Janardhan Kodavoor/ Team KaravaliXpress
29.6 C
Udupi
Thursday, January 20, 2022
Sathyanatha Stores Brahmavara

ದೀಪೋ ಜ್ಯೋತಿ ಪರ೦ಬ್ರಹ್ಮ.. ದೀಪೋ ಜ್ಯೋತಿ ಜನಾರ್ಧನ. ~ ರಾಜೇಶ್ ಭಟ್ ಪಣಿಯಾಡಿ

ದೀಪಯತಿ ಇತಿ ದೀಪ: ಯಾವುದು ಬೆಳಕನ್ನು ಕೊಡುತ್ತದೆಯೋ ಅದು ದೀಪ. ದೀಪ ಎಂದರೆ ಬೆಳಕು ಎಂದಾಯಿತು. . ಅಲ್ಲಿ ಕತ್ತಲಿರುವುದಿಲ್ಲ. ಹಾಗಾಗಿ ಅಂಧಾಕಾರವನ್ನು ಒದ್ದೋಡಿಸುವ ಶಕ್ತಿ ಇರುವುದು ಕೇವಲ ದೀಪ ಅಥವಾ ಬೆಳಕಿಗೆ ಮಾತ್ರ. ಹಾಗಾದರೆ ದೀಪದ ವ್ಯಾಪ್ತಿ ಎನ್ನುವುದು ಕತ್ತಲೆಯ ನಾಶ ಬೆಳಕಿನ ಪ್ರಾಪ್ತಿ. ದೀಪವನ್ನು ಹಚ್ಚಿದಾಗ ಅದು ತನ್ನ ಸುತ್ತಲೂ ಒಂದು ಪ್ರಭಾ ವಲಯವನ್ನು ಹುಟ್ಟು ಹಾಕುತ್ತದೆ. ಅಲ್ಲಿ ಕತ್ತಲೆಗೆ ಅವಕಾಶವಿಲ್ಲ. ಕತ್ತಲೆ ದುಷ್ಟ ಶಕ್ತಿಗಳ ಆಶ್ರಯ ತಾಣ. ಅದಕ್ಕಾಗಿಯೇ ಈ ಬೆಳಕು ಎನ್ನುವಂತದ್ದು ಕೆಟ್ಟ ಶಕ್ತಿಗಳ ದಮನ ಮಾಡುತ್ತದೆ. ಹಾಗಾಗಿ ದುಷ್ಟಶಕ್ತಿಗಳನ್ನು ದೂರ ಮಾಡಲು ದೀಪ ಹಚ್ಚುವುದು ಅನಿವಾರ್ಯ.

ಅದೇ ದೀಪ ಕಣ್ಣಿಗೆ ಅಥವ ತನ್ನ ಸುತ್ತಲು ತಂಪಿನ ವಾತಾವರಣವನ್ನು ಹಬ್ಬುವುದರಿಂದ ನಂದಾದೀಪವೆನಿಸಿ ಕೊಳ್ಳುತ್ತದೆ. ಈ ನಂದಾ ದೀಪ ಆನಂದದ ಪ್ರತಿರೂಪ. ಮನಸ್ಸಿಗೆ ನೆಮ್ಮದಿ – ಶಾಂತಿಯನ್ನು ನೀಡುತ್ತದೆ. ದೀಪವನ್ನು ಸ್ತ್ರೀಗೂ ಹೋಲಿಸುತ್ತಾರೆ. ಸ್ತ್ರೀಯು ತಾನಿರುವ ಮನೆಯ ದೀಪ.  ಸ್ತ್ರೀ ಹಾಗೂ ದೀಪ – ಪ್ರೀತಿ, ಸಹನೆ, ತ್ಯಾಗ, ಸ್ನೇಹ, ತಾಳ್ಮೆಯ ಪ್ರತೀಕ.  

ದೀಪ ತನ್ನ ಗಾತ್ರವನ್ನು ಹೆಚ್ಚಿಸಿಕೊಂಡರೆ ಅದು ದೊಂದಿ ಬೆಳಕು ಎನಿಸಿಕೊಳ್ಳುತ್ತದೆ. ಅದು ತನ್ನ ಆಕಾರವನ್ನು ಕಳಕೊಂಡಾಗ ಅಥವಾ ವ್ಯಘ್ರವಾದಾಗ ಅಗ್ನಿ, ಚಿತೆ ಅಥವಾ ಬೆಂಕಿ ಎನ್ನುವ ಹೆಸರಿನಿಂದ ಕರೆಯಲ್ಪಡುತ್ತದೆ. ಆಗ ದಹಿಸುವುದೇ ಅದರ ಆಹಾರ ಮತ್ತು ವ್ಯವಹಾರ. ದೀಪ ಜಗತ್ತನ್ನು ಬೆಳಗಲೂಬಹುದು ಸುಡಲೂ ಬಹುದು. ಅತಿ ಯಾದರೆ ಅಮೃತವೂ ವಿಷ ಎಂಬಂತೆ ದೀಪವೂ ಹಾಗೆ ಸ್ತ್ರೀಯೂ ಹಾಗೆ. ಉದಾಹರಣೆಗೆ: ಮಹಾಭಾರತದ ಕೃಷ್ಣ ಸಹೋದರಿ ಹೋಮಾಗ್ನಿಯಲ್ಲಿ ಹುಟ್ಟಿ ಬಂದ ದ್ರೌಪದಿ.

ಇನ್ನುಯಾವುದು ಬೆಳಕನ್ನು ಕೊಡುತ್ತದೋ ಅದು ದೀಪವೆಂದಾದರೆ ಮನುಷ್ಯನ ಜೀವನಕ್ಕೆ ಬೆಳಕನ್ನು ಕೊಡುವುದು ಜ್ಞಾನ. ಆದ್ದರಿಂದ ಇಲ್ಲಿ ಜ್ಞಾನವು ದೀಪವೆಂದಾಯ್ತು. ” ನ ಹಿ ಜ್ಞಾನೇನ ಸದೃಶಂ ” ಪ್ರಪಂಚದಲ್ಲಿ ಜ್ಞಾನಕ್ಕೆ ಸರಿ ಸಾಟಿ ಯಾದುದು ಬೇರೊಂದಿಲ್ಲ. ಜ್ಞಾನವಿಲ್ಲದವನ ಬಾಳು ವ್ಯರ್ಥ. ಜ್ಞಾನ ಮನಸ್ಸಿನ ಅಂಧಕಾರವನ್ನು ಹೋಗಲಾಡಿಸಿ ಅರಿವಿನ ಬೆಳಕನ್ನು ಚೆಲ್ಲುತ್ತದೆ. ಅಜ್ಞಾನವನ್ನು ಮರೆ ಮಾಡಿ ಸುಜ್ಞಾನವನ್ನು ಕರುಣಿಸುತ್ತದೆ. ಭಯ, ಭ್ರಮೆ ಎಂಬ ಕೆಟ್ಟ ಶಕ್ತಿಗಳನ್ನು ದೂರ ಮಾಡಿ ಸಕಲ ಜೀವಿಗಳ ಜೀವನಕ್ಕೊಂದು ದಿಕ್ಕನ್ನು ತೋರುತ್ತದೆ.


ದೀಪವನ್ನು ಕಂಬವಿರುವ ಹಣತೆಯಲ್ಲಿ ಹಚ್ಚುವುದು ಹೆಚ್ಚು ಸೂಕ್ತ. ಅದಕ್ಕೆ ದ್ರವ್ಯ ಹಾಗೂ ಬತ್ತಿಯ ಅಗತ್ಯವಿತ್ತದೆ. ” ಬತ್ತದ ಪ್ರೀತಿಯ ಪ್ರತೀಕ ಎಣ್ಣೆಯಾದರೆ , ಬತ್ತಿ – ತಾನು ಉರಿದು ಇತರರಿಗೂ ಬೆಳಕನ್ನು ಉಣಬಡಿಸುವ ಕಾಯಕದ ಪ್ರತೀಕವಾಗಿರುತ್ತದೆ.

ದೀಪದ ಹಣತೆಯಲ್ಲಿ ಭೂದೇವಿ ನೆಲೆ ನಿಂತರೆ ದ್ರವ್ಯದಲ್ಲಿ ಜಗದ್ ಜನನಿ ಮಹಾಲಕ್ಷ್ಮಿ ಇರುತ್ತಾಳೆ.. ದೀಪದ ಬತ್ತಿ ಶೇಷನೆನಿಸಿಕೊಂಡರೆ ಬೆಳಗುವ ಬೆಳಕಲ್ಲಿ ಅಥವಾ ಪ್ರಕಾಶದಲ್ಲಿ ವಾಯುದೇವರು ವಿರಾಜಮಾನರಾಗುತ್ತಾರೆ. ಕಾಡಿಗೆ ರೂಪದಲ್ಲಿ ಹೊರಬರುವ ಕರಿ ಅಥವಾ ಹೊಗೆಯಲ್ಲಿ ರುದ್ರದೇವರು ನೆಲೆ ನಿಂತರೆ ಈ ಎಲ್ಲಾ ಸಂಪೂರ್ಣ ಕ್ರಿಯೆ ಅಥವಾ ಶಕ್ತಿ ಏನಿದೆ ಅದು ಲಕ್ಷ್ಮೀ ನಾರಾಯಣರ ಸಾನಿಧ್ಯವಾಗುತ್ತದೆ ಎನ್ನುವುದು ಬಲ್ಲವರ ಅಭಿಪ್ರಾಯ.
ಇಡೀ ಬ್ರಹ್ಮಾಂಡವೇ ಒಂದು ತೇಜೋ ಪುಂಜ.

ದೀಪೋ ಜ್ಯೋತಿ ಪರ೦ಬ್ರಹ್ಮ..  ದೀಪೋ ಜ್ಯೋತಿ ಜನಾರ್ಧನ. ದೀಪೋ ಹರತು ಮೇ ಪಾಪಂ ಸಂಧ್ಯಾ (ಪ್ರಾತಃ) ದೀಪಃ ನಮೋಸ್ತುತೇ ” ಎ೦ದು ಕೆಲವರು ಪೂಜಿಸಿದರೆ….

ಆಗಚ್ಚ ಶ್ರೀ ಮಹಾಕಾಳೀ ದೀಪಮೂಲೆ ಸ್ಥಿರೋಭವ .. ಆಗಚ್ಚ ಶ್ರೀ ಮಹಾಲಕ್ಷ್ಮೀ ದೀಪ ಮಧ್ಯೆ ಸ್ತಿರೋ ಭವ – ಆ ಗಚ್ಚ ಶ್ರೀ ಮಹಾ ಸರಸ್ವತೀ ದೀಪಾಂತೇ ಸ್ತಿರೋ ಭವಃ ” ಎಂದು ಇಚ್ಚಾಶಕ್ತಿ ಕ್ರಿಯಾಶಕ್ತಿ ಹಾಗೂ ಜ್ಞಾನ ಶಕ್ತಿಗಳ ಮೂಲ ರೂಪಿಣಿ – ಅನಂತಕೋಟಿ ಬ್ರಹ್ಮಾಂಡದ ಸೃಷ್ಟಿಸ್ಥಿತಿ ಲಯಗಳನ್ನು ನಿಯಂತ್ರಿಸುವ ಜಗನ್ಮಾತೆಯ ಮೂರು ರೂಪಗಳನ್ನು ಈ ದೀಪದಲ್ಲಿ ಆಹ್ವಾನಿಸಿ ನೆಲೆ ನಿಲ್ಲಿಸಿ ಪೂಜಿಸುತ್ತಾರೆ..
 
 ದೀಪದ ಪ್ರಭೆಗೆ ಪರಿಧಿ ಎಂಬುದಿಲ್ಲ. ಅದು ಪ್ರಕೃತಿಯಲ್ಲಿ ಪರಿಪರಿಯಾಗಿ ಪ್ರವಹಿಸುತ್ತದೆ. ಒಂದು ಪ್ರಕಾಶ ಮಯ ಜ್ಯೋತಿಯಲ್ಲಿ ಭಕ್ತಿಯ ಪ್ರತೀಕವಾದ ನೀಲಿ ಬಣ್ಣ ಸೂರ್ಯನ ತೇಜಸ್ಸು ಹಾಗು ಧರ್ಮದ ಪ್ರತೀಕವಾದ ಕೇಸರಿ ಬಣ್ಣ ಹಾಗೆಯೇ ಹೊರಭಾಗದಲ್ಲಿ ಜ್ಞಾನದ ಪ್ರತೀಕವಾದ ಹಳದಿ ಬಣ್ಣ ತುಂಬಿಕೊಂಡಿರುತ್ತದೆ.

ಇನ್ನು ದೇವರಿಗೆ ದೀಪ ಹಚ್ಚಿಡುವ ಸಂದರ್ಭದಲ್ಲಿ ದೀಪದ ಮುಖ ಪೂರ್ವ ಮತ್ತು ಉತ್ತರ ದಿಕ್ಕಿಗೆ ಮಾತ್ರ ಇರಬೇಕು ಪಶ್ಚಿಮ ಮತ್ತು ದಕ್ಷಿಣಕ್ಕೆ ಯಾವತ್ತೂ ಇರಬಾರದಂತೆ. ಪೂರ್ವಕ್ಕೆ ಮುಖ ಮಾಡಿದರೆ ಆಯುಷ್ಯವೃದ್ದಿ’ ಉತ್ತರಕ್ಕೆ ಸಂಪತ್ತು ಅಭಿವೃದ್ಧಿ, ಪಶ್ಚಿಮ ದಿಕ್ಕಿಗೆ ದುಃಖ-ದಕ್ಷಿಣ ದಿಕ್ಕಿಗೆ ಹಾನಿ ಎನ್ನುವುದು ಬಲ್ಲವರ ನುಡಿ.

ದೇವರ ಮುಂದಿರುವ, ಆನಂದವನ್ನು ನೀಡುವ ನಂದಾದೀಪವನ್ನು ಪುರುಷರು ಯಾವತ್ತೂ ಆರಿಸ ಬಾರದು. ಅದೇ ರೀತಿ ಹೆಣ್ಣು ಮಕ್ಕಳು ಯಾವತ್ತೂ ಕುಂಬಳ ಕಾಯಿಯನ್ನು ಸೀಳಬಾರದು. ಇದು ವಂಶ ನಾಶಕ್ಕೆ ನಾಂದಿ ಎಂಬುದು ಮುಂಚಿನಿಂದ ಬಂದ ವಾಡಿಕೆ ಹಾಗೂ ನಂಬಿಕೆ.ಇನ್ನು ಕವಿಗಳೊಬ್ಬರು ದೀಪದ ಬಗ್ಗೆ ಹೀಗೆ ಹೇಳುತ್ತಾರೆ..
 
ನಾನು ದೀಪ ಬೆಳಗಿಸುವುದು ಕತ್ತಲನ್ನು ಓಡಿಸುತ್ತೇನೆ ಎಂಬ ಹಮ್ಮಿನಿಂದಲ್ಲ, ಹಚ್ಚಿದ ಆ ದೀಪದ ಬೆಳಕಿನಲ್ಲಿ ನನ್ನ ಮುಖ ನೀನು ನಿನ್ನ ಮುಖ ನಾನು ನೋಡಿಕೊಂಡು ಪರಸ್ಪರ ಅನ್ಯೋನ್ಯ, ಸುಂದರ ಜೀವನವನ್ನು ಸಾಗಿಸೋಣ ಎನ್ನುವುದು ನನ್ನ ಅಂಬೋಣ ಎ೦ದು.

ಒಟ್ಟಾರೆ ದೀಪಗಳ ಹಬ್ಬವಾದ ದೀಪಾವಳಿಯ ಈ ಶುಭ ದಿನಗಳಲ್ಲಿ ನಾವೆಲ್ಲ..
” ದೀಪಜ್ಯೋತಿ ಪರಬ್ರಹ್ಮ ದೀಪ ಸರ್ವತೋ ಮಪಃ
ದೀಪೇನ ಸಾಧ್ಯತೇ ಸರ್ವಂ ಪ್ರಾತಃ / ಸಾಯಂ ದೀಪ ನಮೋಸ್ತುತೇ
ವಿದ್ಯಾಬುದ್ದಿ ಧನೈಶ್ವರ್ಯ  ಪುತ್ರ ಪೌತ್ರಾದಿ ಸಂಪದಃ
ಮಮ ಶತ್ರುವಿನಾಶಾಯ ಪ್ರಾತಃ/ ಸಾಯಂ ದೀಪ ನಮೋಸ್ತುತೇ ”
ಎಂಬ ಮಂತ್ರವನ್ನು ಪಠಿಸುವುದರ ಮೂಲಕ ನಮ್ಮೊಳಗಿನ ಹಾಗೂ ಹೊರಗಿನ ಅಂಧಕಾರವನ್ನು ಹೊಡೆದೋಡಿಸಿ. ನಮ್ಮ ಹಾಗೂ ನಮ್ಮ ರಾಷ್ಟ್ರದ ಸಮಗ್ರ ಶ್ರೇಯೋಭಿವೃದ್ಧಿಗಾಗಿ ಮನೆ ಮನಗಳಲ್ಲಿ ನಂದಾದೀಪವೊಂದನ್ನು ಹಚ್ಚೋಣ.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!