ಮಾರ್ಗದರ್ಶನ ನೀಡುವವರು ಇಲ್ಲದಿದ್ದರೆ ಏನಂತೆ? ಹೊಸ ದಾರಿಯನ್ನು ಹುಡುಕುತ್ತಾ ಧೈರ್ಯದಿಂದ ಮುನ್ನುಗ್ಗು, ದಾರಿ ತಾನಾಗೇ ಹುಟ್ಟಿಕೊಳ್ಳುತ್ತದೆ.. ಸ್ವಾಮಿ ವಿವೇಕಾನಂದರ ಅರ್ಥಪೂರ್ಣ ಸಾಲುಗಳಿವು.
ಕಷ್ಟಗಳು ಮನುಷ್ಯನಿಗೆ ಬಾರದೆ ಮರಕ್ಕೆ ಬರುತ್ತದೆಯೇ ಇವು ನಮ್ಮ ಹಿರಿಯರಿಂದ ಕೇಳಿ ಬರುತ್ತಿದ್ದ ಮಾತುಗಳು. ಅದೇ ಸತ್ಯ. ಬರುವ ಕಷ್ಟಗಳಿಗೆ ಮುಖಮಾಡಿ ಜೀವಿಸುವುದನ್ನು ಕಲಿತುಕೊಳ್ಳಿ. ಆಗ ಉತ್ಸಾಹ ಹೆಚ್ಚಿ ಆತ್ಮ ವಿಶ್ವಾಸ ಮೂಡುತ್ತದೆ. ಅದೆ ಕಷ್ಟಗಳಿಗೆ ಬೆನ್ನು ಮಾಡಿ ಓಡಿದರೆ ಕಿನ್ನತೆ, ಅನಾರೋಗ್ಯ ತಲೆಯೆತ್ತಿ ಆತ್ಮಹತ್ಯೆ ಅಂತಹ ಆಲೋಚನೆ ಬರುವ ಸಾಧ್ಯತೆ ಬಹಳ ಹೆಚ್ಚು.
ಅದನ್ನು ಅರಿತುಕೊಂಡು ಜೀವನ ನಡೆಸುವುದು ಬಹಳ ಮುಖ್ಯ. ಪ್ರಸ್ತುತ ಸ್ಥಿತಿಯ ಬಗ್ಗೆ ಮಾತನಾಡುವುದಾದರೆ ಮಹಾಮಾರಿ ರೋಗ ಬಂತೆಂದು ತಲೆ ಮೇಲೆ ಬಂಡೆ ಬಿದ್ದಂತೆ ಕೂತರೆ ಏನು ಪ್ರಯೋಜನ. ಒಂದಷ್ಟು ನ್ಯೂಸ್ ಹೆಡ್ಲೈನ್ಸ್ ಗಳು, ವಾಟ್ಸಾಪ್ ಸ್ಟೇಟಸ್ಗಳು, ವಿಡಿಯೋಗಳು, ರುದ್ರಭೂಮಿ ಎದುರಿಗೆ ಸಾಲು ಹೆಚ್ಚಾದ ಸಾವಿನ ಪ್ರಮಾಣ, ತಲೆಯನ್ನು ಛಿದ್ರ ಮಾಡಿ ಹಾಕುವುದರಲ್ಲಿ ಎಳ್ಳಷ್ಟೂ ಸಂಶಯ ಇಲ್ಲ.
ರೋಗ( ಮಾರಿ ) ಊರು ಪ್ರವೇಶ ಮಾಡಿ ಆಗಿದೆ. ಇನ್ನು ಉಳಿದಿರುವ ಒಂದೇ ಉಪಾಯ ಅದನ್ನು ಜಾಣ್ಮೆ ಹಾಗು ಧೈರ್ಯದಿಂದ ಎದುರಿಸುವುದು. ಸಾಂಕ್ರಾಮಿಕ ರೋಗಗಳು ತಲೆದೋರಿದಾಗ ರೋಗದ ಎದುರು ಗೆಲ್ಲುವ ಮನಸ್ಥಿತಿಯನ್ನು ಬೆಳೆಸಿಕೊಳ್ಳುವ. ರೋಗದ ನಿರ್ಮೂಲನೆ ಹಾಗು ತಡೆಗಟ್ಟುವ ಮಾರ್ಗೋಪಾಯಗಳು ಕಂಡು ಕೊಳ್ಳೋಣ. ಜೊತೆಗೆ ಅಲ್ಲಿ ರೋಗಿಯ ವಿರುದ್ಧ ಮಾನವೀಯತೆ ಮರೆತು ಹೋಗದಿರಲಿ.
ರೋಗದ ಸಂದರ್ಭ ಮನಸುಗಳ ನಡುವೆ ಭಾವನೆಗಳ ನಡುವೆ ಅಂತರ / ಬೇದ ಬೇಕಾಗಿಲ್ಲ. ದೇಹಗಳ ನಡುವೆ ಅಂತರವಿಡೋಣ. ಅತಿ ಆತಂಕ ಬೇಡ . ಇಲ್ಲಿ ಊರಿಗೆ ಬಂದ ಮಾರಿ ಮನೆಗೆ ಬರದ ಹಾಗೆ ನೋಡಿಕೊಳ್ಳುವ ಅತಿ ಮಹತ್ತರ ಜವಾಬ್ದಾರಿ ನಮ್ಮ ನಿಮ್ಮೆಲ್ಲರದು. ವಿದ್ಯಾವಂತರು, ಅವಿದ್ಯಾವಂತರು ಎಂಬ ಬೇಧ ಇಲ್ಲಿ ಇಲ್ಲ. ಎಲ್ಲರೂ ಸಮಾನ ಮನಸ್ಕ ರಾಗಿ ಒಳಗೂ-ಹೊರಗೂ ಇಲ್ಲಿ ಹೋರಾಟ ಮಾಡಬೇಕಾಗಿದೆ.
ಅದಕ್ಕೆ ಬೇಕಾದ ತಯಾರಿ, ನೈರ್ಮಲ್ಯ ಆಹಾರ ಕ್ರಮ, ಶುಚಿತ್ವ, ಮಾಸ್ಕ್ ಬಳಕೆ ಇದರ ಜೊತೆ ಮುಖ್ಯವಾಗಿ ಆತ್ಮವಿಶ್ವಾಸ ಬೆಳೆಸಿಕೊಳ್ಳುವ ನಾನು ಮತ್ತು ನನ್ನವರು, ನನ್ನ ಊರು, ದೇಶ ರೋಗ ಮುಕ್ತವಾಗುವಲ್ಲಿ ನಮ್ಮದೇನು ಪಾತ್ರ ಎಂದು ಮನವರಿಕೆ ಮಾಡಿಕೊಳ್ಳೋಣ. ಸಾಂಕ್ರಾಮಿಕ ರೋಗ ಯಾವುದೇ ಇರಲಿ. ಮನಸು ಯಾವ ರೋಗಕ್ಕೂ ಶರಣಾಗದೆ, ಹೋರಾಡುವಂತೆ ಸಜ್ಜುಗೊಳಿಸುವ. ರೋಗದ ಗಂಭೀರತೆಯ ಅರಿವಿನ ಜೊತೆಗೆ ದಿಟ್ಟ ಹೆಜ್ಜೆ ಹಾಕೋಣ.
ರೋಗ ಬಂತೆಂದರೆ ಕುಗ್ಗದೆ ಸರಿಯಾದ ಆರೋಗ್ಯ ಉಪಚಾರ ಪಡೆದು ಮತ್ತೊಬ್ಬರಿಗೆ ಸೋಂಕು ಹರಡದಂತೆ ತಡೆಯಲು ಆದಷ್ಟು ಪ್ರಯತ್ನ ಮಾಡೋಣ. ಮರಣದ ಭಯ ಬೇಡ. ಸೋಂಕು ಬಂದೆ ಮರಣ ಹೊಂದ ಬೇಕಿಲ್ಲ. ಜಾರಿ ಬಿದ್ದು ತಲೆ ಒಡೆದು ಹೋದರು ಮರಣ ಸಂಭವಿಸಬಹುದು. ನಾಳೆ ಏನು ಎಂಬುವುದು ಯಾರೂ ಬಲ್ಲವರಿಲ್ಲ.ಪ್ರಶ್ನೆ ಇಡಲು ಜ್ಯೋತಿಷಿಗಳು ಕೂಡ ಇಲ್ಲ. ಅವರು ಅವರ ಆಯಸ್ಸು ಉಳಿಸಿ ಕೊಳ್ಳಲು ಮೂಲೆ ಸೇರಿಕೊಂಡು ಕುಳಿತುಬಿಟ್ಟಿದ್ದಾರೆ.
ನಿಮ್ಮ ಆರೋಗ್ಯ, ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ. ಆರೋಗ್ಯದ ರಕ್ಷಣೆ ನಮ್ಮ ಜವಾಬ್ದಾರಿಯೂ ಹೌದು. ಅದನ್ನು ಕಾಪಾಡಿಕೊಳ್ಳಿ ಅಂತೆ-ಕಂತೆಗಳಿಗೆ ಕಿವಿಗೊಡಬೇಡಿ. ಸರಕಾರದ ನೀತಿ ನಿಯಮಗಳನ್ನು ಗಾಳಿಗೆ ತೂರಿ ಹೋಗುವಂತೆ ನಡೆದುಕೊಳ್ಳಬೇಡಿ. ಅದಕ್ಕೆ ಬೆಲೆ ತರಬೇಕಾಗಿ ಬರಬಹುದು ಎಚ್ಚರ.
ನಿಮ್ಮ ಆರೋಗ್ಯ, ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿ. ಆರೋಗ್ಯದ ರಕ್ಷಣೆ ನಮ್ಮ ಜವಾಬ್ದಾರಿಯೂ ಹೌದು. ಅದನ್ನು ಕಾಪಾಡಿಕೊಳ್ಳಿ ಅಂತೆ-ಕಂತೆಗಳಿಗೆ ಕಿವಿಗೊಡಬೇಡಿ. ಸರಕಾರದ ನೀತಿ ನಿಯಮಗಳನ್ನು ಗಾಳಿಗೆ ತೂರಿ ಹೋಗುವಂತೆ ನಡೆದುಕೊಳ್ಳಬೇಡಿ. ಅದಕ್ಕೆ ಬೆಲೆ ತರಬೇಕಾಗಿ ಬರಬಹುದು ಎಚ್ಚರ.
ಗಾಳಿಗೆ ಆರುವುದೆಂದು ದೇವರಿಗೆ ದೀಪ ಹಚ್ಚಿದೆ ಬಿಡುತ್ತೇವೆಯೇ? ಇಲ್ಲ ತಾನೇ, ಅದೇ ರೀತಿ ವಿಶ್ವಾಸವೆಂಬುದು ದೇವರ ಮೇಲೆ ಮಾತ್ರವಲ್ಲ, ದೇವರೆಂಬ ಈ ನಮ್ಮ ದೇಹ ಹಾಗೂ ಮನಸ್ಸಿನ ಮೇಲೆಯು ಇಡಿ. ಕಷ್ಟದ ಹಿಂದೆ ಸುಖ ಎಂದು ತಿಳಿದಿದೆ. ಆಪತ್ತು ಬಂದಕೂಡಲೇ ವಿಚಲಿತರಾಗದೆ ಆತ್ಮವಿಶ್ವಾಸದಿಂದ ಎದುರಿಸಿ. ಧೈರ್ಯ ದಿಂದ ಮನಸ್ಸು ಹೃದಯ ಪರಿಪಕ್ವಗೊಳಿಸಿ. ಶಾಂತತೆಯಿಂದ ಬಂದದ್ದನ್ನು ಬಂದಹಾಗೆ ಎದುರಿಸಿ ಗೆಲ್ಲೋಣ. ಸರ್ವೇ ಜನಃ ಸುಖಿನೋ ಭವಂತು.
~ ಪ್ರೀತಿ ಸನಿಲ್, ಕುತ್ಪಾಡಿ, ಉಡುಪಿ