ಡಿ. 14ರಂದು  ಗಂಟೆಗೆ ಸುಮಾರು 120 ರಷ್ಟು ಉಲ್ಕೆಗಳು ಗೋಚರ

ಡಿಸೆಂಬರ್ 14 ರಂದು ಗೋಚರಿಸುವ ಜೆಮಿನಿಡ್ ಉಲ್ಕಾವೃಷ್ಟಿಯನ್ನು ತಪ್ಪದೇ ವೀಕ್ಷಿಸಿ. ಧೂಮಕೇತುವು ತನ್ನ ಕಕ್ಷೆಯಲ್ಲಿ ಸೂರ್ಯನನ್ನು ಸುತ್ತುವಾಗ, ಸೂರ್ಯನ ಶಾಖದಿಂದಾಗಿ ಅದರ ಅವಶೇಷಗಳು ತನ್ನ ಪಥದಲ್ಲಿ ಉಳಿಯುತ್ತವೆ. ಭೂಮಿಯು ತನ್ನ ಕಕ್ಷೆಯಲ್ಲಿ ಸೂರ್ಯನ ಸುತ್ತ ಸುತ್ತುತ್ತಾ ಈ ಪ್ರದೇಶವನ್ನು ತಲುಪಿದಾಗ ಆ ಅವಶೇಷಗಳು ಭೂಮಿಯ ವಾತಾವರಣದಲ್ಲಿ ಉಲ್ಕೆಗಳಾಗಿ ಗೋಚರಿಸುತ್ತವೆ.

ಭೂಮಿಯು ಈ ಪ್ರದೇಶವನ್ನು, ವರ್ಷಕ್ಕೆ ಒಂದು ಬಾರಿ ಮಾತ್ರ ಹಾದು ಹೋಗುವುದರಿಂದ ಪ್ರತೀವರ್ಷ ನಿರ್ದಿಷ್ಟ ಅವಧಿಯಲ್ಲಿ ಉಲ್ಕಾವೃಷ್ಟಿಯಾಗುತ್ತದೆ. ಉದಾಹರಣೆಗೆ, ಪ್ರತೀ ವರ್ಷ ನವೆಂಬರ್ ತಿಂಗಳಿನಲ್ಲಿ ಭೂಮಿಯು “ಟೆಂಪಲ್-ಟಟ್ಟಲ್”  ಧೂಮಕೇತುವಿನ ಪಥವನ್ನು ಹಾದು  ಹೋಗುವಾಗ ಸಿಂಹರಾಶಿಯಿಂದ ಲಿಯೊನಿಡ್ ಉಲ್ಕಾವೃಷ್ಟಿಯು  ಗೋಚರಿಸುತ್ತದೆ.

ಆದರೆ ಮಿಥುನ ರಾಶಿಯಿಂದ ಆರಂಭವಾಗುವ ಜೆಮಿನಿಡ್ ಉಲ್ಕಾವೃಷ್ಟಿಯು “3200 ಫೆಥನ್” ಎಂಬ ಒಂದು ಕ್ಷುದ್ರಗ್ರಹದಿಂದ ಉಧ್ಭವಿಸುತ್ತದೆ, ಧೂಮಕೇತುವಿನ ಕಾರಣದಿಂದಲ್ಲ. ಈ ಕ್ಷುದ್ರಗ್ರಹದ ಅವಶೇಷಗಳು ತುಂಬಾ ಹೆಚ್ಚಾಗಿರುವುದರಿಂದ ಜೆಮಿನಿಡ್ ಉಲ್ಕಾವೃಷ್ಟಿಯೂ ಒಂದು ಕುತೂಹಲಕಾರಿ ವಿದ್ಯಮಾನವಾಗಿದೆ. ಇದನ್ನು ವೀಕ್ಷಿಸುವವರಿಗೆ ಸುಮಾರು ಗಂಟೆಗೆ 120 ರಷ್ಟು ಉಲ್ಕೆಗಳು ಗೋಚರಿಸುತ್ತವೆ. ಶುಭ್ರ ಆಕಾಶದಲ್ಲಿ ಪ್ರತಿ 30 ಸೆಕೆಂಡುಗಳಿಗೊಮ್ಮೆ ಕಾಣುವ ಈ ಉಲ್ಕಾಪಾತವು ಖಗೋಳಾಸಕ್ತರಿಗೆ ವರದಾನವಾಗಿದೆ.

ಡಿಸೆಂಬರ್ 14 ರಂದು, ಈ ವಿದ್ಯಮಾನದ  ಸೌಂದರ್ಯವನ್ನು ವೀಕ್ಷಿಸಲು ಕತ್ತಲಿನ ಪ್ರದೇಶ ಅತೀ ಸೂಕ್ತ ವಾದುದು. ರಾತ್ರಿ ಸುಮಾರು 9ರ ಹೊತ್ತಿಗೆ ಪೂರ್ವ-ಕ್ಷಿತಿಜದಿಂದ  ಮಿಥುನ ರಾಶಿಯು ಉದಯವಾಗುತ್ತದೆ. ಇದೇ ದಿಕ್ಕಿನ ಸ್ವಲ್ಪ ಮೇಲ್ಭಾಗದಲ್ಲಿ ಪಂಚಕೋನಾಕೃತಿಯನ್ನು ಗುರುತಿಸಬಹುದು. ಇದೇ ವಿಜಯಸಾರಥಿ ನಕ್ಷತ್ರಪುಂಜ. ಈ ನಕ್ಷತ್ರಪುಂಜದಲ್ಲಿ ಅತೀ ಪ್ರಕಾಶಮಾನವಾಗಿ ಗೋಚರಿಸುವ ನಕ್ಷತ್ರವೇ ಬ್ರಹ್ಮ ಹೃದಯ.

ಇದರ ಕೆಳಗಡೆ ಮಿಥುನ ರಾಶಿಯ ಪುನರ್ವಸು ನಕ್ಷತ್ರ (ಕ್ಯಾಸ್ಟರ್ ಹಾಗು ಪೋಲಕ್ಸ್ ಗಳ ಜೋಡಿ) ವನ್ನು ಗುರುತಿಸಬಹುದು. ಮಿಥುನ ರಾಶಿಯನ್ನು, ಕ್ಯಾಸ್ಟರ್ ಮತ್ತು ಪೋಲಕ್ಸ್(ಲವ ಮತ್ತು ಕುಶ) ಗಳ ದೇಹ ಗಳಂತೆ  ಕಲ್ಪಿಸಿಕೊಳ್ಳಬಹುದು. ಪುನರ್ವಸುವಿನಲ್ಲಿ ಮೇಲ್ಭಾಗದಲ್ಲಿರುವ ನಕ್ಷತ್ರವು ಕ್ಯಾಸ್ಟರ್ ಆಗಿರುತ್ತದೆ.

ಈ ನಕ್ಷತ್ರದ ಮೇಲಿನಿಂದ  ಜೆಮಿನಿಡ್ ಉಲ್ಕಾವೃಷ್ಟಿ ಉಧ್ಭವಿಸುವುದನ್ನು ರಾತ್ರಿ 9 ರಿಂದ ಸೂರ್ಯೋದಯ ದವರೆಗೆ ಕಾಣಬಹುದು. ಅದರಲ್ಲೂ ಇದನ್ನು ವೀಕ್ಷಿಸಲು ಇನ್ನೂ ಸೂಕ್ತವಾದ ಸಮಯ ರಾತ್ರಿ 1ಗಂಟೆ ಯಿಂದ  ಮುಂಜಾನೆ 4 ಗಂಟೆಯ ವರೆಗಿನ ಅವಧಿ. ಯಾಕೆಂದರೆ, ಈ ಅವಧಿಯಲ್ಲಿ ನಕ್ಷತ್ರ ಪುಂಜವು ಕ್ಷಿತಿಜ ದಿಂದ ತುಂಬಾ ಮೇಲೆ ಕಾಣುವುದರಿಂದ ಈ ಸಮಯದಲ್ಲಿ ಹೆಚ್ಚು ಉಲ್ಕೆಗಳನ್ನು ವೀಕ್ಷಿಸಿ ಆನಂದಿಸಬಹುದು.

ಪೂರ್ಣಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕರ ಸಂಘವು, ಆಸಕ್ತವುಳ್ಳ ಪ್ರತಿಯೊಬ್ಬರೂ ಈ ವಿದ್ಯಮಾನವನ್ನು ನೋಡಿ ಆನಂದಿಸಬೇಕೆಂದು ಆಶಿಸುತ್ತದೆ.

 
 
 
 
 
 
 
 
 
 
 

Leave a Reply