Janardhan Kodavoor/ Team KaravaliXpress
30.6 C
Udupi
Wednesday, August 17, 2022
Sathyanatha Stores Brahmavara

ಮತ್ತೆ ಮಳೆ ಬರುತಿದೆ ಎಲ್ಲಾ ನೆನಪಾಗುತಿದೆ~ ಮಲ್ಲಿಕಾ ಶ್ರೀಶ​ ​ಬಲ್ಲಾಳ್

ಆಗ ಸಮಯ ಸರಿಯಾಗಿ ಸಂಜೆ 4.30 ಆಗಿತ್ತು. ಶಾಲೆ ಬಿಡುವ ಸಮಯ. ಮಕ್ಕಳೆಲ್ಲಾ ಶಾಲೆ ಬೆಲ್ ಹೊಡೆಯುವುದನ್ನೇ ಕಾಯುತ್ತಾ ಕುಳಿತಿದ್ದರು. ಆದರೆ ನಾನು ಮಾತ್ರ ಹೊರಗೆ ದಟ್ಟಮೋಡ ಕವಿದು ಶಾಲೆ ಕೊಠಡಿಯೊಳಗೆಲ್ಲಾ ಕತ್ತಲು ತುಂಬಿ ರುವುದನ್ನು ಕಂಡು ಇಷ್ಟು ಬೇಗ ಬೆಲ್‌ಹೊಡೆಯಬಾರದಿತ್ತು ಎಂದು ಮುಂದೆ ಬರುವ ಮಳೆಯನ್ನು ನೆನೆದು ಹೆದರಿದ್ದೆ.
ಮಕ್ಕಳೆಲ್ಲಾ ಬೆಲ್ ಹೊಡೆದ ಶಬ್ದ ಕೇಳಿ ತಮ್ಮ-ತಮ್ಮ ಚೀಲ, ಛತ್ರಿ ಕೆಲವರು ಪ್ಲಾಸ್ಟಿಕ್ ಕೊಪ್ಪೆ ಹಿಡಿದು ಹೊರಗೆ ಬಂದರು. ಬೇರೆ ವಿಧಿಯಿಲ್ಲದೇ ನಾನು ನನ್ನ ಅಣ್ಣನೊಂದಿಗೆ ಮನೆಯ ಕಡೆಗೆ ಹೆಜ್ಜೆ ಹಾಕಿದೆ. ಒಂದು ನಿಮಿಷದ ದಾರಿ ಸವೆಸಿದ್ದೆವೋ ಇಲ್ಲವೋ ದಟ್ಟ ಕಾರ್ಮೋಡ ಒಮ್ಮೆಲೆ ಗುಡುಗಿ ಧೋ… ಎಂದು ಮಳೆ ಸುರಿಯಲಾರಂಭವಾಯಿತು. 
ಜೊತೆಗೆ ರಭಸವಾಗಿ ಬೀಸುವ ಗಾಳಿಯೂ ಮಳೆಗೆ ಜೊತೆಯಾಯಿತು. ಮಲೆನಾಡಿನಲ್ಲಿ ಹುಟ್ಟಿ ಬೆಳೆದ ನಮಗೆ ಈ ಮಳೆ, ಮಳೆಗಾಲವೇನೂ ವಿಶೇಷವಾಗಿರಲಿಲ್ಲ. ಬೇರೆ ದಿನಗಳಲ್ಲಾದರೆ ಹೀಗೆ ಶಾಲೆ ಬಿಟ್ಟು ಮನೆಗೆ ತೆರಳುವ ಸಮಯದಲ್ಲಿ ಜೋರಾಗಿ ಗಾಳಿ-ಮಳೆ ಬಂದರೆ ನಾನು ಮತ್ತು ಅಣ್ಣ ಯಾವುದೇ ಹಿಂದೇಟು ಹಾಕದೇ ಛತ್ರಿಯನ್ನು ಮಡಿಸಿ ( ಗಾಳಿಯ ರಭಸಕ್ಕೆ ಛತ್ರಿ ಬಿಡಿಸುವ ಧೈರ್ಯವಿರಲಿಲ್ಲ) ಚೀಲವನ್ನು ಎದೆಗವುಚಿಕೊಂಡು ಓಟದ ಸ್ಪರ್ಧೆ ಎಂಬಂತೆ 25ನಿಮಿಷದ ನಡೆಗೆಯನ್ನು 10 ನಿಮಿಷಕ್ಕೆ ಮುಗಿಸಿ ಬಿಡುತ್ತಿದ್ದೆವು. 

ಆದರೆ ಆ ದಿನ ಹಾಗೆ ಮಾಡುವ ಹಾಗಿರಲಿಲ್ಲ. ಏಕೆಂದರೆ ನಮ್ಮ ಜೊತೆಗೆ ನಮ್ಮ ಮಾವನ ಮಗ ಪಾಪಣ್ಣ (ಪೆಟ್ ನೇಮ್) ನೂ ಕೂಡ ನಮ್ಮ ಮನೆಗೆ ಬರುವವನಿದ್ದ. ಅವನಾದರೋ ಒಳ್ಳೆ ರೈನ್‌ಕೋಟ್ ಹಾಕಿಕೊಂಡು ಬೆಚ್ಚಗೆ ಮಳೆಯಲ್ಲಿ ನೆನೆ ಯದೆ ನಮ್ಮೊಂದಿಗೆ ಹೆಜ್ಜೆಹಾಕುತ್ತಿದ್ದ. ಆದರೆ ಆ ದಿನದ ಗಾಳಿಯ ರಭಸ ಅವನನ್ನೂ ಬಿಡಲಿಲ್ಲ. ನಾನು ಮತ್ತು ನನ್ನಣ್ಣ ಪ್ರಯಾಸದಿಂದ ಎಲ್ಲಿ ಛತ್ರಿ ಹಾರಿಹೋಗುವುದೋ ಎಂಬ ಭಯದಲ್ಲಿ ನಿಧಾನವಾಗಿ ಹೆಜ್ಜೆ ಹಾಕುತ್ತಿದ್ದೆವು. ಪಾಪ…  ಪಾಪಣ್ಣ ಗಾಳಿ-ಮಳೆಗೆ ಹೆದರಿ ಚಳಿಯಿಂದ ಗಡ-ಗಡ ನಡುಗುತ್ತಾ ಮುಂದೆ ನಡೆಯಲಾಗದೇ ಜೋರಾಗಿ ಅಳುತ್ತಾ ನಿಂತು ಬಿಟ್ಟನು. ನಮ್ಮಿಬ್ಬರಿಗೆ ದಿಕ್ಕೇ ತೋಚದಂತಾಯಿತು. ಸ್ವಲ್ಪ ಹೊತ್ತು ಅಲ್ಲೇ ರಸ್ತೆ ಬದಿಯ ಮರದ ಕೆಳಗೆ ನಿಂತೆವು. ಗಾಳಿ-ಮಳೆ ಕಡಿಮೆಯಾಗುವ ಸೂಚನೆಯೇ ಕಾಣಲಿಲ್ಲ. ಪಾಪಣ್ಣ ಜೋರಾಗಿ ನಡುಗುವ ರೀತಿ ಕಂಡು ನಮ್ಮಿಬ್ಬ ರಿಗೂ ಭಯವಾಯಿತು. ಕೊನೆಗೂ ನಾನು ಅಣ್ಣ ಸೇರಿ ಅವನನ್ನು ಸಮಾಧಾನ ಮಾಡುವ ಪ್ರಯತ್ನದಲ್ಲಿ ವಿಫಲರಾದೆವು.ಅಷ್ಟರಲ್ಲಿ ನನಗೊಂದು ಉಪಾಯ ಹೊಳೆಯಿತು. ಅಲ್ಲೇ ಸಮೀಪದಲ್ಲಿರುವ ಶಂಕರ ಭಟ್ಟರ ಮನೆಗೆ ಹೋಗೋಣ ಎಂದು ಅಣ್ಣನಲ್ಲಿ ಹೆಳಿದೆ. ಅವನು ಮೊದಲಿಗೆ ಒಪ್ಪಲಿಲ್ಲವಾದರೂ ಪಾಪಣ್ಣನ ಅಳುಮುಖ ಕಂಡು ಹೂಂ…ಗುಟ್ಟಿದನು. ಹಾಗೂ-ಹೀಗೂ ಪ್ರಯಾಸಪಟ್ಟು ಶಂಕರ ಭಟ್ಟರ ಮನೆಯ ಅಂಗಳ ತಲುಪಿದೆವು.

ನಮ್ಮನ್ನು ನೋಡಿ ಆ ಮನೆಯವರಿಗೆಲ್ಲಾ ಆಶ್ವರ್ಯವಾಯಿತು. ಪಾಪಣ್ಣನ ರೈನ್‌ಕೋಟ್ ವೇಷದಲ್ಲಿ ಅವರಿಗೆ ಯಾರೆಂದು ಗುರುತಿಸಲಾಗಲಿಲ್ಲ. ನಾವು ಹತ್ತಿರ ಹೋದಾಗ ನನ್ನ ಮತ್ತು ಅಣ್ಣನ ಗುರುತು ಹಿಡಿದು ಅಯ್ಯೋ… ಮಕ್ಕಳೇ ಈ ಮಳೆ ಯಲ್ಲಿ ನೆನೆದುಕೊಂಡು ಇಲ್ಲಿಗೇಕೆ ಬಂದಿರಿ? ಎಂದರು.
 ನಾನು ಸಣ್ಣಗೆ ಬಿಕ್ಕಳಿಸಿ ಅಳುತ್ತಾ ನಮ್ಮ ಅವಸ್ಥೆಯನ್ನು ಹೇಳಿಕೊಂಡೆವು. ಅವರ ಮನೆಯಲ್ಲಿ ಒಳಕರೆದು ನಮಗೆ ಒಲೆಯ ಮುಂದೆ ಚಳಿಕಾಯಿಸಲು ಹೇಳಿದರು. ಅಷ್ಟರಲ್ಲಿ ಶಂಕರ ಭಟ್ಟರ ಮಗಳು ಮಾತು ಬಾರದ ಅಮ್ಮಕ್ಕ ಟವೆಲ್ ತಂದು ನಮ್ಮ ತೆಲೆ- ಕೈಕಾಲುಗಳನ್ನು ಒರೆಸಿದರು. ಕುಡಿಯಲು ಬಿಸಿ-ಬಿಸಿ ಕಾಫಿ ಮಾಡಿಕೊಟ್ಟರು. ಆ ಕಾಫಿಯಲ್ಲಿ ಒಂದು ಇರುವೆಯ ಶವ ತೇಲುತ್ತಿದ್ದಿದ್ದನ್ನು ಕಂಡು ಮುಖ ಹೀಕರಿಸಿದರೂ, ಆ ಕ್ಷಣದಲ್ಲಿ ಅದು ನನಗೆ ಅಮೃತ ಸಮಾನವಾಗಿತ್ತು. ಕಾಫಿ ಕುಡಿದು ಮುಗಿಯುವಷ್ಟರಲ್ಲಿ ಮಳೆಯ ಆರ್ಭಟ ತುಸು ಕಡಿಮೆಯಾಗಿತ್ತು. 
ಅಣ್ಣ ಹೊರಡೋಣ ಎಂಬ ಸೂಚನೆಯಂತೆ ಎದ್ದು ನಿಂತನು. ಆದರೆ ಹೆದರಿ ಕಂಗಾಲಾಗಿದ್ದ ನಮ್ಮ ಮೂವರನ್ನು ಮಾತ್ರ ಕಳಿಸಿಕೊಡಲು ಅಮ್ಮಕ್ಕ ಒಪ್ಪಲಿಲ್ಲ. ನಮ್ಮ ಮನೆತನಕ ನಮ್ಮನ್ನು ಬಿಟ್ಟು ಬರಲು ಆಕೆಯೂ ರೆಡಿಯಾದರು. ಆದರೆ ನಮಗೆ ಅಮ್ಮ ಎಲ್ಲಿ ಬೈಯುತ್ತಾಳೋ ಎಂಬ ಹೆದರಿಕೆಯಲ್ಲಿ ನಾವೇ ಮನೆಗೆ ಹೋಗುತ್ತೇವೆ, ನೀವು ಜೊತೆಗೆ ಬರುವುದು ಬೇಡ ಎಂದು ಎಷ್ಟು ಹೇಳಿದರೂ ನಮ್ಮ ಮಾತು ಕೇಳದೆ ಅಮ್ಮಕ್ಕ ಅವರದೇ ದಾಟಿಯ ಭಾಷೆಯಲ್ಲಿ ನಮ್ಮನ್ನು ಸಂತೈಸುತ್ತಾ, ಸಮಾಧಾನ ಮಾಡುತ್ತಾ ಕೊಡೆ ಹಿಡಿದುಕೊಂಡು ನಮ್ಮೊಟ್ಟಿಗೆ ಹೊರಟೇ ಬಿಟ್ಟರು. 
ಮನೆಯ ತನಕ ಜೋಪಾನವಾಗಿ ಕರೆತಂದು, ಅಮ್ಮನ ಬಳಿ ಮಕ್ಕಳಿಗೆ ಬೈಯ ಬೇಡವೆಂದು ತಮ್ಮದೇ ಶೈಲಿಯಲ್ಲಿ ವಿನಂತಿಸಿ, ಪುನಃ ಅದೇ ಮಳೆಯಲ್ಲಿ ವಾಪಾಸ್ಸು ಹೊರಟರು. ನನಗೆ ಈಗಲೂ ಒಮ್ಮೊಮ್ಮೆ ಮಳೆಗಾಲದಲ್ಲಿ ಮಳೆ-ಗಾಳಿ ಜೋರಾಗಿ ಬಂದರೆ, ಹಾಗೆಯೇ ಯಾರಾದರೂ ಮಳೆಯಲ್ಲಿ ನೆನೆಯುವುದನ್ನು ಕಂಡಾಗ ನನ್ನ ಬಾಲ್ಯದ ಆ ದಿನ ನೆನಪಿಗೆ ಬರುತ್ತದೆ. ಮಾತು ಬಾರದಿದ್ದರೂ ಮನಸ್ಸಿನಲ್ಲಿ ಮಾತೃ ಹೃದಯ ಮಿಡಿಯುವ ಅಮ್ಮಕ್ಕ ನೆನಪಾಗುತ್ತಾರೆ.
ಮಲ್ಲಿಕಾ ಶ್ರೀಶ​ ​ಬಲ್ಲಾಳ್, ಕೊಡವೂರು 
- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!