್ಟಿ ಕೊಳ್ಳುವ ಸೃಜನಶೀಲ ಕಲೆಗೆ ಒತ್ತು ನೀಡಿ ಕಲಾವಿದನ ಸಾಮರ್ಥ್ಯವನ್ನು ಹೊರಗೆಳೆದು ಪ್ರದರ್ಶನದಲ್ಲಿ ರಸ ಸೃಷ್ಟಿಯಾಗುವಂತೆ ವಿನ್ಯಾಸಗೊಳಿಸುವ ಮೇಧಾವಿ. ಶ್ರೀ ಮೂರ್ತಿ, ಹೀಗೆ ಗ್ರಾಮೀಣ ಪ್ರದೇಶದಿಂದ ಮೈಸೂರಿನ ರಂಗಾಯಣಕ್ಕೂ ಹಬ್ಬಿತು ಇವರ ಕೀರ್ತಿ, ಅಲ್ಲಿ ಚಿಣ್ಣರ ಮೇಳದಲ್ಲಿ ಮೂರು ನಾಟಕಗಳ ಸೃಷ್ಟಿಗೆ ಕಾರಣವಾಯ್ತು ನಂಬಿದ ಸಮೂಹ ಶಕ್ತಿ.

ಮಕ್ಕಳ ನಾಟಕಕ್ಕೆ ಹೆಚ್ಚು ಒತ್ತು ಕೊಡುತ್ತಿದ್ದರೂ ಹಿರಿಯರ ನಾಟಕವನ್ನು ಕಡೆಗಣಿಸಿದವರಲ್ಲ ದೇರಾಜೆ.. ಆದರೆ ನಾಟಕಗಳಿಗೆ ಸಂಗೀತ ವಿನ್ಯಾಸ ಮಾಡುವಲ್ಲಿ ಹೆಚ್ಚು ಶ್ರಮ ಹೆಚ್ಚು ಖುಷಿ ಇತ್ತು. ಎಲ್ಲದಕ್ಕೂ ಒಂದು ವೇದಿಕೆ ಬೇಕಿತ್ತು. ಅಂತರಾಳದಲ್ಲಿ ನೆಲೆಯೂರಿದ್ದ ಈ ಅಂತರಂಗದ ಹೆಬ್ಬಯಕೆಗಳಿಗೆ ರಂಗಸ್ಥಳ ಒದಗಿಸಲು ಅಂದಿನ ಕಾಲದ ಮೇರು ಕಲಾವಿದ ಸಾಹಿತಿ, ಲೇಖಕ, ಯಕ್ಷಗಾನ ತಾಳಮದ್ದಲೆಯ ಪ್ರಬುದ್ಧ ಅರ್ಥದಾರಿ ಎನಿಸಿಕೊಂಡಿದ್ದ ತಂದೆ ಸೀತಾರಾಮಯ್ಯ ನವರ ಸದಾ ಸ್ಮರಣೆಗಾಗಿ ಸಮನ್ವಯ ಸಾಂಸ್ಕೃತಿಕ ಪ್ರತಿಷ್ಠಾನ “ಸಮಸಾಂಪ್ರತಿ ” ಎಂಬ ಸಂಸ್ಥೆಯನ್ನು ರೂಪಿಸಿದರು..

 

ಈ ಸಂಸ್ಥೆ ಎಲ್ಲ ಆಶಯಗಳಿಗೆ, ಸಕಲ ಕಲೆಗಳಿಗೆ ವೇದಿಕೆ ಕಲ್ಪಿಸಿತು. ಇವರ ಕಲಾಜೀವನ ಪಯಣದಲ್ಲಿ ಲೆಕ್ಕವಿಲ್ಲದಷ್ಟು ನಾಟಕಗಳು, ಕೃತಿಗಳು, ರಂಗಗೀತೆಗಳು ವಿನ್ಯಾಸಗೊಂಡವು. ಕೊಟ್ಟ ಮಾತಿನ ಸುತ್ತ- ಬಕಾಸುರ ಬೆಟ್ಟ – ನಕ್ಷತ್ರಗಳಾಚೆ – ತಿಂಗಳ ಬೆಳಕು – ಪೂರ್ವರಂಗದ ಕೊನೆಗೆ – ಬಾ ಕೃಷ್ಣ ಒಮ್ಮೆ ಕೊಳಲನೂದು – ಅಜ್ಜ ಹೇಳಿದ ಕಥೆ – ಪುಣ್ಯಕೋಟಿ ಗೋವಿನ ಹಾಡು – ಮತ್ತೆ ಹುಣ್ಣಿಮೆ ಬಂತು – ಬಾರಯ್ಯ ಬೆಳದಿಂಗಳೇ . ಇವೆಲ್ಲ ಇವರ ಸಾಧನೆಯ ಫಲ. ಕಲಾಂಬುದಿ ಯಿಂದೆತ್ತಿದ ಕೇವಲ ತಂಬಿಗೆಯಷ್ಟು ಸುಜಲ.

ದೇರಾಜೆಯವರು ತನ್ನ ನಾಟಕಗಳಿಗಲ್ಲದೆ ಇತರರ ನಾಟಕಗಳಿಗೂ ಸಂಗೀತ ವಿನ್ಯಾಸ ಮಾಡಿ ಗುರುತಿಸಿಕೊಂಡವರು. ತನ್ನ ಓದು, ವೃತ್ತಿ ಮತ್ತು ಪೃವೃತ್ತಿಯಲ್ಲಿ ಸಹಪಾಠಿ ಯಾಗಿದ್ದ ಗೆಳೆಯ ಪ್ರೊ. ಶಂಕರ್ ರವರ ಜಗತ್ಪ್ರಸಿದ್ಧ ಗಿಲಿಗಿಲಿ ಮಾಜಿಕ್ ಗೂ ಸಂಗೀತ ವಿನ್ಯಾಸ ಮಾಡಿ ಎಲ್ಲರ ಮೆಚ್ಚುಗೆ ಪಡೆ ದವರು. ಇನ್ನು ಅವರ ಬರಹಗಳೂ ಕೂಡ ಕಾಂತೀಯ ಗುಣ ಹೊಂದಿದ್ದವು.

ಇವರದು ಸರ್ವಾಕರ್ಷಿತ ಭಾಷಾ ಸೌಂದರ್ಯ. ಮೌನದ ಮಾತು, ಕಪ್ಪು ಕಾಗೆಯ ಹಾಡು, ಸೋಮಾರಿ ಕಟ್ಟೆ ಹೀಗೆ ಹಲವು ಜನಮನ ಗೆದ್ದ ಪ್ರಕಟಿತ ಕೃತಿಗಳು. ಇನ್ನು ಹಲವು ನಾಟಕಗಳಲ್ಲಿ ಅಭಿನಯಿಸಿ ಒಳ್ಳೆಯ ನಟನೆಂದೂ ಗುರುತಿಸಿ ಕೊಂಡವರು. ಹೀಗೆ ಪ್ರತಿಭೆ ಇದ್ದಲ್ಲಿ ಗೌರವ ಸನ್ಮಾನಗಳಿಗಿಲ್ಲ ಕೊರತೆ. ಪ್ರಶಸ್ತಿಗಳ ಮಹಾಪೂರವೇ ಮನೆ ತುಂಬ.

ಸುವರ್ಣ ರಂಗಭೂಮಿ ಪ್ರಶಸ್ತಿ, ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಪ್ರಶಸ್ತಿ ಇತ್ಯಾದಿ ಇತ್ಯಾದಿ… ಒಟ್ಟಾರೆ ಕಲೆಯೆ ದೇವರು, ಕಲೆಯೆ ಸಂಸಾರ, ಎ೦ದು ಬದುಕು ನಡೆಸುತ್ತರುವ ಸ್ಪೂರ್ತಿಯ ಮೂರ್ತಿ ದೇರಾಜೆ ಮೂರ್ತಿಯವರಿಗೆ ಸಂಸ್ಕೃತಿ ವಿಶ್ವಪ್ರತಿಷ್ಟಾನ ಹಾಗೂ ಮಲಬಾರ್ ಗೋಲ್ಡ್ ಡ್ರೈಮಂಡ್ಸ್ ಜಂಟಿಯಾಗಿ ಈ ಬಾರಿಯ ಮಲಬಾರ್ ವಿಶ್ವ ರಂಗ ಪುರಸ್ಕಾರ – 2023 ನ್ನು ನೀಡಿ ಗೌರವಿಸುತ್ತಿದೆ.

🖋️ ರಾಜೇಶ್ ಭಟ್ ಪಣಿಯಾಡಿ ..

 
 
 
 
 
 
 
 
 

Leave a Reply