ಲಹರಿ…ರಾಧೆಯ ಮೆಲುಕು

ಸಿಂಗರಿಸಿಕೊಂಡಿದೆ
ಗೋಕುಲ ತಳಿರು ತೋರಣಗಳಿಂದ
ಕೃಷ್ಣನಿಗೆ ಎರಡನೆಯ ಜನ್ಮದಿನ
ನಂದನ ಅರಮನೆಯಲ್ಲಿ
ಹೋಮ ಹವನ ಮಂತ್ರ ಪಠಣ
ಮದ್ಯಾಹ್ನ ಭಕ್ಷ್ಯಭೋಜನ
ಸಂಜೆ ಆರತಿಗೆ ಗೋಕುಲದ
ಚಿಣ್ಣರೆಲ್ಲರೂ ಓಡೊಡಿ ಬಂದರು

ನಿಂತಲ್ಲಿ ನಿಲ್ಲದ ಕೃಷ್ಣನಿಗೆ
ಸಿಂಗಾರಗೊಳಿಸಲಾಗಿದೆ;
ಬಣ್ಣದ ತೊಟ್ಟಿಲು ಕೂಡಾ
ಅಲಂಕಾರ ಗೊಂಡಿದೆ
ಮರೆಯಲ್ಲಿಟ್ಟ ಬೆಣ್ಣೆಯ
ಬಟ್ಟಲು ಬರಿದಾಗಿದೆ….
ಗೋಪಿಯರು ಬಂದಾಯಿತು ಆರತಿಗೆ
ರಾಧೆಯೂ ಬಂದು ಸೇರಿದಳು
ನಂದನ ಮನೆಗೆ
ರಾಧೆಗೆ ನಿಂತಲ್ಲೇ ಯೋಚನೆ
“ಈ ವಯಸ್ಸಿಗೇ ಅದೆಷ್ಟು ನಡೆದು
ಜಿಗಿದು ಓಡಾಡುತ್ತಿದ್ದಾನೆ ಕೃಷ್ಣ
ಅರಳು ಹುರಿದಂತೆ ಮಾತನಾಡಿ
ಕಣ್ಣು ಮುಚ್ಚುವುದರಲ್ಲಿ
ಮರೆಯಾಗುತ್ತಾನೆ ತುಂಟ!”

ಮಕ್ಕಳೆಲ್ಲರೂ ಸೇರಿ
ಕೃಷ್ಣನೊಂದಿಗೆ ಹೆಜ್ಜೆ ಇಡುತಿರಲು
ಆಟ… ಕುಣಿದಾಟದ ನಡುವೆ
ಅಮ್ಮ ಯಶೋದೆ ಬಂದರು
ಸಖಿಯರೊಂದಿಗೆ ಸೇರಿ
ಆರತಿಯನು ಬೆಳಗಿದರು
ದೃಷ್ಟಿ ತಾಕದಿರಲೆಂದು
ಓಕುಳಿಯ ಚಲ್ಲಿದರು
ಗೋಪ-ಗೋಪಿಯರಿಗೆ
ಚರಪನ್ನು ಹಂಚಿದರು
ಪುಟ್ಟ ಕೃಷ್ಣನ ಮುಂಗುರುಳು
ಮೈಮಾಟ ಕಣ್ಣ ನೋಟ
ಪ್ರೀತಿ ಅಕ್ಕರೆ ತುಂಟಾಟ

ಮುಸ್ಸಂಜೆ ಹೊತ್ತಿನಲ್ಲಿ
ರಾಧೆಗೇಕೊ ಮನಸೇ ಬಾರದು
ಮನೆ ಸೇರಲು
ಕ್ಷಣ ಹೊತ್ತು ಕಣ್ಮುಚ್ಚಿ
ಕರಗಿದಳು ರಾಧೆ ಧ್ಯಾನಿಸುತ
ಕೃಷ್ಣನನು ಮನದೊಳಗೆ;
ಯಶೊದಮ್ಮ ಕೊಟ್ಟ
ಮಿಠಾಯಿ ಇಲ್ಲೆ ಮುಗಿಸುವ
ತವಕ ಆಕೆಗೆ
ತಿಂದು ಮುಖವರಿಸಿ ಎದ್ದು
ಹೊರಡಲು ಅನುವಾದಳು
ಕೃಷ್ಣನ ನೆನೆದು ರಾಧಾ

“ಹಾಂ…ಬಿಗಿದುಟ್ಟ ಲಂಗ ದಾವಣಿ ಹಿಡಿದೆಳದಂತಿದೆ…
ಬಿಡಿಸಲು ಹೋದೆ… ಓ..ಕೃಷ್ಣಾ……
ಬಿಡಿಸಿದಷ್ಟು ನಿನ್ನ ಮುಷ್ಟಿ ಅದೆಷ್ಟು ಗಟ್ಟಿ
ಯಾರೋ ಹೇಳಿದರು……
“ನೋಡಿದೆಯಾ ಯಶೋದಾ;
ನಿನ್ನ ಕೃಷ್ಣ ರಾಧೆಯ ಲಂಗ
ದಾವಣಿಯನ್ನು ಎಳೆಯುತ್ತಿದ್ದಾನೆ!”
ಎಲ್ಲರೂ ನಕ್ಕರು..ರಾಧೆಯೂ ನಕ್ಕಳು
ಯಾರೂ”ಕೃಷ್ಣ ನಿನ್ನ ಬಿಡುವಹಾಗಿಲ್ಲ ರಾಧಾ..”ಅಂದಾಗ ಪಾಪ ರಾಧೆಗೆ ನಾಚಿಕೆ

“ಅಂದು ಕೊಂಡಿದ್ದೆ ನಾನಂದು
ಬಾಲಕನಾದರೂ
ಕೃಷ್ಣ ನನ್ನ ಕೈ ಬಿಡಲಾರ ಎಂದು”
ಆ ದಿನದ ತುಂಟಾಟ
ಅಲೆ ಅಲೆಯಾಗಿ ಬಂದು ರಾಧಾಗೆ ಕಾಡುತಿದೆ ಈಗಲೂ…ಹೀಗೆ ಇಂದು!
ನುಡಿದುಕೊಂಡಳು ಮನದೊಳಗೆ ರಾಧೆ
“ಹೇಳು ಕೃಷ್ಣ ನೀನು ನನ್ನ
ಕೈ ಬಿಡುವವನಲ್ಲವೆಂದು
ಅಂದು ನಾನು ಯೋಚಿಸಿದ್ದು
ತಪ್ಪಾಯಿತೇನೋ !”

(ಚರಪು = ದೇವರಿಗೆ ಅರ್ಪಿಸಿದ ನೈವೇದ್ಯ.)
————————————
ಕೆ.ಪುಂಡಲೀಕ ನಾಯಕ್
ನಾಯ್ಕನಕಟ್ಟೆ,

 
 
 
 
 
 
 
 
 
 
 

Leave a Reply